ಪ್ಯಾನ್ ವರ್ಲ್ಡ್ ಚಿತ್ರಕ್ಕೆ ಆರ್. ಚಂದ್ರು ಪ್ಲ್ಯಾನ್; ಇದು 'ಕಬ್ಜ'ಕ್ಕಿಂತ 10 ಪಟ್ಟು ದೊಡ್ಡ ಪ್ರಾಜೆಕ್ಟ್!
ಗೆಲುವು ಸೋಲು ಸರ್ವೇ ಸಾಮಾನ್ಯ. ದೊಡ್ಡ ಕನಸು ಕಾಣಬೇಕು, ಅದನ್ನು ನನಸು ಮಾಡಿಕೊಳ್ಳಲು ಹೋರಾಟ ನಡೆಸಬೇಕು. ಛಲ, ಹಠ ಇದ್ದರೆ ಯಾವುದೂ ಅಸಾಧ್ಯವಲ್ಲ. ನಿರ್ದೇಶಕ, ನಿರ್ಮಾಪಕ ಆರ್. ಚಂದ್ರು ಇದೇ ಲೆಕ್ಕಾಚಾರದಲ್ಲಿದ್ದಾರೆ. 'ಕಬ್ಜ' ಚಿತ್ರದ ಬಳಿಕ 5 ಸಿನಿಮಾ ಘೋಷಿಸಿದ್ದ ಚಂದ್ರು ಈಗ ಪ್ಯಾನ್ ವರ್ಲ್ಡ್ ಚಿತ್ರಕ್ಕೆ ಸಿದ್ಧತೆ ನಡೆಸಿದ್ದಾರೆ.
ನಿರ್ದೇಶಕರಾಗಿ ಗೆದ್ದ ಚಂದ್ರು ಈಗಾಗಲೇ ನಿರ್ಮಾಪಕರೂ ಆಗಿದ್ದಾರೆ. ಆರ್‌ಸಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ 5 ಸಿನಿಮಾಗಳನ್ನು ಒಟ್ಟಿಗೆ ಘೋಷಣೆ ಮಾಡಿದ್ದರು. ಅದರಲ್ಲಿ 'ಫಾದರ್' ಎಂಬ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರರಂಗ ಈಗ ಪ್ಯಾನ್ ಇಂಡಿಯಾ ಮೀರಿ ಪ್ಯಾನ್ ವರ್ಲ್ಡ್ ಸಿನಿಮಾ ನಿರ್ಮಾಣದತ್ತ ಹೊರಳುತ್ತಿದೆ. 'ಟಾಕ್ಸಿಕ್', 'ರಾಮಾಯಣ', SSMB29 ಹಾಗೂ AA22 ರೀತಿಯ ಸಿನಿಮಾಗಳು ಭಾರತೀಯ ಚಿತ್ರರಂಗದ ದಿಕ್ಕು ಬದಲಿಸುವ ಸುಳಿವು ಸಿಗುತ್ತಿದೆ.

ಬಹುಕೋಟಿ ವೆಚ್ಚದಲ್ಲಿ ಹಾಲಿವುಡ್ ಪ್ರೇಕ್ಷಕರನ್ನು ಟಾರ್ಗೆಟ್ ಮಾಡಿ ಸಿನಿಮಾಗಳನ್ನು ನಿರ್ಮಾಣ ಮಾಡುವ ಪ್ರಯತ್ನ ನಡೀತಿದೆ. 'ಟಾಕ್ಸಿಕ್' ಚಿತ್ರವನ್ನು ಯಶ್ ಏಕಕಾಲಕ್ಕೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಕಟ್ಟಿಕೊಡುತ್ತಿದ್ದಾರೆ. ಮುಂದಿನ ವರ್ಷ ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರಲಿದೆ. 'ರಾಮಾಯಣ' ಚಿತ್ರ ಕೂಡ ದೇಶ ವಿದೇಶದ ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ.
ಸದ್ಯ ನಿರ್ದೇಶಕ ಆರ್. ಚಂದ್ರು ಈಗ ಇಂಥದ್ದೇ ಒಂದು ಅಂತರಾಷ್ಟ್ರೀಯಮಟ್ಟದ ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಇದು 'ಕಬ್ಜ'ಕ್ಕಿಂತ 10 ಪಟ್ಟು ದೊಡ್ಡ ಸಿನಿಮಾ ಎಂದು ಹೇಳಿಕೊಂಡಿದ್ದಾರೆ. ಇದೇ ಈಗ ಸ್ಯಾಂಡಲ್‌ವುಡ್‌ನಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ. ಆರ್. ಚಂದ್ರು ತಮ್ಮ ಮಹತ್ವಾಕಾಂಕ್ಷೆಯ ಸಿನಿಮಾ ಬಗ್ಗೆ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.
