ವಿಷ್ಣುವರ್ಧನ್ ಸಮಾಧಿ ನೆಲಸಮ ; ಸ್ಮಾರಕ-ವ್ಯಾಪಾರೀಕರಣ, ತಮ್ಮ ಮೇಲೆ ಆರೋಪ ಮಾಡಿದವರ ವಿರುದ್ಧ ಕೆಂಡ ಕಾರಿದ ಅನಿರುದ್ದ್
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ ಎಂದು ಹೇಳಿದ್ದ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಮಲಗಲು ಕೂಡ ಜಾಗ ಸಿಗಲಿಲ್ಲ. ಆ ಜಾಗವನ್ನು ಕೂಡ ಕಿತ್ತುಕೊಳ್ಳಲಾಗಿದೆ. ಇದರಿಂದ ಅಭಿಮಾನಿಗಳಲ್ಲಿ ದುಃಖ ಮಡುಗಟ್ಟಿದೆ. ಆಕ್ರೋಶದ ಅಲೆ ಎದ್ದಿದೆ. ಕೆಲವರು ಬಾಲಣ್ಣ ಅವರ ಮನೆಯ ಸದಸ್ಯರ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಮತ್ತೂ ಕೆಲವರು ಇಂತಹದ್ದೊಂದು ದುರಂತ ನಡೆಯಲು ವಿಷ್ಣುವರ್ಧನ್ ಅವರ ಮನೆಯಯವರೇ ನೇರ ಕಾರಣ ಎನ್ನುತ್ತಿದ್ದಾರೆ.
ಅಭಿಮಾನಿಗಳ ಈ ಮಾತು ಈಗ ಅನಿರುದ್ಧ್ ಅವರನ್ನು ಕೆರಳಿಸಿದೆ. ಈ ಹಿನ್ನೆಲೆ ಇಂದು ಮಾಧ್ಯಮದವರ ಮುಂದೆ ಹಾಜರಾದ ಅನಿರುದ್ದ್ ತಮ್ಮ ಮೇಲೆ ಆರೋಪ ಮಾಡುತ್ತಿರುವವರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ನಮ್ಮ ಮೇಲೆ ಆರೋಪ ಮಾಡುತ್ತಿರುವವರು ನಿಜವಾದ ಅಭಿಮಾನಿಗಳಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಇಂದು { ಆಗಸ್ಟ್ 9 } ಮಾತನಾಡಿರುವ ಅನಿರುದ್ದ್ ಸುಖಾ ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ಹೇಳಿದ್ದಾರೆ. ಅದೆಲ್ಲೋ ಕುಳಿತುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಇಲ್ಲ ಸಲ್ಲದ ಕಾಮೆಂಟ್‌ಗಳನ್ನು ಮಾಡಬೇಡಿ ಎಂದು ಹೇಳಿದ್ದಾರೆ.
