ಶಿವಣ್ಣ ಆರೋಗ್ಯಕ್ಕೆ ಏನಾಯ್ತು, ಚಿಕಿತ್ಸೆ ಪಡೆಯುತ್ತಿರುವುದೇಕೆ ಕರುನಾಡ ಚಕ್ರವರ್ತಿ...?
ಡಾ. ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದ ಅಪರೂಪದ ಆಕ್ಟರ್. ಕ್ಲಾಸ್- ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ ಎನ್ನುವಂಥಾ ಮನಸ್ಥಿತಿ ಇವರದ್ದು. ಬಹುಶಃ ಡಾ.ರಾಜ್ ಕುಮಾರ್ ಅವರನ್ನು ಹೊರತು ಪಡಿಸಿದರೆ ವೆರೈಟಿ ಪಾತ್ರಗಳನ್ನು ಮಾಡಿದ, ತಮ್ಮನ್ನು ತಾವು ಹೊಸ ಪ್ರಯೋಗಗಳಿಗೆ ಒಗ್ಗಿಕೊಂಡ ಮತ್ತೋರ್ವ ಸ್ಟಾರ್ ಅಂದರೆ ಅದು ಶಿವಣ್ಣ ಮಾತ್ರ.
ಇಂಥಾ ಡಾ.ಶಿವರಾಜ್ ಕುಮಾರ್ ಅವರಿಗೆ ಈಗ ವಯಸ್ಸು ಅರವತ್ತೇರಡು. ಆದರೆ ಹುಮ್ಮಸ್ಸು ಹದಿಹರೆಯದ ಯುವಕರದ್ದು. ಆದರೆ, ಅದ್ಯಾರ ಮಸಣಿ ಕಣ್ಣು ಬಿತ್ತೋ ಗೊತ್ತಿಲ್ಲ. ಭೈರತಿ ರಣಗಲ್ ಚಿತ್ರದ ಪ್ರಚಾರದಲ್ಲಿ ಈಗ ಬ್ಯುಸಿಯಾಗಿರುವ ಶಿವಣ್ಣ ಕಳೆದ ಕೆಲ ದಿನಗಳಿಂದ ಮಂಕಾಗಿದ್ದರು. ಮಾಧ್ಯಮದವರನ್ನು ಭೇಟಿಯಾಗಬೇಕೆಂದರೂ ಮನೆಗೆ ಕರೆಸಿಕೊಳ್ಳುತ್ತಿದ್ದರು.

ಇನ್ನೂ ಸಾಮಾನ್ಯವಾಗಿ ಶಿವಣ್ಣ ಆ ಚಿತ್ರದ ಟ್ರೇಲರ್ ಬಿಡುಗಡೆ ಈ ಚಿತ್ರದ ಆಡಿಯೋ ಬಿಡುಗಡೆ ಎಂದೆಲ್ಲಾ ಓಡಾಡಿಕೊಂಡು ಇದ್ದವರು. ಆದರೆ ತಿಂಗಳಿಂದೀಚೆಗೆ ಶಿವಣ್ಣ ಹೆಚ್ಚಾಗಿ ಹೊರಗಡೆ ಕೂಡ ಕಾಣಿಸಿಕೊಂಡಿಲ್ಲ. ಸಹಜವಾಗಿ ಯಾಕೆ ಹೀಗೆ ಎಂಬ ಪ್ರಶ್ನೆ ಎಲ್ಲರಲ್ಲಿತ್ತು. ಶಿವಣ್ಣ ಅವರ ಆರೋಗ್ಯದ ಕುರಿತು ಕೂಡ ಅವರ ಅಭಿಮಾನಿಗಳಲ್ಲಿ ಚಿಂತೆ ಶುರುವಾಗಿತ್ತು. ಗಾಂಧಿನಗರದಲ್ಲಿ ಕೂಡ ಈ ವಿಚಾರ ಚರ್ಚೆಯಾಗುತ್ತಿತ್ತು. ಈ ಪ್ರಶ್ನೆಗಳಿಗೆಲ್ಲ ಶಿವಣ್ಣ ಖುದ್ದು ಈಗ ಉತ್ತರ ನೀಡಿದ್ದಾರೆ.
ಹೌದು, 'ರಿಪಬ್ಲಿಕ್ ಕನ್ನಡ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶಿವಣ್ಣ, ಕಳೆದ ಮೂರು ನಾಲ್ಕು ತಿಂಗಳಿಂದ ಸ್ವಲ್ಪ ಆರೋಗ್ಯ ಕೈ ಕೊಟ್ಟಿದೆ ಎಂದು ಹೇಳಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಅವರಿವರು ಬಂದು ಕೇಳುವ ಮೊದಲು ಈ ವಿಚಾರವನ್ನು ನಾನೇ ಹೇಳೋಣ ಎಂದು ಹೇಳುತ್ತಿದ್ದೇನೆ ಎಂದಿರುವ ಶಿವಣ್ಣ ದೈನಂದಿನ ಚಟುವಟಿಕೆಗಳಿಗೆಲ್ಲ ತೊಂದರೆ ಇಲ್ಲ ಎಂದಿದ್ದಾರೆ. ಚಿತ್ರದ ಚಿತ್ರೀಕರಣಗಳು ಅದರ ಪಾಡಿಗೆ ನಡೆಯುತ್ತಿವೆ ಎಂದು ಕೂಡ ಹೇಳಿದ್ದಾರೆ.
