ಸಪ್ತಸಾಗರ ದಾಟಿ ದೊಡ್ಮನೆಗೆ ಹೇಮಂತ್ ರಾವ್ ; ಹೇಗಿರಲಿದೆ ಶಿವಣ್ಣ ಪಾತ್ರ ಹಾಗೂ ಸಿನಿಮಾ..?
ಕವಲು ದಾರಿ.. ಗೋಧಿ ಬಣ್ಣ ಸಾಧಾರಣ ಮೈ ಕಟ್ಟು.. ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಹಾಗೂ ಸೈಡ್ ಬಿ ಹೊಸ ಅಲೆ ಸೃಷ್ಟಿಸಿದ ಹೇಮಂತ್ ರಾವ್, ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಕೇಳಿಯೇ ಅನೇಕರು ಪುಳಕಿತಗೊಂಡಿದ್ದರು. ಚಿತ್ರದ ಕಥೆ ಆದಿ ಸೇರಿ ಚಿತ್ರದಲ್ಲಿ ಯಾರೆಲ್ಲ ಇರಬಹುದು ಎಂಬ ಚರ್ಚೆಯನ್ನ ಶುರು ಮಾಡಿದ್ದರು. ಹೇಮಂತ್ ರಾವ್ ಅವರ ಸಂದರ್ಶನದ ತುಣುಕುವೊಂದನ್ನ ಎತ್ತಿ ಹೇಮಂತ್ ರಾವ್ Sci-fi ಸಿನಿಮಾ ಮಾಡಲಿದ್ದಾರೆ ಎಂದು ಎಲ್ಲರು ಭಾವಿಸಿದ್ದರು.
ಆದರೆ, ಹೇಮಂತ್ ರಾವ್ ಶಿವಣ್ಣ ಜೊತೆ Sci-fi ಸಿನಿಮಾ ಮಾಡ್ತಿಲ್ಲ. ಬದಲಿಗೆ ಬೇರೆಯದ್ದೇ ಕಥೆಯನ್ನ ಹೆಣೆದಿದ್ದಾರೆ. ಶಿವಣ್ಣ ಅಭಿಮಾನಿಯಾಗಿ ಶಿವಣ್ಣ ಅಭಿಮಾನಿಗಳಿಗೋಸ್ಕರ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಇನ್ನೂ ಚಿತ್ರದ ಬಗ್ಗೆ ಹೆಚ್ಚಿನ ಸುಳಿವನ್ನೂ ಬಿಟ್ಟು ಕೊಡದ ಹೇಮಂತ್ ರಾವ್, ಸದ್ಯಕ್ಕೆ ಶಿವಣ್ಣ ಅವರನ್ನ ಹಿಂದೆಂದೂ ನೋಡದ ರೂಪದಲ್ಲಿ ಇಲ್ಲಿ ತೋರಿಸುವ ಪ್ರಯತ್ನವನ್ನ ಮಾಡ್ತಿದ್ದಾರೆ. ಮಿಕ್ಕಂತೆ ವೃತ್ತಿಯಲ್ಲಿ ವ್ಯೆದ್ಯರಾಗಿರುವ ವೈಶಾಕ್ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಈ ಮೂಲಕ ನಿರ್ಮಾಪಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಯನ್ನ ಮಾಡ್ತಿದ್ದಾರೆ. ವಿಶೇಷ ಅಂದರೆ ನಿರ್ಮಾಪಕ ವೈಶಾಕ್ ಕೂಡ ಶಿವಣ್ಣ ಅವರ ಅಪ್ಪಟ ಅಭಿಮಾನಿ
ಹೇಮಂತ್ ಜೊತೆ ಸಿನಿಮಾ ಶಿವಣ್ಣ ಹೇಳಿದ್ದೇನು..?
ಕಥೆ ಕೇಳಿದ ದಿನದಿಂದ ಶಿವಣ್ಣ ಈ ಚಿತ್ರಕ್ಕೆ ಬಣ್ಣ ಹಚ್ಚಲು ಸಿಕ್ಕಾಪಟ್ಟೆ ಉತ್ಸುಕರಾಗಿದ್ದಾರೆ. ಹೇಮಂತ್ ರಾವ್ ಅವರ ಕಸಬುದಾರಿಕೆ, ದೂರದೃಷ್ಟಿ ಹಾಗೂ ಆಲೋಚನೆಗಳಿಂದ ಪ್ರಭಾವಕ್ಕೊಳಗಾಗಿರುವ ಶಿವಣ್ಣ ಇನ್ನೂ ಹೆಸರಿಡದ ಈ ಸಿನಿಮಾ ವಿಭಿನ್ನವಾದ ಅನುಭವ ನೀಡುವುದು ಗ್ಯಾರಂಟಿ ಎಂಬ ಆತ್ಮವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ಹೇಮಂತ್ ರಾವ್ ಹಾಗೂ ಶಿವಣ್ಣ ಹೊಸದೊಂದು ಪ್ರಯಾಣಕ್ಕೆ ಮುನ್ನುಡಿ ಬರೆದಿದ್ದಾರೆ. ಜಂಟಿಯಾಗಿ ಚಿತ್ರವನ್ನ ಘೋಷಿಸಿದ್ದಾರೆ. ಇನ್ನೂ ಡಾ.ಶಿವರಾಜ್ ಕುಮಾರ್ ಸದ್ಯಕ್ಕೆ ಪರಭಾಷೆಯಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನ ಸಂಪಾದಿಸಿದ್ದಾರೆ. ಈ ಕಾರಣಕ್ಕೆ ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧವಾದರೆ ಅಚ್ಚರಿ ಇಲ್ಲ. ಉಳಿದಂತೆ ಚಿತ್ರದ ತಾರಾಬಳಗದಲ್ಲಿ ಯಾರೆಲ್ಲ ಇದ್ದಾರೆ, ಎಲ್ಲಿ ಎಲ್ಲಿ ಚಿತ್ರೀಕರಣ ನಡೆಯಲಿದೆ ಎಂಬ ಇತ್ಯಾದಿ ವಿವರಗಳನ್ನ ಚಿತ್ರತಂಡ ಸದ್ಯದಲ್ಲಿಯೇ ಹಂಚಿಕೊಳ್ಳಲಿದೆ.

ಸದ್ದು ಮಾಡುತ್ತಿದೆ ಸಪ್ತ ಸಾಗರದಾಚೆ ಎಲ್ಲೋ
ಸಪ್ತಸಾಗರದಾಚೆ ಇತ್ತೀಚಿಗಷ್ಟೇ ಒಟಿಟಿಗೆ ಲಗ್ಗೆ ಇಟ್ಟಿದೆ. ವಿಶೇಷ ಅಂದರೆ ಭಾಷೆಯ ಭೇದ ಭಾವ ಇಲ್ಲದೇ ಮನು, ಪ್ರಿಯಾ ಹಾಗೂ ಸುರಭಿಯ ಕಥೆ-ವ್ಯಥೆ ಎಲ್ಲರ ಹೃದಯವನ್ನ ಗೆಲ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅಮೆಜಾನ್ ಪ್ರೈಮ್ ನಲ್ಲಿ ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾ ನಾಲ್ಕನೇ ಸ್ಥಾನದಲ್ಲಿ ಟ್ರೆಂಡಿಂಗ್ ನಲ್ಲಿದೆ.


Click it and Unblock the Notifications











