'POK' ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೀರೊ? ಹೀಗಂದಿದ್ಯಾಕೆ ಆರ್. ಚಂದ್ರು?
ನಿರ್ದೇಶಕ ಆರ್. ಚಂದ್ರು ತಮ್ಮದೇ ಹೊಸ ಬ್ಯಾನರ್ ಆರಂಭಿಸಿ 5 ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾಗಳು ನಿರ್ಮಾಣವಾಗಲಿದೆ. ಅಂದಾಜು 400 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾಗಳು ತೆರೆಗೆ ಬರುವ ಸಾಧ್ಯತೆಯಿದೆ. ಈ ಲಿಸ್ಟ್‌ನಲ್ಲಿ 'ಕಬ್ಜ'-2 ಸಿನಿಮಾ ಕೂಡ ಇದೆ.
ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಂದ್ರು ತಮ್ಮ ಆರ್.ಸಿ ಸ್ಟುಡಿಯೋ ಪ್ರೊಡಕ್ಷನ್ ಸಂಸ್ಥೆ ಘೋಷಣೆ ಮಾಡಿದ್ದಾರೆ. ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ಹಾಗೂ ಅಲಂಕಾರ್ ಪಂಡಿತ್ ಜೊತೆ ಸೇರಿ 5 ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲಾ ಸಿನಿಮಾಗಳ ಟೈಟಲ್ ಕೂಡ ಅನೌನ್ಸ್ ಆಗಿದೆ.

'ಕಬ್ಜ-2', 'ಫಾದರ್', 'DOG', 'ಶ್ರೀರಾಮಬಾಣ ಚರಿತ' ಹಾಗೂ 'POK' ಟೈಟಲ್‌ಗಳಲ್ಲಿ 5 ಸಿನಿಮಾಗಳು ನಿರ್ಮಾಣವಾಗಲಿದೆ. ಇದರಲ್ಲಿ 'ಫಾದರ್' ಎನ್ನುವ ಚಿತ್ರವನ್ನು ರಾಜಮೋಹನ್ ಎಂಬುವವರು ನಿರ್ದೇಶನ ಮಾಡಲಿದ್ದಾರೆ. 'ಕಬ್ಜ-2' ಚಿತ್ರವನ್ನು ಆರ್. ಚಂದ್ರು ಸ್ವತಃ ಕಟ್ಟಿಕೊಡಲಿದ್ದಾರೆ. ಇನ್ನುಳಿದ ಸಿನಿಮಾಗಳ ಸ್ಟಾರ್‌ಕಾಸ್ಟ್ ಹಾಗೂ ಟೆಕ್ನಿಕಲ್ ಟೀಮ್ ಬಗ್ಗೆ ಭಾರೀ ಚರ್ಚೆ ನಡೀತಿದೆ.
ಪ್ಯಾನ್ ಇಂಡಿಯಾ ಸಿನಿಮಾಗಳು ಆಗಿರುವುದರಿಂದ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಕಲಾವಿದರು, ತಂತ್ರಜ್ಞರು ಸಿನಿಮಾಗಳಲ್ಲಿ ಕೆಲಸ ಮಾಡಲಿದ್ದಾರೆ. ಇನ್ನು ಚಂದ್ರು ಘೋಷಣೆ ಮಾಡಿರುವ ಸಿನಿಮಾಗಳ ಟೈಟಲ್‌ಗಳು ಗಮನ ಸೆಳೆಯುವಂತಿದೆ. ಪ್ಯಾನ್ ಇಂಡಿಯಾ ಟ್ರೆಂಡ್ ದೃಷ್ಟಿಯಲ್ಲಿಟ್ಟುಕೊಂಡು ಸಿನಿಮಾಗಳ ಟೈಟಲ್ ಫಿಕ್ಸ್ ಮಾಡಿದ್ದಾರೆ.
ಕಳೆದ ವರ್ಷ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಆರ್. ಚಂದ್ರು ಒಂದು ಸಿನಿಮಾ ಘೋಷಣೆ ಮಾಡಿದ್ದರು. ಗ್ಲೋಬರ್ ಮೂವಿ ಮಾಡುವುದಾಗಿ ಹೇಳಿದ್ದರು. ನಿರ್ದೇಶಕ ಎಸ್. ಎಸ್ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಈ ಚಿತ್ರದ ಸ್ಕ್ರಿಪ್ಟ್ ಸೂಪರ್ ವೈಸ್ ಮಾಡುವುದಾಗಿ ಹೇಳಲಾಗಿತ್ತು. ಸದ್ಯ ಆರ್. ಚಂದ್ರು 5 ಸಿನಿಮಾಗಳನ್ನು ಘೋಷಣೆ ಮಾಡಿದ್ದು ಇದರಲ್ಲಿ ಸುದೀಪ್ ನಟಿಸುವ ಸಿನಿಮಾ ಕೂಡ ಇದ್ಯಾ? ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ.

