ಹುಬ್ಬಳ್ಳಿ -ಧಾರವಾಡದಲ್ಲಿ ಭೈರತಿ ರಣಗಲ್ ಮೆರವಣಿಗೆ, ಬದುಕು ಬಹಳ ಮುಖ್ಯ-ವಿದ್ಯಾರ್ಥಿಗಳಿಗೆ ಶಿವಣ್ಣ ಕಿವಿಮಾತು..!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಅಪರೂಪದ ಸ್ಟಾರ್. ಕ್ಲಾಸ್ - ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ ಅನ್ನುವಂಥಾ ಮನಸ್ಥಿತಿ ಅವರದ್ದು. ಬಹುಶಃ ಡಾ. ರಾಜ್‌ಕುಮಾರ್ ಅವರನ್ನು ಬಿಟ್ಟರೆ ಶಿವಣ್ಣನಷ್ಟು ವೆರೈಟಿ ಪಾತ್ರಗಳನ್ನು ಮಾಡಿದ, ಹೊಸಾ ಪ್ರಯೋಗಗಳಿಗೂ ಒಗ್ಗಿಕೊಂಡ ಮತ್ತೋರ್ವ ನಟ ಶಿವರಾಜ್ ಕುಮಾರ್.
ಇಂಥಾ ಶಿವರಾಜ್ ಕುಮಾರ್ ಅವರ ಮುಕುಟಕ್ಕೆ ಭೈರತಿ ರಣಗಲ್ ಮತ್ತೊಂದು ಗರಿಯಂತೆ ಸೇರಿಕೊಂಡಿದೆ. ಕಂಗುವ ಎದುರು ಬಿಡುಗಡೆಗೊಂಡ ಭೈರತಿ ರಣಗಲ್ ವಿಜಯದ ಪತಾಕೆ ಹಾರಿಸಿದೆ. ಅನಾರೋಗ್ಯದ ನಡುವೆ ಈ ಗೆಲುವು ಸಹಜವಾಗಿ ಶಿವಣ್ಣ ಅವರ ಮೊಗದಲ್ಲಿನ ಮಂದಹಾಸವನ್ನು ಹೆಚ್ಚಿಸಿದೆ. ಹೀಗಾಗಿ ಮೊದಲೇ ಉತ್ಸಾಹದ ಚಿಲುಮೆಯಂತೆ ಇರುವ ಶಿವಣ್ಣ ಇನ್ನಷ್ಟು ಹುರುಪಿನಲ್ಲಿ ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಿದ್ದಾರೆ. ಭೈರತಿ ರಣಗಲ್ ನ ಹರಸಿ ಹಾರೈಸಿದ ಕನ್ನಡಿಗರಿಗೆ ಧನ್ಯವಾದ ಹೇಳುತ್ತಿದ್ದಾರೆ. ದೊಡ್ಡವರು-ಚಿಕ್ಕವರು ಎನ್ನದೇ ಎಲ್ಲರ ಜೊತೆ ಬೆರೆತು ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಿದ್ಧಾರೆ. ಇದರ ನಡುವೆ ಈಗ ಶಿವಣ್ಣ ಧಾರವಾಡದ ಪ್ರತಿಷ್ಠಿತ 'ಜೆಎಸ್‌ಎಸ್' ಕಾಲೇಜ್ ಕ್ರೀಡಾಂಗಣದಲ್ಲಿ ಮಾದಕ ವ್ಯಸನಗಳ ಕುರಿತ ಯುವ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ತಮ್ಮನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ನೆರೆದ ವಿದ್ಯಾರ್ಥಿಗಳನ್ನು ಕಂಡು ಅಚ್ಚರಿಗೊಳಗಾಗಿದ್ದಾರೆ. ಕಿವಿ ಮಾತನ್ನು ಹೇಳಿದ್ದಾರೆ.

ವಯಸ್ಸಿನ ಉತ್ಸಾಹ ಎಲ್ಲ ಮಾಡಲು ಹಚ್ಚುತ್ತದೆ ಆದರೆ ಬದುಕು ಬಹಳ ಮುಖ್ಯ ಎಂದ ಶಿವಣ್ಣ ಯುವಶಕ್ತಿ ಯಾವುದೇ ಕಾರಣಕ್ಕೂ ಡ್ರಗ್ಸ್ ಸೇರಿದಂತೆ ಯಾವ ಮಾರಕ-ಮಾದಕ ವ್ಯಸನಗಳಿಗೆ ಬಲಿಯಾಗಬಾರದೆಂದು ಹೇಳಿದ್ದಾರೆ. ಉತ್ತಮ ಹವ್ಯಾಸಗಳತ್ತ ಮನಸ್ಸನ್ನು ಕೇಂದ್ರಿಕರಿಸಬೇಕು ಎಂದು ಹೇಳಿದ್ದಾರೆ.
