ಕಿಚ್ಚನ ಕೆಸಿಸಿ ಸೀಸನ್-4 ಘೋಷಣೆ ಬೆನ್ನಲ್ಲೇ ರಾಜ್ ಕಪ್ ಸೀಸನ್-6 ಜೆರ್ಸಿ ಅನಾವರಣ
ತಾರೆಯರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸೋದು ಮಾತ್ರವಲ್ಲ, ಮೈದಾನಕ್ಕಿಳಿದು ಕ್ರಿಕೆಟ್ ಆಡಿ ಕೂಡ ರಂಜಿಸುತ್ತಿದ್ದಾರೆ. ಈ ಹಿಂದೆ ಸಿಸಿಎಲ್ ಟೂರ್ನಿಯಲ್ಲಿ ಬೇರೆ ಬೇರೆ ಚಿತ್ರರಂಗದ ತಾರೆಯರು ಆಡಿದರೆ, ಕೆಸಿಸಿ ಟೂರ್ನಿಯಲ್ಲಿ ಕನ್ನಡ ಸಿನಿಮಾ ತಾರೆಯರು ಆಡುತ್ತಾ ಬರ್ತಿದ್ದಾರೆ. ಇನ್ನು ರಾಜ್ ಕಪ್ ಹೆಸರಿನಲ್ಲೂ ಮೈದಾನಕ್ಕಿಳಿದು ಬ್ಯಾಟ್ ಹಿಡಿಯುತ್ತಿದ್ದಾರೆ.
ಸುದೀಪ್ ಮಾರ್ಗದರ್ಶನದಲ್ಲಿ ಶುರುವಾದ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿಯ 4 ಸೀಸನ್‌ಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 23, 24, 25ರಂದು ಟೂರ್ನಿ ನಡೆಯುವುದಾಗಿ ಸುದೀಪ್ ಘೋಷಿಸಿದ್ದಾರೆ. ಅದರ ಬೆನ್ನಲ್ಲೇ ಈಗ ರಾಜ್ ಕಪ್ ಸೀಸನ್-6 ಜರ್ಸಿ ಅನಾವರಣವಾಗಿದೆ. ಕಾರ್ಯಕ್ರಮಕ್ಕೆ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಟೂರ್ನಿಗಾಗಿ ತಾರೆಯರ ತಾಲೀಮು ಶುರುವಾಗಿದೆ.

ಪುನೀತ್ ರಾಜ್ ಕುಮಾರ್ ಸ್ಮಾರಣಾರ್ಥವಾಗಿ ರಾಜ್ ಕಪ್ ಆಯೋಜಿಸಲಾಗಿದೆ. ಬೆಂಗಳೂರಿನ ಜ್ಞಾನ ಜ್ಯೋತಿ ಆಡಿಟೋರಿಯಂನಲ್ಲಿ ಜರ್ಸಿ ಬಿಡುಗಡೆ ಮಾಡಲಾಗಿದ್ದು, ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರ್ಯಕ್ರಮಕ್ಕೆ ಭಾಗಿ ಆಗಿದ್ದರು. ಈ ಬಾರಿಯ ಡಾ.ರಾಜ್ ಕಪ್ ಸೀಸನ್ 6 ನವೆಂಬರ್ 28 ರಿಂದ ಡಿಸೆಂಬರ್ 10ರ ವರೆಗೆ ನಡೆಯಲಿದೆ. ವಿಶ್ವದ ಹಲವು ಭಾಗಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ರಾಜ್ ಕಪ್ ಕ್ರಿಕೆಟ್ ಟೂರ್ನಿ ಆಯೋಜಕರಾದ ರಾಜೇಶ್ ಬ್ರಹ್ಮಾವರ ಮಾತನಾಡಿ, "ರಾಜ್ ಕಪ್ ಆರನೇ ಸೀಸನ್ ವಿದೇಶದಲ್ಲಿ ಮಾಡ್ತಾ ಇರುವುದು ನನಗೆ ಕಷ್ಟವಾಗುತ್ತಿಲ್ಲ. ಯಾಕಂದ್ರೆ ನನಗೆ ಚಿನ್ನದಂತಹ ಕ್ಯಾಪ್ಟನ್ಸ್, ಓನರ್ ಹಾಗೂ ಪ್ಲೇಯರ್ಸ್ ಸಿಕ್ಕಿದ್ದಾರೆ. ಯಾರದ್ದೂ ಟಾರ್ಚರ್ ಇಲ್ಲ. ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಓನರ್ ಬಂದ್ಮೇಲೆ ಅವರೇ ಟೀಂ ರೆಡಿ ಮಾಡುತ್ತಿದ್ದಾರೆ. ಮುಂದಿನ ವರ್ಷ ಎಷ್ಟು ದೇಶಗಳಲ್ಲಿ ಮಾಡುತ್ತೇನೆ ಗೊತ್ತಿಲ್ಲ. ದುಬೈನಲ್ಲಿ ಲೈವ್ ಸಿಗಲ್ಲ ಎಂದಿದ್ದರು. ಟ್ರೈ ಮಾಡಿ ಮಾಡಿ ಪರ್ಮಿಷನ್ ತೆಗೆದುಕೊಂಡು ಬಂದಿದ್ದೇವೆ" ಎಂದು ಹೇಳಿದ್ದಾರೆ.
