'ಲವ್ 360' ಚಿತ್ರ ನೋಡಿ ಎಂದು ಕೈಮುಗಿದು ಕೇಳಿಕೊಂಡ ನಿರ್ದೇಶಕ ಶಶಾಂಕ್!
ಶುಕ್ರವಾರ (ಆಗಸ್ಟ್ 19) ಬಿಡುಗಡೆಯಾದ 'ಲವ್ 360' ಚಿತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. 'ಕೃಷ್ಣನ್ ಲವ್ ಸ್ಟೋರಿ', 'ಮೊಗ್ಗಿನ ಮನಸು' 'ಕೃಷ್ಣಲೀಲಾ' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟ ಶಶಾಂಕ್ ನಿರ್ದೇಶನದ ಮತ್ತೊಂದು ಎಮೋಷನಲ್ ಲವ್ ಸ್ಟೋರಿ ಸಿನಿಮಾ ಇದು. ರಾಮ್ ಹಾಗೂ ಜಾನಕಿ ಪ್ರೇಮಕಥೆಯನ್ನು ನೋಡಿದವರೆಲ್ಲಾ ಮೆಚ್ಚಿಕೊಳ್ಳುತ್ತಿದ್ದಾರೆ. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಮಾತ್ರ ಸಿನಿಮಾ ನೋಡಲು ಥಿಯೇಟರ್‌ಗಳಿಗೆ ಬರುತ್ತಿಲ್ಲ.
ನಿರ್ದೇಶನದ ಜೊತೆಗೆ ಶಶಾಂಕ್ 'ಲವ್ 360' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರರಂಗಕ್ಕೆ ಸಾಕಷ್ಟು ಹೊಸ ಪ್ರತಿಭೆಗಳನ್ನು ಪರಿಚಯಿಸಿರುವ ನಿರ್ದೇಶಕರು ಈ ಚಿತ್ರದಲ್ಲಿ ಪ್ರವೀಣ್ ಎನ್ನುವ ಹೊಸ ನಟನನಿಗೆ ಹೀರೊ ಆಗಿ ಅವಕಾಶ ಕೊಟ್ಟಿದ್ದಾರೆ. ನಾಯಕಿಯಾಗಿ 'ಹೆಂಗೆ ನಾವು' ಖ್ಯಾತಿಯ ರಚನಾ ಇಂದರ್ ನಟಿಸಿದ್ದಾರೆ. ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದರೂ ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಿಲ್ಲ ಎಂದು ಶಶಾಂಕ್ ಬೇಸರ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಥಿಯೇಟರ್‌ಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ದಯವಿಟ್ಟು ಎಲ್ಲರೂ ಬಂದು ಸಿನಿಮಾ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಒಂದು ಸರಳವಾದ ಪ್ರೇಮಕಥೆಗೆ ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಶಶಾಂಕ್ 'ಲವ್ 360' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಒಂದಷ್ಟು ಟ್ವಿಸ್ಟ್‌ಗಳನ್ನು ಸೇರಿಸಿ ಬಹಳ ಸೊಗಸಾಗಿ ಕಥೆ ಎಣೆದಿದ್ದಾರೆ. ಇನ್ನು ಸಿನಿಮಾ ರಿಲೀಸ್‌ಗೂ ಮೊದಲೇ 'ಜಗವೇ ನೀನು ಗೆಳತಿಯೇ' ಅನ್ನುವ ಸಾಂಗ್ ಹಿಟ್ ಆಗಿತ್ತು. ಅರ್ಜುನ್ ಜನ್ಯ ಸಂಗೀತವೂ ಕಥೆಗೆ ಪೂರಕವಾಗಿದೆ. ಕನ್ನಡ ಸಿನಿಮಾಗಳು ಇತ್ತೀಚೆಗೆ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿವೆ. ಕಂಟೆಂಟ್ ವಿಚಾರದಲ್ಲೂ 'ಲವ್ 360' ಒಳ್ಳೆ ಪ್ರಯತ್ನ. ಆದರೂ ಪ್ರೇಕ್ಷಕರು ಮಾತ್ರ ಸಿನಿಮಾ ನೋಡಲು ಹಿಂದೇಟು ಹಾಕುತ್ತಿದ್ದಾರೆ.

