ತೆರೆಯ ಮೇಲೆ ಅಷ್ಟೇ ಅಲ್ಲ ತೆರೆಯ ಹಿಂದೆ ಕೂಡ ಸಿಕ್ಕ ಸಿಕ್ಕವರ ಮೇಲೆ ಕೈ ಮಾಡುವ ಚಾಳಿ...!
ಒಬ್ಬ ಸಿನೆಮಾ ನಟ ತಾನು ಸಿನೆಮಾದಲ್ಲಿ ಮಾಡುವ ಪಾತ್ರಗಳಿಗೂ, ನಿಜ ಜೀವನದಲ್ಲಿ ಆತನ ವ್ಯಕ್ತಿತ್ವಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಆದರೆ.. ಇದನ್ನ ದರ್ಶನ್ ಯಾವತ್ತು ಅರ್ಥ ಮಾಡಿಕೊಳ್ಳಲೇ ಇಲ್ಲ. ಬದಲಿಗೆ ಅಹಂಕಾರದ ಅಮಲೇರಿಸಿಕೊಂಡೇ ತಿರುಗಾಡಿದ. ನಿಜಜೀವನದಲ್ಲಿ ಕೂಡ ಪುಡಿ ರೌಡಿಯಂತೆಯೇ ನಡೆದುಕೊಂಡ. ಇದಕ್ಕೆ.. ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮಾತ್ರ ಸಾಕ್ಷಿ ಅಲ್ಲ ಬದಲಿಗೆ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಉಗ್ರಾವತಾರದ ಅನೇಕ ಕುರುಹುಗಳು ಸಿಗುತ್ತವೆ.
ಹೌದು. ಮಿಸ್ಟರ್ ಐರಾವತ ಎಂಬ ಸಿನಿಮಾ ನಿಮಗೆ ನೆನಪಿರಬೇಕು. 2015ರಲ್ಲಿ ತೆರೆಗೆ ಬಂದಿದ್ದ ಈ ಚಿತ್ರವನ್ನ ಅಂಬಾರಿ.. ಅದ್ಧೂರಿ.. ಅಂತಹ ಚಿತ್ರಗಳನ್ನ ಕೊಟ್ಟಿದ್ದ ಎ.ಪಿ.ಅರ್ಜುನ್ ನಿರ್ದೇಶಿಸಿದ್ದರು. ಇನ್ನೂ.. ಎಲ್ಲರಿಗೂ ಗೊತ್ತು. ಎ.ಪಿ.ಅರ್ಜುನ್ ಸಿನಿಮಾ ಅಂದರೆ ಅದು ಕಡಿಮೆ ಅಂದರೂ ತ್ರೈವಾರ್ಷಿಕ ಯೋಜನೆ. ಮಿಸ್ಟರ್ ಐರಾವತ ವಿಚಾರದಲ್ಲಿ ಕೂಡ ಇದೇ ಆಗಿತ್ತು. ಆದರೆ ಚಿತ್ರ ತಡವಾಗುತ್ತಿದ್ದನ್ನ ಸಹಿಸದ ದರ್ಶನ್, ಎ.ಪಿ.ಅರ್ಜುನ್ ಅವರನ್ನ ಕರೆದು ರೂಮ್ ನಲ್ಲಿ ರುಬ್ಬಿದ್ದರು. ಆ ಕಾಲಕ್ಕೆ.. ಇದು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿಯಾಗಿತ್ತು. ಅನೇಕರನ್ನ ಬೆಚ್ಚಿ ಬೀಳಿಸಿತ್ತು.

