Dr Bro: ಡಾ ಬ್ರೋ ನಮ್ಮಜ್ಜಿಗೆ ನೀನು ಯಾರಂತ ಗೊತ್ತಿದೆ, ಯಾರು ಏನಂದ್ರೂ ನೀನು ಸಾಧಕ: ಚಂದನ್
ಗಗನ್ ಶ್ರೀನಿವಾಸ್ ಕನ್ನಡ ಯುಟ್ಯೂಬರ್ಸ್ ಪೈಕಿ ಅತಿ ಹೆಚ್ಚಿನ ಯಶಸ್ಸು ಹಾಗೂ ಖ್ಯಾತಿಯನ್ನು ಗಳಿಸಿರುವಂತಹ ಪ್ರತಿಭೆ. ಡಾ ಬ್ರೋ ಎಂಬ ಹೆಸರಿನಲ್ಲಿ ಯುಟ್ಯೂಬ್ ಚಾನೆಲ್ ಶುರು ಮಾಡಿದ ಗಗನ್ ಬೈಕ್ , ಕಾರ್ ಬಳಸದೇ ಸಾರ್ವಜನಿಕ ವಾಹನಗಳನ್ನು ಬಳಿಸಿಕೊಂಡು ಹಲವಾರು ದೇಶಗಳನ್ನು ಸುತ್ತಿ, ಆ ದೇಶಗಳು ಹಾಗೂ ಅಲ್ಲಿನ ಜೀವನಶೈಲಿಯನ್ನು ಕನ್ನಡ ಜನರಿಗೆ ತೋರಿಸಿ ಇದೀಗ ನೆಟ್ಟಿಗರ ಫೇವರಿಟ್ ಆಗಿ ಉಳಿದುಕೊಂಡಿದ್ದಾರೆ.
ಇನ್ನು ಹೆಚ್ಚಾಗಿ ಜನರ ಮುಂದೆ ಹಾಗೂ ಸಂದರ್ಶನಗಳಲ್ಲಿ ಭಾಗವಹಿಸಲು ಇಚ್ಛಿಸದ ಡಾ ಬ್ರೋ ಪ್ರಚಾರ ಪ್ರಿಯನಲ್ಲ. ಕನ್ನಡದ ಡೇರ್ ಡೆವಿಲ್ ಮುಸ್ತಾಫ ಚಿತ್ರಕ್ಕೆ ವಾಯ್ಸ್ ಓವರ್ ಕೊಟ್ಟಿದ್ದ ಡಾ ಬ್ರೋ ಸ್ಟಾರ್‌ಗಳನ್ನು ಭೇಟಿಯಾಗಿ ಸಾಮಾನ್ಯನಂತೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಬರೆದುಕೊಂಡಿದ್ದರು. ಇಷ್ಟರ ಮಟ್ಟಿಗೆ ಸಿಂಪಲ್ ಎನಿಸಿಕೊಂಡಿರುವ ಡಾ ಬ್ರೋ ಸದ್ಯ ಇನ್ನೂ ಹೆಚ್ಚಿನ ವಿಡಿಯೊಗಳನ್ನು ಮಾಡುವುದರ ಕಡೆ ಗಮನ ಹರಿಸುತ್ತಿದ್ದು, ಮತ್ತಷ್ಟು ದೇಶಗಳನ್ನು ಕನ್ನಡದ ಜನತೆಗೆ ತೋರಿಸುವ ಕಡೆ ಹೆಜ್ಜೆ ಇಟ್ಟಿದ್ದಾರೆ.

ಹೀಗೆ ಒಂದು ಮೊಬೈಲ್ ಹಿಡಿದು ವಿಡಿಯೊ ವ್ಲಾಗ್ ಶುರು ಮಾಡಿದ ಡಾ ಬ್ರೋ ಇದೀಗ ಸ್ಟಾರ್ ಯುಟ್ಯೂಬರ್ ಆಗಿದ್ದು ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಕೇವಲ ಸಾಮಾನ್ಯ ಜನರು ಮಾತ್ರವಲ್ಲದೇ ಚಲನಚಿತ್ರ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದುಕೊಂಡಿರುವ ಹಲವಾರು ನಟ ಹಾಗೂ ನಟಿಯರೂ ಸಹ ಡಾ ಬ್ರೋ ಅವರನ್ನು ಫಾಲೋ ಮಾಡುತ್ತಿದ್ದು, ಅವರ ವಿಡಿಯೊ ನೋಡಿ ಲೈಕ್ ಒತ್ತಿ ಕಾಮೆಂಟ್ ಮಾಡಿ ಅಭಿಪ್ರಾಯ ತಿಳಿಸುತ್ತಿರುತ್ತಾರೆ.
