ಅಮೆರಿಕಾದಿಂದ ಬೆಂಗಳೂರಿಗೆ ಬಂದಿಳಿದ ಶಿವಣ್ಣ, ಮನೆಯ ಬಳಿ ಹಬ್ಬದ ವಾತಾವರಣ..!
ಡಾ. ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದ ಅಪರೂಪದ ಆಕ್ಟರ್. ಕ್ಲಾಸ್- ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ ಎನ್ನುವಂಥಾ ಮನಸ್ಥಿತಿ ಇವರದ್ದು. ಬಹುಶಃ ಡಾ.ರಾಜ್ ಕುಮಾರ್ ಅವರನ್ನು ಹೊರತು ಪಡಿಸಿದರೆ ವೆರೈಟಿ ಪಾತ್ರಗಳನ್ನು ಮಾಡಿದ, ತಮ್ಮನ್ನು ತಾವು ಹೊಸ ಪ್ರಯೋಗಗಳಿಗೆ ಒಗ್ಗಿಕೊಂಡ ಮತ್ತೋರ್ವ ಸ್ಟಾರ್ ಅಂದರೆ ಅದು ಶಿವಣ್ಣ ಮಾತ್ರ.
ಇಂಥಾ ಶಿವಣ್ಣ ಈಗ ಅಮೆರಿಕಾದಲ್ಲಿ ಚಿಕಿತ್ಸೆಯನ್ನು ಪಡೆದು ಮರಳಿ ತಾಯ್ನಾಡಿಗೆ ಬಂದಿದ್ದಾರೆ. ಅಮೆರಿಕಾದಿಂದ ದುಬೈಗೆ ಬಂದಿಳಿದ ಶಿವಣ್ಣ ಅಲ್ಲಿಂದ ಕನೆಕ್ಟಡ್ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ಇಂದು ಬೆಳಗ್ಗೆ 09ರ ಆಸು ಪಾಸಿನಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಶಿವಣ್ಣ ಅವರನ್ನು ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಸೇರಿ ಚಿತ್ರರಂಗದ ಅನೇಕರು ಸ್ವಾಗತಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಚಿತ್ರರಂಗದವರಿಂದ ಸಿಕ್ಕ ಪ್ರೀತಿಗೆ ಮತ್ತು ಅಭಿಮಾನಿಗಳ ಅಭಿಮಾನದ ಹರ್ಷೋದ್ಘಾರಕ್ಕೆ ಪುಳಕಿತಗೊಂಡ ಶಿವಣ್ಣ, ತಮ್ಮನ್ನು ಸ್ವಾಗತಿಸಲು ಬಂದಿದ್ದವರನ್ನು ತಬ್ಬಿಕೊಂಡಿದ್ದಾರೆ. ಅಭಿಮಾನಿಗಳತ್ತ ಕೈ ಬೀಸಿ ಮುಗುಳು ನಗೆಯೊಂದಿಗೆ ಕಾರಿನಲ್ಲಿ ತಮ್ಮ ಮನೆಯತ್ತ ತೆರಳಿದ್ದಾರೆ.
ಇನ್ನು ಶಿವಣ್ಣ ಅಮೆರಿಕಾಗೆ ತೆರಳುವ ಸಮಯದಲ್ಲಿ ಆತಂಕಗೊಂಡಿದ್ದ ಅಭಿಮಾನಿಗಳು ಸದ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇಂದು ಬೆಂಗಳೂರಿಗೆ ಬಂದಿಳಿದ ಶಿವಣ್ಣ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ವಿಮಾನ ನಿಲ್ದಾಣದ ಬಳಿಯ ಟೋಲ್ ಗೇಟ್ ಕಡೆ ಜಮಾಯಿಸಿದ್ದ ಅಭಿಮಾನಿಗಳು ಶಿವಣ್ಣ ಅವರಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. ಸೇಬಿನ ಹಾರ ಹಾಕಿ ಸಂಭ್ರಮಿಸಿದ್ದಾರೆ. ಅಭಿಮಾನಿಗಳ ಈ ಸ್ವಾಗತಕ್ಕೆ ಧನ್ಯವಾದ ಹೇಳಿದ ಶಿವಣ್ಣ ಆ ನಂತರ ಮನೆಯತ್ತ ಪ್ರಯಾಣ ಮಾಡಿದ್ದಾರೆ.
ಇನ್ನೂ ಮನೆಯ ಬಳಿ ಶಿವಣ್ಣ ಅವರನ್ನು ಸ್ವಾಗತಿಸಲು 500 ಕೆಜಿ ಹೂಗಳನ್ನು ತಂದಿರುವ ದೊಡ್ಮನೆಯ ಅಭಿಮಾನಿಗಳು ಮೂರು ಜೆಸಿಬಿಗಳ ಮೂಲಕ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರ ಮೇಲೆ ಹೂ ಮಳೆ ಸುರಿಸಲಿದ್ದಾರೆ. ಮನೆಯ ಎದುದು ಶಿವಣ್ಣ ಮತ್ತು ಗೀತಕ್ಕ ಅವರ ದೊಡ್ಡ ಕಟೌಟ್ ನಿಲ್ಲಿಸಿದ್ದಾರೆ.


Click it and Unblock the Notifications