ನವೆಂಬರ್ 28 ಮತ್ತು 29 ಶ್ರೀಲಂಕಾ, ಡಿಸೆಂಬರ್ 1 ಮತ್ತು 2 ಮಲೇಷಿಯಾ, ಡಿಸೆಂಬರ್ 3 ಮತ್ತು 4ಕ್ಕೆ ಸಿಂಗಾಪುರ್, ಡಿಸೆಂಬರ್ 7 ಮತ್ತು 8ಕ್ಕೆ ಮಸ್ಕತ್‌ನಲ್ಲಿ ರಾಜ್ ಕಪ್ ಸೀಸನ್-6ರ ಲೀಗ್ ಮ್ಯಾಚ್ ನಡೆಯಲಿವೆ. ಫೈನಲ್ ಪಂದ್ಯ ಕರ್ನಾಟಕದಲ್ಲಿ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ಈ ಬಾರಿ ರಾಜ್ ಕಪ್ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗಿಯಾಗಲಿದ್ದು, 27 ಪಂದ್ಯಗಳು ನಡೆಯಲಿದೆ.
1. ಕ್ರಿಕೆಟ್ ನಕ್ಷತ್ರ ತಂಡ- ಓನರ್ ನಕ್ಷತ್ರ ಮಂಜು
2. ಅಶು ಸೂರ್ಯ ಸೂಪರ್ ಸ್ಟಾರ್ ತಂಡ- ಓನರ್ ರಂಜಿತ್ ಪಯಾಜ್ ಖಾನ್
3. ರುಚಿರಾ ರೇಂಜರ್ಸ್ ತಂಡ- ಓನರ್ ರಾಮ್
4. ಸಮೃದ್ದಿ ಫೈಟರ್ಸ್ ತಂಡ- ಓನರ್ ಮಂಜುನಾಥ್ ಓನರ್
5. DX ಮ್ಯಾಕ್ಸ್ ಲೈನ್ಸ್ ತಂಡ- ಓನರ್ ದಯಾನಂದ್
6. ರಾಮನಗರ ರಾಕರ್ಸ್ ತಂಡ- ಓನರ್ ಮಹೇಶ್ ಗೌಡ
7. ELV ಲಯನ್ ಕಿಂಗ್ಸ್ ತಂಡ - ಓನರ್ ಪುರುಷೋತ್ತಮ್ ಭಾಸ್ಕರ್
8. AVR ಟಸ್ಕರ್ಸ್ ತಂಡ - ಓನರ್ ಅರವಿಂದ್ ರೆಡ್ಡಿ
9. KKR ಕಿಂಗ್ಸ್ ತಂಡ - ಓನರ್ ಲಕ್ಷ್ಮೀ ಕಾಂತ್ ರೆಡ್ಡಿ
10.Rabit ರೇಸರ್ಸ್ ತಂಡ- ಓನರ್ ಅರು ಗೌಡ
11. ಮಯೂರ ರಾಯಲ್ಸ್ ತಂಡ- ಓನರ್ ಸೆಂಥಿಲ್
12. ರಾಯಲ್ ಕಿಂಗ್ಸ್ ತಂಡ- ಓನರ್ ಶ್ರೀರಾಮ್ ಮತ್ತು ಮುಖೇಶ್
ನಟರಾದ ಡಾಲಿ ಧನಂಜಯ್, ಅನಿರುದ್ದ್, ಡಾರ್ಲಿಂಗ್ ಕೃಷ್ಣ , ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಡಾ. ರಾಜ್ ಕಪ್‌ಗಾಗಿ ಆನಂದ್ ಆಡಿಯೋ ಹೊಸ ಹೆಜ್ಜೆ ಇಟ್ಟಿದ್ದು, ಈ ಪಂದ್ಯಾವಳಿಗಾಗಿ ಹೊಸ ಸ್ಪೋರ್ಟ್ ಯೂಟ್ಯೂಬ್ ಪ್ರಾರಂಭ ಮಾಡ್ತಿದ್ದು, ಲೈವ್ ಮ್ಯಾಚ್‌ಗಳನ್ನು ಪ್ರಸಾರ ಮಾಡಲು ಮುಂದಾಗಿದೆ.


Click it and Unblock the Notifications