ಇನ್ನೂ ಕೆಲವರು ಡಾ ಬ್ರೋ ಕುರಿತು ವಿಶೇಷವಾಗಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರ ಕೆಲಸವನ್ನು ಹಾಡಿ ಹೊಗಳಿದ್ದಾರೆ. ಇಂತಹ ನಟರ ಪಾಲಿಗೆ ಇದೀಗ ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದನ್ ಕುಮಾರ್ ಸಹ ಸಾಕ್ಷಿಯಾಗಿದ್ದಾರೆ. ಹೌದು, ಚಂದನ್ ಕುಮಾರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇಂದು ( ಆಗಸ್ಟ್ 2 ) ಡಾ ಬ್ರೋ ಬಗ್ಗೆ ಬರೆದುಕೊಳ್ಳುವುದರ ಮೂಲಕ ಹಾಡಿ ಹೊಗಳಿದ್ದಾರೆ. ಈ ಪೋಸ್ಟ್ ಸದ್ಯ ಧಾರಾವಾಹಿ ರಸಿಕರಲ್ಲಿ ವೈರಲ್ ಆಗಿದೆ ಹಾಗೂ ಚರ್ಚೆಗೆ ಒಳಪಟ್ಟಿದೆ.
ಡಾ ಬ್ರೋನ ಒಂದು ಫೋಟೊವನ್ನು ಹಂಚಿಕೊಂಡಿರುವ ಚಂದನ್ ಕುಮಾರ್ "ನೀವು ಅತ್ಯುತ್ತಮ. ನಿಮ್ಮ ಪಯಣಕ್ಕೆ ಆಲ್ ದ ಬೆಸ್ಟ್. ಯಾರು ಏನೇ ಹೇಳಲಿ.. ನೀನು ಸಾಧಕ. ನನ್ನ ಕಡೆಯಿಂದ ಬೆಸ್ಟ್ ವಿಶಸ್. ನಮ್ಮ ಅಮ್ಮ ಅಜ್ಜಿಗೆ ನೀನು ಯಾರು ಅಂತ ಗೊತ್ತಿದೆ. ನಮ್ಮಿಬ್ಬರಿಗೂ ಪರಿಚಯವಿಲ್ಲ ಆದರೆ ನಿನ್ನ ವಿಡಿಯೊ, ಪ್ರಾಮಾಣಿಕತೆ, ನೈಜತೆ, ತರಲೆ ಹಾಗೂ ಕೊಂಕುನುಡಿಗಳು ನನಗೆ ಸಿಕ್ಕಾಪಟ್ಟೆ ಇಷ್ಟ" ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ಚಂದನ್ ಕುಮಾರ್ ಡಾ ಬ್ರೋಗೆ ಹೊಳಿಕೆಯನ್ನು ನೀಡಿದ್ದು, ಪರೋಕ್ಷವಾಗಿ ಜೀ ವಾಹಿನಿಯ ಮನರಂಜನಾ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಟಾಂಗ್ ನೀಡಿದ್ದಾರೆ. ಹೌದು, ಈ ಹಿಂದೆ ಡಾ ಬ್ರೋ ಅವರನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆಸುತ್ತೀರ ಎಂಬ ಪ್ರಶ್ನೆ ಎದ್ದಾಗ ಮಾತನಾಡಿದ್ದ ರಾಘವೇಂದ್ರ ಹುಣಸೂರು ಡಾ ಬ್ರೋ ಯಾರು, ಆತ ನಿಮ್ಮ ಅಮ್ಮ ಹಾಗೂ ಅಜ್ಜಿಗೆ ಗೊತ್ತಾ ಎಂದು ಪ್ರಶ್ನೆ ಕೇಳಿಕ ನಿರೂಪಕನ ಕಾಲೆಳೆದು ಡಾ ಬ್ರೋ ಟಿವಿ ವೀಕ್ಷಕರು ಬಲ್ಲಂತಹ ವ್ಯಕ್ತಿ ಅಲ್ಲ ಎಂದು ತಿಳಿಸಿದ್ದರು. ರಾಘವೇಂದ್ರ ಹುಣಸೂರು ಅವರ ಈ ಹೇಳಿಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಸದ್ಯ ಇದೇ ಹೇಳಿಕೆಯ ಸಾಲುಗಳನ್ನು ಬಳಸಿರುವ ಚಂದನ್ ಕುಮಾರ್ ನಮ್ಮ ಅಮ್ಮ ಅಜ್ಜಿಗೆ ನೀನು ಯಾರು ಅಂತ ಗೊತ್ತಿದೆ ಎಂದು ಬರೆದುಕೊಂಡು ಟಾಂಗ್ ಕೊಟ್ಟಿರುವುದು ಸುಳ್ಳಲ್ಲ.


Click it and Unblock the Notifications











