ವಿಷ್ಣುವರ್ಧನ್ ಬಗ್ಗೆ ಆಪ್ತೇಷ್ಟರು ಹಂಚಿಕೊಂಡ ಸತ್ಯ ಸಂಗತಿ
ಕನ್ನಡಿಗರ ಸಂಪತ್ತು, ಕನ್ನಡ ಚಿತ್ರರಂಗದ ಮುತ್ತಿನ ಹಾರ, ಸಾಹಸ ಸಿಂಹ, ಅಭಿನವ ಭಾರ್ಗವ, ಕೋಟಿಗೊಬ್ಬ, ಕೋಟ್ಯಾಂತರ ಕನ್ನಡಾಭಿಮಾನಿಗಳ ಪ್ರೀತಿಯ ಜನನಾಯಕ...ಡಾ.ವಿಷ್ಣುವರ್ಧನ್.
ಗಾಂಧಿನಗರದ ಸಾಮ್ರಾಜ್ಯದಲ್ಲಿ 'ಯಜಮಾನ'ನಂತೆ ವಿರಾಜಮಾನನಾಗಿದ್ದ 'ಸಾಹಸ ಸಿಂಹ'ನ ಘರ್ಜನೆ ನಿಂತು ಇಂದಿಗೆ ಐದು ವರ್ಷ. ನಾಲ್ಕು ದಶಕಗಳ ಕಾಲ, ರಾಜಾಧಿರಾಜನಂತೆ ಮೆರೆದ ವಿಷ್ಣು ದಾದಾ ಈಗ ನೆನಪು ಮಾತ್ರ.
'ವಂಶವೃಕ್ಷ'ದಂತಹ ಸಿನಿಮಾದಿಂದ ಬಣ್ಣದ ಯಾನ ಶುರುಮಾಡಿದ ವಿಷ್ಣು, 'ನಾಗರಹಾವಿ'ನಂತೆ ಬುಸುಗುಟ್ಟಿ ದಿನಬೆಳಗಾಗುವಷ್ಟರಲ್ಲಿ ಮನೆಮಾತಾಗಿದ್ದರು. ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿದ ಈ ಅಮೂಲ್ಯ 'ಮುತ್ತಿನಹಾರ'ದ ಪುಣ್ಯಸ್ಮರಣೆ ಇವತ್ತು (ಡಿಸೆಂಬರ್ 30). ಇದರ ಅಂಗವಾಗಿ ವಿಷ್ಣುವರ್ಧನ್ ಸ್ಮರಣೆ ಮಾಡುತ್ತಾ, ಕೊಂಚ ಫ್ಲ್ಯಾಶ್ ಬ್ಯಾಕ್ ಗೆ ಹೋಗಿಬರೋಣ...

ಆಗಿನ್ನೂ 70-80ರ ದಶಕ...ಸುರ ಸುಂದರಾಂಗ 'ಸಂಪತ್ ಕುಮಾರ್' ಹಿಂದೆ ಹುಡುಗಿಯರ ದಂಡೇ ಇತ್ತು. ಆದ್ರೆ ಮೈಸೂರಿನ ಈ ಹಮ್ಮೀರ ಮಾತ್ರ ಪಂಜಾಬಿ ಕುಡಿಗೆ ಮನಸೋತಿದ್ದ.! [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ? ]
ಹೌದು, ಬಹುಶಃ ಈ ಸತ್ಯ ಸಂಗತಿ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. 'ನಾಗರಹಾವು' ಸಿನಿಮಾ ಆದ್ಮೇಲೆ ವಿಷ್ಣುವರ್ಧನ್ ಗಾಗಿ ಅದೆಷ್ಟೋ ಹುಡುಗೀಯರು ಹಪಹಪಿಸಿದ್ದುಂಟು. ಎಲ್ಲರನ್ನ ಬದಿಗಿಟ್ಟು, ನಟಿ 'ಭಾರತಿ'ಗೆ ಮನಸ್ಸು ಕೊಟ್ಟ 'ಹೃದಯವಂತ' ಸಪ್ತಪದಿ ತುಳಿದದ್ದು ನಂತರದ ಬೆಳವಣಿಗೆ. ಆದರೆ, ಈ ಎಲ್ಲದಕ್ಕೂ ಮುನ್ನ ಕಾಲೇಜಿನಲ್ಲಿರುವಾಗಲೇ 'ವಿಷ್ಣು ಪ್ರೇಮ ಪುರಾಣ'ದ ಮೊದಲ ಅಧ್ಯಾಯ ಆರಂಭವಾಗಿತ್ತು.

