ಸೆಟ್ ಬಾಯ್ ಕೈಯಲ್ಲಿ 'ಟಾಕ್ಸಿಕ್' ಚಿತ್ರಕ್ಕೆ ಕ್ಲ್ಯಾಪ್ ಮಾಡಿಸಿದ ರಾಕಿಂಗ್ ಸ್ಟಾರ್
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಸೆಟ್ಟೇರಿದೆ. ಅದ್ಧೂರಿಯಾಗಿ ಪೂಜೆ ನೆರವೇರಿಸಿ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಮುಹೂರ್ತ ಸಮಾರಂಭದ ಫೋಟೊಗಳು, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 'ಟಾಕ್ಸಿಕ್' ಚಿತ್ರಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.
ಯಶ್ ವೃತ್ತಿ ಜೀವನದಲ್ಲಿ 'KGF' ಸರಣಿಗಿಂತಲೂ 'ಟಾಕ್ಸಿಕ್' ಮಹತ್ವದ ಸಿನಿಮಾ ಎನ್ನುವಂತಾಗಿಬಿಟ್ಟಿದೆ. ಅಷ್ಟರಮಟ್ಟಿಗೆ ಸಿನಿಮಾ ಮೇಲೆ ನಿರೀಕ್ಷೆಯಿದೆ. ಮುಂದಿನ ವರ್ಷ ಸಿನಿಮಾ ಬಿಡುಗಡೆಗೆ ತಯಾರಿ ನಡೀತಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ತಮ್ಮ ಮಾನ್‌ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಯಶ್ ಚಿತ್ರ ನಿರ್ಮಿಸುತ್ತಿದ್ದಾರೆ.

ನಗರದ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಚಿತ್ರೀಕರಣಕ್ಕಾಗಿ ದೊಡ್ಡ ಸೆಟ್ ಹಾಕಿದ್ದಾರೆ. ಅದೇ ಸೆಟ್‌ನಲ್ಲಿ ನಿನ್ನೆ(ಆಗಸ್ಟ್ 8) ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ನೆರವೇರಿಸಲಾಗಿದೆ. ಇಡೀ ಚಿತ್ರತಂಡ ಈ ವೇಳೆ ಹಾಜರಿತ್ತು. ನಟ ಯಶ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೇ ಲುಕ್ 'ಟಾಕ್ಸಿಕ್' ಚಿತ್ರದಲ್ಲೂ ಇರಲಿದೆ.
ಡ್ರಗ್ಸ್ ಮಾಫಿಯಾ ಸುತ್ತಾ ಸುತ್ತುವ ಗ್ಯಾಂಗ್‌ಸ್ಟರ್ ಸಿನಿಮಾ ಇದು ಎನ್ನಲಾಗ್ತಿದೆ. 60,70 ರ ದಶಕದ ಕಥೆ ಚಿತ್ರದಲ್ಲಿ ಇರಲಿದೆ. ಅದಕ್ಕೆ ತಕ್ಕಂತೆ ಮೇಕಿಂಗ್ ಪ್ಲ್ಯಾನ್ ಮಾಡುತ್ತಿದ್ದಾರೆ. ವಿದೇಶಗಳಲ್ಲಿ ಕೂಡ ಸಿನಿಮಾ ಚಿತ್ರೀಕರಣ ನಡೆಯಲಿದೆ. ಸಿನಿಮಾ ಬಜೆಟ್ ಬರೋಬ್ಬರಿ 180 ಕೋಟಿ ರೂ. ಎನ್ನಲಾಗ್ತಿದೆ. ಇನ್ನು ಬೇರೆ ಯಾವುದೇ ಸ್ಟುಡಿಯೋಗೆ ಹೋಗಿ ಸೆಟ್ ಹಾಕುವ ಬದಲು ನಮ್ಮ ನೆಲದಲ್ಲೇ ಚಿತ್ರೀಕರಣಕ್ಕೆ ಸಿದ್ಧತೆ ನಡೀಯಿದೆ.