ಆರೂವರೆ ವರ್ಷ ನಮ್ಮ ಕುಟುಂಬ ನಡೆಸಿದ ಹೋರಾಟ, ನಮ್ಮ ಪರಿಶ್ರಮ ಅನೇಕರಿಗೆ ಗೊತ್ತೇ ಇಲ್ಲ. ಅದು ಜನರಿಗೆ ತಲುಪಿಯೇ ಇಲ್ಲ ಎಂದು ಹೇಳಿರುವ ಅನಿರುದ್ದ್, ಪ್ರತಿ ಬಾರಿಯೂ ಯಾವುದಾದರೂ ವಿವಾದವಾದಾಗ, ಸ್ಮಾರಕದ ವಿಚಾರ ಚರ್ಚೆಯಾದಾಗ ನಮ್ಮನ್ನ ವಿಲನ್ ಮಾಡಿ, ಅವರು ಹೀರೋ ಆಗುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಯಾಕೆ ಎನ್ನುವುದು ನಮಗೂ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸಮಾಧಿ ತೆರವು ಮಾಡುತ್ತಿರುವ ವಿಚಾರ ನಮಗೆ ಗೊತ್ತೇ ಇಲ್ಲ ಎಂದು ಹೇಳಿರುವ ಅನಿರುದ್ದ್ ಅಭಿಮಾನಿಗಳ ವಿರುದ್ದ ನಾವು ಯಾವತ್ತು ನಿಂತಿಲ್ಲ. ಆದರೆ ಕೆಲವು ಜನ ಇದ್ದಾರೆ, ಅವರು ನಮ್ಮ ವಿರುದ್ಧ ಇದ್ದಾರೆ. ಆರೋಪಗಳನ್ನು ಮಾಡುತ್ತಾರೆ. ಸಂಪೂರ್ಣ ವಿಷಯನೇ ಅವರಿಗೆ ಗೊತ್ತಿಲ್ಲ, ಸುಮ್ಮನೆ ಆರೋಪ ಮಾಡೋದು, ಹೀರೋ ಆಗೋದು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಪರಿಶ್ರಮ ಮತ್ತು ಪ್ರಯತ್ನಗಳ ಅರಿವು ಇಲ್ಲದೇ ನಮ್ಮ ಬಗ್ಗೆ ಮಾತನಾಡುವ ''ಆ ಜನರ'' ವಿರುದ್ದ ನಾವು ಇದ್ದೇವೆ ಎಂದು ಹೇಳಿರುವ ಅನಿರುದ್ದ್, ಆದರೂ ಕೂಡ ನಾನೇ ಖುದ್ದಾಗಿ ಸಾಕಷ್ಟು ಪ್ರಯತ್ನ ಮಾಡಿದ್ದೇ, ಮೀಟಿಂಗ್‌ಗೆ ಕರೆದಿದ್ದೆ ಆದರೆ ಅವರು ಬಂದಿಲ್ಲ ಎಂದು ಹೇಳಿದ್ದಾರೆ.
ಸ್ಮಾರಕ ಬೆಂಗಳೂರಿನಲ್ಲಿಯೂ ಇರಲಿ ಮೈಸೂರಿನಲ್ಲಿಯೂ ಇರಲಿ ಎಂದು ಬಯಸಿದವರು ನಾವು ಆದರೆ ಇದನ್ನು ಅರ್ಥ ಮಾಡಿಕೊಳ್ಳದೇ ನಾವೇ ಅಭಿಮಾನ್ ಸ್ಟುಡಿಯೋದಲ್ಲಿನ ಸಮಾಧಿಯನ್ನು ತೆರವುಗೊಳಿಸಿದ್ದೇವೆ ಎಂದು ಮಾತನಾಡುವುದು ಎಷ್ಟು ಸರಿ ? ನಮ್ಮ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿರುವ ಅನಿರುದ್ದ್, ನೀವೇ ಯೋಚನೆ ಮಾಡಿ ನಿಮಗೆ ಎಷ್ಟು ಪ್ರೀತಿ ಇದೆಯೋ ನಮಗೆ ಅದಕ್ಕಿಂತ ಪ್ರೀತಿ ಹೆಚ್ಚಿದೆ, ನಾವ್ಯಾಕೇ ಆ ತರ ಆಗಬೇಕೆಂದು ಬಯಸ್ತೀವಿ ಎಂದು ಹೇಳಿದ್ದಾರೆ. ಕುಟುಂಬದವರನ್ನೇ ಯಾಕೆ ವಿಲನ್ ಎಂದುಕೊಳ್ಳುತ್ತಿದ್ದೀರಿ ಎಂದು ಹೇಳಿದ್ದಾರೆ.