ಅದು ಸಂಪತ್ ಕುಮಾರ್ ದ್ವಿತೀಯ ಪಿ.ಯು.ಸಿ ಓದುತ್ತಿದ್ದ ಸಮಯ. ಆಗಲೇ ಪಂಜಾಬಿ ಹುಡುಗಿಯೊಬ್ಬಳಿಗಾಗಿ ಸಂಪತ್ ಹೃದಯ ಬಡಿದುಕೊಳ್ಳುತ್ತಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ, ಒಡನಾಟ ತುಸು ಹೆಚ್ಚಾಗಿ ಸಂಪತ್, ಪ್ರೇಮದ ಬಲೆಯಲ್ಲಿ ಸಿಲುಕಿದ್ದರು. ಇಬ್ಬರಿಗೂ ಒಬ್ಬರನ್ನ ಮತ್ತೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿ.
ದಿನಗಳು ಕಳೆದಂತೆ ಪ್ರೇಮದ ಅಮಲಿನಲ್ಲಿ ತೇಲುತ್ತಿದ್ದ ಸಂಪತ್, ಪಂಜಾಬಿ ಕುವರಿಯನ್ನ ಮದುವೆಯಾಗಲು ಬಯಸಿದ್ದರು. ಕುಟುಂಬದವರೊಂದಿಗೆ ಮಾತನಾಡಿ ಮದುವೆ ಬಗ್ಗೆ ಮಾತುಕತೆ ಕೂಡ ನಡೆಸಿದ್ದರು. ಇಬ್ಬರ ಪ್ರೀತಿಗೆ ಹಿರಿಯರ ಸಮ್ಮತಿ ಕೂಡ ಸಿಕ್ಕಿತ್ತು. ಆದ್ರೆ ಅಷ್ಟರಲ್ಲೇ ಸಂಪತ್ 'ಪ್ರೇಮ ಕಾದಂಬರಿ'ಗೆ ತಣ್ಣೀರೆರಚಿದ್ದು 'ಬಣ್ಣ'ದ ಕನಸು.

ಯೆಸ್, ಚಿಕ್ಕವಯಸ್ಸಿನಿಂದಲೂ ಸಂಪತ್ ಕುಮಾರ್ ಗೆ ದೊಡ್ಡ ನಟನಾಗಬೇಕೆನ್ನುವ ಕನಸು. ಕ್ಲಾಸ್ ನಲ್ಲಿ ಲಾಸ್ಟ್ ಬೆಂಜ್ ವಿದ್ಯಾರ್ಥಿಯಾಗಿದ್ದರೂ, ನಾಟಕಗಳಲ್ಲಿ ಮಾತ್ರ ಸಂಪತ್ ಸದಾ ಮುಂದು. ಒಂದಲ್ಲಾ ಒಂದು ದಿನ ಹೀರೋ ಆಗಲೇಬೇಕು ಅಂತ ಪಣ ತೊಟ್ಟಿದ್ದ ಸಂಪತ್ ಆಸೆಗೆ ಅವರ ಪಂಜಾಬಿ ಪ್ರೇಯಸಿ ಕೈಜೋಡಿಸಲಿಲ್ಲ.
ಸಂಪತ್ ಬಣ್ಣ ಹಚ್ಚುವುದು ಪಂಜಾಬಿ ಬೆಡಗಿಗೆ ಸುತಾರಂ ಇಷ್ಟವಿರಲಿಲ್ಲ. ಓದಿನಲ್ಲಿ ನಂಬರ್ ಒನ್ ಆಗಿದ್ದ ಆಕೆಗೆ ಸಂಪತ್ ವಿದ್ಯಾವಂತನಾಗಿ ದೊಡ್ಡ ಹುದ್ದೆಯಲ್ಲಿರಬೇಕೆನ್ನುವ ಹಂಬಲವಿತ್ತು. ಆದ್ರೆ ಇದಕ್ಕೆ ವಿಷ್ಣು ಒಪ್ಪಿಕೊಳ್ಳಲಿಲ್ಲ. ಅವರದ್ದೇನಿದ್ದರೂ 'ಬಣ್ಣದ ಪ್ರಪಂಚ'. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಮನಸ್ತಾಪ ಭುಗಿಲೆದ್ದು, ಕಡೆಗೆ ಬಣ್ಣದ ಬದುಕಿನ ಬೆನ್ನೇರಿ, ತಮ್ಮ ಪ್ರೀತಿಗೆ ಎಳ್ಳುನೀರು ಬಿಟ್ಟುಬಿಟ್ಟರು ಸಂಪತ್ ಕುಮಾರ್!

