'ನಮಗಾಗಿ' ಸಿನಿಮಾ ನಿಂತುಹೋದ ಬೇಸರದಲ್ಲಿಯೇ ವಿಡಿಯೋ ತುಣುಕನ್ನು ಹಂಚಿಕೊಂಡ ನಿರ್ದೇಶಕ
ನಿರ್ದೇಶಕ ರಘುರಾಮ್ ಕನಸಿನ 'ನಮಗಾಗಿ' ಸಿನಿಮಾ ನಿಂತು ಹೋಗಿ ಅನೇಕ ವರ್ಷಗಳೆ ಆಗಿದೆ. ಸುಮಾರು 6 ವರ್ಷಗಳ ಹಿಂದೆ ಪ್ರಾರಂಭಿಸಿದ ಈ ಸಿನಿಮಾದ ಚಿತ್ರೀಕರಣ ಸಹ ಬಹುತೇಕ ಮುಗಿದಿತ್ತು. ಬಾರಿ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಇದಾಗಿತ್ತು. ಆದರೆ ಈ ಸಿನಿಮಾ ಅರ್ಧದಲ್ಲಿಯೇ ನಿಂತುಹೋಗಿದೆ.
Recommended Video
ರಾಧಿಕಾ ಕುಮಾರಸ್ವಾಮಿ ಮತ್ತು ವಿಜಯ್ ರಾಘವೇಂದ್ರ ಅಭಿನಯದ ಸಿನಿಮಾ ಇದಾಗಿದ್ದು, ನಿನಗಾಗಿ ಸಿನಿಮಾ ಸಕ್ಸಸ್ ನ ಬಳಿಕ ಈ ಜೋಡಿಯನ್ನು ನಮಗಾಗಿ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ಆದರೆ ಈ ಸಿನಿಮಾ ನಿರಾಸೆ ಮೂಡಿಸಿದೆ.
ಕೆಲವು ತಿಂಗಳ ಹಿಂದೆಯಷ್ಟೆ ರಘುರಾಮ್ ಸಿನಿಮಾ ಮತ್ತೆ ಪ್ರಾರಂಭಿಸುವ ಸಂತಸವನ್ನು ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದರು. ಆದರೆ ಸಿನಿಮಾ ಮತ್ತೆ ಪ್ರಾರಂಭವಾಗುವ ಲಕ್ಷಣ ಕಾಣುತ್ತಿಲ್ಲ. ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಲ್ಲೆ ಸಾಮಾಜಿಕ ಜಾಲತಾಣದಲ್ಲಿ ಹಾಡಿನ ತುಣುಕೊಂದನ್ನು ಶೇರ್ ಮಾಡಿದ್ದಾರೆ. ಮುಂದೆ ಓದಿ..

ರಘುರಾಮ್ ಬೇಸರದ ಟ್ವೀಟ್
"ಇವತ್ತಿಗೆ 6 ವರ್ಷಗಳಾಯ್ತು ನನ್ನ ಕನಸು ಪ್ರಾರಂಭವಾಗಿ..ನಾವು ಅಂದುಕೊಳ್ಳೋದೇ ಒಂದು, ದೇವರು ನಡೆಸೋದು ಇನ್ನೊಂದು..ನಮಗಾಗಿ ಅನ್ನೋ ನನ್ನ ಕನಸು ನಿಮಗೆ ತೋರಿಸೊಕ್ಕೆ ಆಗಲ್ಲ ಕ್ಷಮೆಯಿರಲಿ..ಆದರೆ ಆ ಚಿತ್ರದ ಒಂದು ಚಿಕ್ಕ ಹಾಡಿನ ತುಣುಕು ನಿಮಗಾಗಿ" ಎಂದು ಬರೆದುಕೊಂಡಿದ್ದಾರೆ.

ಮೆಲೋಡಿ ಹಾಡಿನ ತುಣುಕು ಹಂಚಿಕೊಂಡ ನಿರ್ದೇಶಕ
'ಹೂ ಎಂದರೆ ಬಾಡಿ ಹೋಗುವೆ, ಹಣ್ಣು ಎಂದರೆ ಸವಿದು ಹೋಗುವೆ, ಮೋಡ ಎಂದರೆ ಸುರಿದು ಹೋಗುವೆ...'ಎನ್ನುವ ಸಾಲುಗಳಿಂದ ಪ್ರಾರಂಭವಾಗು ಮೆಲೋಡಿ ಹಾಡಿನ ತುಣುಕು ಗಾನಪ್ರಿಯರ ಗಮನ ಸೆಳೆಯುತ್ತಿದೆ. ಈ ಹಾಡಿನ ಸಾಲುಗಳನ್ನು ಕೇಳಿ ಅಭಿಮಾನಿಗಳು ದಯವಿಟ್ಟು ಸಿನಿಮಾ ನಿಲ್ಲಿಸಬೇಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಸಿನಿಮಾ ನಿಲ್ಲೋಕ್ಕೆ ಕಾರಣ ಏನು?
"ಮೈಸೂರಿನ ನಿರ್ಮಾಪಕರು ನನಗೆ ಸಿನಿಮಾ ಮಾಡಬೇಕು ಎಂದು ಹಣ ನೀಡಿದ್ದರು. ಹಾಗಾಗಿ ಕಥೆ ಅವರಿಗೆ ಮಾಡಲು ಪ್ಲಾನ್ ಆಯ್ತು. ಆದರೆ, ಆ ನಿರ್ಮಾಪಕರ ಹಣಕಾಸಿನ ತೊಂದರೆಯಿಂದ ಚಿತ್ರ ನಿಂತು ಹೋಯ್ತು. ಒಮ್ಮೆ ರಾಧಿಕಾ ಅವರು ಕೇಳಿದರೂ, ಆದರೆ ನಾನೇ ಚಿತ್ರ ಮುಗಿಸುವೆ ಎಂದು ಆ ನಿರ್ಮಾಪಕರು ಹೇಳಿದರು.'' ಎಂದು ಸಿನಿಮಾ ನಿಂತ ಕಾರಣವನ್ನು ರಘುರಾಮ್ ಈ ಹಿಂದೆ ಹೇಳಿದ್ದರು.

18ಕ್ಕೂ ಹೆಚ್ಚು ನಿರ್ಮಾಪಕರಿಗೆ ಕಥೆ ಹೇಳಿದ್ದಾರೆ
ಈ ನಿಂತ ಮೇಲೆ ರಘುರಾಮ್ ಮತ್ತೆ ಶುರು ಮಾಡಲು ಬಹಳ ಪಯತ್ನಪಟ್ಟಿದ್ದಾರೆ. 18ಕ್ಕೂ ಹೆಚ್ಚು ನಿರ್ಮಾಪಕರಿಗೆ ಕಥೆ ಹೇಳಿದ್ದಾರೆ. ಎಲ್ಲರೂ ಕಥೆ ಚೆನ್ನಾಗಿದೆ ಎನ್ನುತ್ತಾರೆ ಆದರೆ ಸಿನಿಮಾ ಮಾಡಲು ಯಾರೂ ಮುಂದೆ ಬರುತ್ತಿಲ್ಲ ಎಂದು ರಘುರಾಮ್ ಹೇಳುತ್ತಾರೆ. ಎಲ್ಲ ಸಿನಿಮಾಗಳನ್ನು ತುಂಬ ಪ್ರೀತಿಯಿಂದ ಮಾಡುತ್ತೇನೆ. ಆದರೆ, 'ನಮಗಾಗಿ' ಸಿನಿಮಾ ತುಂಬ ಹತ್ತಿರವಾದ ಸಿನಿಮಾ ವಾಗಿದೆಯಂತೆ. ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ರಘುರಾಮ್ ಕನಸಿನ ಸಿನಿಮಾ ಮತ್ತೆ ಶುರುವಾಗುತ್ತಾ ಎನ್ನುವುದನ್ನು ಕಾದು ನೋಡಬೇಕು.


Click it and Unblock the Notifications