ವೆಂಕಟೇಶ್ವರನಿಗೆ ಕೈ ಮುಗಿದು ಯಶ್ ಕ್ಯಾಮರಾ ಮುಂದೆ ನಿಂತಿದ್ದಾರೆ. ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು ಯಾರು? ಎನ್ನುವ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಸಾಮಾನ್ಯವಾಗಿ ಖ್ಯಾತನಾಮರಿಂದ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಕ್ಲ್ಯಾಪ್ ಮಾಡಿಸಲಾಗುತ್ತದೆ. ಅಥವಾ ನಿರ್ದೇಶಕರು, ನಿರ್ಮಾಪಕರು ತಮಗೆ ಯಾರು ಅದೃಷ್ಟ ಎಂದು ಭಾವಿಸುತ್ತಾರೋ, ಪ್ರೀತಿ ಪಾತ್ರರು ಎಂದುಕೊಳ್ಳುತ್ತಾರೋ ಅಂತವರ ಕೈಯಲ್ಲಿ ಕ್ಲ್ಯಾಪ್ ಮಾಡಿಸಿ ಶುಭಾರಂಭ ಮಾಡುತ್ತಾರೆ.
'ಟಾಕ್ಸಿಕ್' ರೀತಿಯ ದೊಡ್ಡ ಚಿತ್ರಕ್ಕೆ ಸೆಟ್‌ಬಾಯ್ ಕೈಯಲ್ಲಿ ಕ್ಲ್ಯಾಪ್ ಮಾಡಿಸಿದ್ದಾರೆ. ಇದೇ ವಿಚಾರದ ಬಗ್ಗೆ ಯಶ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಕಷ್ಟಪಡುವವರನ್ನು ರಾಕಿಂಗ್ ಸ್ಟಾರ್ ಸದಾ ಬೆಂಬಲಿಸುತ್ತಾರೆ. ಹುರಿದುಂಬಿಸುತ್ತಾರೆ. ಅದೇ ರೀತಿ ತಮ್ಮ ತಂಡದ ಸೆಟ್‌ಬಾಯ್ ಸುನೀಲ್ ಕೈಯಲ್ಲಿ ಕ್ಲಾಪ್ ಮಾಡಿಸಿ ಸಿನಿಮಾ ಆರಂಭಿಸಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು 'ಟಾಕ್ಸಿಕ್' ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆಯೂ ಭಾರೀ ಕುತೂಹಲವಿದೆ. ಈ ಹಿಂದೆ ಕರೀನಾ ಕಪೂರ್, ಕೈರಾ ಅದ್ವಾನಿ, ನಯನತಾರಾ ಸೇರಿದಂತೆ ಹಲವರ ಹೆಸರುಗಳು ಕೇಳಿಬಂದಿತ್ತು. ಆದರೆ ಯಾವುದರ ಬಗ್ಗೆಯೂ ಚಿತ್ರತಂಡ ಪ್ರತಿಕ್ರಿಯಿಸಲಿಲ್ಲ. ಇನ್ನು ಹಾಲಿವುಡ್ ತಂತ್ರಜ್ಞರು ಕೂಡ ಚಿತ್ರದಲ್ಲಿ ಕೆಲಸ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. 'KGF' ಸರಣಿ ಬಳಿಕ ಬರ್ತಿರೋ ಸಿನಿಮಾ ಆಗಿರುವುದರಿಂದ ಪರಭಾಷಾ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಸಿನಿಮಾ ರಿಲೀಸ್ ಡೇಟ್ ಬಗ್ಗೆಯೂ ಭಾರೀ ಗೊಂದಲವಿದೆ. ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. 'KGF'-2 ಸಿನಿಮಾ ಬಂದೋಗಿ 2 ವರ್ಷ ಕಳೆದಿದೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಹೇಳಿದೆ. ಆದರೆ ಅದೇ ದಿನ ಪ್ರಭಾಸ್ ನಟನೆಯ ಸಿನಿಮಾ ಬರ್ತಿರೋದ್ರಿಂದ 'ಟಾಕ್ಸಿಕ್' ತಡವಾಗುವ ಸಾಧ್ಯತೆ ದಟ್ಟವಾಗಿದೆ.


Click it and Unblock the Notifications











