"ನನ್ನ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡಿರುವವರೆಲ್ಲಾ ದರ್ಶನ್ ಫ್ಯಾನ್ಸ್ ಅಂತ ಗೊತ್ತು"; ದಿವ್ಯಾ ತಾಯಿ ಕಣ್ಣೀರು
ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ಇತ್ತೀಚೆಗೆ ನಿರೂಪಕಿ ದಿವ್ಯಾ ವಸಂತ ಬಂಧನವಾಗಿತ್ತು. ಕೇರಳದಲ್ಲಿ ತಲೆ ಮರೆಸಿಕೊಂಡಿದ್ದ ಆಕೆಯನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದು, ನಗರಕ್ಕೆ ಕರೆ ತಂದಿದ್ದರು. ಸದ್ಯ ಹೆಚ್ಚಿನ ತನಿಖೆ ಮುಂದುವರೆದಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಕೆಯನ್ನು ಬಹಳ ಟ್ರೋಲ್ ಮಾಡಲಾಗುತ್ತಿದೆ.
ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದ ದಿವ್ಯಾ ವಸಂತ ಬಳಿಕ 'ಗಿಚ್ಚಿ ಗಿಲಿಗಿಲಿ' ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇಂದಿರಾನಗರದ ಟ್ರೀ ಸ್ಪಾ & ಬ್ಯೂಟಿ ಮಾಲೀಕ ಸೇರಿದಂತೆ ಹಲವರನ್ನು ಬೆದರಿಸಿ ಸುಲಿಗೆ ಮಾಡಿರುವ ಗ್ಯಾಂಗ್‌ನಲ್ಲಿ ದಿವ್ಯಾ ಹೆಸರು ಕೇಳಿಬಂದಿದೆ. ರಹಸ್ಯ ಕಾರ್ಯಾಚರಣೆ ಸೋಗಿನಲ್ಲಿ ಹಲವರನ್ನು ಸುಲಿಗೆ ಮಾಡಿರುವ ಪ್ರಕರಣದಲ್ಲಿ ಖಾಸಗಿ ಸುದ್ದಿವಾಹಿನಿ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ರಾಜಾನುಕುಂಟೆ ವೆಂಕಟೇಶ್ ಮತ್ತು ದಿವ್ಯಾ ವಸಂತ ಸಹೋದರ ಸಂದೇಶ್ ಬಂಧನವಾಗಿದೆ.

ಟ್ರೀ ಸ್ಪಾ ಬ್ಯೂಟಿ & ಮಸಾಜ್ ಪಾರ್ಲರ್‌ನಲ್ಲಿ ಆರೋಪಿಗಳು ತಾವೇ ಸೆರೆಹಿಡಿದ ವೀಡಿಯೋ ಇಟ್ಟುಕೊಂಡು ಮ್ಯಾನೇಜರ್ ಶಿವಶಂಕರ್‌ಗೆ ಬೆದರಿಸಿದ್ದರು. ಮೊದಲು 15 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಗ್ಯಾಂಗ್ ಬಳಿಕ 8 ಲಕ್ಷ ರೂ.ಗೆ ಡೀಲ್ ಕುದುರಿಸಿತ್ತು. ಆದರೆ ಶಿವಶಂಕರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ ಆರೋಪಿಗಳು ಬಲಿಗೆ ಬಿದ್ದಿದ್ದರು. ವೆಂಕಟೇಶ್ ಹಾಗೂ ದಿವ್ಯಾ ಸೇರಿ 'ಸ್ಪೈ ರೀಸರ್ಚ್ ಟೀಂ' ಹೆಸರಿನ ವಾಟ್ಸಪ್ ಗ್ರೂಪ್ ಮಾಡಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಿದ್ದರು ಎನ್ನಲಾಗಿತ್ತು. ಹಾಗಾಗಿ ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖಾಸಗಿ ವಾಹಿನಿಗಳಲ್ಲಿ ಕೆಲಸ ಮಾಡಿಕೊಂಡಿದ್ದ ದಿವ್ಯಾ ಐಷಾರಾಮಿ ಜೀವನಕ್ಕಾಗಿ ಬೇಗ ಹಣ ಮಾಡಲು ಈ ಗ್ಯಾಂಗ್ ಜೊತೆ ಸೇರಿದ್ದು ಎನ್ನಲಾಗಿತ್ತು. ಮಗಳು ದಿವ್ಯಾ ವಸಂತ ಹಾಗೂ ಮಗ ಸಂದೇಶ್ ಬಂಧನ ತಾಯಿ ವಸಂತಮ್ಮಗೆ ಶಾಕ್ ತಂದಿತ್ತು. ಲಗ್ಗೆರೆಯಲ್ಲಿರುವ ದಿವ್ಯಾ ವಸಂತ ಮನೆ ಮೇಲೆ ದಾಳಿ ನಡೆಸಿ ಕ್ಯಾಮರಾ, ಲ್ಯಾಪ್‌ಟಾಪ್ ಸೇರಿ ಕೆಲ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ವಸಂತಮ್ಮ ಕಣ್ಣೀರಾಗಿದ್ದರು.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಗಳನ್ನು ಟ್ರೋಲ್ ಮಾಡುತ್ತಿರುವ ಬಗ್ಗೆ ವಸಂತಮ್ಮ ಬೇಸರಗೊಂಡಿದ್ದಾರೆ. ವೀಡಿಯೋ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ. ಭಾವುಕರಾಗಿ ಕಣ್ಣೀರಾಕಿದ್ದಾರೆ. "ನಾನು ದಿವ್ಯಾಳ ತಾಯಿ ವಸಂತ. ನಗೆ ಅಳು ಬರುತ್ತಿದೆ. ನನ್ನ ಮಗಳ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾಡಿದ್ದೀರಾ. ಮಾತನಾಡಿರುವರೆಲ್ಲಾ ದರ್ಶನ್ ಫ್ಯಾನ್ಸ್ ಅಂತ ನನಗೆ ಚೆನ್ನಾಗಿ ಗೊತ್ತು"
"ದಿವ್ಯಾ ತಪ್ಪು ಮಾಡಿದ್ದಾಳೋ ಇಲ್ಲವೋ ಮುಂದೆ ಗೊತ್ತಾಗುತ್ತದೆ. ಅವಳ ಕೆಲಸ ಅವಳು ಮಾಡಿದ್ದಾಳೆ. ದರ್ಶನ್ ಅವರು ಎಲ್ಲರಿಗೂ ಬೇಕಾಗಿರುವವರೇ. ನನಗೂ ದರ್ಶನ್ ಅಂದ್ರೆ ಇಷ್ಟ, ನಮ್ಮ ಮಕ್ಕಳಿಗೂ ಇಷ್ಟ. ಆಕೆಗೆ ಏನು ಕೆಲಸ ಕೊಟ್ಟಿದ್ದಾರೆ. ಅದು ಮಾಡಿದ್ದಾಳೆ, ಅವಳೇ ಬಂದು ಅದಕ್ಕೆ ಉತ್ತರ ಕೊಡುತ್ತಾಳೆ. ಅಲ್ಲಿಯವರೆಗೆ ಕೆಟ್ಟದಾಗಿ ಏನೂ ವೈರಲ್ ಮಾಡಬೇಡಿ"
"ನಿಮ್ಮ ಬೆಂಬಲ ನಮಗೆ ಸದಾ ಇರಬೇಕು. ನಮ್ಮ ಮಗಳು ಬೇಗ ಬರಲಿ ಎಂದು ಕೇಳಿಕೊಳ್ಳುತ್ತಿದ್ದೇನೆ. ಅವರು ತಪ್ಪು ಮಾಡಿದ್ದಾರೋ ಇಲ್ಲವೋ ದೇವರು ನೋಡಿಕೊಳ್ತಾನೆ. ವಾಹಿನಿಗಳಲ್ಲಿ ಅವಳಿಗೆ ಕೊಟ್ಟ ಕೆಲಸ ಮಾಡಿದ್ದಾಳೆ. ಅವಳ ಮೇಲೆ ಕೋಪ ತೀರಿಸಿಕೊಳ್ಳಬೇಡಿ. ನಿಮ್ಮ ಮನೆ ಹೆಣ್ಣುಮಗಳೆಂದು ತಿಳ್ಕೊಳಿ"
"ನೀವು ಅಂದುಕೊಂಡಂತೆ ನನ್ನ ಮಗಳು ಕೆಟ್ಟವಳಲ್ಲ. ಅವಳು ದರ್ಶನ್ ಅಭಿಮಾನಿ. ಅವಳು ಕೆಟ್ಟವಳಲ್ಲ, ಇಷ್ಟು ದಿನ ದಿವ್ಯಾಳನ್ನು ಹೇಗೆ ಬೆಳೆಸಿದ್ದೀರೋ, ಅದೇ ಬೆಳೆಸಿ, ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇನೆ" ಎಂದು ವಸಂತಮ್ಮ ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











