ಡಾ.ರಾಜ್ ಕುಮಾರ್ ಜನ್ಮದಿನಾಚರಣೆ: ಮನೆಯಲ್ಲೇ ಆಚರಿಸಿ ಎಂದ ರಾಜ್ ಮಕ್ಕಳು
ಏಪ್ರಿಲ್ 24 ಕನ್ನಡಿಗರಿಗೆ ವಿಶೇಷವಾದ ದಿನ. ಅದರಲ್ಲೂ ಡಾ.ರಾಜ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಹೌದು. ಇಂದು ವರನಟ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಹುಟ್ಟಿದ ದಿನ. ಅಭಿಮಾನಿಗಳು 91ನೇ ವರ್ಷದ ಜನ್ಮದಿನಾಚರಣೆಯ ಸಡಗರದಲ್ಲಿದ್ದಾರೆ. ಪ್ರತೀವರ್ಷ ರಾಜ್ ಕುಮಾರ್ ಹುಟ್ಟುಹಬ್ಬವನ್ನು ರಾಜ್ಯದಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು.
ಆದರೆ ಈ ಬಾರಿ ವರನಟನ ಹುಟ್ಟುಹಬ್ಬವನ್ನು ಮನೆಯಲ್ಲಿಯೇ ಕುಳಿತು ಸಂಭ್ರಮಿಸಬೇಕಾಗಿದೆ. ಕೊರೊನಾ ಹಾವಳಿಯ ಪರಿಣಾಮ ಮೊದಲ ಬಾರಿಗೆ ರಾಜ್ ಉತ್ಸವ ಮಿಸ್ ಆಗುತ್ತಿದೆ. ಆದರೂ ಅಭಿಮಾನಿಗಳು ಮನೆಯಲ್ಲಿಯೇ ಸಂಭ್ರಮಿಸುತ್ತಿದ್ದಾರೆ.
ಈಗಾಗಲೆ ಅಭಿಮಾನಿಗಳು ಕಂಠೀರವ ಸ್ಟುಡಿಯೋದ ರಾಜ್ ಕುಮಾರ್ ಸ್ಮಾರಕದ ಬಳಿ ಬಂದು ಜಮಾಯಿಸುತ್ತಿದ್ದರು. ಡಾ.ರಾಜ್ ಸಮಾಧಿಗೆ ಪೂಜೆ ಸಲ್ಲಿಸಿ ವರನಟನನ್ನು ನೆನೆದು ಧನ್ಯರಾಗುತ್ತಿದ್ದರು. ಆದರೆ ಈ ವರ್ಷ ಯಾರು ಸಹ ಮನೆಯಿಂದ ಹೊರಬರುವ ಹಾಗೆಯೇ ಇಲ್ಲ. ಇದ್ದ ಜಾಗದಲ್ಲಿಯೇ ನೆಚ್ಚಿನ ನಟನ ಸ್ಮರಣೆ ಮಾಡುತ್ತಿದ್ದಾರೆ.

ಇನ್ನೂ ಪ್ರತೀವರ್ಷ ರಾಜ್ ಕುಮಾರ್ ಕುಟುಂಬ ಸಮಾಧಿಯ ಬಳಿ ಹೋಗಿ ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ಸಮಾಧಿಯ ಬಳಿ ಹೋಗದೆ ಮನೆಯಲ್ಲಿಯೇ ರಾಜ್ ಫೋಟೋಗೆ ಪೂಜೆ ಮಾಡಿ ಅಪ್ಪಾಜಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.
ಈ ಬಗ್ಗೆ ರಾಘವೇಂದ್ರ ರಾಜ್ ಕುಮಾರ್, ಶಿವಣ್ಣ ಮತ್ತು ಪುನೀತ್ ವಿಡಿಯೋ ಮೂಲಕ ಮನೆಯಲ್ಲಿಯೆ ಅಪ್ಪಾಜಿ ಹುಟ್ಟುಹಬ್ಬವನ್ನು ಸಂಭ್ರಮಿಸಿ, ಯಾರು ಮನೆಯಿಂದ ಹೊರ ಬರಬೇಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಜೊತೆಗೆ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಇಂದು ಇನ್ಸ್ಟಾಗ್ರಾಮ್ ಲೈವ್ ಬರುತ್ತಿದ್ದಾರೆ. ಶಿವಣ್ಣ ಮಧ್ಯಾಹ್ನ 11.25ಕ್ಕೆ ಲೈವ್ ಬಂದರೆ ಪುನೀತ್ ಮಧ್ಯಾಹ್ನ 12.30ಕ್ಕೆ ಇನ್ಸ್ಟಾಗ್ರಾಮ್ ಲೈವ್ ಬರಲಿದ್ದು, ಅಭಿಮಾನಿಗಳಿಗೆ ಚಿಕ್ಕ ಸರ್ಪ್ರೈಸ್ ನೀಡಲಿದ್ದಾರೆ.


Click it and Unblock the Notifications











