'ದೊಗಲೆ ಪ್ಯಾಂಟಿನ ನಾಸಿಕಾಸುರ' ಎಂದು ಅಣ್ಣಾವ್ರ ಬಗ್ಗೆ ಟೀಕೆ; ಮುತ್ತುರಾಜನ ಉತ್ತರ ಏನಾಗಿತ್ತು
ನಟಸಾರ್ವಭೌಮ ಡಾ. ರಾಜ್‌ಕುಮಾರ್ ತಮ್ಮ ಅದ್ಭುತ ಅಭಿನಯ ಹಾಗೂ ಆದರ್ಶ ಗುಣಗಳಿಂದ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಅಣ್ಣಾವ್ರು ನಮ್ಮನ್ನಗಲಿ 20 ವರ್ಷ ವರ್ಷ ಕಳೆದರೂ ಕನ್ನಡಿಗರು ಅವರನ್ನು ಮರೆತ್ತಿಲ್ಲ, ಮರೆಯುವುದಿಲ್ಲ. ರಂಗಭೂಮಿಯಿಂದ ಬಂದು ಚಿತ್ರರಂಗದಲ್ಲಿ ರಾಜಕುಮಾರನಾಗಿ ಮರೆದವರು ಮುತ್ತುರಾಜ್.
3ನೇ ಕ್ಲಾಸ್ ಓದಿದ್ದ ರಾಜ್‌ಕುಮಾರ್ ಡಾಕ್ಟರೇಟ್ ಪಡೆಯುವಷ್ಟು ಎತ್ತರಕ್ಕೆ ಬೆಳೆದಿದ್ದು ತಮಾಷೆಯ ಮಾತಲ್ಲ. ತಮ್ಮ ಪರಿಶ್ರಮದಿಂದಲೇ ಎಲ್ಲವನ್ನು ಸಾಧಿಸಿದರು. ಸಾಕಷ್ಟು ಟೀಕೆಗಳನ್ನು ಕೂಡ ಅಣ್ಣಾವ್ರು ಎದುರಿಸಿದರು. ಎಲ್ಲದ್ದಕ್ಕೂ ತಮ್ಮ ಕೆಲಸದ ಮೂಲಕವೇ ಮುತ್ತುರಾಜ್ ಉತ್ತರ ಕೊಟ್ಟರು. ಡಾ. ರಾಜ್‌ಕುಮಾರ್ ಅವರ ಆತ್ಮಚರಿತ್ರೆ 'ಕಥಾನಾಯಕನ ಕಥೆ' ಪುಸ್ತಕ ಅನಾವರಣವಾಗಿದೆ. ತಾವು ಎದುರಿಸಿದ ಟೀಕೆಗಳ ಬಗ್ಗೆ ಸ್ವತಃ ಅಣ್ಣಾವ್ರು ಈ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ಒಮ್ಮೆ 'ದೊಗಲೆ ಪ್ಯಾಂಟಿನ ನಾಸಿಕಾಸುರ' ಎಂದು ಅಣ್ಣಾವ್ರ ಬಗ್ಗೆ ಅವತ್ತಿನ ಕಾಲಕ್ಕೆ ಪತ್ರಿಕೆಯಲ್ಲಿ ಬರೆದ ನೋವಿನ ವಿಚಾರವನ್ನು ಕೂಡ ಅಣ್ಣಾವ್ರು ತಿಳಿಸಿದ್ದಾರೆ.

'ಕಥಾನಾಯಕನ ಕಥೆ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಮಾತನಾಡಿದ್ದಾರೆ. ಪುಸ್ತಕದ ಕೆಲವು ಪ್ರಮುಖ ವಿಚಾರಗಳನ್ನು ತಿಳಿಸಿದ್ದಾರೆ. ಅಣ್ಣಾವ್ರ ಸ್ವತಃ ಹೇಳಿಕೊಂಡಿರುವ ಕೆಲ ಸಂದರ್ಭಗಳ ಬಗ್ಗೆ ಉಲ್ಲೇಖಿಸಿದ್ದಾರೆ. ರಾಜ್‌ಕುಮಾರ್ ಈ ಪುಸ್ತಕದಲ್ಲಿ ತಮ್ಮ ಬಗೆಗಿನ ಟೀಕೆಗಳ ಬಗ್ಗೆ ಹೇಳಿಕೊಂಡಿರುವ ಬಗ್ಗೆ ರಾಮಚಂದ್ರಪ್ಪ ವಿವರಿಸಿದ್ದಾರೆ.
'ಅಬ್ಬಾ ಆ ಹುಡುಗಿ' ಎನ್ನುವ ಸಿನಿಮಾ ಸಮಯದಲ್ಲಿ ನಡೆದ ಘಟನೆ ಇದು. 'ಬೇಡರ ಕಣ್ಣಪ್ಪ' ಚಿತ್ರ ನಿರ್ದೇಶಿಸಿದ್ದ ಹೆಚ್‌ಎಲ್‌ಎನ್ ಸಿಂಹ ಈ ಚಿತ್ರವನ್ನು ಕಟ್ಟಿಕೊಟ್ಟಿದ್ರು. ರಾಜ್‌ಕುಮಾರ್ ಎಂದು ನಾಮಕರಣ ಮಾಡಿದ್ದವರು. 'ಅಬ್ಬಾ ಆ ಹುಡುಗಿ' ಚಿತ್ರದಲ್ಲಿ ರಾಜಶಂಕರ್ ನಾಯಕ. ಅಣ್ಣಾವ್ರು ಒಂದರ್ಥದಲ್ಲಿ 2ನೇ ನಾಯಕನ ಪಾತ್ರ ಮಾಡಿದ್ದರು. ಆ ಸಿನಿಮಾ ಬಂದಾಗ ಒಂದು ಟೀಕೆ ಬಂದಿತ್ತು ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ. "ದೊಗಲೆ ಪ್ಯಾಂಟಿಕನ ನಾಸಿಕಾಸುರ ಎಂದು ನನ್ನ ಕರೆದ್ರು, ನನಗೆ ನೋವಾಯ್ತು" ಎಂದು ಅಣ್ಣಾವ್ರು ಹೇಳಿಕೊಂಡಿದ್ದಾರೆ.

