For Quick Alerts
  ALLOW NOTIFICATIONS  
  For Daily Alerts

  ಶಿವರಾಂ ಪಾದ ಮುಟ್ಟಿ ನಮಸ್ಕಾರ ಮಾಡಿದ್ದರು ಡಾ.ರಾಜ್‌ಕುಮಾರ್!

  |

  ಶಿವರಾಂ ಕನ್ನಡ ಚಿತ್ರರಂಗದ ಹಿರಿಯ ನಟರು ಮಾತ್ರವೇ ಅಲ್ಲ, ಚಿತ್ರರಂಗದ ಹಲವರಿಗೆ ಆಧ್ಯಾತ್ಮಿಕ ಗುರುವಾಗಿದ್ದರು. ಪೂಜಾರಿಯಾಗಿದ್ದರು, ಯಾವುದೇ ಶುಭ ಸಮಾರಂಭಕ್ಕೆ ಶಿವರಾಂ ಹಾಜರಿರಲೇ ಬೇಕಿತ್ತು. ಅದರಲ್ಲೂ ರಾಜ್‌ಕುಮಾರ್ ಕುಟುಂಬದ ಯಾವುದೇ ಸಮಾರಂಭವಾದರೂ ಶಿವರಾಮಣ್ಣ ಅಲ್ಲಿರಲೇ ಬೇಕು.

  ಶಿವರಾಂ ಕುಟುಂಬಕ್ಕೂ ಡಾ.ರಾಜ್‌ಕುಮಾರ್ ಕುಟುಂಬಕ್ಕೂ ಬಹಳ ಹಳೆಯ ನಂಟು. ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರುಗಳು ಶಿವರಾಂ ಅವರನ್ನು ಗೌರವದಿಂದ ಕಾಣುತ್ತಿದ್ದರು. ಅವರ ಮಕ್ಕಳಾದ ಶಿವಣ್ಣ, ರಾಘಣ್ಣ, ಪುನೀತ್ ಸಹ ಶಿವಣ್ಣನನ್ನು ಗೌರವದಿಂದ ಕಾಣುತ್ತಿದ್ದರು.

  ರಾಜ್‌ಕುಮಾರ್ ಕುಟುಂಬದೊಂದಿಗೆ ಅದೆಷ್ಟು ಗಾಢವಾದ ನಂಟು ಶಿವರಾಂ ಅವರಿಗೆ ಇತ್ತೆಂದರೆ ರಾಜ್‌ಕುಮಾರ್ ಮನೆಯಲ್ಲಿ ನಡೆಯುತ್ತಿದ್ದ ಅಯ್ಯಪ್ಪ ಸ್ವಾಮಿ ಪೂಜೆಯನ್ನು ಅದೆಷ್ಟೋ ವರ್ಷಗಳ ಕಾಲ ಶಿವರಾಂ ಅವರೇ ನಡೆಸಿಕೊಡುತ್ತಿದ್ದರು. ರಾಜ್‌ಕುಮಾರ್ ಮಾಲಾಧಾರಿಗಳಾದಾಗ ಗುರುಸ್ವಾಮಿಗಳಾಗಿ ಇದ್ದಿದ್ದು ಶಿವರಾಂ.

  ಶಿವರಾಂ ಅವರ ನೇತೃತ್ವದಲ್ಲಿ ಹಲವಾರು ಬಾರಿ ರಾಜ್‌ಕುಮಾರ್ ಅವರು ಶಬರಿಮಲೆ ಯಾತ್ರೆ ಮಾಡಿದ್ದರು. ರಾಜ್‌ಕುಮಾರ್ ಮಾತ್ರವೇ ಅಲ್ಲ ಅಮಿತಾಬ್ ಬಚ್ಚನ್, ನೆರೆ-ಹೊರೆಯ ಸ್ಟಾರ್ ನಟರು ಸಹ ಶಿವರಾಂ ನೇತೃತ್ವದಲ್ಲಿ ಶಬರಿಮಲೆ ಯಾತ್ರೆ ಮಾಡುತ್ತಿದ್ದರು.

  ಅಯ್ಯಪ್ಪ ಸ್ವಾಮಿಯ ಮಾಲೆ ಹಾಕಿದಾಗ ಗುರುಸ್ವಾಮಿಗಳಾಗಿದ್ದ ಶಿವರಾಂ ಅವರ ಪಾದಕ್ಕೆ ನಮಸ್ಕಾರ ಮಾಡುತ್ತಿದ್ದರು ರಾಜ್‌ಕುಮಾರ್. ಈ ವಿಷಯವನ್ನು ನಿರ್ದೇಶಕ ಭಗವಾನ್ ಮಾಧ್ಯಮಗಳೊಟ್ಟಿಗೆ ಹೇಳಿಕೊಂಡಿದ್ದಾರೆ.

  ''ರಾಜ್‌ಕುಮಾರ್ ಅವರು ಶಿವರಾಂ ಪಾದಕ್ಕೆ ನಮಸ್ಕಾರ ಮಾಡುತ್ತಿದ್ದರು. ಶಿವರಾಂ ಅವರು ಹಿಂದೆ ಸರಿದು, ಹೀಗೆ ಮಾಡಬೇಡಿ ನೀವು ದೊಡ್ಡವರು ಎಂದು ಹೇಳಿದ್ದರು. ಆದರೆ, ಅಣ್ಣಾವ್ರು, ''ದೊಡ್ಡವರು ಚಿಕ್ಕವರು ಎಂದೇನೂ ಇಲ್ಲ. ಇಲ್ಲಿ ನೀವು ಗುರುಸ್ವಾಮಿಗಳು, ನಮಗೆ ಗುರುಸಮಾನರು'' ಎಂದು ಉತ್ತರಿಸಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.

