ಸ್ನೇಹಿತನ ಜೊತೆ ಜಗಳ ನಡೆದಾಗ ತಾತ, ಮಾವನ ಬಗ್ಗೆ ಏನಾದ್ರು ಅಂತಿದ್ರು, ಟೀಕೆಗಳು ನಮಗೆ ಹೊಸದಲ್ಲ; ಡಾ. ರಾಜ್ ಮೊಮ್ಮಗ
ಡಾ. ರಾಜ್‌ಕುಮಾರ್ ಮೊಮ್ಮಗ ಷಣ್ಮುಖ ಗೋವಿಂದರಾಜ್ ಈಗಾಗಲೇ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಅಣ್ಣಾವ್ರು ಮಗಳು ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಪುತ್ರ ಷಣ್ಮುಖ. ಮೆಲ್ಬರ್ನ್‌ನಲ್ಲಿ ಎಂಬಿಎ ಮುಗಿಸಿ ಬಳಿಕ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಬಳಿಕ 'ನಿಂಬಿಯಾ ಬನಾದ ಮ್ಯಾಗ' ಚಿತ್ರದಲ್ಲಿ ನಟಿಸಿದರು.
ಷಣ್ಮುಖ ಗೋವಿಂದರಾಜ್ ತಮ್ಮ ಲುಕ್ಸ್ ಕಾರಣಕ್ಕೆ ಟೀಕೆಗಳನ್ನು ಎದುರಿಸಿದ್ದು ಇದೆ. ಅದಕ್ಕೆ ಅವರು ಪ್ರತಿಕ್ರಿಯೆ ಕೂಡ ನೀಡಿದ್ದರು. "ನಾನು ಇರೋದು ಹೀಗೆ, ದೇವರು ಸೃಷ್ಟಿ ಅದು" ಎಂದು ಹೇಳಿದ್ದರು. ಅಣ್ಣಾವ್ರ ಬಳಿಕ ಅವರ ಮಕ್ಕಳು ಶಿವಣ್ಣ, ರಾಘಣ್ಣ ಹಾಗೂ ಪುನೀತ್ ಚಿತ್ರರಂಗ ಪ್ರವೇಶಿಸಿ ಗೆದ್ದರು. ಇತ್ತೀಚಿನ ವರ್ಷಗಳ ಮೊಮ್ಮಕ್ಕಳ ದರ್ಬಾರ್ ಶುರುವಾಗಿದೆ. ರಾಘಣ್ಣನ ಮಕ್ಕಳು ವಿನಯ್ ಹಾಗೂ ಯುವ ಇಬ್ಬರೂ ನಾಯಕ ನಟರಾಗಿ ಗುರ್ತಿಸಿಕೊಂಡಿದ್ದಾರೆ. ಡಾ. ರಾಜ್ ಮಗಳು ಪೂರ್ಣಿಮಾ ಮಕ್ಕಳು ಧೀರೇನ್ ರಾಮ್‌ಕುಮಾರ್ ಹಾಗೂ ಧನ್ಯಾ ರಾಮ್‌ಕುಮಾರ್ ಕೂಡ ಚಿತ್ರರಂಗಕ್ಕೆ ಬಂದಿದ್ದಾರೆ. ಅದೇ ಸಾಲಿಗೆ ಷಣ್ಮುಖ ಗೋವಿಂದರಾಜ್ ಸೇರಿಕೊಂಡಿದ್ದಾರೆ.

ಅಣ್ಣಾವ್ರ ಫ್ಯಾಮಿಲಿ ಹಾಗೂ ತಮ್ಮ ಬಗ್ಗೆ ಎದುರಾದ ಟೀಕೆಗಳ ಬಗ್ಗೆ ಷಣ್ಮುಖ ಗೋವಿಂದರಾಜ್ ಮಾತನಾಡಿದ್ದಾರೆ. 'ಅಶ್ವವೇಗ' ವಾಹಿನಿ ಸಂದರ್ಶನದಲ್ಲಿ ಭಾಗಿ ಆಗಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಟೀಕೆಗಳು ನಮಗೆ ಹೊಸದೇನು ಅಲ್ಲ. ತಾತ ಹಾಗೂ ಮಾವಂದಿರ ಬಗ್ಗೆ ಕೂಡ ಸಾಕಷ್ಟು ಟೀಕೆಗಳು ಬಂದಿತ್ತು. ಮೊದ ಮೊದಲು ಈ ಬಗ್ಗೆ ಹೆಚ್ಚು ಆಲೋಚಿಸುತ್ತಿದ್ದೆ. ಈಗ ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದಾರೆ.
"ನಾನು ಚಿಕ್ಕಂದಿನಿಂದಲೇ ಟೀಕೆಗಳನ್ನು ಕೇಳ್ತಾ ಬಂದಿದ್ದೀನಿ. ನಮ್ಮ ತಾತ- ಅಜ್ಜಿ ಹಾಗೂ ಮಾವಂದಿರ ವಿಷಯದಲ್ಲಿ ಕೆಲವರು ಮಾತನಾಡುತ್ತಿದ್ರು. ಮೊದಲಿನಿಂದಲೂ ಇದು ಇದೆ. ಸೋಶಿಯಲ್ ಮೀಡಿಯಾ ಇರುವುದರಿಂದ ಸ್ವಲ್ಪ ಜೋರಾಗಿ ಕೇಳುತ್ತದೆ ಅಷ್ಟೆ. ಶಾಲೆಯಲ್ಲಿ ಸ್ನೇಹಿತನ ಜೊತೆ ನನಗೆ ಜಗಳ ನಡೆದಾಗ ನಮ್ಮ ತಾತ, ಮಾವನ ಹೆಸರು ಪ್ರಸ್ತಾಪಿಸಿ ಏನಾದರೂ ಹೇಳುವುದು, ಕೆಣಕುವುದು ಮಾಡುತ್ತಿದ್ರು" ಎಂದು ಷಣ್ಮುಖ ರಾಜ್ ಹೇಳಿದ್ದಾರೆ.