ವೀರೇಶ್ ಚಿತ್ರಮಂದಿರದಲ್ಲಿ ಒಳ್ಳೆ ಕಲೆಕ್ಷನ್
'ಲವ್ 360' ಸಿನಿಮಾ ನೋಡಿದವರೆಲ್ಲಾ ಮೆಚ್ಚಿಕೊಳ್ಳುತ್ತಿದ್ದಾರೆ. ಆದರೆ ವೀರೇಶ್ ಥಿಯೇಟರ್‌ನಲ್ಲಿ ಮಾತ್ರ ರೆಸ್ಪಾನ್ಸ್ ಚೆನ್ನಾಗಿದೆ. ಒಳ್ಳೆ ಕಲೆಕ್ಷನ್ ಆಗುತ್ತಿದೆ. ಆದರೆ ಉಳಿದ ಕಡೆಗಳಲ್ಲಿ ಕಲೆಕ್ಷನ್ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಯಾವುದೇ ಸಿನಿಮಾದ ಭವಿಷ್ಯ ನಿರ್ಧಾರವಾಗುವುದು ಮೊದಲ ಶನಿವಾರ ಮತ್ತು ಭಾನುವಾರ. ಆದರೆ ಭಾನುವಾರವೂ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಬರುತ್ತಿಲ್ಲ. ಇಂದು ಬಂದು ಸಿನಿಮಾ ನೋಡಿ. ಸಿನಿಮಾ ಹೇಗಿದೆ ಎಂದು ನಾಲ್ಕು ಜನಕ್ಕೆ ಹೇಳಿ ಎಂದು ನಿರ್ದೇಶಕರು ವಿನಂತಿಸಿಕೊಂಡಿದ್ದಾರೆ.

ಪ್ರೇಕ್ಷಕರು ಯಾಕೆ ಸಿನಿಮಾ ನೋಡುತ್ತಿಲ್ಲ?
ನಿರ್ದೇಶಕರು ಹೇಳುವಂತೆ ಹೊಸಬರ ಸಿನಿಮಾ ಅನ್ನುವ ಕಾರಣಕ್ಕೆ, ಸಿನಿಮಾ ಹೇಗಿದೆ ಅನ್ನುವುದು ಗೊತ್ತಾಗದ ಕಾರಣಕ್ಕೆ ಆರಂಭದಲ್ಲಿ ಒಳ್ಳೆ ಓಪನಿಂಗ್ ಸಿಗದೇ ಇರಬಹುದು. ಆದರೆ ಈಗ ಸಿನಿಮಾ ಚೆನ್ನಾಗಿದೆ ಎಂದು ನೋಡಿದವರೆಲ್ಲಾ ಹೇಳುತ್ತಿದ್ದಾರೆ. ವಿಮರ್ಶಕರಿಂದಲೂ ಒಳ್ಳೆ ಅಂಕ ಸಿಕ್ಕಿದೆ. ಇದಕ್ಕಿಂತ ಮತ್ತೇನು ಬೇಕು. ಬಂದು ಸಿನಿಮಾ ನೋಡಿ ಆಶೀರ್ವದಿಸಿ, ಒಳ್ಳೆ ಪ್ರತಿಭೆಗಳನ್ನಿಟ್ಟುಕೊಂಡು ಒಳ್ಳೆ ಸಿನಿಮಾ ಮಾಡಿಯೂ ನಷ್ಟ ಅನುಭವಿಸಿದಂತಾಗುತ್ತದೆ. ಸಿನಿಮಾವನ್ನು ಗೆಲ್ಲಿಸುವುದು ನಿಮ್ಮ ಕೈಯಲ್ಲಿದೆ ಎಂದು ಶಶಾಂಕ್ ಹೇಳಿದ್ದಾರೆ.

