''ಪ್ರಶಸ್ತಿಗೆ ನಾನು 25 ಸಿನಿಮಾ ಮಾಡಬೇಕಾಯ್ತು, ದುನಿಯಾ ವಿಜಯ್‌ಗೆ ಫಸ್ಟ್ ಸಿನಿಮಾದಲ್ಲೇ ಸಿಕ್ತು'' - ಶಿವಣ್ಣ..!
ಅದ್ಯಾವ ಘಳಿಗೆಯಲ್ಲಿ ಕರಿಚಿರತೆ ದುನಿಯಾ ವಿಜಯ್ ''ಭೀಮ'' ಚಿತ್ರವನ್ನು ಘೋಷಿಸಿದರೋ, ಆವತ್ತಿನಿಂದಲೇ ಈ ಸಿನಿಮಾದ ಬಗ್ಗೆ ಗಾಂಧಿನಗರದಲ್ಲಿ ಮಾತ್ರ ಅಲ್ಲ ಚಿತ್ರ ಪ್ರೇಕ್ಷಕರಲ್ಲಿ ಕೂಡ ಕುತೂಹಲ ಗರಿಗೇದರಿತ್ತು. ''ಸಲಗ'' ಮೂಲಕ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದ ದುನಿಯಾ ವಿಜಿ ಅಲಿಯಾಸ್ ವಿಜಯ್ ಕುಮಾರ್, ಈ ಬಾರಿ ಅದ್ಯಾವ ಮ್ಯಾಜಿಕ್ ಮಾಡ್ತಾರೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡಲು ಶುರುವಾಯಿತು.
ಇದಕ್ಕೆ ಪೂರಕವಾಗಿ ಒಂದಾದ ಮೇಲೊಂದರಂತೆ ಹಾಡುಗಳೆಲ್ಲ ಸದ್ದು ಮಾಡಲು ಶುರು ಮಾಡಿದವು. ಚಿತ್ರದ ಮೇಲಿನ ನಿರೀಕ್ಷೆಯನ್ನೂ ಹೆಚ್ಚಿಸಿದವು. ಇನ್ನೇನು.. ಕೆಲವೇ ದಿನ ಸಲಗ ವಿಜಯ್ ಕುಮಾರ್ ಬದುಕಿನ ಮತ್ತೊಂದು ಪರೀಕ್ಷೆಯ ಫಲಿತಾಂಶ ಹೊರ ಬರಲಿದೆಯಾದರೂ, ಭೀಮನ ಬೆನ್ನನ್ನೂ ಕನ್ನಡ ಚಿತ್ರರಂಗದ ಸೆಂಚ್ಯೂರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ತಟ್ಟಿದ್ದಾರೆ. ವಿಜಯ್ ಅವರ ಶ್ರಮವನ್ನು ಕೊಂಡಾಡಿದ್ದಾರೆ. ದುನಿಯಾ ಚಿತ್ರವನ್ನೂ ನೆನಪು ಮಾಡಿಕೊಂಡಿದ್ದಾರೆ.

ಹೌದು, ಭೀಮ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶಿವಣ್ಣ, ವಿಜಯ್ ಮತ್ತು ಅವರ ನಡುವೆ ಇರುವ ಸಂಬಂಧದ ಕಥೆ ಹಂಚಿಕೊಂಡಿದ್ದಾರೆ. ನಮ್ಮ ಈ ಒಡನಾಟಕ್ಕೆ 20-25 ವರ್ಷವಾಯಿತು ಎಂದ ಶಿವಣ್ಣ ನಾನು ನಟಿಸಿದ್ದ ''ರಾಕ್ಷಸ'' ಚಿತ್ರದಲ್ಲಿ ವಿಜಯ್ ನಟಿಸಿದ್ದರು ಎಂದಿದ್ಧಾರೆ. ಇನ್ನೂ ತುಂಬಾನೇ ಚಿಕ್ಕ ಪಾತ್ರ ಬೇಡ ಅಂದರೂ ''ಜೋಗಿ'' ಸಿನಿಮಾಗೆ ಬಂದು ವಿಜಿ ನಟಿಸಿ ಹೋಗಿದ್ದರು ಎಂದ ಶಿವರಾಜ್ ಕುಮಾರ್, ಆ ನಂತರ ''ದುನಿಯಾ'' ಸಿನಿಮಾದಿಂದ ಹೀರೋ ಆದರು. ಆ ಚಿತ್ರದ ಮುಹೂರ್ತ ಸಮಾರಂಭಕ್ಕೆ ನನಗೆ ಆಮಂತ್ರಣ ಪತ್ರಿಕೆಯನ್ನೂ ಕೊಟ್ಟಿದ್ದರು ಎಂದು ಆ ದಿನಗಳನ್ನೂ ಮೆಲುಕು ಹಾಕಿದ್ದಾರೆ ಶಿವಣ್ಣ.
ಇನ್ನೂ '' ದುನಿಯಾ'' ಚಿತ್ರದ ಮುಹೂರ್ತ ನಡೆಯುವ ಕೆಲ ದಿನಗಳ ಹಿಂದೆಯಷ್ಟೇ ಅಪ್ಪಾಜಿ ತೀರಿಕೊಂಡಿದ್ದರು. ಹೀಗಾಗಿ ಮುಹೂರ್ತ ಸಮಾರಂಭಕ್ಕೆ ನಾನು ಹೋಗಲು ಆಗಿರಲಿಲ್ಲ ಎಂದಿರುವ ಶಿವಣ್ಣ ಈ ವಿಚಾರವನ್ನೂ ನಾನು ಅವರಿಗೂ ಕೂಡ ಹೇಳಿದ್ದೆ ಎಂದಿದ್ದಾರೆ. ಕೊನೆಗೆ ''ದುನಿಯಾ'' ತೆರೆ ಕಂಡ ನಂತರ ಪಿವಿಆರ್‌ಗೆ ಹೋಗಿ ಸಿನಿಮಾ ನೋಡಿದ್ದೇ ಎಂದು ಆ ''ದುನಿಯಾ''ವನ್ನೂ ನೆನಪು ಮಾಡಿಕೊಂಡಿದ್ದಾರೆ ಶಿವಣ್ಣ.

