ಐದು ವರ್ಷಗಳ ಬಳಿಕ ಮೂರು ಸಿನಿಮಾ ಹೊತ್ತು ತಂದಿದ್ದಾರೆ ವಿಜಯಪ್ರಸಾದ್
ವಿಜಯಪ್ರಸಾದ್ ಕನ್ನಡ ಚಿತ್ರರಂಗದ ಅಪರೂಪದ ನಿರ್ದೇಶಕ. ಇವರ ಸಿನಿಮಾಗಳು ಪ್ರೇಕ್ಷಕರನ್ನು ನಿರಾಸೆಗೊಳಿಸಿಲ್ಲ, ಚೇಷ್ಟೆ, ಚೆಲ್ಲಾಟಗಳ ಜೊತೆಗೆ ಜೀವನ ಪ್ರೀತಿಯನ್ನು ಕಟ್ಟಿಕೊಡುವುದು ವಿಜಯಪ್ರಸಾದ್ ಶೈಲಿ.
ವಿಜಯಪ್ರಸಾದ್ ನಿರ್ದೇಶಿಸಿದ್ದ 'ನೀರುದೋಸೆ' ಸಿನಿಮಾ ಬಿಡುಗಡೆ ಆಗಿ ಐದು ವರ್ಷಗಳು ಕಳೆದಿವೆ. ಅದಾದ ಬಳಿಕ ವಿಜಯಪ್ರಸಾದ್‌ರ ಯಾವೊಂದು ಸಿನಿಮಾ ಸಹ ಬಿಡುಗಡೆ ಆಗಿಲ್ಲ. ಇದೀಗ ಒಂದೇ ಬಾರಿ ಮೂರು ಸಿನಿಮಾಗಳನ್ನು ತೆರೆಗೆ ತರಲು ರೆಡಿಯಾಗಿದ್ದಾರೆ.
ವಿಜಯಪ್ರಸಾದ್ ನಿರ್ದೇಶಿಸಿ, ಜಗ್ಗೇಶ್ ನಾಯಕ ನಟನಾಗಿ ನಟಿಸಿರುವ 'ತೋತಾಪುರಿ' ಸಿನಿಮಾ ಬಿಡುಗಡೆಗೆ ತಯಾರಿದೆ, ಅದಾದ ಬಳಿಕ ಸತೀಶ್ ನೀನಾಸಂ, ಹರಿಪ್ರಿಯ ನಟಿಸಿರುವ 'ಪೆಟ್ರೊಮ್ಯಾಕ್ಸ್' ಸಿನಿಮಾ ಬಿಡುಗಡೆ ಆಗಲಿದೆ. ಅದರ ಬಳಿಕ 'ತೋತಾಪುರಿ ಭಾಗ 2' ಬಿಡುಗಡೆ ಆಗಲಿದೆ.

ಮುಂದಿನ ತಿಂಗಳು ಅಂದರೆ ಅಕ್ಟೋಬರ್‌ನಲ್ಲಿ 'ತೋತಾಪುರಿ ಭಾಗ 1' ಸಿನಿಮಾ ಬಿಡುಗಡೆ ಆಗಲಿದೆ. ಅದಾದ ಬಳಿಕ ನವೆಂಬರ್ ತಿಂಗಳಲ್ಲಿ 'ಪೆಟ್ರೊಮ್ಯಾಕ್ಸ್' ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ಬದುಕು ಮತ್ತು ಬೆಳಕು ಎಂಬ ಪರಿಕಲ್ಪನೆ ಮೇಲೆ ನಿರ್ಮಿಸಲಾದ ಸಿನಿಮಾ ಆಗಿದೆ. ಅದಾದ ಎರಡು ವಾರಗಳ ಬಳಿಕ 'ತೋತಾಪುರಿ 2' ಸಿನಿಮಾ ಬಿಡುಗಡೆ ಆಗಲಿದೆ. 'ತೋತಾಪುರಿ' ಸಿನಿಮಾದಲ್ಲಿ ಜಗ್ಗೇಶ್ ಜೊತೆಗೆ ಸುಮನ್ ರಂಗನಾಥ್, ಅದಿತಿ ಪ್ರಭುದೇವ, ವೀಣಾ ಸುಂದರ್ ಜೊತೆಗೆ ವಿಶೇಷ ಪಾತ್ರದಲ್ಲಿ ಡಾಲಿ ಧನಂಜಯ್ ಸಹ ನಟಿಸಿದ್ದಾರೆ. ಸಿನಿಮಾದಲ್ಲಿ ಜಗ್ಗೇಶ್ ಹಲವು ವೇಷಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಮ್ಮೆ ರೈತನಾಗಿ, ಒಮ್ಮೆ ಮುಸ್ಲಿಂ ವ್ಯಕ್ತಿಯಾಗಿ ಹೀಗೆ ಹಲವು ವೇಷಗಳನ್ನು ಹಾಕಿದ್ದಾರೆ ನಟ ಜಗ್ಗೇಶ್.

'ಪೆಟ್ರೊಮ್ಯಾಕ್ಸ್' ಸಿನಿಮಾದಲ್ಲಿ ಸತೀಶ್ ನೀನಾಸಂ, ಹರಿಪ್ರಿಯ, ನಾಗಭೂಷಣ್, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ ಇನ್ನೂ ಹಲವು ಪ್ರಮುಖ ನಟಿಸಿದ್ದಾರೆ. ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು ವೈರಲ್ ಆಗಿದೆ. ಅನಾಥಾಶ್ರಮದ ಹುಡುಗರು ಓದು ಮುಗಿಸಿ ಬದುಕು ಕಟ್ಟಿಕೊಳ್ಳಲು ಹೆಣಗಾಡುವ ಕತೆಯನ್ನು 'ಪೆಟ್ರೊಮ್ಯಾಕ್ಸ್' ಹೊಂದಿದೆ.

