ASN ಬಳಿಕ ಬಾಲಿವುಡ್‌ಗೆ ಸಚಿನ್ ಬಿ ರವಿ.. ಶಾಹಿದ್ ಕಪೂರ್ ಜೊತೆ ಪೌರಾಣಿಕ ಸಿನಿಮಾ ಚರ್ಚೆ
ರಕ್ಷಿತ್ ಶೆಟ್ಟಿ ನಟನೆಯ 'ಅವನೇ ಶ್ರೀಮನ್ನಾರಾಯಣ' ಸಿನಿಮಾ 4 ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸದ್ದು ಮಾಡಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಮುಗ್ಗರಿಸಿತ್ತು. ಆದರೂ ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ನಿರ್ದೇಶಕ ಸಚಿನ್ ಬಿ ರವಿ ಸಾಹಸಕ್ಕೆ ಪ್ರಶಂಸೆಗಳ ಸುರಿಮಳೆಯಾಗಿತ್ತು.
ಕ್ರೇಜಿ ಸ್ಟಾರ್ ರವಿಚಂದ್ರನ್, ಶಿವರಾಜ್‌ಕುಮಾರ್ ಸೇರಿದಂತೆ ಹಲವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಬಂದೋಗಿ ವರ್ಷಗಳೇ ಕಳದರೂ ನಿರ್ದೇಶಕರ ಹೊಸ ಸಿನಿಮಾ ಆರಂಭವಾಗಲಿಲ್ಲ. ಈ ನಡುವೆ ಶಿವರಾಜ್‌ಕುಮಾರ್ ನಟನೆಯ ಸಿನಿಮಾವೊಂದು ಘೋಷಣೆಯಾಗಿತ್ತು. 'ಅಶ್ವತ್ಥಾಮ' ಹೆಸರಿನಲ್ಲಿ ಪೌರಾಣಿಕ ಚಿತ್ರಕ್ಕೆ ಸಚಿನ್ ಆಕ್ಷನ್ ಕಟ್ ಹೇಳಬೇಕಿತ್ತು. ಕಾರಣಾಂತರಗಳಿಂದ ಆ ಸಿನಿಮಾ ತಡವಾಗುತ್ತಿದೆ.

'ಅಶ್ವತ್ಥಾಮ' ಹೆಸರಿನಲ್ಲೇ ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕೂಡ ಸಿನಿಮಾ ಘೋಷಣೆ ಮಾಡಿದ್ದರು. ಆದರೆ ಎರಡೂ ಸಿನಿಮಾ ಶುರುವಾಗಲೇಯಿಲ್ಲ. ಇದೆಲ್ಲದರ ನಡುವೆ ಸಚಿನ್ ಬಿ ರವಿ ಬಾಲಿವುಡ್ ಎಂಟ್ರಿ ಬಗ್ಗೆ ಚರ್ಚೆ ನಡೀತಿದೆ. ಶಾಹಿದ್ ಕಪೂರ್ ಜೊತೆ ನಿರ್ದೇಶಕರು ಮುಂದಿನ ಸಿನಿಮಾ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್‌ಗೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
"ಶಾಹಿದ್ ಕಪೂರ್ ಜೊತೆ ಮುಂದಿನ ಸಿನಿಮಾ ಬಗ್ಗೆ ಮಾತುಕತೆ ನಡೆಸುತ್ತಿರುವುದು ನಿಜ. ಆದರೆ ಇದು ಅಶ್ವತ್ಥಾಮ ಸಿನಿಮಾ ಅಲ್ಲ. ಶಿವಣ್ಣನಿಗೆ ಮಾಡಿದ ಕಥೆ ಕಂಡಿತ ಅಲ್ಲ. ಇದು ಬೇರೆಯದ್ದೇ ಕಥೆ. ಶಾಹಿದ್ ಕಪೂರ್ ಜೊತೆ ಪೌರಾಣಿಕ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದೇನೆ. ಹಲವು ದಿನಗಳಿಂದ ಈ ಸ್ಕ್ರಿಪ್ಟ್ ನನ್ನ ಬಳಿ ಇದೆ. ಮಾತುಕತೆ ಅಂತಿಮವಾಗಿ ಎಲ್ಲಾ ಅಧಿಕೃತವಾದ ಬಳಿಕ ಮಾಹಿತಿ ನೀಡುತ್ತೇನೆ" ಎಂದಿದ್ದಾರೆ.

