Kariya Re-Release; 'ಕರಿಯ' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್; ವಿತರಕ ಫುಲ್ ಖುಷ್
ನಟ ದರ್ಶನ್ ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ. ಇತ್ತ ಚಿತ್ರಮಂದಿರಗಳಲ್ಲಿ 'ಕರಿಯ' ಸಿನಿಮಾ ದರ್ಬಾರ್ ಜೋರಾಗಿದೆ. ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. 21 ವರ್ಷಗಳ ಬಳಿಕ ಮರುಬಿಡುಗಡೆ ಆಗಿರುವ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ.
ಡಿಜಿಟಲ್ 4K ವರ್ಷನ್‌ನಲ್ಲಿ ಶುಕ್ರವಾರ ತೆರೆಕಂಡ 'ಕರಿಯ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರಸನ್ನ, ಸಿದ್ದೇಶ್ವರ ಸೇರಿದಂತೆ ಕೆಲ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಕೂಡ ಜೋರಾಗಿದೆ. ಶುಕ್ರವಾರ ಸಿಕ್ಕ ರೆಸ್ಪಾನ್ಸ್ ನೋಡಿ ಶನಿವಾರ, ಭಾನುವಾರ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಹೊಸದಾಗಿ ಒಂದಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ.

ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ರೌಡಿ ಕರಿಯ ಆಗಿ ಅಬ್ಬರಿಸಿದ್ದಾರೆ. ದಶಕಗಳ ಹಿಂದೆಯೇ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಮೊದಲ ಬಾರಿಗಿಂತ ಎರಡನೇ ಬಾರಿ ಸಿನಿಮಾ ಅದ್ಭುತ ಪ್ರದರ್ಶನ ಕಂಡಿತ್ತು. ಆ ಬಳಿಕ ಕೂಡ ಸಾಕಷ್ಟು ಬಾರಿ ಸಿನಿಮಾ ರೀ-ರಿಲೀಸ್ ಆಗಿತ್ತು. ಇದೀಗ ಮತ್ತೊಮ್ಮೆ ಸದ್ದು ಮಾಡ್ತಿದೆ. ಕನ್ನಡ ಚಿತ್ರರಂಗದಲ್ಲಿ ಈಗ ಸೂಪರ್ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಟ್ರೆಂಡ್ ನಡೀತಿದೆ.
ಎಎಂಎಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮುನಿಸ್ವಾಮಿ ಎಂಬುವವರು 'ಕರಿಯ' ಸಿನಿಮಾ ಮತ್ತೆ ಪ್ರೇಕ್ಷಕರ ಮುಂದೆ ತಂದಿದ್ದಾರೆ. ಪ್ರೇಕ್ಷಕರಿಂದ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ಖುಷಿಯಾಗಿದ್ದಾರೆ. ಅಭಿಮಾನಿಗಳು ಚಿತ್ರಮಂದಿರಗಳ ಹೊರಗೆ ಸಂಭ್ರಮಾಚರಣೆ ಮಾತ್ರವಲ್ಲ ಒಳಗೆ ಸ್ಕ್ರೀನ್ ಮುಂದೆ ಕುಣಿದು ಸಂಭ್ರಮಿಸಿರುವ ಫೋಟೊ, ವೀಡಿಯೋಗಳು ವೈರಲ್ ಆಗ್ತಿದೆ.
'ಕರಿಯ' ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ವಿತರಕ ಮುನಿಸ್ವಾಮಿ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಚಿತ್ರ ಎಲ್ಲಾ ಕಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಎರಡನೇ ದಿನ ಸಾಕಷ್ಟು ಸ್ಕ್ರೀನ್‌ಗಳು ಸೇರ್ಪಡೆ ಆಗಿದೆ. ಶೋಗಳ ಸಂಖ್ಯೆ ಸಹ ಹೆಚ್ಚಿಸಿದ್ದೇವೆ. ಮುಂದಿನ ಶುಕ್ರವಾರ ಮತ್ತಷ್ಟು ಕಡೆಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ.

