For Quick Alerts
  ALLOW NOTIFICATIONS  
  For Daily Alerts

  ರಾಜ್ ಇಲ್ಲದ ಜೀವನ ಬೇಸರ ತರಿಸಿದೆ, ಪಾರ್ವತಮ್ಮ

  By Rajendra
  |
  ವರನಟ ಡಾ.ರಾಜ್ ಕುಮಾರ್ ಅವರ 85ನೇ ಹುಟ್ಟುಹಬ್ಬವನ್ನು ಅಭಿಮಾನಿ ದೇವರುಗಳು ಇಂದು (ಏ.24) ಸಡಗರ, ಸಂಭ್ರಮದಿಂದ ಆಚರಿಸಿದರು. ಕಂಠೀರವ ಸ್ಟುಡಿಯೋದಲ್ಲಿನ ಅವರ ಸಮಾಧಿ ಬಳಿ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದು ನಮನ ಸಲ್ಲಿಸಿದರು.

  ಇದೇ ಸಂದರ್ಭದಲ್ಲಿ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರು ರಾಜ್ ಅವರನ್ನು ನೆನೆದು ಭಾವುಕರಾದರು. ಅವರು ಇನ್ನೂ ಜೀವಂತವಾಗಿರಬೇಕಿತ್ತು. ಆದರೆ ದೇವರು ಅವರನ್ನು ಕರೆಸಿಕೊಂಡು ಬಿಟ್ಟ ಎಂದು ಕಣ್ಣೀರಾದರು.

  ಹುಟ್ಟುಹಬ್ಬದ ನಿಮಿತ್ತ ಅವರು ರಾಜ್ ಸಮಾಧಿಗೆ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಭಾವುಕರಾಗಿ ಮಾತನಾಡುತ್ತಿದ್ದ ಪಾರ್ವರ್ತಮ್ಮ ಅವರು ನನ್ನನ್ನೂ ದೇವರು ಬೇಗ ಕರೆಸಿಕೊಳ್ಳಬೇಕಿತ್ತು. ಆ ಪುಣ್ಮಾತ್ಮನನ್ನು ಇನ್ನೂ ಜೀವಂತವಾಗಿ ಉಳಿಸಿ ಈ ನಾಡಿಗೆ ಸೇವೆ ಸಲ್ಲಿಸುವ ಅವಕಾಶ ನೀಡಬೇಕಿತ್ತು ಎಂದರು.

  ನಮ್ಮ ಯಜಮಾನರನ್ನು ಕಳೆದುಕೊಂಡು ಏಳು ವರ್ಷಗಳು ಕಳೆದುಹೋಗಿವೆ. ಅವರಿಲ್ಲದ ಜೀವನ ನನಗೆ ಬೇಸರ ತರಿಸಿದೆ. ಆದರೆ ಅವರ ಅಭಿಮಾನಿ ದೇವರುಗಳಲ್ಲಿ ಅವರನ್ನು ನಾನು ಕಾಣುತ್ತಿದ್ದೇನೆ. ಇಂಥಹ ಅಭಿಮಾನಿ ದೇವರುಗಳನ್ನು ಹೊಂದಿರುವ ಅವರೇ ಧನ್ಯರು ಎನ್ನುತ್ತಿದ್ದಂತೆ ಅವರ ಕಣ್ಣಾಲಿಗಳು ತುಂಬಿ ಬಂದವು.

  ಬಳಿಕ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಮಾತನಾಡುತ್ತಾ, "ಅಪ್ಪಾಜಿ ಅವರು ಇನ್ನೂ ನಮ್ಮೊಂದಿಗೆ ಇದ್ದಾರೆ. ಅವರ ಹುಟ್ಟುಹಬ್ಬ ಹಿಂದಿನಂತೆಯೇ ಈಗಲೂ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಅವರಿಗೆ ಇಷ್ಟವಾದ ತಿಂಡಿಗಳನ್ನು ಅಭಿಮಾನಿಗಳಿಗೆ ಹಂಚಿ ಅವರ ಸಂಭ್ರಮದಲ್ಲಿ ನಾವೂ ಭಾಗಿಯಾಗುತ್ತಿದ್ದೇವೆ" ಎಂದರು.

  ಈ ಸಂದರ್ಭದಲ್ಲಿ ರಾಜ್ ಅವರ ಸಹೋದರಿ ನಾಗಮ್ಮ, ಪುತ್ರಿಯರಾದ ಲಕ್ಷ್ಮಿ, ಪೂರ್ಣಿಮಾ, ಅಳಿಯ ಗೋವಿಂದರಾಜು, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಸಾ.ರಾ.ಗೋವಿಂದು ಸೇರಿದಂತೆ ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು. (ಒನ್ಇಂಡಿಯಾ ಕನ್ನಡ)

  English summary
  Kannada matinee idol Dr.Rajkumar's 85th birthday celebrates all over Karnataka on Wednesday 24th April. In this occasion Parvathamma remembers her husband Dr.Rajkumar and turned emotional shed tears.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X