ಪುಟ್ಟಣ್ಣ ಕರೆಗೆ ಓಗೊಟ್ಟು 'ನಾಗರಹಾವು' ಚಿತ್ರದಲ್ಲಿ ಆಂಗ್ರಿ ಯಂಗ್ ಮ್ಯಾನ್ ಆದ ವಿಷ್ಣು, ಮೊದಲ ಪ್ರಯತ್ನದಲ್ಲೇ ರಾಮಾಚಾರಿಯಾಗಿ ಪ್ರೇಕ್ಷಕರ ಮನಗೆದ್ದರು. ಅಷ್ಟರಲ್ಲಾಗಲೇ, ಓದು ಮುಗಿಸಿ ದೆಹಲಿಯಲ್ಲಿ ಡಾಕ್ಟರ್ ಆಗಿದ್ದ ಪಂಜಾಬಿ ಹುಡುಗಿ, ಮರಳಿ ಮೈಸೂರಿಗೆ ಒಮ್ಮೆ ಭೇಟಿಕೊಟ್ಟರು.
ಆಗ, 'ನಾಗರಹಾವು' ಸಕ್ಸಸ್ ನಲ್ಲಿದ್ದ 'ವಿಷ್ಣುವರ್ಧನ್' ತಮ್ಮ ಗೆಳತಿಯನ್ನ ಭೇಟಿ ಮಾಡಿ ಪಾರ್ಟಿ ಕೂಡ ಕೊಡಿಸುತ್ತಾರೆ. ಕಡೆಗೂ, 'ಹೀರೋ ಸಂಪತ್ ಕುಮಾರ್'ನನ್ನ ಆಕೆ ಸ್ವೀಕರಿಸಲೇ ಇಲ್ಲ. ಆದರೇನಂತೆ, ಅಂದುಕೊಂಡಿದ್ದನ್ನ ಸಾಧಿಸಿದ ಖುಷಿಯಲ್ಲಿದ್ದ ವಿಷ್ಣು, ಪ್ರೀತಿ ಬಿಟ್ಟು ಚಿತ್ರರಂಗದಲ್ಲೇ ಮುಂದುವರಿಯೋಕೆ ನಿರ್ಧಾರ ಮಾಡುತ್ತಾರೆ. [ಸಾಹಸಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ಶಂಕುಸ್ಥಾಪನೆ]

ಹೀಗಾಗಿ ಒಂದ್ಕಾಲದ ಪ್ರೇಮಿಗಳಿಗೆ ಅದೇ ಕಡೇ ಪಾರ್ಟಿ, ಅದೇ ಕಡೇ ಮೀಟಿಂಗ್. ಮೊದಲ ಪ್ರೀತಿಯನ್ನ ಚಿತ್ರರಂಗಕ್ಕೋಸ್ಕರ ತ್ಯಾಗ ಮಾಡಿದ್ದ 'ಕರ್ಣ'ನಿಗೆ ಮುಂದೆ ಭಾರತಿ ಜೊತೆಗಾತಿಯಾದರು. ಮಾಯನಗರಿಯ ಮೋಹಕ್ಕೆ ಬಿದ್ದ ವಿಷ್ಣು 'ನಾಗರಹಾವು' ನಂತ್ರ ಸ್ಯಾಂಡಲ್ ವುಡ್ ನಲ್ಲಿ ಘರ್ಜನೆ ಶುರುಮಾಡಿದರು. ಮುಂದೆ ನಡೆದದ್ದೆಲ್ಲಾ ಇತಿಹಾಸ.
ಪ್ರೀತಿಗಾಗಿ 'ಹೀರೋ' ಆಗುವ ಕನಸನ್ನ ಕೈಬಿಟ್ಟಿದ್ದರೆ, ಕನ್ನಡ ಚಿತ್ರರಂಗದಲ್ಲಿ 'ವಿಷ್ಣುವರ್ಧನ್' ಅನ್ನುವ ಅಭಿನಯ ಭಾರ್ಗವ ಮಿಂಚುತ್ತಿರಲಿಲ್ಲ! ವಿಷ್ಣು ಸ್ಮರಣೆಯ ನಿಮಿತ್ತ ಸಾಹಸಸಿಂಹನ ಆಪ್ತೇಷ್ಟರು ಹಂಚಿಕೊಂಡ ಮರೆಯಲಾಗದ ಸತ್ಯ ಸಂಗತಿ ಇದು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











