ನಿರ್ದೇಶನ, ನಿರ್ಮಾಣದ ನಂತರ ಯೋಗರಾಜ್ ಭಟ್ ಹೊಸ ಬಿಜಿನೆಸ್
ನಿರ್ದೇಶಕ ಯೋಗರಾಜ್ ಭಟ್ ಸಕಲಕಲಾವಲ್ಲಭ. ಅವರು ಒಬ್ಬ ನಿರ್ದೇಶಕನೂ ಹೌದು, ನಿರ್ಮಾಪಕನು ಹೌದು, ಗೀತರಚನೆಗಾರನೂ ಹೌದು. ಅವುಗಳ ಜೊತೆಗೆ ತೆರೆ ಮೇಲೆ ಸಣ್ಣ ಪಾತ್ರಗಳನ್ನು ಭಟ್ಟರು ಮಾಡಿದ್ದಾರೆ. ಇದೆಲ್ಲದರ ನಂತರ ಈಗ ಯೋಗರಾಜ್ ಭಟ್ ಮತ್ತೊಂದು ಹೆಜ್ಜೆ ಇಡುತ್ತಿದ್ದಾರೆ.
ನಟ ಪುನೀತ್ ರಾಜ್ ಕುಮಾರ್ ಕೆಲ ತಿಂಗಳುಗಳ ಹಿಂದೆ ತಮ್ಮ ಪಿ ಆರ್ ಕೆ ಆಡಿಯೋ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಈಗ ನಿರ್ದೇಶಕ ಯೋಗರಾಜ್ ಭಟ್ ಕೂಡ ತಮ್ಮದೆ ಆದ ಹೊಸ ಆಡಿಯೋ ಕಂಪನಿಯನ್ನು ಶುರು ಮಾಡುತ್ತಿದ್ದಾರೆ. ಈಗಾಗಲೇ ತಮ್ಮ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಮತ್ತು ಸಿನಿಮಾಗಳ ಹಂಚಿಕೆ ಮಾಡುತ್ತಿದ್ದ ಭಟ್ಟರು ಈಗ ಆಡಿಯೋ ಇಂಡಸ್ಟ್ರಿಗೆ ಲಗ್ಗೆ ಇಟ್ಟಿದ್ದಾರೆ. ಅಂದಹಾಗೆ, ಯೋಗರಾಜ್ ಭಟ್ ಆಡಿಯೋ ಕಂಪನಿ ಪ್ರಾರಂಭ ಮಾಡುತ್ತಿರುವುದಕ್ಕೂ ಒಂದು ಕಾರಣ ಇದೆ.
ಇದು ಆನ್ ಲೈನ್ ಯುಗ.! ಈಗ ಹಾಡುಗಳಿಗಾಗಿ ಯಾರೂ ಕ್ಯಾಸೆಟ್, ಸಿಡಿ ಖರೀದಿಸುವುದಿಲ್ಲ.! ಹೀಗಾಗಿ ಆಡಿಯೋ ಕಂಪನಿಗಳು ನಷ್ಟದಲ್ಲಿ ನಡೆಯುತಿವೆ' - ಹೀಗಂತ ಆಡಿಯೋ ಕಂಪನಿ ಮಾಲೀಕರೇ ಗೊಣಗಿರುವುದುಂಟು. ಹೀಗಿದ್ದರೂ, ಕನ್ನಡ ಚಿತ್ರರಂಗದಲ್ಲಿ ಒಂದಾದ ಮೇಲೊಂದರಂತೆ ಹೊಸ ಆಡಿಯೋ ಕಂಪನಿಗಳು ತಲೆಯೆತ್ತುತ್ತಿವೆ. ಮುಂದೆ ಓದಿ...

ಯೋಗರಾಜ್ ಮ್ಯೂಸಿಕ್ ಅಥವಾ YB ಮ್ಯೂಸಿಕ್
ನಿರ್ದೇಶಕ ಯೋಗರಾಜ್ ಭಟ್ ಇದೀಗ ತಮ್ಮದೆ ಆದ ಹೊಸ ಆಡಿಯೋ ಸಂಸ್ಥೆವನ್ನು ಶುರು ಮಾಡುತ್ತಿದ್ದಾರೆ. ತಮ್ಮ ಆಡಿಯೋ ಕಂಪನಿಗೆ ಯೋಗರಾಜ್ ಮ್ಯೂಸಿಕ್ ಅಥವಾ YB ಮ್ಯೂಸಿಕ್ ಎಂಬ ಹೆಸರನ್ನು ಇಡುವ ಪ್ಲಾನ್ ಮಾಡಿದ್ದಾರೆ. ಈ ಮೂಲಕ ನಿರ್ದೇಶನ, ನಿರ್ಮಾಣದ ನಂತರ ಭಟ್ಟರು ಆಡಿಯೋ ಕಂಪನಿ ಮಾಲೀಕರಾಗುತ್ತಿದ್ದಾರೆ.

