ವಿಷ್ಣುವರ್ಧನ್ ಸಮಾಧಿ ನೆಲಸಮ, ಕೆರಳಿ ಕೆಂಡವಾದ ರಿಷಬ್ ಶೆಟ್ಟಿ..!
ಅಭಿನಯ ಭಾರ್ಗವ.. ಸಾಹಸ ಸಿಂಹ.. ಯಜಮಾನ.. ಹೃದಯವಂತ.. ದಾದಾ.. ಹೀಗೆ ಹತ್ತಾರು ಬಿರುದುಗಳನ್ನು ಪಡೆದಿದ್ದವರು ವಿಷ್ಣುವರ್ಧನ್. ಆದರೆ.. ಸರ್ಕಾರದಿಂದ ಅವರಿಗೆ ಸಿಗಬೇಕಾದ ಗೌರವ ಸಿಗಲಿಲ್ಲ. ಪ್ರಶಸ್ತಿಗಳು ಸಿಗಲಿಲ್ಲ. ಬದಲಿಗೆ ಸಿಕ್ಕಿದ್ದು ನೋವು-ಅವಮಾನ ಮಾತ್ರ. ಇಂಥಾ ವಿಷ್ಣುವರ್ಧನ್ ಅವರ ಸಮಾಧಿಯನ್ನು ''ಅಭಿಮಾನ್ ಸ್ಟುಡಿಯೋ''ದಲ್ಲಿ ನೆಲಸಮ ಮಾಡಲಾಗಿದೆ. ಇದರಿಂದ ಅಭಿಮಾನಿಗಳ ಸಹನೆಯ ಕಟ್ಟೆ ಒಡೆದಿದೆ. ಇನ್ನೂ ಸಹಿಸಲು ಸಾಧ್ಯ ಇಲ್ಲ.. ಕಾಯಲು ಕೂಡ ಆಗುವುದಿಲ್ಲ.. ಎನ್ನುವ ಮಾತು ಕೇಳಿ ಬರುತ್ತಿದೆ.
ಕೇವಲ ಅಭಿಮಾನಿಗಳಲ್ಲಿ ಮಾತ್ರವಲ್ಲ ಚಿತ್ರರಂಗದಲ್ಲಿ ಕೂಡ ಆಕ್ರೋಶ ವ್ಯಕ್ತವಾಗುತ್ತಿದೆ. ಖುದ್ದು ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಮತ್ತು ವಿಷ್ಣುವರ್ಧನ್ ಅವರ ಅಭಿಮಾನಿ ಕಿಚ್ಚ ಸುದೀಪ್ ಕೂಡ ಈ ವಿಚಾರದ ಕುರಿತು ಕೆಂಡ ಕಾರಿದ್ದಾರೆ. ಒಂದೇ ಊರು, ಒಂದೇ ರಾಜ್ಯ, ನಮ್ಮದೇ ಕಲಾವಿದರು ಆದರೆ ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ನಾವುಗಳು ಓಡಾಡಿದ್ದಾಯ್ತು, ನೀವುಗಳು ಹೋರಾಡಿದ್ದಾಯ್ತು, ಎಲ್ಲರಲ್ಲಿ ಮನವಿ ಮಾಡಿಕೊಂಡಿದ್ದಾಯ್ತು ಎಂದು ಹೇಳಿರುವ ಸುದೀಪ್ ದಯವಿಟ್ಟು ಇದನ್ನು ಮಾಡಿಕೊಡಿ.. ಸ್ವಲ್ಪ ಕರುಣೆ ತೋರಿಸಿ.. ಎಂದು ಕೇಳಿಕೊಂಡಿದ್ದಾಯ್ತು. ಅಧಿಕಾರದಲ್ಲಿರುವವರಿಗೆ ಇದು ದೊಡ್ಡ ವಿಷಯ ಆಗಿರಲಿಲ್ಲ. ಅವರ ಸಣ್ಣ ಪ್ರಯತ್ನ ಸಹ ಇಂದು ನಡೆದಿರುವುದನ್ನು ತಡೆಯುತ್ತಿತ್ತು ಎಂದು ಹೇಳಿದ್ದಾರೆ. ಕೈ ಚಾಚಿದ್ದು, ಕಣ್ಣೀರು ಹಾಕಿದ್ದು, ಭಿಕ್ಷೆ ಬೇಡಿದ್ದು ಸಾಕು ಎಂದು ಹೇಳಿದ್ದಾರೆ. ಸುದಿರ್ಘವಾದ ಪತ್ರವನ್ನು ಕೂಡ ಬರೆದಿದ್ದಾರೆ.