  ಶಿವರಾಂ ಅವರಿಗೆ ಅನಾರೋಗ್ಯವಾಗಿ ಆಸ್ಪತ್ರೆ ಸೇರಿದ್ದಾರೆ ಎಂದು ಗೊತ್ತಾದ ಕೂಡಲೇ ಶಿವರಾಜ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಶಿವರಾಂ ಆರೋಗ್ಯ ಸ್ಥಿತಿ ವಿಚಾರಿಸಿದ್ದರು. ಅವರ ಕುಟುಂಬದವರನ್ನು ಕಂಡು ಸಾಂತ್ವನ ಹೇಳಿದ್ದರು.

  ಇಂದು ಶಿವರಾಂ ಅವರ ಅಂತಿಮ ದರ್ಶನ ಮಾಡಲು ಬಂದಿದ್ದ ಶಿವಣ್ಣ, ಶಿವರಾಮಣ್ಣನವರೊಂದಿಗೆ ಕಳೆದ ನೆನಪುಗಳನ್ನು ಮೆಲುಕು ಹಾಕುತ್ತಾ, ''ಶಿವರಾಮಣ್ಣ ಎಂದರೆ ಮೊದಲು ನೆನಪು ಬರುವುದೇ ಶಬರಿಮಲೆ. ಅಪ್ಪಾಜಿಯವರು ಮಾಲೆ ಹಾಕಲು ಪ್ರಾರಂಭ ಮಾಡಿದಾಗಿನಿಂದಲೂ ಶಿವರಾಂ ಅವರು ಜೊತೆಗೆ ಇರುತ್ತಿದ್ದರು. ನಂತರ ಇವರನ್ನೇ ಗುರುಸ್ವಾಮಿಗಳು ಎಂದು ಮಾಡಿ ಇವರ ನೇತೃತ್ವದಲ್ಲಿ ಶಬರಿಮಲೆ ಯಾತ್ರೆ ಹೋಗುತ್ತಿದ್ದರು. ಆ ನಂತರ ನಾವು ಮಾಲಾಧಾರಣೆ ಪ್ರಾರಂಭ ಮಾಡಿದಾಗಲೂ ಸಹ ಶಿವರಾಮಣ್ಣನ ನೇತೃತ್ವದಲ್ಲಿಯೇ ಶಬರಿಮಲೆಗೆ ಹೋಗುತ್ತಿದ್ದೆವು. ಶಿವರಾಮಣ್ಣನ ಬಳಿ ಒಂದು ಶಕ್ತಿಯಿತ್ತು. ಕೆಲವು ವರ್ಷಗಳ ಹಿಂದೆಯಷ್ಟೆ ನಾವೆಲ್ಲ ಒಟ್ಟಿಗೆ ಶಬರಿಮಲೆಗೆ ಹೋಗಿದ್ದಾಗಲೂ ಅವರು ಅನಾಯಾಸವಾಗಿ ಬೆಟ್ಟ ಹತ್ತಿದ್ದರು. ಅವರು ಬಹಳ ಶಿಸ್ತಿನ ವ್ಯಕ್ತಿ. ಎಲ್ಲವನ್ನೂ ಪೂರ್ವತಯಾರಿ ಮಾಡಿಕೊಂಡು ಶಿಸ್ತಿನಿಂದ ಇರುತ್ತಿದ್ದರು. ಬಹಳ ಪರಿಶುದ್ಧರು. ಅವರಂಥಹಾ ವ್ಯಕ್ತಿಯನ್ನು ನಾನು ಜೀವನದಲ್ಲಿ ನೋಡೇ ಇಲ್ಲ'' ಎಂದರು.

  ಶಿವರಾಂ ಅವರು ಕೆಲವು ದಿನಗಳ ಹಿಂದೆ ತಮ್ಮ ಮನೆಯ ತಾರಸಿ ಮೇಲೆ ಪ್ರಜ್ಞಾಹೀನರಾಗಿ ಬಿದ್ದುಬಿಟ್ಟಿದ್ದರು. ಅವರನ್ನು ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಮೆದುಳಿನಲ್ಲಿ ರಕ್ತಸ್ರಾವ ಆಗಿರುವುದು ತಪಾಸಣೆಯಿಂದ ಬೆಳಕಿಗೆ ಬಂದಿತ್ತು. ಆದರೆ ಅವರಿಗೆ ವಯಸ್ಸಾದ ಕಾರಣದಿಂದ ಶಸ್ತ್ರಚಿಕಿತ್ಸೆ ಮಾಡಲಾಗಿರಲಿಲ್ಲ ಬದಲಿಗೆ ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಶಿವರಾಂ ಅವರು ಇಂದು ಮಧ್ಯಾಹ್ನದ ವೇಳೆ ಕೊನೆ ಉಸಿರೆಳೆದರು.

  ಶಿವರಾಂ ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ. ನಾಳೆ ಕಲಾಕ್ಷೇತ್ರದಲ್ಲಿ ಅಂತಿಮದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶಿವರಾಂ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

  English summary
  Dr Rajkumar and his family has huge respect for Shivaram. Director Bhagwan said once Dr Rajkumar touched Shivaram's feet while he performing Pooja for Dr Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X