For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಯ ಅಭಿಮಾನಕ್ಕೆ ಯೋಗರಾಜ್ ಭಟ್ಟರ ತುಟಿ ಒದ್ದೆ!

  |

  'ಕತ್ಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ ಹೋಗಬಾರ್ದು' ಎಂಬ ಸತ್ಯ ಅರಿತುಕೊಂಡಿರುವ ಭಟ್ಟರು, ಅಭಿಮಾನಿಗಳು ಅಮಲೇರಿಸಿಕೊಂಡು ಜೋಶ್‌ನಲ್ಲಿರುವಾದ ಮಧ್ಯ ಹೋಗಬಾರದು ಎಂಬ ಸತ್ಯ ಅರಿಯದಾಗಿದ್ದಾರೆ. ಇದರಿಂದಲೇ ಘನ ಗೋರ ಅವಾಂತರವೊಂದಕ್ಕೆ ಗುರಿಯಾಗಿದ್ದಾರೆ.

  ಆಗಿರುವುದಿಷ್ಟು, ಭಟ್ಟರ ನಿರ್ದೇಶನದ 'ಗಾಳಿಪಟ 2' ಸಿನಿಮಾ ಬಿಡುಗಡೆ ಆಗಿರುವ ಸಂದರ್ಭದಲ್ಲಿ ತಾವು ಹಾರಿಸಿದ ಪಟ ಎಷ್ಟು ಎತ್ತರದಲ್ಲಿ ಹಾರುತ್ತಿದೆ ಎಂದು ನೋಡಿಕೊಂಡು ಬರಲೆಂದು ಭಟ್ಟರು ಚಿತ್ರಮಂದಿರದ ಕಡೆ ಹೋಗಿದ್ದಾರೆ. ಅದಾಗಲೇ ಸಿನಿಮಾ ನೋಡಿ, ಭಟ್ಟರು ಸೃಷ್ಟಿಸಿರುವ ಹಾಸ್ಯ-ಭಾವುಕ ಪ್ರಪಂಚದಲ್ಲಿ ಮಿಂದೆದ್ದ ಅಭಿಮಾನಿಗಳು ಆನಂದ ತುಲಿತರಾಗಿ ಚಿತ್ರಮಂದಿರದ ಮುಂದೆ ಖುಷಿಯಲ್ಲಿ ಕುಣಿಯುತ್ತಿದ್ದಾಗಲೇ ಅಲ್ಲಿ ಭಟ್ಟರು ದರ್ಶನ ಕೊಟ್ಟುಬಿಟ್ಟಿದ್ದಾರೆ.

  ಹಣ ಕೊಟ್ಟು ಸಿನಿಮಾ ನೋಡಿ ಖುಷಿಯಿಂದ ಕುಣಿಯುತ್ತಿದ್ದ ಅಭಿಮಾನಿಗಳು, ಆ ಸಿನಿಮಾ ಮಾಡಿದವರು ಫ್ರೀಯಾಗಿ ಸಿಕ್ಕರೆ ಬಿಡ್ತಾರಾ. ಮಧ್ಯ ಹಾಕ್ಕೊಂಡು ಚೆನ್ನಾಗಿಯೇ ಅಭಿಮಾನದ ಪ್ರದರ್ಶನ ಮಾಡಿದ್ದಾರೆ. ಅದ್ಯಾವ ಮಟ್ಟಿಗೆಂದರೆ ಘಟಜೀವಿ ಯೋಗರಾಜ್ ಭಟ್ಟರು ಸಹ ಕ್ಷಣ ಕಾಲ ಅಲ್ಲಾಡಿಹೋಗಿದ್ದಾರೆ, ಅಲೆಯಂತೆ ಬಂದ ಅಭಿಮಾನಿಗಳ ಅಭಿಮಾನದಲ್ಲಿ ತೇಲಿ-ತೇಲಿ ನೆಲ ಸಿಗದೆ ತಡಕಾಡಿದ್ದಾರೆ.

  ಆಗಲೇ ಅಲ್ಲೊಬ್ಬ ಅಮಲು ತುಂಬಿದ ಅಭಿಮಾನಿಯೊಬ್ಬ ಭಟ್ಟರ ಬಳಿ ಸಾರಿದ್ದಾನೆ. 'ಖಾಲಿ ಕ್ವಾಟರ್ ಬಾಟಲೀ ಹಂಗೆ ಲೈಫು' ಎಂಬ ಭಟ್ಟರ ಸಾಲನ್ನು ತುಸುವಷ್ಟೆ ತಿರುಚಿ 'ಬಾಟಲಿಯನ್ನು ಖಾಲಿ ಮಾಡುವುದೇ ಲೈಫು' ಅರ್ಥೈಸಿಕೊಂಡಿದ್ದಾನೆ ಎನಿಸುತ್ತದೆ ಪಾಪ. ಕುಡುಕರನ್ನು, ಬಾರನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಸಮಾಜದ ಮಧ್ಯೆ ಬಾರನ್ನು ಗಂಡ್ಮಕ್ಳ ತವರಿಗೂ, ಕುಡುಕರನ್ನೂ ಫಿಲಾಸಫರ್‌ಗಳಿಗೂ ಹೋಲಿಸಿದ ಮಹಾನ್ ಚೇತನ ಎದುರಿಗೆ ಸಿಕ್ಕರೆ ಸುಮ್ಮನೆ ಬಿಟ್ಟಾನೆಯೇ. ಕ್ಷಣ ಕೂಡ ತಡ ಮಾಡದೆ ಗ್ಲಾಸಿನೊಳಕ್ಕೆ ಐಸು ಬಿದ್ದಂತೆ ಸಲೀಸಾಗಿ ಭಟ್ಟರ ಕಾಲಿಗೆ ಬಿದ್ದಿದ್ದಾನೆ.

