ನಟ ನಿಹಾಲ್- ನಿರ್ದೇಶಕಿ ರಿಷಿಕಾ ಶರ್ಮಾ ಹ್ಯಾಪಿ ನ್ಯೂಸ್: ಮದುವೆಗೆ ಮುಹೂರ್ತ ಫಿಕ್ಸ್
ಇತ್ತೀಚೆಗೆ ಕನ್ನಡದ ಮೊಲದ ಬಯೋಪಿಕ್ ಸಿನಿಮಾ 'ವಿಜಯಾನಂದ' ರಿಲೀಸ್ ಆಗಿ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ಈ ಚಿತ್ರದ ನಿರ್ದೇಶಕಿ ರಿಷಿಕಾ ಶರ್ಮಾ ಹಾಗೂ ನಾಯಕ ನಟ ನಿಹಾಲ್ ಮದುವೆ ಆಗುತ್ತಿರುವುದಾಗಿ ಘೋಷಿಸಿದ್ದಾರೆ. ಬಹಳ ದಿನಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ಗುಸುಗುಸು ಇತ್ತು. ಇದೀಗ ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ.
ನಿಹಾಲ್ ಜೊತೆ ಮದುವೆ ಆಗುತ್ತಿರುವ ವಿಚಾರವನ್ನು ನಿರ್ದೇಶಕಿ ರಿಷಿಕಾ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಶುಭ ಸಮಾರಂಭಗಳು ನಡೀತಿದೆ. ತಾರಾ ಜೋಡಿಗಳು ಹಸೆಮಣೆ ಏರುತ್ತಿದ್ದಾರೆ. ಇತ್ತೀಚೆಗಷ್ಟೆ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ನಿಹಾಲ್- ರಿಷಿಕಾ ಮದುವೆ ಸುದ್ದಿ ಕೊಟ್ಟಿದ್ದಾರೆ. ಫೆಬ್ರವರಿ 15ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಟಿಟಿಡಿ ಕಲ್ಯಾಣ ಮಂಟಪದಲ್ಲಿ ಜೋಡಿ ಹಸೆಮಣೆ ಏರಲಿದೆ. ಫೆಬ್ರವರಿ 17ಕ್ಕೆ ಧಾರವಾಡದ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇನ್ನು ತಮ್ಮ ಮದುವೆ ಬಗ್ಗೆ ರಿಷಿಕಾ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಹೀಗೆ ಬರೆದುಕೊಂಡಿದ್ದಾರೆ. "ನಿಮ್ಮೊಟ್ಟಿಗೆ ಒಂದು ಖುಷಿ ಸುದ್ದಿಯನ್ನು ಹಂಚಿಕೊಳ್ಳುವುದಕ್ಕೆ ಬಹಳ ಉತ್ಸುಕಳಾಗಿದ್ದೇನೆ. ನಾನು ಹಾಗೂ ನಿಹಾಲ್ ಇದೇ ಫೆಬ್ರವರಿ ತಿಂಗಳಲ್ಲಿ ಮದುವೆ ಆಗಲಿದ್ದೇವೆ. ಲಕ್ಷ ಲಕ್ಷ ಸಣ್ಣ ಸಣ್ಣ ಕ್ಷಣಗಳು ನಮ್ಮ ಸುಂದರ ಲವ್‌ಸ್ಟೋರಿ ಸೃಷ್ಟಿ ಮಾಡಿದವು. 9 ವರ್ಷಗಳ ಸ್ನೇಹ ಮತ್ತು ಪ್ರೀತಿ ನಮಗೆ ದಾರಿ ಮಾಡಿಕೊಡುತ್ತಿದೆ. ಹರಸಿ ಹಾರೈಸಿ, ನಿಮ್ಮ ಪ್ರೀತಿ, ವಿಶ್ವಾಸ ಇರಲಿ" ಎಂದು ಬರೆದುಕೊಂಡಿದ್ದಾರೆ.
'ವಿಜಯಾನಂದ' ಚಿತ್ರಕ್ಕೂ ಮುನ್ನ ರಿಷಿಕಾ ಶರ್ಮಾ ಹಾಗೂ ನಿಹಾಲ್ 'ಟ್ರಂಕ್' ಎನ್ನುವ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಬಳಿಕ ವಿಜಯ್ ಸಂಕೇಶ್ವರ್ ಅವರ ಬಯೋಪಿಕ್ ಮಾಡಲು ಮುಂದಾಗಿದ್ದರು. ಬಹಳ ಅದ್ಧೂರಿಯಾಗಿ ಈ ಸಿನಿಮಾ ಮೂಡಿಬಂದಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾವನ್ನು ಕಟ್ಟಿಕೊಟ್ಟು ರಿಷಿಕಾ ಗೆದ್ದಿದ್ದರು. ಇನ್ನು ವಿಜಯ ಸಂಕೇಶ್ವರ್‌ರ್ ಅವರ ಪಾತ್ರದಲ್ಲಿ ನಿಹಾಲ್ ಅಭಿನಯ ಮೋಡಿ ಮಾಡಿತ್ತು. ಮದುವೆ ಸುದ್ದಿ ಕೇಳಿ ಅಭಿಮಾನಿಗಳು, ಆಪ್ತರು ಶುಭ ಹಾರೈಸುತ್ತಿದ್ದಾರೆ. ಮುಂದೆ ಜೋಡಿ ಯಾವ ಸಿನಿಮಾದಲ್ಲಿ ಕೆಲಸ ಮಾಡುತ್ತದೆ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.

'ಸೈಕೋ ಶಂಕ್ರ' ಚಿತ್ರದಲ್ಲಿ ನಟಿಸುವ ಮೂಲಕ ರಿಷಿಕಾ ಶರ್ಮಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಕನ್ನಡ ಚಿತ್ರರಂಗದ ದಿಗ್ಗಜ ಜಿ. ವಿ ಅಯ್ಯರ್ ಮೊಮ್ಮಗಳು ರಿಷಿಕಾ ಶರ್ಮಾ. 'ಟ್ರಂಕ್' ಚಿತ್ರಕ್ಕೆ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದರು.


Click it and Unblock the Notifications