ಎರಡು ವರ್ಷಗಳಿಂದ ಸಾಕಷ್ಟು ಕೆಲಸ ನಡೀತಿದೆ. ಹಾಲಿವುಡ್ ರೇಂಜ್ ಚಿತ್ರನ್ನು ನಿರ್ಮಾಣ ಮಾಡಲು ಮುಂದಾಗಿದ್ದೇನೆ. ಅಂತರಾಷ್ಟ್ರೀಯ ಮಟ್ಟದ ಸಿನಿಮಾ, 'ಕಬ್ಜ'ಕ್ಕಿಂತಲೂ 10 ಪಟ್ಟು ದೊಡ್ಡದಾಗಿ ಸಿನಿಮಾ ತೆರೆಗೆ ತರುವ ಲೆಕ್ಕಾಚಾರ ನಡೀತಿದೆ. ಕನ್ನಡ, ಅಥವಾ ಪ್ಯಾನ್ ಇಂಡಿಯಾ ಅಲ್ಲ, ಇದೊಂದು ಗ್ಲೋಬಲ್ ಸಿನಿಮಾ" ಎಂದು ಆರ್. ಚಂದ್ರು ಹೇಳಿದ್ದಾರೆ.
ದೇಶ ವಿದೇಶದ ಕಲಾವಿದರು ಕಲಾವಿದರನ್ನು ಕರೆತಂದು ಹಾಲಿವುಡ್ ಸ್ಟೈಲ್‌ನಲ್ಲಿ ಸಿನಿಮಾ ಕಟ್ಟಿಕೊಡುತ್ತೇನೆ" ಎಂದು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ನನ್ನ ಗಮನ 'ಫಾದರ್' ಸಿನಿಮಾ ಕಡೆಯಿದೆ. ಆದರೆ ತೆರೆಮರೆಯಲ್ಲಿ ನನ್ನ ಕನಸಿನ ಸಿನಿಮಾ ಕೆಲಸಗಳು ನಡೆಯುತ್ತಿದೆ. ಆದಷ್ಟು ಬೇಗ ಸಿನಿಮಾ ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಪ್ರೇಕ್ಷಕರು ಈಗ ದೊಡ್ಡಮಟ್ಟದಲ್ಲಿ ನಿರೀಕ್ಷೆ ಮಾಡುತ್ತಾರೆ. ಅದಕ್ಕೆ ತಕ್ಕಂತೆ ಸಿನಿಮಾ ಕಥೆ, ಮೇಕಿಂಗ್ ಎಲ್ಲಾ ಇರಬೇಕು. ನಾನು ಕೂಡ ಗ್ರಾಫಿಕ್ಸ್, ಎಐ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ಅದನ್ನೆಲ್ಲಾ ನನ್ನ ಸಿನಿಮಾಗಳಲ್ಲಿ ಅಳವಡಿಸಿಕೊಳ್ಳುತ್ತೇನೆ ಎಂದು ಆರ್. ಚಂದ್ರು ತಿಳಿಸಿದ್ದಾರೆ.
'ಕಬ್ಜ' ಬಳಿಕ ಫಾದರ್ ಜೊತೆಗೆ 'ಕಬ್ಜ-2', 'POK', 'DOG', 'ಶ್ರೀರಾಮಬಾಣ ಚರಿತ' ಎಂಬ ಸಿನಿಮಾಗಳನ್ನು ಘೋಷಣೆ ಮಾಡಿದ್ದರು. 'ಕಬ್ಜ' ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲದೇ ಇದ್ದರೂ ಚಂದ್ರು ಸೇಫ್ ಆಗಿದ್ದರು. ತಪ್ಪುಗಳನ್ನು ತಿದ್ದಿಕೊಂಡು ಮತ್ತಷ್ಟು ಒಳ್ಳೆ ಸಿನಿಮಾಗಳನ್ನು ಪ್ರೇಕ್ಷಕರಿಗೆ ಕೊಡುವ ಪ್ರಯತ್ನದಲ್ಲಿದ್ದಾರೆ. ನಿರ್ಮಾಪಕ ಕೆ. ಪಿ ಶ್ರೀಕಾಂತ್ ಜೊತೆಗೂ ಒಂದು ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ.
ಜುಲೈ 25ಕ್ಕೆ 'ಫಾದರ್' ಸಿನಿಮಾ ತೆರೆಗೆ ಬರಲಿದೆ. ಪ್ರಕಾಶ್ ರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಈ ಚಿತ್ರದಲ್ಲಿ ನಟಿಸಿದ್ದಾರೆ. ರಾಜ್ ಮೋಹನ್ ಆಕ್ಷನ್ ಕಟ್ ಹೇಳಿದ್ದಾರೆ. ಆರ್‌ಸಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಆರ್. ಚಂದ್ರು ಸಿನಿಮಾ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