  ಅಭಿಮಾನಿಯ ಭಕ್ತಿಯ ಪರಾಕಷ್ಟೆ ಕಂಡು ಕಂಗಾಲಾದ ಭಟ್ಟರು, ಅಮಲಿನಲ್ಲಿ ನಿಲ್ಲಲು ಕಷ್ಟಪಡುತ್ತಿದ್ದ ಅಭಿಮಾನಿಯ ಹೆಗಲು ಹಿಡಿದು ನಿಲ್ಲಿಸಿ ಆಲಂಗಿಸಿಕೊಂಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗಿಬಿಟ್ಟಿದ್ದರೆ ಮುಂದೆ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಬಹುದಿತ್ತೇನೋ, ಆದರೆ ಹಾಗಾಗಿಲ್ಲ. ತಾವೇ ನಾಯಕತ್ವ ವಹಿಸಿರುವ ಕುಡುಕ ಸಮುದಾಯದ ಸಕ್ರಿಯ ಸದಸ್ಯನ ಮೇಲೆ ತುಸು ಹೆಚ್ಚು ಪ್ರೀತಿ ತೋರಿ ಆ ಕುಡುಕ ಅಭಿಮಾನಿಯ ತಲೆಗೆ ಮುತ್ತೊಂದನ್ನು ಕೊಟ್ಟುಬಿಟ್ಟಿದ್ದಾರೆ.

  ಕುಡುಕರು ಮಹಾನ್ ಸ್ವಾಭಿಮಾನಿಗಳೆಂದು ಕುಡುಕರಲ್ಲದವರು ಸಹ ಬಲ್ಲರು. ಆಟೋಕ್ಕೆ ಹಣವಿಲ್ಲದಿದ್ದರೂ ಸಪ್ಲೈಯರ್‌ಗೆ ಕೈತುಂಬ ಟಿಪ್ ನೀಡುವ ಕುಡುಕರು, ಋಣವನ್ನು ಮಾತ್ರ ಸಹಿಸಿಕೊಳ್ಳಲಾರರು. ಅದೇ ಕಾರಣಕ್ಕೆ ಯೋಗರಾಜ್ ಭಟ್ಟರು ಕೊಟ್ಟ ಪ್ರೀತಿಯ ಮುತ್ತನ್ನು ಅಲ್ಲೇ ಹಿಂದುರಿಗಿಸಿಬಿಟ್ಟಿದ್ದಾನೆ ಆ ಅಮಲು ತುಂಬಿದ ಅಭಿಮಾನಿ. ಆದರೆ ಯಡವಟ್ಟಾಗಿರುವುದು ಅಲ್ಲೆ. ಭಟ್ಟರಿಗೆ ಮುತ್ತಿಡಲು ಹತ್ತಿರ ಹೋದಾಗ ಪಾಪ ಭಟ್ಟರ ಹಣೆಬರಹ ಕೆಟ್ಟು ಯಾವೊದೋ ಒಂದು ಕೋನದಲ್ಲಿ ಪಕ್ಕಕ್ಕೆ ತಿರುಗಿಬಿಟ್ಟಿದ್ದಾರೆ. ಹಾಗಾಗಿ ಆತನ ಮುತ್ತು ಬಹುತೇಕ ಭಟ್ಟರ ತುಟಿಯ ಮೇಲೆ ಲ್ಯಾಂಡ್ ಆಗಿಬಿಟ್ಟಿದೆ. ಅಭಿಮಾನಿಯ ಅಭಿಮಾನದಿಂದಾಗಿ ಭಟ್ಟರ ತುಟಿ ಒದ್ದೆಯಾಗಿದೆ.

  ಈ ಅಭೂತಪೂರ್ವ ಅಭಿಮಾನದ ಅತಿರೇಕದ ದೃಶ್ಯ ವಿಡಿಯೋ ರೂಪದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದ ಭಟ್ಟರ ಹಾಡಿನಂತೆಯೇ ವೈರಲ್ ಆಗಿಬಿಟ್ಟಿದೆ. ವಿಡಿಯೋ ನೋಡಿದ ಕೆಲವರು ''ಹೇ ಆತ ಭಟ್ಟರಿಗೆ ಮುತ್ತು ಕೊಟ್ಟಿಲ್ಲ, ಭಟ್ಟರು ಮುತ್ತಿನಿಂದ ಸ್ವಲ್ಪದರಲ್ಲೇ ಬಚಾವಾಗಿದ್ದಾರೆ'' ಎಂದು ಸಹ ವಾದಿಸುತ್ತಿದ್ದಾರೆ. ಇಂಥಹಾ ಸಂದರ್ಭದಲ್ಲಿ ಭಟ್ಟರದ್ದೇ ಸಿನಿಮಾ, 'ಗಾಳಿಪಟ 2' ಹಾಡು ನೆನಪಾಗುತ್ತಿದೆ 'ಮುತ್ತಿಟ್ಟಿರಬಹುದು ಪ್ರಾಯಶಃ, ಮುತ್ತಿಡದೇ ಇರಬಹುದು ಪ್ರಾಯಶಃ' ಏನೇ ಆಗಲಿ, ಜೈ ಯೋಗರಾಜ್ ಭಟ್ರು, ಜೈ ಅಭಿಮಾನಿ, ಜೈ ಸಿನಿಮಾ.

  English summary
  Director Yogaraj Bhat's funny video viral on social media. A fan kissed Yogaraj Bhat.
  Friday, August 12, 2022, 20:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X