ಮುಂದುವರೆದು ಆರೋಗ್ಯ ಸಮಸ್ಯೆ ಇದ್ದರೂ ಎನರ್ಜಿ ಇದ್ದೇ ಇರುತ್ತದೆ. ಇದಕ್ಕೆ ಎಲ್ಲರ ಸಪೋರ್ಟ್ ಕೂಡ ಇದೆ. ಗೀತಾ, ಮಕ್ಕಳು, ಗೆಳೆಯರು ಜೊತೆಗೆ ಕನ್ನಡ ಚಿತ್ರರಂಗ ಜೊತೆಗಿರುವುದರಿಂದ ಎನರ್ಜಿ ಬರುತ್ತದೆ. ಆದರೆ ಸ್ವಲ್ಪ ಮಟ್ಟಿಗೆ ಹುಷಾರಿಲ್ಲ. ಚಿಕಿತ್ಸೆ ನಡೆಯುತ್ತಿದೆ. ಜೊತೆಗೆ ಕೆಲಸ ಕೂಡ ಮಾಡುತ್ತಿದ್ದೇನೆ ಎಂದು ಕೂಡ ಶಿವಣ್ಣ ಹೇಳಿದ್ದಾರೆ. ಸಹಜವಾಗಿ ಶಿವಣ್ಣ ಅವರ ಈ ಮಾತುಗಳನ್ನು ಕೇಳಿ ಅವರ ಅಭಿಮಾನಿಗಳು ಚೂರು ಆತಂಕಕ್ಕೀಡಾಗಿದ್ದಾರೆ. ನಿಮಗೆ ಏನು ಆಗಲ್ಲ ದೊರೆ ಎನ್ನುತ್ತಿದ್ದಾರೆ. ಶಿವಣ್ಣ ಮೊದಲಿನಂತೆ ಪುಟಿದೇಳಲಿ ಎಂದು ಹರಸಿ ಹಾರೈಸುತ್ತಿದ್ದಾರೆ.
ಅಂದ್ಹಾಗೇ ಕಳೆದ ಕೆಲ ದಿನಗಳಿಂದ ಶಿವಣ್ಣ ಆರೋಗ್ಯ ಕೈ ಕೊಟ್ಟಿದೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಆ ಮಾತು ಈಗ ನಿಜವಾಗಿದೆ. ಇನ್ನೂ ತಮ್ಮ ಆರೋಗ್ಯಕ್ಕೆ ಏನಾಗಿದೆ ಎನ್ನುವುದನ್ನು ಶಿವಣ್ಣ ಈ ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳದಿದ್ದರೂ ಸದ್ಯ ಭೈರತಿ ರಣಗಲ್ ಚಿತ್ರದ ಪ್ರಚಾರವನ್ನು ಮಾಡಿ ಚಿತ್ರದ ಬಿಡುಗಡೆಯ ನಂತರ ಶಿವಣ್ಣ ಕೆಲ ದಿನಗಳವರೆಗೆ ವಿಶ್ರಾಂತಿ ಪಡೆಯಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಚಿಕಿತ್ಸೆ ಪಡೆಯಲು ಅಮೆರಿಕಾಗೆ ತೆರಳುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಮಾನ್ಯತಾ ಟೆಕ್‌ಪಾರ್ಕ್ ಸುತ್ತ ಮುತ್ತ ಹರಿದಾಡುತ್ತಿದೆ. ಈ ಹಿನ್ನೆಲೆ ತಮ್ಮಿಂದ ನಿರ್ಮಾಪಕರಿಗೆ ತೊಂದರೆಯಾಗಬಾರದೆಂದು ತಮಗಾಗಿ ಕಾಯುತ್ತಿರುವ ನಿರ್ಮಾಪಕರನ್ನು ಮನೆಗೆ ಕರೆಸಿ ಶಿವಣ್ಣ ಅಡ್ವಾನ್ಸ್ ಹಣವನ್ನು ಕೂಡ ವಾಪಸು ಮಾಡಿದ್ದಾರೆ ಎಂಬ ಮಾತು ಕೂಡ ಇದೇ ಸಮಯದಲ್ಲಿ ಕೇಳಿ ಬರುತ್ತಿದೆ. ಚಿಕಿತ್ಸೆ ಪಡೆದು ಬಂದ ನಂತರವಷ್ಟೇ ಹೊಸ ಸಿನಿಮಾಗಳ ಕಡೆ ಶಿವಣ್ಣ ಗಮನ ವಹಿಸಲಿದ್ದಾರೆ, ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುವುದರ ಕುರಿತು ತೀರ್ಮಾನ ಮಾಡಲಿದ್ದಾರೆ ಎನ್ನುವ ಸುದ್ದಿ ಕೂಡ ಚಾಲ್ತಿಯಲ್ಲಿದೆ.
ಏನೇ ಇರಲಿ ಸದ್ಯಕ್ಕೆ ಈ ಅನಾರೋಗ್ಯದ ಸಮಸ್ಯೆಗಳನ್ನೆಲ್ಲ ಶಿವಣ್ಣ ಗೆದ್ದು ಎಂದಿನಂತೆ ಗೆಲುವಾಗಿ ಬಂದು ನಿಲ್ಲಲಿ, ಹೀಗೆ ಸದಾ ಕಾಲ ತಮ್ಮ ಚಿತ್ರಗಳ ಮೂಲಕ ಎಲ್ಲರನ್ನು ರಂಜಿಸಲಿ ಅನ್ನುವುದೇ ಎಲ್ಲರ ಆಶಯ ಮತ್ತು ಪ್ರಾರ್ಥನೆ. Get Well Soon ಶಿವಣ್ಣ...!


Click it and Unblock the Notifications