ನಮ್ಮ ತಾತ, ಅಜ್ಜಿ, ಮಾವನ ಬಗ್ಗೆ ಯಾಕೆ ಮಾತನಾಡ್ತೀಯಾ ಎಂದು ಆಗ ಬೇಸರವಾಗ್ತಿತ್ತು. ಅದಕ್ಕೆ ಪ್ರತಿಕ್ರಿಯಿಸುತ್ತಿದ್ದೆ. ದೊಡ್ಡವರಾಗುತ್ತಿದ್ದಂತೆ ಅರಿವು ಬಂತು. ಅಂತಹ ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುಂದೆ ಸಾಗಬೇಕು ಎಂದು ಹಿರಿಯರನ್ನು ನೋಡಿ ಕಲಿತೆ ಎಂದು ಷಣ್ಮುಖ ತಿಳಿಸಿದ್ದಾರೆ. ಟೀಕೆಗಳನ್ನು ಮೈಮೇಲೆ ಎಳೆದುಕೊಂಡರೆ ನಮ್ಮ ಮೇಲೆ ಪರಿಣಾಮ ಬೀರುತ್ತೆ. ಸಿನಿಮಾ ಬಿಟ್ಟು ವೈಯಕ್ತಿಕ ಜೀವನ ಇದೆ. ಅದಕ್ಕೆ ತೊಂದರೆ ಆಗಲು ಬಿಡಬಾರದು. ಟೀಕೆಗಳ ಜೊತೆಗೆ ಮೆಚ್ಚುಗೆ, ಹೊಗಳಿಕೆ ಜಾಸ್ತಿಯಿದೆ. ಅದನ್ನು ನೋಡಬೇಕು, ನೆಗೆಟಿವ್ ಬದಲು, ಪಾಸಿಟಿವ್ ತೆಗೆದುಕೊಳ್ಳೋಣ. ಟೀಕೆಗಳಿಂದ ಕಂಡಿತ ಬೇಸರ ಆಗಿರುವುದು ಇದೆ. ನಾವು ಕಸೀನ್ಸ್ ಎಲ್ಲಾ ಸೇರಿದಾಗ ಇಂತಹ ನೆಗೆಟಿವ್ ವಿಚಾರ ಮಾತಾಡಲ್ಲ. ಒಂದು ವೇಳೆ ಮಾತನಾಡಿದ್ರು, 2 ನಿಮಿಷಕ್ಕೆ ಆ ವಿಷಯ ಬಿಟ್ಟು ಬೇರೆ ಕಡೆ ಗಮನ ಹರಸುತ್ತೇವೆ ಎಂದಿದ್ದಾರೆ.
ಷಣ್ಮುಖ ಗೋವಿಂದರಾಜ್ ನಟನೆಯ 'ನಿಂಬಿಯಾ ಬನಾದ ಮ್ಯಾಗ' ಚಿತ್ರಕ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳು ಸಿಕ್ಕಿತ್ತು. ತಾಯಿ- ಮಗನ ಬಾಂಧವ್ಯದ ಕಥೆ ಚಿತ್ರದಲ್ಲಿತ್ತು. DHANBAD ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಬಾಂಗ್ಲಾದೇಶದ 7th ಕ್ರೌನ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಪ್ರದರ್ಶನ ಕಂಡಿತ್ತು. ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಅಶೋಕ್ ಕಡಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಬಳಿಕ ಷಣ್ಮುಖ ನಟನೆಯ ಯಾವುದೇ ಸಿನಿಮಾ ಅಪ್‌ಡೇಟ್ ಸಿಗಲಿಲ್ಲ.


Click it and Unblock the Notifications