ಮುಂದುವರೆದು ಮೈಸೂರಿನಲ್ಲಿ 5 ಎಕರೆ ಜಾಗದಲ್ಲಿ ಸ್ಮಾರಕ ಆಗಿದೆ. ಅದ್ಹೇಗೆ ಆಯ್ತು ? ಎಂದು ಪ್ರಶ್ನೆ ಮಾಡಿರುವ ಅನಿರುದ್ದ್ ಮೈಸೂರಿನಲ್ಲಿ ಸ್ಮಾರಕ ಆದ ಮೇಲೆ ಕೂಡ ನಮ್ಮ ಮೇಲೆ ವ್ಯಾಪಾರಿಕರಣದ ಆರೋಪ ಹೊರಿಸಿದರು, ವ್ಯಾಪಾರ ಮಾಡುತ್ತಿದ್ದಾರೆ ಎಂದರು ಎಂದು ಹೇಳಿದ್ದಾರೆ. ಅದು ಸರ್ಕಾರದ ದುಡ್ಡು, ಸರ್ಕಾರದ ಜಾಗ, ಸರ್ಕಾರದ ಯೋಜನೆ, ಹೇಗೆ ದುಡ್ಡು ಮಾಡೋಕಾಗುತ್ತೆ ಆದರೂ ಮಾತನಾಡಿದರು ಎಂದಿರುವ ಅನಿರುದ್ದ್ ನಾವು ಎಷ್ಟು ಕಛೇರಿಗಳನ್ನು ಅಲೆದಿದ್ದೀವಿ, ಪ್ರಯತ್ನಗಳ ಬಗ್ಗೆ ಗೊತ್ತಿರದೇ ಆರೋಪ ಯಾಕೆ ಮಾಡ್ತಿದ್ದೀರಿ, ನಮ್ಮ ಜೊತೆ ಸೇರ್ಕೊಳ್ಳಿ ಎಂದು ಹೇಳುತ್ತಿದ್ದೇನೆ, ಸೇರ್ಕೊಳ್ಳಿ ಎಂದು ಹೇಳುತ್ತಿದ್ದೇನೆ, ಸಿಂಹ-ಸಿಂಹಿಣಿಯರು ನೀವು ಎಂದು ಹೇಳಿದ್ದೇನೆ ಎಂದು ಹೇಳಿದ್ದಾರೆ. ನಮ್ಮ ಮತ್ತು ನಿಜವಾದ ಅಭಿಮಾನಿಗಳ ನಡುವೆ ಬಿರುಕು ಮೂಡಿಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಕೂಡ ಹೇಳಿದ್ದಾರೆ.
ಆರೂವರೆ ವರ್ಷ ಪ್ರಯತ್ನ ಮಾಡಿದ ಮೇಲೆ ಆಗೋದೆ ಇಲ್ಲ ಎಂದು ಗೊತ್ತಾದ ನಂತರ ಮಾನ್ಯ ಮುಖ್ಯಮಂತ್ರಿಗಳೇ ಇಲ್ಲಿ ಆಗ್ತಿಲ್ಲ. ಬೇರೆ ಕಡೆ ಹೋಗಿ ಅಂತ ನಮಗೆ ಹೇಳಿದರು, ಅವರು ಹಾಗೇ ಹೇಳಿದ ಮೇಲೆ ಬೆಂಗಳೂರಿನಲ್ಲಿಯೇ ಜಾಗ ಹುಡುಕಿದ್ದಾಯ್ತು, ಮೈಸೂರಿನಲ್ಲಿ ಹುಡುಕಿದ್ದಾಯ್ತು, ಅಲ್ಲೂ ಕೂಡ ಕೆಲ ವರ್ಷಗಳು ಹೋದವು ಎಂದು ಹೇಳಿರುವ ಅನಿರುದ್ದ್, ಅಭಿಮಾನ್ ಸ್ಟುಡಿಯೋದಲ್ಲಿ ಹೂತು ಹಾಕಿದ ಜಾಗ ಅಲ್ಲ ದಹನ ಮಾಡಿದ ಜಾಗ ಅದು, ಆಗ ಅಮ್ಮನಿಗೆ ಯಾಕೆ ಅನ್ಸಿತ್ತೋ ಗೊತ್ತಿಲ್ಲ ಅಸ್ತಿಯನ್ನು ಕಳಶದಲ್ಲಿ ಎತ್ತಿ ಇಟ್ಟಿದ್ದರು ಆ ಅಸ್ತಿಯ ಕಳಸ ಇಟ್ಟು ಮೈಸೂರಿನಲ್ಲಿ ಸ್ಮಾರಕ ಮಾಡಲಾಗಿದೆ ಎಂದು ಹೇಳಿದ್ದಾರೆ.
