"ಯಾವ ನಟರು ಅಣ್ಣಾವರಷ್ಟು ವೈವಿಧ್ಯಮಯ ಪಾತ್ರಗಳನ್ನು ಮಾಡಲು ಸಾಧ್ಯವಿಲ್ಲ": ಮಂಸೋರೆ
ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆ ಡಾ. ರಾಜ್‌ಕುಮಾರ್. ಎಷ್ಟೇ ಜನ ನಟರು ಬಂದರು ಹೋದರೂ ಅಣ್ಣಾವ್ರ ಸಮಕ್ಕೆ ಯಾರು ಬರಲು ಸಾಧ್ಯವಿಲ್ಲ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ ನಾಯಕ ಡಾ. ರಾಜ್‌ಕುಮಾರ್. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಭಕ್ತಿ ಪ್ರದಾನ, ಬಾಂಡ್ ಯಾವುದೇ ಶೈಲಿ ಆದರೂ ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ.
ನಿರ್ದೇಶಕ ಮಂಸೋರೆ ನಟನೆಯಲ್ಲಿ ನನಗೆ ಡಾ. ರಾಜ್‌ಕುಮಾರ್, ನಿರ್ದೇಶನದಲ್ಲಿ ಸ್ಪಿಲ್ ಬರ್ಗ್ ಸ್ಫೂರ್ತಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. "ಇಷ್ಟು ವರ್ಷಗಳ ಕನ್ನಡ ಸಿನಿರಂಗದಲ್ಲಿ ಜನಪ್ರಿಯ ಸ್ಟಾರ್, ಲೆಜೆಂಡ್ ಅಂದರೆ ಅದು ಕೇವಲ ಡಾ.ರಾಜ್‌ಕುಮಾರ್, ಅಣ್ಣಾವ್ರು ಒಬ್ಬರೇ. ಸ್ಟಾರ್ ನಟರು ಯಾವುದೋ ಒಂದು ಮಾದರಿಯ ಪಾತ್ರವನ್ನು ಮಾಡಿದರೆ ಮಾತ್ರ ಅವರ ಸಿನಿಮಾ ಪ್ರೇಕ್ಷಕರು ನೋಡುತ್ತಾರೆ ಎಂಬ ಇಂದಿನ ಕಾಲದಲ್ಲಿ ನಾವಿದ್ದೇವೆ. ಆದರೆ ಅಣ್ಣಾವ್ರು ಆ ಬಿಗ್ ಮಿಥ್‌ನ ಒಡೆದಿದ್ದವರು. ಅವರು ಯಾವ ಪಾತ್ರ ಮಾಡಿದರೂ ಪ್ರೇಕ್ಷಕರು ಅವರ ಸಿನಿಮಾ ನೋಡುತ್ತಿದ್ದರು. ಬಹುಶಃ ಭವಿಷ್ಯದಲ್ಲಿ ಯಾವ ಸ್ಟಾರ್ ನಟರು ಬಂದರೂ ಅಣ್ಣಾವರಷ್ಟು ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಲು ಸಾಧ್ಯವೇ ಇಲ್ಲಾ.
"ಈಗಿನ ಸ್ಟಾರ್ ನಟರಿಗೆ ಸ್ಟಾರ್‌ಗಿರಿ ಉಳಿಯಬೇಕೆಂದರೆ ನಿರ್ದಿಷ್ಟ ಪಾತ್ರ ಮಾಡಿದರೆ ಮಾತ್ರ ಗೆಲುವು, ಭವಿಷ್ಯ. ಆದರೆ ಅಣ್ಣಾವ್ರು ಮಾಡಿದ ಪಾತ್ರಗಳಿಗೆಲ್ಲಾ ಗೆಲುವು ಸಿಕ್ಕಿತ್ತು. 'ಸನಾದಿ ಅಪ್ಪಣ್ಣ' ಮಾಡಿದವರೇ 'ಆಪರೇಷನ್ ಡೈಮಂಡ್ ರಾಕೆಟ್' ಮಾಡಿದರು, 'ಒಂದು ಮುತ್ತಿನ ಕತೆ' ಮಾಡಿವರೇ 'ಜೀವನಚೈತ್ರ' ಕೂಡ ಮಾಡಿದರು. 'ಭೂದಾನ'ದಲ್ಲಿ ಕಲ್ಯಾಣ್‌ಕುಮಾರ್, ಉದಯ್‌ಕುಮಾರ್ ಅವರ ತಂದೆಯ ಪಾತ್ರ ಮಾಡಿದವರೇ 'ಮಯೂರ ವರ್ಮ'ನಾಗಿಯೂ ತೆರೆಯ ಮೇಲೆ ಮೆರೆದರು."

"ನಿರ್ದಿಷ್ಟ Genreಗೆ ಸಿಲುಕದ ನಿರ್ದೇಶಕ ಸ್ಪಿಲ್‌ಬರ್ಗ್ ರವರಷ್ಟೇ ನಟನೆಯಲ್ಲಿ ಯಾವುದೇ ನಿರ್ಧಿಷ್ಟ Genreಗೆ ಸಿಲುಕದ ಏಕೈಕ ನಟ ನಮ್ ಅಣ್ಣಾವ್ರು. ಸಿನಿಮಾರಂಗದಲ್ಲಿ ಇವರಿಬ್ಬರೂ ಎಂದೆಂದಿಗೂ ನನಗೆ inspiration" ಎಂದು ಮಂಸೋರೆ ಬರೆದುಕೊಂಡಿದ್ದಾರೆ.

ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರುವ ನಿರ್ದೇಶಕ ಮಂಸೋರೆ. 'ಅರಿವು', 'ನಾತಿಚರಾಮಿ' ಹಾಗೂ 'ಆಕ್ಟ್ 1978' ರೀತಿಯ ಸಿನಿಮಾಗಳಿಂದ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದಾರೆ. ಸದ್ಯ '19.20.21' ಎನ್ನುವ ವಿಭಿನ್ನ ಟೈಟಲ್ ಚಿತ್ರಕ್ಕೆ ಮಂಸೋರೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಸದ್ಯ ಮಂಸೋರೆ ಮಾಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Click it and Unblock the Notifications