ಸದ್ಯ ಘೋಷಣೆ ಆಗಿರುವ 'POK' ಚಿತ್ರದಲ್ಲಿ ಸುದೀಪ್ ಹೀರೊ ಆಗಿ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. 'ಫಾದರ್' ಚಿತ್ರದ ನಿರ್ದೇಶಕರ ಹೆಸರು ಬಿಟ್ಟರೆ ಉಳಿದ ಯಾವುದೇ ಸಿನಿಮಾ ಕಲಾವಿದರು, ತಂತ್ರಜ್ಞರ ಬಗ್ಗೆ ಚಂದ್ರು ಮಾಹಿತಿ ಕೊಟ್ಟಿಲ್ಲ. ಆದರೂ ಅಭಿಮಾನಿಗಳು 'POK' ಚಿತ್ರದಲ್ಲಿ ಸುದೀಪ್ ನಟಿಸುತ್ತಾರೆ ಎಂದು ಊಹಿಸುತ್ತಿದ್ದಾರೆ. ಅಂದಹಾಗೆ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಆರ್.ಸಿ ಸ್ಟುಡಿಯೋಸ್ ಸಂಸ್ಥೆಯಲ್ಲೇ ಸಿನಿಮಾ ಮಾಡುವುದಾಗಿ ಆರ್. ಚಂದ್ರು ಹೇಳಿದ್ದರು.
'POK' ಚಿತ್ರದಲ್ಲಿ ಸುದೀಪ್ ಬಣ್ಣ ಹಚ್ಚುತ್ತಾರೆ ಎನ್ನುವ ಚರ್ಚೆ ಬಗ್ಗೆ ನಿರ್ದೇಶಕರು ಮೌನ ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲದರ ಬಗ್ಗೆ ಮಾಹಿತಿ ನೀಡುವುದಾಗಿ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಇನ್ನು ಸುದೀಪ್ ಸರ್, ನನಗೆ ಅಲಂಕಾರ್ ಪಾಂಡಿಯನ್ ಅವರ ಪರಿಚಯ ಮಾಡಿಸಿದರು ಎಂದು ಸುದ್ದಿಗೋಷ್ಠಿಯಲ್ಲಿ ಆರ್. ಚಂದ್ರು ಹೇಳಿಕೊಂಡಿದ್ದರು.
ಸದ್ಯ ಸುದೀಪ್ 'ಮ್ಯಾಕ್ಸ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಳಿಕ ತಮಿಳಿನ ಚೇರನ್ ನಿರ್ದೇಶನದಲ್ಲಿ ನಟಿಸುವ ಸಾಧ್ಯತೆಯಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಗೆ ಒಂದು ಸಿನಿಮಾ ನಿರ್ದೇಶಿಸಿ, ನಟಿಸುವ ಬಗ್ಗೆಯೂ ಮಾತುಕತೆಯಾಗಿದೆ. ಮತ್ತೊಂದು ಕಡೆ ಅನೂಪ್ ಭಂಡಾರಿ 'ಬಿಲ್ಲ ರಂಗ ಬಾಷ' ಸಿನಿಮಾ ಕಥೆ ಸಿದ್ಧಪಡಿಸುತ್ತಿದ್ದಾರೆ. ಈ ವರ್ಷವೇ ಆ ಸಿನಿಮಾ ಕೂಡ ಸೆಟ್ಟೇರುವುದಾಗಿ ಹೇಳಿದ್ದಾರೆ. ಬಹಳ ದಿನಗಳಿಂದ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.


Click it and Unblock the Notifications











