ಅವರಿಂದ ಬೇಸತ್ತು 'ಮಜಾ ಟಾಕೀಸ್' ನಿಂದ ಹೊರ ಬರಲು ನಿರ್ಧರಿಸಿದ್ದರು ಅಪರ್ಣಾ...!
ಮಾತುಗಳ ಮೂಲಕವೇ ಮನಸನ್ನೂ ಗೆದ್ದವರು ಅಪರ್ಣಾ. ಕನ್ನಡ ನಾಡು ಕಂಡ ಅಪರೂಪದ ನಿರೂಪಕಿ. ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಮಾತನಾಡುವ ಮೂಲಕ ಕನ್ನಡದ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದ ಅಪರ್ಣಾ ವಸ್ತಾರೆ, ಕೇವಲ .. ನಿರೂಪಕಿ ಅಷ್ಟೇ ಆಗಿರಲಿಲ್ಲ. ಬದಲಿಗೆ ಅತ್ಯುತ್ತಮ ಕಲಾವಿದೆ ಕೂಡ ಆಗಿದ್ದರು.
ಮೂಡಲ ಮನೆ.. ಇಂತಿ ನಿನ್ನ ಸುಜಾತಾ ಧಾರಾವಾಹಿಯಲ್ಲಿಯೂ ತಮ್ಮ ಛಾಪು ಮೂಡಿಸಿದ್ದರು. ಟಿ.ಎನ್.ಸೀತಾರಾಂ ಅವರ ಮುಕ್ತ ಧಾರಾವಾಹಿಯ ಶೀಲಾ ದೀಕ್ಷಿತ್ ಪಾತ್ರದಿಂದ ನಟಿಯಾಗಿ ಜನರ ಮನಸಿನಲ್ಲಿ ಉಳಿದರು. ಸಿನಿಮಾ .. ಧಾರಾವಾಹಿ .. ದೂರದರ್ಶನ ನಿರೂಪಣೆ .. ಆಕಾಶವಾಣಿ .. ವೇದಿಕೆ ಕಾರ್ಯಕ್ರಮ .. ಹೀಗೆ ಎಲ್ಲೆಡೆಯೂ ಮಿಂಚಿದ್ದ ಅಪರ್ಣಾ, 'ಮಜಾ ಟಾಕೀಸ್' ಮೂಲಕ ಒನ್ ಅಂಡ್ ಒನ್ಲಿ ವರಲಕ್ಷ್ಮಿ ಎಂಬ ಖ್ಯಾತಿಯನ್ನೂ ಗಳಿಸಿದ್ದರು.

ಬಾಯಿ ಬಿಟ್ಟರೆ ಸಾಕು.. ಬರಾಕ್ ಒಬಾಮಾ, ಸಲ್ಮಾನ್ ಖಾನ್, ಶಾರುಖ್ ಖಾನ್ ಅಂತ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಮೋಡಿ ಮಾಡುವ ಸ್ವೀಟ್ 16 ಕ್ಯಾರೆಕ್ಟರ್ ಹೆಸರು 'ಒನ್ ಅಂಡ್ ಒನ್ಲಿ ವರಲಕ್ಷ್ಮಿ' ಪಾತ್ರಕ್ಕೆ ಜೀವ ತುಂಬಿ ವೀಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದವರು ಅಪರ್ಣಾ.
ಇಂಥಾ ಅಪರ್ಣಾ ಅದೊಂದು ದಿನ ಮಜಾ ಟಾಕೀಸ್ ಕಾರ್ಯಕ್ರಮದಿಂದ ಹೊರ ನಡೆಯಲು ನಿರ್ಧಾರವನ್ನೂ ಮಾಡಿದ್ದರು. ಆದರೆ ಸೃಜನ್ ಲೋಕೇಶ್ ಮನವೊಲಿಸಿದ್ದರು. ಹೌದು, ನಿಮಗೆ ಗೊತ್ತು, ಇದು ಸೋಶಿಯಲ್ ಮೀಡಿಯಾ ಕಾಲ. ಈ ಕಾಲದಲ್ಲಿ ಅದೆಲ್ಲೋ ಕುಳಿತು, ಇನ್ನೆಲ್ಲೋ ಇರುವ ಸಾಧಕರ ಕಾಲೆಳೆಯುವುದು ಎಂದರೆ ಕೆಲವರಿ ಎಲ್ಲಿಲ್ಲದ ಖುಷಿ. ಅಪರ್ಣಾ ಅವರಿಗೂ ಕೂಡ ಈ ಅನುಭವ ಆಗಿತ್ತು. ಮಜಾ ಟಾಕೀಸ್'ನಲ್ಲಿ ವರಲಕ್ಷ್ಮಿ ಆಗಿ ಕಾಣಿಸಿಕೊಂಡ ಮೇಲೆ ಅಪರ್ಣಾ ಅವರನ್ನೂ ಕೂಡ ಒಂದು ವರ್ಗ ಟ್ರೋಲ್ ಮಾಡಿತ್ತು. ನೆಗೆಟಿವ್ ಕಾಮೆಂಟ್ಸ್ ಗಳನ್ನು ಮಾಡಿತ್ತು.