ಮುಂದುವರೆದು ಮಾತನಾಡಿದ ಡಾ.ಶಿವರಾಜ್ ಕುಮಾರ್, ''ದುನಿಯಾ'' ಚಿತ್ರದಲ್ಲಿನ ಅಭಿನಯಕ್ಕೆ ವಿಜಯ್ ಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಮೊದಲ ಚಿತ್ರದಲ್ಲಿಯೇ ರಾಜ್ಯ ಪ್ರಶಸ್ತಿಯನ್ನು ಅವರು ಪಡೆದುಕೊಂಡರು. ಆದರೆ ನನಗೆ ಮೊದಲ ಪ್ರಶಸ್ತಿ ''ಓಂ'' ಸಿನಿಮಾ ಬರಬೇಕಾಯಿತು. ಮೊದಲ ಪ್ರಶಸ್ತಿ ಪಡೆಯಲು 25 ಸಿನಿಮಾ ಮಾಡಬೇಕಾಯಿತು ಎಂದು ''ಭೀಮ'' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದಾರೆ.
ಇನ್ನೂ.. ''ಸಲಗ'' ಚಿತ್ರದ ಕಾರ್ಯಕ್ರಮಕ್ಕೆ ನಾನು ಮತ್ತು ಅಪ್ಪು ಇಬ್ಬರು ಬಂದಿದ್ದೇವು ಎಂದ ಶಿವಣ್ಣ, ಈಗ ಅವನು ನಮ್ಮ ಮಧ್ಯೆ ಇಲ್ಲದಿರಬಹುದು. ಆದರೆ ಈಗಲೂ ಅವನು ಬಂದಿದ್ದಾನೆ. ನನ್ನ ಜೊತೆಗೆ ಅವನೂ ಇದ್ದಾನೆ. ಅಪ್ಪು ಎಲ್ಲೇ ಇದ್ದರೂ ಅವನ ಆಶೀರ್ವಾದ ಈ ತಂಡದ ಮೇಲೆ ಇರಲಿದೆ. ಅಪ್ಪು ಇಲ್ಲ ಎಂದುಕೊಳ್ಳುವುದು ಬೇಡ. ಇಲ್ಲೇ ಎಲ್ಲೋ ಹೋಗಿದ್ದಾನೆ, ವಾಪಸ್ ಬರ್ತಾನೆ ಎಂದುಕೊಳ್ಳೋಣ. ವಿಜಯ್ ಕೂಡ ನನ್ನ ಬ್ರದರ್ ಇದ್ದಂತೆ. ಭೀಮ ಸಿನಿಮಾಗೆ ಯಶಸ್ಸು ಸಿಗಲಿ" ಎಂದು ಹೇಳಿದ್ದಾರೆ. ''ಭೀಮ'' ಯಶಸ್ವಿಯಾಗಲಿ ಎಂದು ವಿಜಯ್ ಕುಮಾರ್‌ಗೆ ಹಾರೈಸಿದ್ದಾರೆ. ಅಂದ್ಹಾಗೇ ''ಭೀಮ'' ಈ ಆಗಸ್ಟ್ 09ರಂದು ಬಿಡುಗಡೆಯಾಗಲಿದೆ.


Click it and Unblock the Notifications