ಬಾಲಿವುಡ್ ನಟರು ಈಗ ಸೌತ್ ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಸಿನಿಮಾಗಳನ್ನು ರೀಮೆಕ್ ಮಾಡುವ ಸಾಹಸವನ್ನು ಮಾಡುತ್ತಿದ್ದಾರೆ. ತಮ್ಮ ಸಿನಿಮಾಗಳಿಗೆ ಸೌತ್ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ನಟನೆಯ 'ಜವಾನ್' ಚಿತ್ರಕ್ಕೆ ತಮಿಳು ನಿರ್ದೇಶಕ ಅಟ್ಲಿ ಆಕ್ಷನ್ ಕಟ್ ಹೇಳಿದ್ದರು.
ಹಲವು ವರ್ಷಗಳಿಂದ ರಕ್ಷಿತ್ ಶೆಟ್ಟಿ ತಂಡದಲ್ಲಿ ಸಚಿನ್ ಬಿ ರವಿ ಗುರ್ತಿಸಿಕೊಂಡಿದ್ದಾರೆ. ಸಂಕಲನಕಾರಾಗಿ, ಗ್ರಾಫಿಕ್ಸ್ ಪರಿಣಿತರಾಗಿ ಕೆಲಸ ನಿಭಾಯಿಸಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಇದೀಗ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. 'ಫ್ಯಾಂಟಸಿ ಅಡ್ವೆಂಚರಸ್' ಡ್ರಾಮಾ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ನಿರ್ದೇಶಕರ ಪ್ರತಿಭೆಗೆ ಹಿಡಿದ ಕನ್ನಡಿ.
'ಅವನೇ ಶ್ರೀಮನ್ನಾರಾಯಣ' ಫಲಿತಾಂಶ ಏನೇ ಇದ್ದರೂ ಒಂದು ವರ್ಗದ ಪ್ರೇಕ್ಷಕರಿಗೆ ಸಿನಿಮಾ ಬಹಳ ಇಷ್ಟವಾಗಿತ್ತು. ಇಂತಹ ಸಿನಿಮಾ ಮಾಡುವುದು ಖಂಡಿತ ಕಷ್ಟ ಎಂದು ಸ್ವತಃ ರವಿಚಂದ್ರನ್ ನಿರ್ದೇಶಕರ ಬೆನ್ನು ತಟ್ಟಿದ್ದರು. ಆದರೆ ಯಾಕೋ ಬಳಿಕ ಸಚಿನ್ ಹೊಸ ಸಿನಿಮಾಗಳು ಕೈಗೂಡಲಿಲ್ಲ. ಕೆಲ ದಿನಗಳ ಹಿಂದೆ ಬಾಲಿವುಡ್‌ನಲ್ಲಿ ಬೀಡುಬಿಟ್ಟು ಸಿನಿಮಾ ತಯಾರಿ ನಡೆಸಿದ್ದರು.
ಶಾಹಿದ್ ಕಪೂರ್ ಜೊತೆ ಇದೀಗ ಸಚಿನ್ ಸಿನಿಮಾ ಮಾಡಲು ಪ್ರಯತ್ನದಲ್ಲಿದ್ದಾರೆ. ದೊಡ್ಡ ಸಿನಿಮಾ ನಿರ್ಮಾಣದ ಸಂಸ್ಥೆಯ ಜೊತೆಗೆ ಚರ್ಚೆ ನಡೀತಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ದೊಡ್ಡಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಪೌರಾಣಿಕ ಸಿನಿಮಾ ಆಗಿರುವುದರಿಂದ ಗ್ರಾಫಿಕ್ಸ್ ವರ್ಕ್ ಜಾಸ್ತಿ ಇರುತ್ತದೆ. ಗ್ರಾಫಿಕ್ಸ್ ಬಗ್ಗೆ ಹೆಚ್ಚಿನ ಒಲವು ಇರುವ ಸಚಿನ್ ಬಿ. ರವಿ ಆ ಹಾದಿಯಲ್ಲಿ ಆಲೋಚಿಸುತ್ತಿದ್ದಾರೆ.


Click it and Unblock the Notifications