"ದೊಗಲೆ ಪ್ಯಾಂಟಿಕನ ನಾಸಿಕಾಸುರ" ಅಂತ ಕರೆದಿದ್ದು ಮಾತ್ರವಲ್ಲ, "ದೊಗಲೆ ಪ್ಯಾಂಟಿಕನ ನಾಸಿಕಾಸುರ"ನನ್ನು ನೋಡುವುದು ಕನ್ನಡಿಗರ ದೌರ್ಭಾಗ್ಯ ಎಂದು ಕೂಡ ಬರೆದಿದ್ದರು ಕನ್ನಡ ಪತ್ರಕರ್ತರು. ಆದರೆ ಯಾರನ್ನು ದೌರ್ಭಾಗ್ಯ ಎಂದು ಕರೆದ್ರೋ ಅವ್ರೇ ಕರ್ನಾಟಕದ ಸೌಭಾಗ್ಯವಾದರು ಎಂದು ರಾಮಚಂದ್ರಪ್ಪ ಹೇಳಿದ್ದಾರೆ. ಆದರೆ ಅಂತಹ ಟೀಕೆಗಳ ಬಗ್ಗೆ ಅಣ್ಣಾವ್ರು ನೇರವಾಗಿ ಪ್ರತಿಕ್ರಿಯಿಸಲಿಲ್ಲ. ತಮ್ಮ ನಟನೆ, ಕೆಲಸದ ಮೂಲಕವೇ ಉತ್ತರಿಸುತ್ತಾ ಹೋದ್ರು ಎಂದಿದ್ದಾರೆ.
ಶಿವರಾಜ್‌ಕುಮಾರ್ ಚಿತ್ರರಂಗ ಪ್ರವೇಶಿಸಿದ್ದಾಗ ಈ ಮುಖ ಹೀರೊ ಆಗ್ತಾನಾ ಅಂತ ಒಬ್ಬ ನಿರ್ದೇಶಕರು ಹೇಳಿದ್ರು. ಆದರೆ ಶಿವಣ್ಣ 40 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. 130 ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲರಿಗೂ ತಮ್ಮ ಕೆಲಸದ ಮೂಲಕ ಶಿವಣ್ಣ ಉತ್ತರ ಕೊಟ್ಟಿದ್ದಾರೆ. ಅಪ್ಪನ ರೀತಿಯಲ್ಲೇ ಶಿವಣ್ಣ ಟೀಕೆಗಳಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಬರಗೂರು ರಾಮಚಂದ್ರಪ್ಪ ವಿವರಿಸಿದ್ದಾರೆ.
'ಸೋದರಿ' ಚಿತ್ರ ಬಂದಾಗ ಮೊದಲಾರ್ಧ ರಾಜನ ಪಾತ್ರಕ್ಕೂ ಸೂಟ್ ಆಗಲಿಲ್ಲ, ಎರಡನೇ ಭಾಗದಲ್ಲಿ ಬೇಡರ ಕಣ್ಣಪ್ಪನ ರೀತಿ ನಟಿಸಿದ್ದಾರೆ ಎಂದು ಟೀಕಿಸಿ ಬರೆದಿದ್ದರು. ಅದನ್ನು ಕೇಳಿ ಚಿತ್ರರಂಗದಿಂದ ದೂರಾಗಲು ಮನಸ್ಸು ಮಾಡಿದ್ದರು. ಆದರೆ ಜೆಸಿ ರಸ್ತೆಯ ಶಿವಾಜಿ ಟಾಕೀಸ್‌ನಲ್ಲಿ ಪತ್ನಿ ಪಾರ್ವತಮ್ಮ ಜೊತೆ ಅಣ್ಣಾವ್ರು 'ಸೋದರಿ' ಸಿನಿಮಾ ನೋಡಿದ್ರು.. ಇಂಟರ್‌ವಲ್ ವೇಳೆಗೆ ಪ್ರೇಕ್ಷಕರು ಅಣ್ಣಾವ್ರನ್ನು ಗುರ್ತಿಸಿ ಜೈಕಾರ ಹಾಕಲು ಪ್ರಾರಂಭಿಸಿದ ಬಳಿಕ ನಾನು ಜನರ ಮನಸ್ಸಿನಲ್ಲಿ ಇದ್ದೀನಿ ಎಂದು ತಮ್ಮ ನಿರ್ಧಾರ ಬದಲಿಸಿಕೊಂಡಿದ್ರು ಎಂದು ಬರಗೂರು ರಾಮಚಂದ್ರಪ್ಪ ಪುಸ್ತಕದಲ್ಲಿರುವ ವಿಚಾರವನ್ನು ವಿವರಿಸಿದ್ದಾರೆ.


Click it and Unblock the Notifications