ಭಟ್ಟರ ಆಡಿಯೋ ಸಂಸ್ಥೆಯಿಂದ ಹೊರ ಬರುವ ಮೊದಲ ಸಿನಿಮಾ
'ಕನ್ನಡಕ್ಕಾಗಿ ಒಂದನ್ನು ಒತ್ತಿ' ಸಿನಿಮಾದ ಹಾಡುಗಳು ಯೋಗರಾಜ್ ಭಟ್ ಆಡಿಯೋ ಸಂಸ್ಥೆ ಮೂಲಕ ಹೊರಬರುವ ಮೊದಲ ಸಿನಿಮಾ ಹಾಡುಗಳಗಿವೆ. ಈ ಚಿತ್ರದ ಎರಡು ಹಾಡುಗಳನ್ನು ಯೋಗರಾಜ್ ಭಟ್ ಬರೆದಿದ್ದು, ಈ ಚಿತ್ರದ ಮೂಲಕ ಅವರ ಆಡಿಯೋ ಕಂಪನಿ ಶುಭಾರಂಭ ಮಾಡಲಿದೆ.

ಆಡಿಯೋ ಕಂಪನಿ ಶುರು ಮಾಡಲು ಕಾರಣ ಏನು?
ಭಟ್ಟರು ಈ ರೀತಿ ಸ್ವತಃ ಆಡಿಯೋ ಕಂಪನಿ ಶುರು ಮಾಡಿದ್ದಕ್ಕೆ ಒಂದು ಕಾರಣ ಇದೆ. ಅವರ ಪ್ರಕಾರ ಕನ್ನಡದ ಕೆಲವು ಹಾಡುಗಳಿಗೆ ಸರಿಯಾದ ಪ್ರಮೋಷನ್ ಸಿಗುತ್ತಿಲ್ಲವಂತೆ. ದೊಡ್ಡ ನಟರ ಸಿನಿಮಾಗಳನ್ನು ಬಿಟ್ಟು ಸಣ್ಣ ಪುಟ್ಟ ನಟರ ಸಿನಿಮಾಗಳ ಒಳ್ಳೆಯ ಹಾಡುಗಳು ಹೆಚ್ಚು ಜನರಿಗೆ ತಲುಪುತ್ತಿಲ್ಲವಂತೆ. ಅದೇ ಕಾರಣಕ್ಕೆ ಯೋಗರಾಜ್ ಭಟ್ ತಮ್ಮ ಆಡಿಯೋ ಸಂಸ್ಥೆ ಮೂಲಕ ಒಂದು ಒಳ್ಳೆಯ ಹಾಡಿಗೆ ಬೇಕಾದ ಎಲ್ಲ ರೀತಿಯ ಪ್ರಚಾರವನ್ನು ಮಾಡುತ್ತಾರಂತೆ.

'ಪಂಚತಂತ್ರ' ಹಾಡುಗಳು
ಯೋಗರಾಜ್ ಭಟ್ ಸದ್ಯ 'ಪಂಚತಂತ್ರ' ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. ಇಷ್ಟು ದಿನ ಹರಿಕೃಷ್ಣ ಅವರ ಆಡಿಯೋ ಸಂಸ್ಥೆಯ ಮೂಲಕ ಯೋಗರಾಜ್ ಭಟ್ ನಿರ್ದೇಶಕದ ಸಿನಿಮಾಗಳ ಹಾಡುಗಳು ಹೊರ ಬರುತ್ತಿತ್ತು. ಈಗ 'ಪಂಚತಂತ್ರ' ಚಿತ್ರದ ಹಾಡುಗಳು ಹರಿಕೃಷ್ಣ ಆಡಿಯೋ ಕಂಪನಿಯಿಂದ ಬರದೆ ಇದ್ದರೆ ಯೋಗರಾಜ್ ಭಟ್ ಆಡಿಯೋ ಕಂಪನಿಯಿಂದ ಬರುವುದು ಪಕ್ಕಾ.

ಸಿಕ್ಕಾಪಟ್ಟೆ ಆಡಿಯೋ ಕಂಪನಿಗಳು
ಕನ್ನಡದಲ್ಲಿ ಈಗ ಸಿಕ್ಕಾಪಟ್ಟೆ ಹೊಸ ಹೊಸ ಆಡಿಯೋ ಕಂಪನಿಗಳು ಬಂದಿವೆ. ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ, ಹರಿಕೃಷ್ಣ ಅವರ ಡಿ ಬೀಟ್ಸ್, ಹಂಸಲೇಖ ಅವರ ಸ್ಟ್ರಿಂಗ್, ವಿ.ನಾಗೇಂದ್ರ ಪ್ರಸಾದ್ ಅವರ ಮೂಸಿಕ್ ಬಜಾರ್, ಅನೂಪ್ ಸಿಳೀನ್ ಅವರ ಜೆಪಿ ಮ್ಯೂಸಿಕ್, ರಘುದೀಕ್ಷಿತ್ ಅವರ ಆರ್ ಡಿ ಎಕ್ಸ್ ಪ್ರೊಡಕ್ಷನ್ ಈ ಎಲ್ಲ ಆಡಿಯೋ ಕಂಪನಿಗಳು ಈಗ ಚಾಲ್ತಿಯಲ್ಲಿ ಇವೆ.


Click it and Unblock the Notifications