ಇನ್ನೂ ಇದೇ ವೇಳೆ ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ ವೇದಿಕೆ ಮೇಲೆ ತಮ್ಮ ಟಗರು ಚಿತ್ರದ ಹಾಡಿಗೆ ಹೆಜ್ಜೆಯನ್ನು ಹಾಕಿದ ಶಿವಣ್ಣ ಕನ್ನಡದ ಹಾಡುಗಳನ್ನು ಕೂಡ ಹಾಡಿದ್ದಾರೆ. ವಿದ್ಯಾರ್ಥಿಗಳನ್ನು ರಂಜಿಸಿದ್ಧಾರೆ. ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸೆಲ್ಫಿ ಕ್ಲಿಕಿಸಿಕೊಂಡಿದ್ಧಾರೆ.
ಇನ್ನೂ ಇದಕ್ಕೂ ಮೊದಲು ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಆವರಣದಲ್ಲಿ ಕೂಡ ಮಾದಕ ವ್ಯಸನದ ಕುರಿತು ಜಾಗೃತಿಯನ್ನು ಮೂಡಿಸಿದ ಶಿವಣ್ಣ ಜನ್ಮ ದೇವರು ನೀಡುವ ಅತ್ಯಮೂಲ್ಯವಾದ ಉಡುಗೊರೆ ಅದನ್ನು ಜವಾಬ್ಧಾರಿಯಿಂದ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ನಶೆಯನ್ನು ಯಾವುದೇ ವಸ್ತುವಿನಲ್ಲಿ ಹುಡುಕುವ ಬದಲು ಗೆಳೆತನ, ಸಂಬಂಧ, ಓದು, ಕ್ರೀಡೆಯಲ್ಲಿ ಹುಡುಕಬೇಕು ಎಂದಿದ್ಧಾರೆ. ಪ್ರಾಮಾಣಿಕವಾಗಿ ಬದುಕುವ ರೀತಿಯಲ್ಲಿ ಕೂಡ ನಶೆ ಇದೆ ಎಂದ ಶಿವಣ್ಣ ಶಬ್ದವೇದಿ ಚಿತ್ರದಲ್ಲಿ ಅಪ್ಪಾಜಿ ಮಾದಕ ಪದಾರ್ಥದ ವ್ಯಸನದ ವಿರುದ್ಧ ಹೋರಾಡಿದ ಕಥಾನಕ ಇತ್ತು. ಈ ಬಗ್ಗೆ ಅರಿವು ಮೂಡಿಸುವಲ್ಲಿ ಸಿನಿಮಾ ರಂಗದ ಮೇಲೆ ಹೆಚ್ಚಿನ ಜವಾಬ್ಧಾರಿ ಇದೆ ಎಂದು ಹೇಳಿದ್ದಾರೆ.
ಇನ್ನುಳಿದಂತೆ ಸದ್ಯ ಭೈರತಿ ರಣಗಲ್ ಕರುನಾಡಿನೆಲ್ಲೆಡೆ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ.ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆಯಲ್ಲಿ ಕೂಡ ಏರಿಕೆಯಾಗುತ್ತಿದೆ. ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಇನ್ನೂ ಈ ಶುಕ್ರವಾರ ಭೈರತಿ ರಣಗಲ್ ತೆಲುಗು ಮತ್ತು ತಮಿಳಿನಲ್ಲಿ ಕೂಡ ಬಿಡುಗಡೆಯಾಗುತ್ತಿದೆ.ತಮಿಳಿನಲ್ಲಿ ತಮ್ಮ ಪಾತ್ರಕ್ಕೆ ಖುದ್ದು ಭೈರತಿ ರಣಗಲ್ ಅಲಿಯಾಸ್ ಶಿವಣ್ಣ ಧ್ವನಿಯನ್ನು ನೀಡಿರುವುದು ವಿಶೇಷವಾದರೆ ಚಂದ್ರಮುಖಿ, ಮೇಯಳಗನ್, ಅಮರನ್, ಹೀಗೆ ಹತ್ತು ಹಲವು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ತಮಿಳುನಾಡಿನ ಮೂಲೆ ಮೂಲೆಗೆ ತಲುಪಿಸಿದ ಎಪಿ ಇಂಟರ್‌ನ್ಯಾಷನಲ್ ಸಂಸ್ಥೆ ಭೈರತಿ ರಣಗಲ್ ಚಿತ್ರವನ್ನು ತಮಿಳು ನಾಡಿನಲ್ಲಿ ಬಿಡುಗಡೆ ಮಾಡುತ್ತಿರುವುದು ಮತ್ತೊಂದು ವಿಶೇಷ. ತೆಲುಗಿನಲ್ಲಿ ಮೈರಾ ಕ್ರಿಯೇಷನ್ಸ್ ಈ ಜವಾಬ್ಧಾರಿಯನ್ನು ವಹಿಸಿಕೊಂಡಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಭೈರತಿ ರಣಗಲ್ ಚಿತ್ರವನ್ನು ಇದೇ ನವೆಂಬರ್ 29ರಂದು ಬಿಡುಗಡೆ ಮಾಡುತ್ತಿದೆ.


Click it and Unblock the Notifications











