ಡಾ.ವಿಷ್ಣುವರ್ಧನ್ ಪುಣ್ಯಭೂಮಿ ನೆಲಸಮವಾಗಲು ಕಾರಣ ಯಾರು ? ವೀರಕಪುತ್ರ ಶ್ರೀನಿವಾಸ್ ಹೇಳಿದ್ದೇನು ?
ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅನುಭವಿಸಿದಷ್ಟು ಕಷ್ಟವನ್ನು.. ನೋವನ್ನು.. ಬಹುಶಃ ಯಾವ ಧ್ರುವತಾರೆಯೂ ಅನುಭವಿಸಿರಲಿಕ್ಕಿಲ್ಲ. ದುರಂತ ಅಂದರೆ ಬದುಕಿನೂದ್ದಕ್ಕೂ ನೋವನ್ನೇ ಉಂಡು.. ಪ್ರೀತಿ ಹಂಚಿ.. ಕನ್ನಡಿಗರ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ ವಿಷ್ಣುವರ್ಧನ್ ಅಗಲಿ 16 ವರ್ಷಗಳಾದರೂ ಕೂಡ ಅಭಿಮಾನ್ ಸ್ಟುಡಿಯೋದಲ್ಲಿ ಸಮಾಧಿಯ ವ್ಯವಸ್ಥೆಯನ್ನು ಕೊನೆಗೂ ಮಾಡಲು ಸಾಧ್ಯವಾಗಲಿಲ್ಲ. ಸರ್ಕಾರದ ಉಡಾಫೆ, ಒಳ ಕುತಂತ್ರಗಳು ಮತ್ತು..
ಕನ್ನಡ ಚಿತ್ರರಂಗದ ದಿವ್ಯ ನಿರ್ಲಕ್ಷ್ಯ ಮನೋಭಾವದ ನಡುವೆಯೂ ಹಲವಾರು ವರ್ಷಗಳಿಂದ ಅಭಿಮಾನಿಗಳು ಮಾಡಿಕೊಂಡು ಬಂದ ಹೋರಾಟ ಫಲಪ್ರದವಾಗಲಿಲ್ಲ. ಅಭಿಮಾನಿಗಳ ಕೈಯಲ್ಲಿ ಪುಣ್ಯಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಈ ಹಿನ್ನೆಲೆ.. ಸಾಹಸಿಂಹ ವಿಷ್ಣುವರ್ಧನ್ ಅವರ ಅಸಂಖ್ಯಾತ ಅಭಿಮಾನಿಗಳನ್ನು ಒಗ್ಗೂಡಿಸಿ ವಿಷ್ಣು ಹೆಸರನ್ನು ಸಾರ್ಥಕಗೊಳಿಸುವ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದ, ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಹಲವು ಹೋರಾಟಗಳನ್ನು ಮಾಡಿದ್ದ ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಬಾಲಣ್ಣ ಮತ್ತು ಅವರ ಕುಟುಂಬದ ವಿರುದ್ಧ ಕಿಡಿ ಕಾರಿದ್ದಾರೆ. ನಾಯಕನಾಗಿ ಇದು ನನ್ನ ಸೋಲು, ನಾನು ಸೋತಿದ್ದೇನೆ ಎಂದು ಭಾವುಕರಾಗಿದ್ದಾರೆ.
ಇಂತಹದ್ದೊಂದು ದಿನ ನಾವು ಈ ಮಣ್ಣಿನಲ್ಲಿ ನೋಡ್ತೀವಿ ಎಂದು ನಾನು ನಿಜಕ್ಕೂ ಅಂದುಕೊಂಡಿರಲಿಲ್ಲ ಎಂದಿರುವ ವೀರಕಪುತ್ರ ಶ್ರೀನಿವಾಸ್ ಕಳೆದ ಹತ್ತು ವರ್ಷಗಳಿಂದ ಸ್ಮಾರಕಕ್ಕಾಗಿ ನಮ್ಮ ಬದುಕನ್ನೇ ಮೀಸಲಾಗಿಟ್ಟಿದ್ವಿ, ಹಲವಾರು ಹೋರಾಟಗಳನ್ನು ಮಾಡಿದ್ವಿ, 14 ದಿನ ಪ್ರತಿಭಟನೆ ಮಾಡಿದ್ವಿ, ಅನಿರ್ದಿಷ್ಟಾವಧಿ ಧರಣಿಯನ್ನು ಮಾಡಿದ್ವಿ, ಸರ್ಕಾರ ಬಂದಿತ್ತು ಅದಾದ ನಂತರ ಮೇಡಂ ಅವರ ಬಳಿ ಹೋದಾಗ ಅವರು ನೀವು ಅಭಿಮಾನಿಗಳೇ ಅಲ್ಲಾ ಅಂದರು ಆ ನಂತರ ಅದು ಅಲ್ಲಿಗೆ ಮುಗೀತು ಎಂದು ಹೇಳಿದ್ದಾರೆ.
