'ಬ್ಯಾಕ್ ಬೆಂಚರ್ಸ್' ಸಿನಿಮಾದಿಂದ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಈ ನಟಿಯ ಹಿನ್ನೆಲೆ ಏನು ಗೊತ್ತೇ?
ಸ್ಯಾಂಡಲ್‌ವುಡ್‌ಗೆ ಈಕೆ ಹೊಸ ಪರಿಚಯ. ಇಂಜಿನಿಯರಿಂಗ್ ಓದಿ ನಟಿಯಾದ ಇವರು ನಟನೆ ಮಾತ್ರವಲ್ಲದೆ ಸಿನಿಮಾ ರಂಗದ ಬೇರೆ ಬೇರೆ ಸ್ತರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಹೊಸ ನಟಿಯರ ಸಿನಿಪ್ರವೇಶ ಜೋರಾಗಿರುವ ಹಿನ್ನೆಲೆಯಲ್ಲಿ ಒಂದು ಮಟ್ಟಿಗಿನ ಕಾಂಪಿಟೇಶನ್ ಅಂತೂ ಚಿತ್ರರಂಗದಲ್ಲಿ ಇದ್ದೇ ಇದೆ. ಅಂತಹದರಲ್ಲಿ ಭರ್ಜರಿ ಸ್ಪರ್ಧೆ ನೀಡಲು ತಯಾರಾಗುತ್ತಿರುವ ಈ ನಟಿಯ ಹೆಸರು ಮಾನ್ಯ ಗೌಡ.
ಸದ್ಯ ಟ್ರೆಂಡಿಂಗ್‌ನಲ್ಲಿರುವ, ಇವತ್ತು ತೆರೆ ಕಾಣುತ್ತಿರುವ ಬ್ಯಾಕ್ ಬೆಂಚರ್ಸ್ ಸಿನಿಮಾ ನಿಮಗೆಲ್ಲಾ ತಿಳಿದೇ ಇದೆ. ಬಹುತೇಕ ಹೊಸ ಕಲಾವಿದರನ್ನು ಸೇರಿಸಿಕೊಂಡು ನಿರ್ಮಿಸಿರುವ ಚಿತ್ರ ಸಿನಿ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರಾಭಿಮಾನಿಗಳು ಸಿನಿಮಾ ತೆರೆ ಕಾಣಲು ಕಾತರದಿಂದ ಕಾಯುತ್ತಿದ್ದಾರೆ.

ಒಟ್ಟಾಗಿ ನಾಲ್ಕು ನಾಯಕಿಯರನ್ನು ಹೊಂದಿರುವ ಈ ಚಿತ್ರದಲ್ಲಿ ಮಾನ್ಯ ಗೌಡ ಕೂಡ ನಾಯಕಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆದರೆ, ಸಿನಿಮಾದಲ್ಲಿರೋ ಆ ಒಂದು ಪಾತ್ರಕ್ಕಾಗಿಯೇ ನಾಲ್ಕು ರೋಲ್‌ಗಳಿಗೂ ರಿಹರ್ಸಲ್ ಮಾಡಿದ್ದಾರಂತೆ ಮಾನ್ಯ ಗೌಡ.
ನಟ-ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರಿಂದ ಎಲ್ಲಾ ರೀತಿಯ ಅಭಿನಯವನ್ನು ಕಲಿತುಕೊಂಡ ನಟಿ ಸಿನಿಮಾದ ಪ್ರಮುಖ ಪಾತ್ರಗಳಾಗಿರುವ ನಾಲ್ಕು ಪಾತ್ರಗಳಿಗೂ ರಿಹರ್ಸಲ್ ಮಾಡಿದ್ದರು. ಈ ನಾಲ್ಕು ಮಾತ್ರಗಳಲ್ಲಿ ಮಾಯಾ ಎಂಬ ಪಾತ್ರವನ್ನು ಇದೀಗ ಮಾನ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಈ ಪಾತ್ರದ ಮೂಲಕವೇ ಮಾನ್ಯ ಗೌಡ ಇದೀಗ 'ಬ್ಯಾಕ್ ಬೆಂಚರ್ಸ್' ಸಿನಿಮಾದಿಂದ ಗಮನ ಸೆಳೆದಿದ್ದಾರೆ.
ಮಾನ್ಯ ಅವರ ಇಂಜಿನಿಯರಿಂಗ್ ವ್ಯಾಸಂಗ ಮುಗಿದು ಈಗಾಗಲೇ ಮೂರು ವರ್ಷಗಳಾಗಿವೆ. ಶಾಸ್ತ್ರಿಯ ನೃತ್ಯವನ್ನು ಚೆನ್ನಾಗಿ ಬಲ್ಲ ಇವರಿಗೆ ನಟನೆ ಎನ್ನುವುದು ಬಾಲ್ಯದಿಂದಲೂ ಆಸಕ್ತ ಕ್ಷೇತ್ರವಾಗಿತ್ತು. ಅವಕಾಶಗಳಿಗಾಗಿ ಕಾದಿದ್ದ, ಶ್ರಮ ಪಟ್ಟಿದ್ದ ಮಾನ್ಯ ಆಡಿಶನ್‌ಗಳನ್ನು ನೀಡಿದ್ದರು. ಇದೀಗ ಅವರ ಕನಸು ಈಡೇರಿದೆ. 'ಬ್ಯಾಕ್ ಬೆಂಚರ್ಸ್' ಮೂವಿಗಾಗಿ 700ಕ್ಕೂ ಹೆಚ್ಚು ಯುವಕ-ಯುವತಿಯರು ಆಡಿಷನ್ ಕೊಟ್ಟಿದ್ದರು. ಕೊನೆಯಲ್ಲಿ ಸಿನಿಮಾ ತಂಡ ಆಯ್ಕೆ ಮಾಡಿದ 30 ಜನರಲ್ಲಿ ಮಾನ್ಯ ಗೌಡ ಕೂಡ ಒಬ್ಬರು.

ತಮ್ಮ ಸಿನಿಮಾ ಜೀವನದ ಪಯಣದ ಮೊದಲ ಚಿತ್ರದಲ್ಲಿಯೇ ಹಲವಾರು ಅನುಭವವನ್ನು ಮೈಗೂಡಿಸಿಕೊಂಡಿರುವ ನಟಿ ಡೈರೆಕ್ಟರ್ ರಾಜಶೇಖರ್ ಹಾಗೂ ಕ್ಯಾಮರಾಮನ್ ಮನೋಹರ್ ಜೋಶಿ ಅವರ ಸಲಹೆಯನ್ನು ಪಡೆದುಕೊಂಡಿದ್ದು ಮಾತ್ರವಲ್ಲದೆ ಸಿನೆಮಾದ ಮಾರ್ಕೆಟಿಂಗ್, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ, ಹೀಗೆ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಿದ್ದಾರೆ. ಒಟ್ಟಿನಲ್ಲಿ ಚಿತ್ರದ ಮುಖಾಂತರ ಕನ್ನಡ ಸಿನಿರಂಗಕ್ಕೆ ಹೊಸ ಪ್ರತಿಭೆಗಳು ಸಿಗುವ ನಿರೀಕ್ಷೆಯಿದೆ.


Click it and Unblock the Notifications











