ಕ್ಯಾನ್ಸರ್‌ನಿಂದ ಬಳಲುತ್ತಿರುವ ಖ್ಯಾತ ನಟಿ ಉಮಾಶಂಕರಿ; ಮೌನ ಮುರಿದ ನಟಿ ಸುಮಿತ್ರಾ ಮಗಳು
ದಿನದಿಂದ ದಿನಕ್ಕೆ ಪ್ರಪಂಚದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ನಾನಾ ಬಗೆಯ ಕ್ಯಾನ್ಸರ್ ಜನರನ್ನು ಕಾಡುತ್ತಿದೆ. ಇತ್ತೀಚೆಗೆ ನಟ ಶಿವರಾಜ್‌ಕುಮಾರ್ ಕೂಡ ಮೂತ್ರಕೋಶ ಕ್ಯಾನ್ಸರ್ ಸಮಸ್ಯೆಯಿಂದ ಬಳಲಿದ್ದರು. ಬಳಿಕ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಇದೀಗ ಖ್ಯಾತ ನಟಿ ಉಮಾಶಂಕರಿ ತಮ್ಮ ಕ್ಯಾನ್ಸರ್ ವಿರುದ್ಧ ಹೋರಾಟದ ಬಗ್ಗೆ ಬಹಿರಂಗಪಡಿಸಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಡಿ. ರಾಜೇಂದ್ರ ಬಾಬು ಹಾಗೂ ಹಿರಿಯ ನಟಿ ಸುಮಿತ್ರಾ ಮಗಳು ಉಮಾಶಂಕರಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. 2006ರಲ್ಲಿ ದುಷ್ಯಂತ್ ಎಂಬುವವರ ಜೊತೆ ಮದುವೆ ಆಗಿತ್ತು. ಮದುವೆ ಬಳಿಕ ಕೂಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಕ್ಯಾನ್ಸರ್ ಜರ್ನಿ ಬಗ್ಗೆ ಬರೆದುಕೊಂಡಿದ್ದಾರೆ. 2ನೇ ಹಂತದ ಕಿಮೊಥೆರಪಿ/ಇಮ್ಯುನೊಥೆರಪಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಫೋಟೊ ಹಂಚಿಕೊಂಡಿದ್ದಾರೆ.

"ದಿನದಿಂದ ದಿನಕ್ಕೆ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುತ್ತಿದ್ದೇನೆ. ಕಷ್ಟದ ದಿನಗಳನ್ನು ಹೇಗೆ ನಿಭಾಯಿಸಬೇಕೆಂದು ನಾನು ಕಲಿಯುತ್ತಿದ್ದೇನೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ನಾನು ಎಷ್ಟು ಬಲಶಾಲಿ ಎನ್ನುವುದು ಗೊತ್ತಾಗುತ್ತಿದೆ. ಸದಾ ನನ್ನೊಂದಿಗೆ ನಿಂತಿದ್ದಕ್ಕಾಗಿ ನನ್ನ ಕುಟುಂಬ ಹಾಗೂ ಅಭಿಮಾನಿಗಳಿಗೆ ಧನ್ಯವಾದಗಳು. ನಾನು ಧೈರ್ಯವಾಗಿ ಮುನ್ನಡೆಯುತ್ತಿದ್ದೇನೆ. ಚೇತರಿಸಿಕೊಳ್ಳುತ್ತಿದ್ದೇನೆ. ನನ್ನ ಆರೋಗ್ಯದ ಕಡೆ ಗಮನಹರಿಸುತ್ತಿದ್ದೇನೆ. ಸಂಪೂರ್ಣವಾಗಿ ಅಲ್ಲದೇ ಇದ್ದರೂ ಬದಲಾವನೆ ಗೊತ್ತಾಗುತ್ತಿದೆ" ಎಂದು ನಟಿ ಉಮಾಶಂಕರಿ ಪೋಸ್ಟ್ ಮಾಡಿದ್ದಾರೆ.
2000ನೇ ಇಸವಿಯಲ್ಲಿ 'ವೀರನದೈ' ಎಂಬ ತಮಿಳು ಸಿನಿಮಾ ಮೂಲಕ ಉಮಾಶಂಕರಿ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ತಮಿಳು, ತೆಲುಗಿನ ಒಂದಷ್ಟು ಸಿನಿಮಾಗಳಲ್ಲಿ ಅವರು ಮಿಂಚಿದ್ದರು. 2006ರಲ್ಲಿ ಉಪೇಂದ್ರ ನಟನೆಯ 'ಉಪ್ಪಿದಾದಾ MBBS' ಸಿನಿಮಾ ಮೂಲಕ ಉಮಾಶಂಕರಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಟಿ. ಎಸ್ ನಾಗಾಭರಣ ನಿರ್ದೇಶನದ 'ಕಲ್ಲರಳಿ ಹೂವಾಗಿ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. 4 ವರ್ಷಗಳ ಹಿಂದೆ ಅಜಿತ್ ನಟನೆಯ 'ವಾಲಿಮೈ' ಚಿತ್ರದಲ್ಲಿ ಕೊನೆಯದಾಗಿ ಬಣ್ಣ ಹಚ್ಚಿದ್ದರು.