ಈಗ ಸುದೀಪ್ ಅವರ ಬೆನ್ನಲ್ಲಿಯೇ ರಿಷಬ್ ಶೆಟ್ಟಿ ಕೂಡ ವಿಷ್ಣುವರ್ಧನ್ ಅವರಿಗಾದ ಅನ್ಯಾಯದ ಕುರಿತು ಮಾತನಾಡಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಿಷಬ್ ಶೆಟ್ಟಿ ''ಡಾ. ವಿಷ್ಣುವರ್ಧನ್ ಸರ್ ಅವರ ಸ್ಮಾರಕದ ವಿಚಾರದಲ್ಲಿ ನಡೆದಿರುವುದು ಖಂಡನೀಯ. ಅವರನ್ನು ಹೃದಯಪೂರ್ವಕವಾಗಿ ಆರಾಧಿಸುವ ಪ್ರತಿಯೊಬ್ಬ ಅಭಿಮಾನಿಗೂ ಇದು ಅತೀವ ನೋವುಂಟು ಮಾಡಿದೆ. ನಾಡಿನ ಮೇರು ನಟರೊಬ್ಬರ ವಿಚಾರದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಅವರ ವ್ಯಕ್ತಿತ್ವ ಮತ್ತು ಕಲಾಸೇವೆಗೆ ಅಗೌರವ ತಂದಂತಾಗಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ರಿಷಬ್ ಶೆಟ್ಟಿ ಮತ್ತು ಸುದೀಪ್ ಮಾತ್ರವಲ್ಲ ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಶ್ರುತಿ, ಸುಧಾರಾಣಿ, ನಿರ್ದೇಶಕ ತರುಣ್ ಸುಧೀರ್, ವಿಜಯ್ ರಾಘವೇಂದ್ರ, ಧ್ರುವಾ ಸರ್ಜಾ, ಹಲವರು ಈ ಘಟನೆಯನ್ನು ಖಂಡಿಸಿದ್ದಾರೆ. ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದ ಕಡೆಯಿಂದ ಪ್ರತಿಕ್ರಿಯೆಯನ್ನು ಕೂಡ ನೀಡಿರುವ ಅನಿರುದ್ಧ್ ತಮಗಾದ ನೋವನ್ನು ಹಂಚಿಕೊಂಡಿದ್ದಾರೆ. ಹೀಗೆ ಮಾಡುತ್ತಾರೆ ಎಂದು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ. ಸಮಾಧಿ ನಿರ್ಮಾಣ ಮಾಡಲಾದ ಜಾಗ ವಿವಾದಾತ್ಮಕ ಸ್ಥಳ ಇತ್ತು ಎಂಬುದು ನಮಗೆ ಗೊತ್ತಿರಲಿಲ್ಲ. ಸಮಾಧಿ ತೆರವು ಮಾಡುತ್ತಿರುವ ವಿಚಾರ ಕೂಡ ನಮ್ಮ ಗಮನಕ್ಕೆ ಅವರು ತರಲಿಲ್ಲ ಎಂದು ಹೇಳಿದ್ಧಾರೆ.
ಅಂದ್ಹಾಗೇ ''ಅಭಿಮಾನ್ ಸ್ಟುಡಿಯೋ''ದಲ್ಲಿದ್ದ ವಿಷ್ಣು ಸಮಾಧಿಯನ್ನು ಹೈಕೋರ್ಟ್ ಸೂಚನೆ ಮೇರೆಗೆ ರಾತ್ರೋರಾತ್ರಿ ತೆರವುಗೊಳಿಸಲಾಗಿದೆ.ವಿಷಯ ಗೊತ್ತಾದ ಕೂಡಲೇ ನಿನ್ನೆಯಿಂದ ಹಲವಾರು ವಿಷ್ಣುವರ್ಧನ್ ಅವರ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದತ್ತ ದೌಡಾಯಿಸುತ್ತಿದ್ದಾರೆ. ಕಣ್ಮರೆಯಾದ ತಮ್ಮ ಆರಾಧ್ಯ ದೈವನ ಸಮಾಧಿಯನ್ನು ಕಂಡು ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಅಭಿಮಾನ್ ಸ್ಟುಡಿಯೋದಲ್ಲಿ ಮಾಲ್ ಕಟ್ಟುವ ಯೋಚನೆ ಮತ್ತು ಯೋಜನೆ ನಡೆಯುತ್ತಿದೆ ಎಂದು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ ಹೇಳಿದ್ದಾರೆ.


Click it and Unblock the Notifications











