ರಾತ್ರೋರಾತ್ರಿ ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿದ್ದೇಕೆ ? ಬಾಲಣ್ಣ ಪುತ್ರಿ ಗೀತಾ ಬಾಲಿ ಹೇಳಿದ್ದೇನು?
ಬದುಕಿದ್ದಷ್ಟೂ ದಿನ ಯಾರ ಮುಂದೆ ಯಾವುದಕ್ಕೂ ಕೈ ಚಾಚದೆ ಸ್ವಾಭಿಮಾನದಿಂದ ಬದುಕಿದ್ದವರು ವಿಷ್ಣುವರ್ಧನ್. ಆದರೆ .. ಇಂಥಾ ಮೇರು ವ್ಯಕ್ತಿಯ ಸ್ಮಾರಕವನ್ನು ಅಭಿಮಾನ್ ಸ್ಟುಡಿಯೋದಲ್ಲಿ ರಾತ್ರೋ ರಾತ್ರಿ ನೆಲಸಮ ಮಾಡಲಾಗಿದೆ. ವಿಷ್ಣು ಸಮಾಧಿ ಅಲ್ಲಿದ್ದ ಯಾವ ಕುರುಹು ಕೂಡ ಈಗ ಅಲ್ಲಿ ಇಲ್ಲ. ಯಾರು ನಿರೀಕ್ಷೆ ಮಾಡದ ಈ ಬೆಳವಣಿಗೆಯಿಂದ ಆಕ್ರೋಶದ ಅಲೆ ಎದ್ದಿದೆ.
ಬಾಲಣ್ಣ ಅವರ ಕುಟುಂಬದ ವಿರುದ್ಧ ವಿಷ್ಣುವರ್ಧನ್ ಅಭಿಮಾನಿ ಬಳಗ ಕೆಂಡ ಕಾರುತ್ತಿದೆ. ಆದರೆ.. ಬಾಲಣ್ಣನ ಮಗಳು ಗೀತಾ ಬಾಲಿ ಮಾತ್ರ ತನಗೇನು ಗೊತ್ತೇ ಇಲ್ಲ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಬೇರೆಯದ್ದೇ ಕಥೆಯನ್ನು ಹೇಳುತ್ತಿದ್ದಾರೆ. ಕಾಣದ ಕೈಗಳ ಕುತಂತ್ರ ಎಂದು ಹೊಸ ರಾಗ ಎಳೆಯುತ್ತಿದ್ದಾರೆ.

