ಮಗಳ ಗೆಲುವನ್ನು ಕಂಡು ಸಂಭ್ರಮಿಸಿದ ಮಾಲಾಶ್ರೀ ಹೇಳಿದ್ದೇನು ಗೊತ್ತಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಚಿತ್ರದ ಮೂಲಕ ನಟಿ ಆರಾಧನಾ ರಾಮ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಡಿ ಬಾಸ್ ದರ್ಶನ್ ಜೊತೆಗೆ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ದರ್ಶನ್ ಜೊತೆ ನಟಿಸುವ ನಟಿಯರು ಚೆನ್ನಾಗಿ ಹೈಲೈಟ್ ಆಗುತ್ತಾರೆ ಅನ್ನೋದು ಗೊತ್ತಿರೋ ವಿಷಯವೇ. ಆದರೆ, ಎಲ್ಲರೂ ನಾಯಕ ನಟನಷ್ಟೇ ಮಿಂಚುತ್ತಾರೆ ಎಂದು ಹೇಳುವುದಕ್ಕೆ ಆಗುವುದಿಲ್ಲ.
ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಕಾಲಿಡುವ ನಟ ನಟಿಯರಿಗೆ ಚಿಕ್ಕ ಪುಟ್ಟ ಪಾತ್ರಗಳಲ್ಲಷ್ಟೇ ನಟಿಸುವ ಅವಕಾಶಗಳು ಸಿಗುತ್ತದೆ. ಆದರೆ, ಆರಾಧನಾ ರಾಮ್ ವಿಚಾರದಲ್ಲಿ ಅದು ಸುಳ್ಳಾಗಿದೆ. ಮೊದಲ ಸಿನಿಮಾದಲ್ಲಿಯೇ ನಾಯಕಿಯಾಗಿ ನಟಿಸುವ ಸುವರ್ಣಾವಕಾಶವನ್ನು ಪಡೆದುಕೊಂಡಿರುವ ಈಕೆ ಡಿ ಬಸ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ನಟ ದರ್ಶನ್‌ಗೆ ಸಿಕ್ಕಷ್ಟೇ ಪ್ರಾಮುಖ್ಯತೆ ಆರಾಧನಾ ರಾಮ್‌ಗೂ ಸಿಕ್ಕಿದೆ.

ಇನ್ನು ಅವರ ಮೊದಲ ಚಿತ್ರದ ಅಭಿನಯದ ಬಗ್ಗೆ ಮಾತನಾಡುವುದಾದರೆ, ನಟಿ ಆರಾಧನಾ ರಾಮ್ ತಮ್ಮ ಮೊದಲ ಚಿತ್ರದಲ್ಲಿ ಸ್ಕೋರ್ ಹೊಡೆದು ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಶ್ರೀಮಂತ ಶಾನುಭೋಗರ ಮಗಳು ಪ್ರಭಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈಕೆ, ತಮ್ಮ ನಟನೆಯ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ.
ಹಳ್ಳಿಯ ಶಿಕ್ಷಿತ ಹುಡುಗಿಯಾಗಿ ಕಾಟೇರನನ್ನು ಬಾಲ್ಯದಿಂದಲೂ ಪ್ರೀತಿಸುವವಳಾಗಿ ನಟಿಸಿರುವ ಆರಾಧನಾ ರಾಮ್ ಬಣ್ಣದ ಲೋಕಕ್ಕೆ ಇದು ಮೊದಲನೇ ಸಿನಿಮಾ ಎಂದು ಅನ್ನಿಸದಷ್ಟು ಚೆನ್ನಾಗಿ ನಟಿಸಿದ್ದಾರೆ. ನೂರು ದಿನಗಳನ್ನು ದಾಟಿ ಮುನ್ನುಗುತ್ತಿರುವ 'ಕಾಟೇರ' ಚಿತ್ರದ ಯಶಸ್ಸಿನ ಬಗ್ಗೆ, ಮಗಳು ಆರಾಧನಾ ರಾಮ್ ನಟನೆಯ ಬಗ್ಗೆ ನಟಿ, ಮಾಲಾಶ್ರೀ ಅವರು ಮನ ಬಿಚ್ಚಿ ಮಾತಾಡಿದ್ದು ಅಲ್ಲದೇ ಸಂತಸ ವ್ಯಕ್ತಪಡಿಸಿದ್ದಾರೆ.

"ನನ್ನ ಮೊದಲ ಸಿನಿಮಾ ನಂಜುಂಡಿ ಕಲ್ಯಾಣವನ್ನು ಇಡೀ ಕರ್ನಾಟಕ ಜನತೆ ಒಪ್ಪಿಕೊಂಡು ಸೂಪರ್ ಹಿಟ್ ಮಾಡಿತ್ತು. ಅದಕ್ಕೆ ನಾನು ಸದಾಋಣಿ. ಡಾಕ್ಟರ್ ರಾಜಕುಮಾರ್ ಅಣ್ಣನವರಿಗೆ, ಪಾರ್ವತಮ್ಮ ರಾಜಕುಮಾರ್ ಅವರಿಗೆ, ಹಾಗೆ ರಾಘವೇಂದ್ರ ರಾಜಕುಮಾರ್ ಅವರಿಗೆ ಜೊತೆಗೆ ನನ್ನೆಲ್ಲಾ ಪ್ರೇಕ್ಷಕ ಅಭಿಮಾನಿಗಳಿಗೆ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಕಾಗುವುದಿಲ್ಲ" ಎಂದು ಬರೆದುಕೊಂಡಿದ್ದಾರೆ.
ಜೊತೆಗೆ "ಅದೇ ರೀತಿ ಇಂದು ನನ್ನ ಮಗಳು ಆರಾಧನ ರಾಮ್‌ನ ಮೊದಲ ಚಿತ್ರ ಕಾಟೇರವನ್ನು ಯಶಸ್ಸಿನ ಉತ್ತುಂಗಕ್ಕೆ ತೆಗೆದುಕೊಂಡು ಹೋದ ಎಲ್ಲಾ ಪ್ರೇಕ್ಷಕರಿಗೂ ಮತ್ತೊಮ್ಮೆ ಧನ್ಯವಾದ. ನನ್ನ ಮಗಳನ್ನು ಇಷ್ಟು ಪ್ರೀತಿಯಿಂದ ನೀವು ಚಿತ್ರ ರಂಗಕ್ಕೆ ಬರಮಾಡಿಕೊಂಡಿದ್ದಕ್ಕೆ ಸಂತೃಪ್ತಿ ಸಂತೋಷ ನನಗಿದೆ. ನಿಮ್ಮ ಪ್ರೀತಿಯ ಆಶೀರ್ವಾದ ನನ್ನ ಮೇಲೆ ನನ್ನ ಮಗಳ ಮೇಲೆ ಸದಾ ಹೀಗೆ ಇರಲಿ ಎಂದು ಕೇಳಿಕೊಳ್ಳುತ್ತೇನೆ" ಎಂದಿದ್ದಾರೆ.


Click it and Unblock the Notifications











