ಅಣ್ಣಾವ್ರ 'ಕಸ್ತೂರಿ ನಿವಾಸ' ಕಲರ್ ಫುಲ್ ಕಲೆಕ್ಷನ್
ಅಣ್ಣಾವ್ರ ಚಿತ್ರಕ್ಕೆ ಅಣ್ಣಾವ್ರೇ ಸಾಟಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅವರ ವರ್ಣರಂಜಿತ 'ಕಸ್ತೂರಿ ನಿವಾಸ' (1971) ಚಿತ್ರ ಬಾಕ್ಸ್ ಆಫೀಸಲ್ಲಿ ಕಲರ್ ಫುಲ್ ಕಲೆಕ್ಷನ್ ಮಾಡಿದೆ. ಸುಮಾರು ರು.2 ಕೋಟಿ ವೆಚ್ಚ ಮಾಡಿ ಕಪ್ಪು ಬಿಳುಪಿನ ಚಿತ್ರವನ್ನು ವರ್ಣರಂಜಿತವಾಗಿಸಿದ್ದರು ಕೆಸಿಎನ್ ಮೋಹನ್.
ಇದೀಗ ಮೇರುನಟ ಡಾ.ರಾಜ್ ಕುಮಾರ್ ಅವರು ಮತ್ತೊಮ್ಮೆ ಬಾಕ್ಸ್ ಆಫೀಸ್ ಕಿಂಗ್ ಎಂಬುದು ಸಾಬೀತಾಗಿದೆ. ಅಣ್ಣಾವ್ರ ಚಿತ್ರವನ್ನು ಅಭಿಮಾನಿಗಳು ಮುಗಿಬಿದ್ದು ನೋಡುತ್ತಿರುವುದೇ ಇದಕ್ಕೆ ಸಾಕ್ಷಿ.
ನಲವತ್ತಮೂರು ವರ್ಷದ ಹಳೆಯ ಚಿತ್ರವಾದರೂ ಅಣ್ಣಾವ್ರ ಅಭಿನಯವನ್ನು ಬೆಳ್ಳಿಪರದೆಯಲ್ಲಿ ನೋಡುವುದೇ ಒಂದು ವರ್ಣನಾತೀತ ಅನುಭವ. ಕೋಟ್ಯಾಂತರ ರುಪಾಯಿ ಬಂಡವಾಳ ಹೂಡಿದ ಚಿತ್ರಗಳು ಇಂದು ಬಾಕ್ಸ್ ಆಫೀಸಲ್ಲಿ ಮಕಾಡೆ ಮಲಗುತ್ತಿರಬೇಕಾದರೆ 'ಕಸ್ತೂರಿ ನಿವಾಸ' ಚಿತ್ರ ಯಾರ ಊಹೆಗೂ ನಿಲುಕದಂತೆ ಮುನ್ನುಗ್ಗುತ್ತಿದೆ.

ಆಗಿನ ಕಾಲದಲ್ಲಿ ಟ್ವಿಟ್ಟರ್, ಫೇಸ್ ಬುಕ್, ವಾಟ್ಸಾಫ್ ನಂತಹ ಸಾಮಾಜಿಕ ಜಾಲತಾಣಗಳಿರಲಿಲ್ಲ. ಈಗ ವರ್ಣರಂಜಿತ ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಚಾರ ಸಿಕ್ಕಿದ್ದು ಒಂದು ರೀತಿಯಲ್ಲಿ ಚಿತ್ರಕ್ಕೆ ಲಾಭವೇ ಆಯಿತು ಎನ್ನುತ್ತಾರೆ ಕೆಸಿಎನ್ ಮೋಹನ್.
ಕಸ್ತೂರಿ ನಿವಾಸ ಬಿಡುಗಡೆಯಾದ ಮೂರು ದಿನಗಳಲ್ಲಿ ರು.1.5 ಕೋಟಿ ಕಲೆಕ್ಷನ್ ಮಾಡಿದೆ. ನವೆಂಬರ್ 14ರಿಂದ ಚಿತ್ರದ ಥಿಯೇಟರ್ ಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಮೋಹನ್ ಅವರು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಚಿತ್ರದ ಗಳಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ವರನಟ ಡಾ.ರಾಜ್ ಕುಮಾರ್ ಅವರ ಮನೋಜ್ಞ ಅಭಿನಯಕ್ಕೆ ಮನಸೋಲದವರಿಲ್ಲ. ಬೆಂಕಿಪೊಟ್ಟಣ (ಡವ್ ಬ್ರ್ಯಾಂಡ್ ಮ್ಯಾಚ್ ಬಾಕ್ಸ್) ಉದ್ಯಮಿಯ ವಿಫಲ ಪ್ರೇಮಕಥೆಯೇ ಈ ಚಿತ್ರದ ಕಥಾವಸ್ತು. ಈ ಕಥೆಗೆ ತಮಿಳಿನ ಶಿವಾಜಿ ಗಣೇಶನ್ ನಾಯಕ ಎಂದುಕೊಳ್ಳಲಾಗಿತ್ತು. ಆದರೆ ಅವರು ಆ ಕಥೆಯನ್ನು ಒಪ್ಪಲಿಲ್ಲ. ಇದೇ ಕಥೆಯನ್ನು ರಾಜ್ ಕುಮಾರ್ ಅವರು ಒಪ್ಪಿಕೊಂಡು ಪಾತ್ರಕ್ಕೆ ಜೀವತುಂಬಿದರು.
ಮೂಲ ಚಿತ್ರದ ನಿರ್ಮಾಪಕರಾದ ಕೆಸಿಎನ್ ಗೌಡರ ಪುತ್ರ ಕೆಸಿ ಮೋಹನ್ ಈ ಚಿತ್ರವನ್ನು ಬಣ್ಣದಲ್ಲಿ ಬಿಡುಗಡೆ ಮಾಡಿದ್ದಾರೆ. "ಒರಿಜಿನಲ್ ಚಿತ್ರದ ಕಾರ್ಬನ್ ಕಾಪಿ ಇದಲ್ಲ. ಹಾಡುಗಳು ಚಿತ್ರದ ಪ್ರಮುಖ ಹೈಲೈಟ್. ಹಾಡುಗಳು ಹಾಗೂ ಸಂಭಾಷಣೆಗೆ ಡಿಟಿಎಸ್ ಅಳವಡಿಸಲಾಗಿದ್ದು ಪ್ರೇಕ್ಷಕರಿಗೆ ಸಮೃದ್ಧ ಅನುಭವ ನೀಡುತ್ತಿದೆ" ಎನ್ನುತ್ತಾರೆ ಮೋಹನ್. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