ಮುಂದಿನ ಶುಕ್ರವಾರದಿಂದ ಬಳ್ಳಾರಿ, ಚಿತ್ರದುರ್ಗ, ಹೊಸಪೇಟೆ ಸೇರಿದಂತೆ ಕೆಲವೆಡೆ ಸಿನಿಮಾ ಪ್ರದರ್ಶನ ಆರಂಭವಾಗುತ್ತದೆ. ಸಿನಿಮಾ ಗಳಿಕೆ ಕೂಡ ಚೆನ್ನಾಗಿದೆ. ಎಷ್ಟು ಕಲೆಕ್ಷನ್ ಎಂದು ಈಗಲೇ ಹೇಳುವುದು ಕಷ್ಟ. ಮುಂದಿನ ದಿನಗಳಲ್ಲಿ ಆ ಬಗ್ಗೆ ಮಾಹಿತಿ ನೀಡುತ್ತೇವೆ ಎಂದಿದ್ದಾರೆ. ದರ್ಶನ್ ಅವರ ಅಭಿಮಾನಿಯೂ ಆಗಿರುವ ಮುನಿಸ್ವಾಮಿ ಸಿನಿಮಾ ಪ್ರದರ್ಶನದ ಬಗ್ಗೆ ಖುಷಿಯಾಗಿದ್ದಾರೆ.
ಮುಂದೆ ರಾಮು ನಿರ್ಮಾಣದ 'ಕಲಾಸಿಪಾಳ್ಯ' ಸಿನಿಮಾ ರೀ-ರಿಲೀಸ್ ಮಾಡುವುದಕ್ಕೂ ಮುನಿಸ್ವಾಮಿ ಮುಂದಾಗಿದ್ದಾರೆ. 'ಕರಿಯ' ಸಿನಿಮಾ ಸಕ್ಸಸ್ 'ಕಲಾಸಿಪಾಳ್ಯ' ತೆರೆಗೆ ಬರೋಕೆ ಸಹಾಯಕವಾಗಬಹುದು. ಕೆಲ ದಿನಗಳ ಹಿಂದೆ ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಸಿನಿಮಾ ರೀ-ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು. ಬಳಿಕ ಉಪೇಂದ್ರ ನಿರ್ದೇಶಿಸಿ ನಟಿಸಿದ 'ಎ' ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು ಸುಳ್ಳಲ್ಲ. ಕೆಲವೇ ದಿನಗಳ ಹಿಂದೆ ಬಂದಿದ್ದ 'ಶಾಸ್ತ್ರಿ' ಚಿತ್ರವನ್ನು ದರ್ಶನ್ ಫ್ಯಾನ್ಸ್ ಎಂಜಾಯ್ ಮಾಡಿದ್ದರು.
ಉಪೇಂದ್ರ ನಿರ್ದೇಶನದ 'ಓಂ' ಚಿತ್ರದ ರೀತಿಯಲ್ಲೇ 'ಕರಿಯ' ಚಿತ್ರದಲ್ಲೂ ನಿಜವಾದ ರೌಡಿಗಳು ನಟಿಸಿದ್ದರು. ಗುರುಕಿರಣ್ ಸಂಗೀತ, ನಾಗೇಂದ್ರ ಪ್ರಸಾದ್ ಸಾಹಿತ್ಯದ ಹಾಡುಗಳು ಸೂಪರ್ ಹಿಟ್ ಆಗಿ ಚಿತ್ರಕ್ಕೆ ಪ್ಲಸ್ ಆಗಿತ್ತು. ಇವತ್ತಿಗೂ ಆ ಚಿತ್ರದ ಹಾಡುಗಳನ್ನು ಅಭಿಮಾನಿಗಳು ಮರೆತ್ತಿಲ್ಲ. ಇದೀಗ ಮತ್ತೆ ಚಿತ್ರಮಂದಿರಗಳಲ್ಲಿ 'ಕರಿಯ'ನ ಗಾನಬಜಾನಾ ಕೇಳಿ ಎಂಜಾಯ್ ಮಾಡುತ್ತಿದ್ದಾರೆ.


Click it and Unblock the Notifications