'ಚಿಕ್ಕಮ್ಮ' ಹಾಗೂ 'ವಲ್ಲಿ' ಎಂಬ ಎರಡು ಧಾರಾವಾಹಿಗಳಲ್ಲಿ ಕೂಡ ಉಮಾಶಂಕರಿ ನಟಿಸಿದ್ದರು. ಮದುವೆ ಬಳಿಕ ನಟಿ ಉಮಾ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಮದುವೆ ನಂತರ ಎರಡ್ಮೂರು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಇದೀಗ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ವಿಷಯ ತಿಳಿಸಿದ್ದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಉಮಾಶಂಕರಿ ಯಾವತ್ತೂ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿದವರಲ್ಲ. ಪಕ್ಕದ್ಮನೆ ಹುಡುಗಿ ರೀತಿಯ ಇಮೇಜ್ ಗಳಿಸಿದ್ದರು.
ಇವತ್ತಿಗೆ ಸರಿಯಾಗಿ(ಜುಲೈ 15, 2006) ಇಪ್ಪತ್ತು ವರ್ಷಗಳ ಹಿಂದೆ ಇಸ್ಕಾನ್ ದೇವಸ್ಥಾನದ ಆವರಣದಲ್ಲಿ ಉಮಾಶಂಕರಿ ಹಾಗೂ ಸಾಫ್ಟ್‌ವೇರ್ ಇಂಜಿನಿಯರ್ ದುಷ್ಯಂತ್ ಜೋಡಿ ಮದುವೆ ನಡೆದಿತ್ತು. ಉಮಾಶಂಕರಿ ಸಹೋದರಿ ನಕ್ಷತ್ರ ಕೂಡ ಒಂದೆರಡು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. 'ವಾಲಿಮೈ' ಚಿತ್ರದಲ್ಲಿ ಅಜಿತ್ ತಾಯಿ ಲಕ್ಷ್ಮಿ ಪಾತ್ರದಲ್ಲಿ ಸುಮಿತ್ರಾ ನಟಿಸಿದ್ದರು. ಲಕ್ಷ್ಮಿಯ ಯೌವ್ವನದ ಪಾತ್ರದಲ್ಲಿ ಉಮಾಶಂಕರಿ ನಟಿಸಿದ್ದು ವಿಶೇಷ. ಇಂತಾದೊಂದು ಅವಕಾಶ ಬಂದಾಗ ಹಿಂದು ಮುಂದು ನೋಡದೇ ಒಪ್ಪಿಕೊಂಡಿದ್ದರು. ಇಂತಹ ಅವಕಾಶ ಯಾರಿಗೆ ಸಿಗುತ್ತೆ ಹೇಳಿ ಎಂದು ಉಮಾಶಂಕರಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
30ಕ್ಕೂ ಅಧಿಕ ಸಿನಿಮಾಗಳಲ್ಲಿ ಉಮಾಶಂಕರಿ ನಟಿಸಿದ್ದಾರೆ. 'ಕಲ್ಲರಳಿ ಹೂವಾಗಿ' ಬಳಿಕ ಕನ್ನಡದ ಯಾವುದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಒಂದೇ ತರಹದ ಪಾತ್ರಗಳು ಬರ್ತಿದ್ದವು. ಹಾಗಾಗಿ ನಾನು ಹೆಚ್ಚು ಸಿನಿಮಾ ಒಪ್ಪಿಕೊಳ್ಳಲಿಲ್ಲ. ಮಾಡಿದ ಪಾತ್ರಗಳನ್ನು ಮತ್ತೆ ಮಾಡುವುದು ಬೇಡ ಎಂದು ಬಹಳ ಚೂಸಿ ಆಗಿದ್ದೆ. ನಾನು ಗ್ಲಾಮರಸ್ ಪಾತ್ರಗಳಲ್ಲಿ ನಟಿಸಲ್ಲ ಎಂದು ಹೇಳಿಬಿಟ್ಟಿದ್ದೆ. ಹಾಗಾಗಿ ಅದನ್ನು ಮೀರಿ ಯಾವುದೇ ಪಾತ್ರ ಒಪ್ಪಿಕೊಳ್ಳಲಿಲ್ಲ. ನನ್ನಿಂದ ಈ ಪಾತ್ರ ಮಾಡಲು ಸಾಧ್ಯ ಎನಿಸಿದ್ದನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದರು.


Click it and Unblock the Notifications