ವಿಜಯಪ್ರಸಾದ್ ನಿರ್ದೇಶನದ ಮತ್ತೊಂದು ಸಿನಿಮಾ 'ಪರಿಮಳ ಲಾಡ್ಜ್' ಚಿತ್ರೀಕರಣ ಇನ್ನಷ್ಟೇ ಪೂರ್ತಿಯಾಗಬೇಕಿದೆ. ಸಿನಿಮಾದ ಟೀಸರ್ ಒಂದನ್ನು ಈಗಾಗಲೇ ಚಿತ್ರತಂಡ ಬಿಡುಗಡೆ ಮಾಡಿದ್ದು ಡಬಲ್ ಮೀನಿಂಗ್ ಡೈಲಾಗ್‌ಗಳನ್ನು ಹೊಂದಿದ ಈ ಟೀಸರ್ ಬಹಳ ವೈರಲ್ ಆಗಿತ್ತು. 'ಪರಿಮಳ ಲಾಡ್ಜ್' ಸಿನಿಮಾದಲ್ಲಿ ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ಸುಮನಾ ರಂಗನಾಥ್, ಹೇಮಾ ದತ್, ದತ್ತಣ್ಣ ನಟಿಸಿದ್ದಾರೆ. ಈ ಹಿಂದೆ ಬಿಡುಗಡೆ ಮಾಡಿದ್ದ ಟೀಸರ್‌ನಲ್ಲಿ ಬುಲೆಟ್ ಪ್ರಕಾಶ್ ಸಹ ಇದ್ದರು. ಆದರೆ ಅವರು ನಿಧನ ಹೊಂದಿದ ಕಾರಣ ಅವರ ಪಾತ್ರಕ್ಕೆ ಬದಲಿ ಕಲಾವಿದರಿಗೆ ಅವಕಾಶ ನೀಡಲಾಗಿದೆ.

ವಿಜಯಪ್ರಸಾದ್ ನಿರ್ದೇಶಿಸಿದ್ದ ಮೊದಲ ಸಿನಿಮಾ 'ಸಿದ್ಲಿಂಗು' ಹಿಟ್ ಆಗಿತ್ತು, ವಿಮರ್ಶಕರಿಂದಲೂ ಮೆಚ್ಚುಗೆ ಪಡೆದಿತ್ತು. ಇದೀಗ ವಿಜಯಪ್ರಸಾದ್ 'ಸಿದ್ಲಿಂಗು 2' ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಜೋರಾಗಿ ಕೇಳಿ ಬರುತ್ತಿದೆ. 2012ರಲ್ಲಿ ಬಿಡುಗಡೆ ಆಗಿದ್ದ 'ಸಿದ್ಲಿಂಗು' ಸಿನಿಮಾದಲ್ಲಿ ಲೂಸ್ ಮಾದ ಯೋಗಿ, ರಮ್ಯಾ ನಟಿಸಿದ್ದರು. 'ಸಿದ್ಲಿಂಗು 2' ನಲ್ಲಿ ಲೂಸ್ ಮಾದ ಯೋಗಿ ನಾಯಕನಟನಾಗಿ ಇರಲಿದ್ದಾರೆ. ಆದರೆ ನಾಯಕಿ ಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ವಿಜಯಪ್ರಸಾದ್ ಈ ಹಿಂದೆ 'ಸಿದ್ಲಿಂಗು' ಹಾಗೂ ನೀರ್‌ದೋಸೆ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಎರಡೂ ಸಿನಿಮಾಗಳು ಹಿಟ್ ಆಗಿದ್ದು, ಒಳ್ಳೆಯ ವಿಮರ್ಶೆ ಗಳಿಸಿಕೊಂಡಿವೆ. 'ಸಿಲ್ಲಿ-ಲಲ್ಲಿ' ಧಾರಾವಾಹಿಯಲ್ಲಿ ಚಿಕ್ಕೋಡಿ ಚಿನ್ನಾಸ್ವಾಮಿ ಪಾತ್ರದ ಮೂಲಕ ಬಹಳ ಖ್ಯಾತಿ ಗಳಿಸಿದ್ದ ವಿಜಯಪ್ರಸಾದ್ ಒಳ್ಳೆಯ ಸಿನಿಮಾ ಬರಹಗಾರರು. ತಮ್ಮ ಸಿನಿಮಾದಲ್ಲಿ ತುಂಟತನ ತುಂಬಿದ ಸಂಭಾಷಣೆಗಳನ್ನು ಬಳಸುವ ವಿಜಯಪ್ರಸಾದ್ ಜೀವನ ಪ್ರೀತಿ ಕಟ್ಟಿಕೊಡುವ ಕತೆಗಳನ್ನು ಹೆಣೆದು ಪ್ರೇಕ್ಷಕರ ಮುಂದಿಡುತ್ತಾರೆ. ಕೆಲವೊಮ್ಮೆ ಡಬ್ಬಲ್ ಮಿನಿಂಗ್ ಅತಿಯಾಯಿತೆಂಬ ವಿಮರ್ಶೆಗಳೂ ವಿಜಯಪ್ರಸಾದ್ ಸಿನಿಮಾಕ್ಕೆ ಧಕ್ಕಿವೆ.


Click it and Unblock the Notifications