ಈ ಕುರಿತು ''ರಿಪಬ್ಲಿಕ್ ಕನ್ನಡ'' ಜೊತೆ ಮಾತನಾಡಿರುವ ಗೀತಾ ಬಾಲಿ, ವಿಷಯ ನನಗೆ ಗೊತ್ತಾಗಿದ್ದೇ ಮಾಧ್ಯಮಗಳಿಂದ ಇದರಲ್ಲಿ ನನ್ನ ಯಾವ ಪಾತ್ರ ಇಲ್ಲ ಎಂದು ಹೇಳಿದ್ದಾರೆ. ನೀವು ಅಂದುಕೊಂಡಂತೆ ಜಾಗದ ವಿವಾದ ಚಿಕ್ಕದಲ್ಲ ತುಂಬಾ ದೊಡ್ಡ ಕಥೆ ಇದು ಎಂದು ಹೇಳಿರುವ ಗೀತಾ ಬಾಲಿ ತಮ್ಮ ತಮ್ಮನ ಕೊಲೆ ಕೇಸ್ ಗೆ ಮತ್ತು ವಿಷ್ಣುವರ್ಧನ್ ಅವರ ಸ್ಮಾರಕ ತೆಗೆದಿದ್ದಕ್ಕೂ ಲಿಂಕ್ ಮಾಡಿದ್ದಾರೆ.
ಕಳೆದ ವರ್ಷ ನನ್ನ ತಮ್ಮ ಗಣೇಶನ ಕೊಲೆಯಾಗಿತ್ತು. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಗೆ ನಾನು ದೂರು ನೀಡಿದ್ದೇನೆ ಎಂದಿರುವ ಗೀತಾ ಬಾಲಿ ಕೊಲೆ ಮಾಡಿರುವ ವ್ಯಕ್ತಿಯೇ ಈಗ ಸ್ಟುಡಿಯೋದಲ್ಲಿನ ಇಡೀ ಜಾಗವನ್ನು ಖಾಲಿ ಮಾಡಿದ್ದಾರೆ, ವಿಷ್ಣುವರ್ಧನ್ ಅವರ ಸಮಾಧಿ ತೆಗೆದು ಹಾಕಿರುವ ವಿಚಾರ ಕೇಳಿ ನನಗೆ ಶಾಕ್ ಆಗಿದೆ ಎಂದು ಹೇಳಿದ್ದಾರೆ.
ಕಳೆದ ಆರು ವರ್ಷಗಳಿಂದ ಈ ಕೇಸ್ ಹೈಕೋರ್ಟ್‌ನಲ್ಲಿದೆ, ಇದರಲ್ಲಿ ಒಬ್ಬ ರಾಜಕಾರಣಿಯ ಪಾತ್ರ ಕೂಡ ಇದೆ. ಆ ವ್ಯಕ್ತಿಯ ಜೊತೆ ಈ ರಾಜಕಾರಣಿ ಕೂಡ ಸೇರಿಕೊಂಡು ಇದೆಲ್ಲಾ ಮಾಡುತ್ತಿದ್ದಾರೆ ಎಂದಿರುವ ಗೀತಾ ಬಾಲಿ, ಎರಡು ತಿಂಗಳ ಹಿಂದೆ ಜಾಗ ಮಾರಿಕೊಂಡಿದ್ದಾರೆ ಎನ್ನುವ ಮಾಹಿತಿ ನನಗೆ ಸಿಕ್ಕಿತ್ತು ಆದರೆ ನಾನು ಗಾಳಿ ಸುದ್ದಿ ಇರಬಹುದೆಂದುಕೊಂಡು ಸುಮ್ಮನಾಗಿದ್ದೆ, ಆದರೆ ಈಗ ವಿಷ್ಣುವರ್ಧನ್ ಅವರ ಜಾಗವನ್ನು ತೆಗೆದುಹಾಕಿರುವ ಕಾರಣದಿಂದ ಇವರೆಲ್ಲ ಸೇರಿಕೊಂಡು ಈ ಜಾಗವನ್ನು ಮಾರಾಟ ಮಾಡಿದ್ದಾರೆ ಎನ್ನುವ ನನ್ನ ಅನುಮಾನ ಇನ್ನೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಮುಂದುವರೆದು ಈ ಸುದ್ದಿ ನನ್ನ ಕಿವಿಗೆ ಬಿದ್ದಾಗಲೇ ನಾನು ನ್ಯಾಯಾಲಯದಿಂದ ತಡೆಯಾಜ್ಞೆ ತರಬೇಕಿತ್ತು, ಸ್ಟೇ ತರದೇ ಇದ್ದಿದ್ದೇ ತಪ್ಪಾಯ್ತು ಎಂದಿರುವ ಗೀತಾ ಬಾಲಿ ಒಬ್ಬ ಮುಖ್ಯವ್ಯಕ್ತಿ ಬಂದು ಅಲ್ಲಿನ 10 ಎಕರೆಗೆ ತಾನೇ ಯಜಮಾನ ಎಂದು ಕೇಸ್ ಹಾಕಿದ್ದಾನೆ. ಹೊಸ ಸುಳ್ಳು ಕೇಸ್‌ಅನ್ನು ಅವರು ಫೈಲ್ ಮಾಡಿದ್ದಾರೆ. ಅವರ ವಕೀಲರು ಕೋರ್ಟ್‌ಗೆ ಬಂದಾಗ ಅದನ್ನು ಪ್ರೂವ್ ಮಾಡಿದ್ದೇನೆ. ಇಡೀ ಪ್ರಕರಣದಲ್ಲಿ ಎಷ್ಟು ಫ್ರಾಡ್ ಆಗಿದೆ ಎಂದು ಕೋರ್ಟ್ ಮುಂದೆ ನಾನು ತಂದಿದ್ದೇನೆ ಎಂದು ಹೇಳಿದ್ದಾರೆ. ಈ ಕೇಸ್ ತುಂಬಾ ದೊಡ್ಡ ಕಥೆ. ಇದರಲ್ಲಿ ಬಹಳಷ್ಟು ನಡೆದು ಹೋಗಿದೆ. ಬಹಿರಂಗವಾಗಿ ಹಾಗೂ ಪಬ್ಲಿಕ್‌ನಲ್ಲಿ ಕೆಲವೊಂದು ವಿಚಾರವನ್ನು ಹೇಳಲು ಸಾಧ್ಯವಿಲ್ಲ ಎಂದು ಕೂಡ ಗೀತಾ ಬಾಲಿ ಹೇಳಿದ್ದಾರೆ.

ಇನ್ನು ಇದೇ ಸಮಯದಲ್ಲಿ ವೀರಕಪುತ್ರ ಶ್ರೀನಿವಾಸ ಅವರ ವಿರುದ್ಧ ಕೂಡ ಕಿಡಿ ಕಾರಿರುವ ಗೀತಾ ಬಾಲಿ ನಮ್ಮ ಕುಟುಂಬವನ್ನು ಅವಹೇಳನ ಮಾಡಲು ವೀರಕಪುತ್ರ ಶ್ರೀನಿವಾಸ ಯಾರು, ಅದ್ಹೇಗೆ ಅವಹೇಳನ ಮಾಡಲು ಸಾಧ್ಯ ? ನಮ್ಮ ಕುಟುಂಬ ನೀಚ ಕುಟುಂಬ ಎಂದು ಅವರು ಹೇಳಿದ್ದಾರೆ. ನಮ್ಮ ತಂದೆಗೂ ಗೌರವ ಇದೆ. ನಮಗೂ ಗೌರವ ಇದೆ. ನಾವೆಲ್ಲರು ಗೌರವದಿಂದ ಬದುಕುತ್ತಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ತಂದೆಯ ಹೆಸರು ಮತ್ತು ಗೌರವ ಕಾಪಾಡಿಕೊಂಡು ಬಂದಿದ್ದೇವೆ ಎಂದು ಹೇಳಿರುವ ಗೀತಾ ಬಾಲಿ ಜನರಿಗೆ ಸತ್ಯ ಗೊತ್ತಾಗಬೇಕು ಹೀಗಾಗಿ ನಾನು ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡುತ್ತಿದ್ದೇನೆ ಎಂದಿದ್ದಾರೆ. ವಿಷ್ಣುವರ್ಧನ್ ಸಮಾಧಿ ಧ್ವಂಸ ಮಾಡಿರುವುದರಲ್ಲಿ ನನ್ನ ಪಾತ್ರ ಇಲ್ಲ ಎಂದು ಪುನರುಚ್ಚಿಸಿದ್ದಾರೆ.


Click it and Unblock the Notifications