ಇದೆಲ್ಲದರಿಂದ ಅಪರ್ಣಾ ಅಕ್ಷರಶಃ ನೊಂದು ಬೆಂದು ಹೋಗಿದ್ದರು. ಹೀಗಾಗಿಯೇ ಇನ್ನೂ ಕಾರ್ಯಕ್ರಮದಲ್ಲಿ ಮುಂದುವರೆಯುವುದರಲ್ಲಿ ಅರ್ಥ ಇಲ್ಲ ಎಂದು ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಗುಡ್ ಬೈ ಹೇಳಲು ಅಪರ್ಣಾ ತೀರ್ಮಾನವನ್ನೂ ಮಾಡಿದ್ದರು. ಆದರೆ..ಎಂಬತ್ತು ಜನ ಚೆನ್ನಾಗಿ, ಪಾಸಿಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. ನಿಮಗೆ ಈ ಎಂಬತ್ತು ಜನರ ಕಾಮೆಂಟ್ಸ್ ಮುಖ್ಯವೋ..? ಅಥವಾ ನೆಗೆಟಿವ್ ಮಾತನಾಡಿರುವ ಇಪ್ಪತ್ತು ಜನರ ಅಭಿಪ್ರಾಯ ಮುಖ್ಯವೋ..? ವರಲಕ್ಷ್ಮಿ ಕ್ಲಿಕ್ ಆಗುತ್ತಾಳೆ ಎಂಬ ನಂಬಿಕೆ ಇದ್ದರೆ ಇರಿ. ಇಲ್ಲ ಅಂದ್ರೆ ಬೇಡ ಎಂದು ಸೃಜನ್ ಲೋಕೇಶ್ ಅಪರ್ಣಾ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಆ ನಂತರ ಕಾರ್ಯಕ್ರಮದಲ್ಲಿ ಅಪರ್ಣಾ ಮುಂದುವರೆದರು.
ಅಂದ್ಹಾಗೇ ಮಜಾ ಟಾಕೀಸ್ ಕಾರ್ಯಕ್ರಮದ ಅವಕಾಶ ಮೊದಲು ಬಂದಾಗ ಅಪರ್ಣಾ ತುಂಬಾ ಹಿಂಜರಿತದಿಂದಲೇ ಮಾಡಲು ಒಪ್ಪಿಕೊಂಡಿದ್ದರು. ಸೃಜನ್ ಲೋಕೇಶ್ ಒತ್ತಾಸೆಗೆ ಮಣಿದು ವರಲಕ್ಷ್ಮೀ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಇನ್ನೂ.. ವರಲಕ್ಷ್ಮೀ ಪಾತ್ರ ಜನ ಮನ ಗೆದ್ದ ನಂತರ ಚಿತ್ರರಂಗದಿಂದ ಅನೇಕ ಅವಕಾಶಗಳು ಅಪರ್ಣಾ ಅವರನ್ನು ಹುಡುಕಿಕೊಂಡು ಹೋಗಿದ್ದವು. ಕಾಮಿಡಿ ಸಿನಿಮಾಗಳಲ್ಲಿ ಅಭಿನಯಿಸುವ ಚಾನ್ಸ್ ಅಪರ್ಣಾಗೆ ಸಿಕ್ಕಿತ್ತು. ಆದ್ರೆ, ಅದನ್ನು ಅಪರ್ಣಾ ಒಪ್ಪಿಕೊಳ್ಳಲಿಲ್ಲ. ಬದಲಿಗೆ ರಿಜೆಕ್ಟ್ ಮಾಡಿದ್ದರು. ಜನರನ್ನು ನಗಿಸುವುದು ಸುಲಭ ಅಲ್ಲ. ಅದು ತುಂಬಾ ಕಷ್ಟದ ಕೆಲಸ. ನಾನು ಕಾಮಿಡಿಯನ್ ಅಲ್ಲ. ಆದ್ದರಿಂದ ನಾನು ಕಾಮಿಡಿ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ ಎಂದು ಸಂದರ್ಶನವೊಂದರಲ್ಲಿ ಹಿಂದೆ ಹೇಳಿದ್ದರು ಅಪರ್ಣಾ.


Click it and Unblock the Notifications