ನಾವು ಸಾಕಷ್ಟು ಕೆಲಸ ಮಾಡಿದ್ದೇವೆ, ಸಾಕಷ್ಟು ಪರಿಶ್ರಮ ಹಾಕಿದ್ದೇವೆ, ದಯವಿಟ್ಟು ಅರ್ಥ ಮಾಡಿಕೊಳ್ಳಿ ಸುಮ್ಮನೆ ಆರೋಪ ಮಾಡಬೇಡಿ ಎಂದು ಹೇಳಿರುವ ಅನಿರುದ್ದ್, ನಿಮ್ಮಲ್ಲಿ ಪ್ರಶ್ನೆಗಳೇನಾದರೂ ಇದ್ದರೆ ನಮ್ಮ ಮನೆಯ ಬಾಗಿಲು ಸದಾ ತೆರೆದಿರುತ್ತೆ ಬಂದು ನೇರವಾಗಿ ನಮ್ಮನ್ನು ಪ್ರಶ್ನೆ ಕೇಳಿ ಎಂದು ಹೇಳಿದ್ದಾರೆ.
ಅಭಿಮಾನ್ ಸ್ಟುಡಿಯೋದ ವಿವಾದ 2004 ರಲ್ಲಿ ಶುರುವಾಗಿತ್ತು. ನಾವು 2009 ರಲ್ಲಿ ಅಂತ್ಯ ಸಂಸ್ಕಾರ ನಡೆದಿದ್ದು. ನಮಗೆ ಆಗ ಅದು ವಿವಾದಾತ್ಮಕ ಸ್ಥಳ ಎಂದು ಗೊತ್ತಿರಲಿಲ್ಲ ಎಂದು ಹೇಳಿರುವ ಅನಿರುದ್ದ್ ಅವತ್ತು ಕುಮಾರಸ್ವಾಮಿ ಅವರು ಪೋನ್ ಮಾಡಿದ್ರು. ದೊಡ್ಡ ವ್ಯಕ್ತಿಗೆ ಸರ್ಕಾರದಿಂದ ಗೌರವ ಕೊಡಬೇಕೆಂದು ದೇವೆಗೌಡರು ಹೇಳಿದ್ದಾರೆ ಎಂದು ಹೇಳಿದರು. ಅಂಬರೀಶ್ ಅಂಕಲ್ ಕೂಡ ಇದ್ದರು. ಇಬ್ಬರೂ ಸೇರಿ ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ಮಾಡಿದರು, ವಿವಾದದ ಬಗ್ಗೆ ನಮಗೆ ಅರಿವು ಇದ್ದಿದ್ದರೆ ನಾವು ಅಲ್ಲಿ ಮಾಡುತ್ತಾನೇ ಇರಲಿಲ್ಲ ಎಂದು ಹೇಳಿದ್ದಾರೆ. ಅಭಿಮಾನ್ ಸ್ಟುಡಿಯೋ ಜೊತೆ ಭಾವನಾತ್ಮಕವಾದ ನಂಟಿತ್ತು. ಪೂಜಾ ಸ್ಥಳವಾಗಿತ್ತು. ನೆಲ ಸಮ ಮಾಡಬಾರದಿತ್ತು. ಈ ರೀತಿ ಆಗಿದ್ದು,ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.


Click it and Unblock the Notifications