ರಾತ್ರಿ ಹೊತ್ತಲ್ಲಿ ಒಂದು ಪೆಗ್ ಜಾಸ್ತಿಯಾದರೆ ಸಾಕು ಕಂಡ ಕಂಡವರ ಮೇಲೆಲ್ಲ ಕೈ ಮಾಡುವ ಖಯಾಲಿ ಬೆಳೆಸಿಕೊಂಡಿರುವ ದರ್ಶನ್, ತಮ್ಮ ಆಪ್ತ ವಿ.ಹರಿಕೃಷ್ಣ ಅವರ ಮೇಲೆ ಕೂಡ ಬಾಟಲಿ ಎಸೆದಿದ್ದ. ಅದೃಷ್ಟವಶಾತ್ ಹರಿಕೃಷ್ಣ ಆಗ ಕೂದಲೆಳೆ ಅಂತರದಿಂದ ಪಾರಾಗಿದ್ದರು ಎನ್ನುವ ಮಾತು ಇವತ್ತು ಕೂಡ ಗಾಂಧಿನಗರದಲ್ಲಿ ಚಾಲ್ತಿಯಲ್ಲಿದೆ.
ಇನ್ನೂ.. ದರ್ಶನ್ ಕ್ಯಾಂಪ್‌ನಲ್ಲಿ ಗುರುತಿಸಿಕೊಂಡ ಅನೇಕರು, ದರ್ಶನ್ ಅವರ ಈ ಚಾಳಿಯಿಂದ ಬೇಸತ್ತು ಜಾಗ ಖಾಲಿ ಮಾಡಿ ಬೇರೆ ಕಡೆ ವಲಸೆ ಹೋಗಿದ್ದಾರೆ. ಆ ಪೈಕಿ ಸೃಜನ್ ಲೊಕೇಶ್ ಕೂಡ ಒಬ್ಬರು. ಆರಂಭದಲ್ಲಿ ದರ್ಶನ್ ಹೋದಲ್ಲಿ ಬಂದಲ್ಲಿ ನೆರಳಿನಂತೆಯೇ ಹಿಂಬಾಲಿಸುತ್ತಿದ್ದ ಸೃಜನ್ ಲೊಕೇಶ್ ಅವರನ್ನ ಕೂಡ ಇದೇ ದರ್ಶನ್ ಗುಮ್ಮಿದ್ದ. ಇದಕ್ಕೆ.. ದರ್ಶನ್ ಮನೆಯ ಕೆಳಗಿರುವ ಕಾರು ಶೆಡ್‌ನ್ನೇ ಸಾಕ್ಷಿಯನ್ನಾಗಿ ನೀಡುತ್ತೆ ಗಾಂಧಿನಗರ. ಇದಕ್ಕೆ ಪೂರಕವಾಗಿ ಜಗ್ಗುದಾದಾ ನಂತರ ಸೃಜನ್ ಲೊಕೇಶ್ ಶ್ರೀಯುತರ ಆಸು ಪಾಸು ಕಂಡು ಬಂದಿದ್ದು ತುಂಬಾ ಕಡಿಮೆ.

ಪ್ರೇಮ್ ಅವರನ್ನ ಅವನೇನು ದೊಡ್ಡ ಪುಡುಂಗಾನಾ ಎಂದಿದ್ದ ಇದೇ ದರ್ಶನ್, ಅನ್ನ ಹಾಕಿದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧವೇ ತಿರುಗಿ ಬಿದ್ದಿದ್ದ. ಅನ್ನದಾತನನ್ನ ತಗಡು ಎಂದಿದ್ದ. ಇವರಿಬ್ಬರ ಈ ಕದನಕ್ಕೆ ಬಹುದೊಡ್ಡ ಇತಿಹಾಸ ಇದೆ. ಇಷ್ಟೇ ಯಾಕೆ 2019ರಲ್ಲಿ ಯಜಮಾನ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸಹನಟನ ಮೇಲೆ ಹಲ್ಲೆ ಮಾಡಿದ್ದ ಆರೋಪ ಹೊತ್ತಿದ್ದು ಕೂಡ ಈ ಪುಣ್ಯಾತ್ಮನೇ.
ಕೇವಲ ಕನ್ನಡ ಚಿತ್ರರಂಗದ ಕಲಾವಿದರು-ತಂತ್ರಜ್ಞರಷ್ಟೇ ಅಲ್ಲ, ಜನಸಾಮಾನ್ಯರನ್ನ ಕೂಡ ಈ ಚಿತ್ರಹಿಂಸೆ ಚಕ್ರವರ್ತಿ ಬಿಟ್ಟಿಲ್ಲ. ಇದಕ್ಕೆ ಒಂದು ಉದಾಹರಣೆ ಎಂಬಂತೆ ಮೈಸೂರಿನಲ್ಲಿ ಹೋಟೆಲ್ ಸಪ್ಲೈಯರ್ ಮೇಲೆ ಈ ಮಹಾನುಭಾವ ಹಲ್ಲೆ ಮಾಡಿದ್ದಾನೆ ಎಂಬ ಸುದ್ದಿ 2021ರಲ್ಲಿ ಕೇಳಿ ಬಂದಿತ್ತು.

ಇವರಷ್ಟೇ ಅಲ್ಲ ಹೀಗೆ ದರ್ಶನ್ ಕೈಯಲ್ಲಿ ಒದೆ ತಿಂದವರ ದೊಡ್ಡ ಪಟ್ಟಿಯೇ ಕನ್ನಡ ಚಿತ್ರರಂಗದಲ್ಲಿದೆ. ಒಮ್ಮೆ ಯಾರ ಮೇಲಾದರೂ ಮುನಿಸಿಕೊಂಡರೆ ಅಥವಾ ಸಿಟ್ಟಾದರೆ, ವರ್ಷಾನುವರ್ಷ ಹಗೆತನವನ್ನ ಸಾಧಿಸುವ ಗುಣವನ್ನ ಹೊಂದಿರುವ ಈತ ಈಗ ಪೊಲೀಸರ ಸಮ್ಮುಖದಲ್ಲಿ ದಿನಗಳನ್ನ ಕಳೆಯುವಂತಾಗಿದೆ. ಯಾರ ಕಣ್ಣೀರೋ..ಎಷ್ಟು ಜನರ ಶಾಪವೋ..ಇವತ್ತು ಅದೆಲ್ಲದರ ಫಲವನ್ನ ದರ್ಶನ್ ಅನುಭವಿಸುವಂತೆ ಆಗಿದೆ.


Click it and Unblock the Notifications