ಅಪರೂಪದ ಪ್ರೇಮ್ ಕಹಾನಿ 'ಲವ್ 360'
ಚಿಕ್ಕಂದಿನಿಂದಲೂ ಒಟ್ಟಿಗೆ ಬದುಕುವ ರಾಮ್ ಹಾಗೂ ಜಾನಕಿಯ ಕಥೆ 'ಲವ್ 360'. ಈ ಮುಗ್ಧ ಪ್ರೇಮಿಗಳ ಬದುಕಿನಲ್ಲಿ ಖಳನಾಯಕರ ಆಗಮನವಾಗುತ್ತದೆ. ಅಲ್ಲಿಂದ ಮುಂದೆ ಏನೆಲ್ಲಾ ಆಗುತ್ತೆ? ಅವರಿಬ್ಬರ ಪ್ರೀತಿಗೆ ಎದುರಾಗುವ ಸವಾಲುಗಳೇನು? ಅದನ್ನೆಲ್ಲಾ ಮೀರಿ ಅವರ ಪ್ರೀತಿ ಗೆಲ್ತಾ ಇಲ್ವಾ ಅನ್ನುವುದನ್ನು ಥಿಯೇಟರ್‌ನಲ್ಲಿಯೇ ನೋಡಬೇಕು. ಆಕ್ಷನ್, ಕಾಮಿಡಿ, ಮರ್ಡರಿ ಮಿಸ್ಟರ್ ಅಂಶಗಳೆಲ್ಲಾ ಸೇರಿಸಿ ಬಹಳ ಚೆಂದವನ್ನು ಕಥೆಯನ್ನು ನಿರೂಪಿಸಿದ್ದಾರೆ. ರಾಮ್ ಆಗಿ ಪ್ರವೀಣ್ ಜಾನಕಿಯಾಗಿ ರಚನಾ ಪಾತ್ರಗಳನ್ನು ಆವರಿಸಿಕೊಂಡಿದ್ದಾರೆ. ಪ್ರೀತಿಯ 360 ಕೋನಗಳನ್ನು ತೋರಿಸುವ ಪ್ರಯತ್ನ ಮಾಡಿದ್ದು ಕಂಪ್ಲೀಟ್ ಫ್ಯಾಮಿಲಿ ಕೂತು ನೋಡಬಹುದಾದ ಸಿನಿಮಾ ಇದು.

ಚಿತ್ರಕ್ಕೆ ತಾರೆಯರ ಬೆಂಬಲ
ನಿರ್ದೇಶಕ ಶಶಾಂಕ್ ವಿಡಿಯೋ ಮಾಡಿ ಎಲ್ಲರೂ ಬಂದು ಸಿನಿಮಾ ನೋಡುವಂತೆ ಮನವಿ ಮಾಡುತ್ತಿದ್ದಂತೆ ಸ್ಯಾಂಡಲ್‌ವುಡ್ ತಾರೆಯರು ಬೆಂಬಲ ಸೂಚಿಸಿದ್ದಾರೆ. ನಟ, ನಿರ್ದೇಶಕ ಉಪೇಂದ್ರ ಆ ವಿಡಿಯೋ ಶೇರ್ ಮಾಡಿ "ಕನ್ನಡ ಚಿತ್ರ ಅಭಿಮಾನಿಗಳೇ ದಯವಿಟ್ಟು ಈ ವೀಡಿಯೋ ನೋಡಿ, ಶೇರ್ ಮಾಡಿ, ಹೊಸಬರ ಮತ್ತು ಸ್ರಜನಶೀಲ ನಿರ್ದೇಶಕ ಶಶಾಂಕ್ ಚಿತ್ರ ಲವ್ 360 ನೋಡಿ ಆಶೀರ್ವದಿಸಿ" ಎಂದು ಮನವಿ ಮಾಡಿಕೊಂಡಿದ್ದಾರೆ. ಸಾಕಷ್ಟು ಜನ ಅಭಿಮಾನಿಗಳು ಚಿತ್ರತಂಡದ ಬೆನ್ನಿಗೆ ನಿಂತಿದ್ದಾರೆ.


Click it and Unblock the Notifications