ಸುಮಾರು 7 ವರ್ಷಗಳಿಂದ ಕೋರ್ಟ್‌ನಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿಕೊಂಡು ಹೋರಾಟ ಮಾಡಿದ್ವಿ, ಆದರೆ ಮಾನ್ಯ ಹೈಕೋರ್ಟ್ ಇದನ್ನು ಕೇಳೋಕೆ ನೀವು ಯಾರು ? ಕುಟುಂಬದವರು ಕೇಳಬೇಕು, ಇಲ್ಲಾ ಸರ್ಕಾರದವರು ಕೇಳಬೇಕು ಎಂದು ಹೇಳಿತು ಎಂದಿರುವ ವೀರಕಪುತ್ರ ಶ್ರೀನಿವಾಸ್, ಕುಟುಂಬದವರು ನಮಗೆ ಮೈಸೂರಿನಲ್ಲಿ ಕೊಟ್ಟಿದ್ದಾರೆ ಬೆಂಗಳೂರಿಗೆ ನಮಗೂ ಸಂಬಂಧ ಇಲ್ಲ ಎಂದು ಹೇಳಿದರು. ಇನ್ನು ಶಿವರಾಜ್ ತಂಗಡಗಿ ಅವರಿಂದ, ಡಿಕೆ ಶಿವಕುಮಾರ್ ಅವರಿಂದ, ಸಿಎಂ ಅವರಿಂದ ಎಲ್ಲರನ್ನೂ ನಾವು ಭೇಟಿಯಾಗಿದ್ವಿ ಎಲ್ಲರು ನಮಗೆ ಭರವಸೆ ಕೊಟ್ಟಿದ್ದರು, ನೆಲ ಸಮ ಮಾಡುವ ಮಾತೇ ಇಲ್ಲ ಎಂದು ಹೇಳಿದ್ದರು ಆದರೆ ಈಗ ಎಲ್ಲವೂ ಮುಗಿದು ಹೋಯ್ತು ಎಂದು ಹೇಳಿದ್ದಾರೆ.
ಮುಂದುವರೆದು ಸರ್ಕಾರದ ಮೂಗಿನಡಿಯಲ್ಲಿ ಅಂದರೆ 150 ಜನ ಪೊಲೀಸರ ಭದ್ರತೆಯಲ್ಲಿ ಈ ಕೆಲಸ ಮಾಡಿದ್ದಾರಂತೆ ಎಂದು ಹೇಳಿರುವ ವೀರಕಪುತ್ರ ಶ್ರೀನಿವಾಸ. ಈ ಮಣ್ಣಿನ ಒಬ್ಬ ಮೇರು ಕಲಾವಿದನನ್ನ ದ್ವೀತಿಯ ದರ್ಜೆ ನಾಗರೀಕರಂತೆ ನಡೆಸಿಕೊಂಡ ಸರ್ಕಾರಕ್ಕೆ ಸಂಸ್ಕಾರ ಎನ್ನುವುದೇ ಇಲ್ವಾ ಎಂದು ಕಿಡಿ ಕಾರಿದ್ದಾರೆ. ಹೈಕೋರ್ಟ್‌ನ ಮಾತಿಂದ ನಮಗೆ ಬಹುದೊಡ್ಡ ಹಿನ್ನೆಡೆ ಆಯ್ತು ಎಂದು ಹೇಳಿದ್ದಾರೆ.
ಇದೇ ಸಮಯದಲ್ಲಿ ಬಾಲಣ್ಣನ ಕುಟುಂಬದ ವಿರುದ್ಧ ಕೂಡ ಕೆಂಡ ಕಾರಿರುವ ವೀರಕಪುತ್ರ ಶ್ರೀನಿವಾಸ್, ಬಾಲಣ್ಣನವರ ನೀಚ ಕುಟುಂಬ, ಥರ್ಡ್ ಗ್ರೇಡ್ ಕುಟುಂಬ, ಇಂತಹ ಬೇವರ್ಸಿ ಜನ ಕರ್ನಾಟಕದಲ್ಲಿ ಮಾತ್ರ ಅಲ್ಲ ದುರ್ಬಿನ ಹಾಕೊಂಡು ಹುಡುಕಿದರೂ ಜಗತ್ತಿನಲ್ಲಿ ಸಿಗಲ್ಲ ದುರಾಸೆಯ ಜನ ಎಂದು ಹೇಳಿದ್ದಾರೆ. ಅವರ ತಾತನ ಸಮಾಧಿಯನ್ನೇ ನೆಲ ಸಮ ಮಾಡಿದವರು ಅವರು, ಇನ್ನು ಈ ಸಮಾಧಿಯನ್ನು ಬಿಡ್ತಾರಾ ಎಂಬ ಡೌಟ್ ಇತ್ತು. ಹೀಗಾಗಿ ನಾವು ನಿರಂತರ ಹೋರಾಟ ಮಾಡಿಕೊಂಡೆ ಬಂದೆವು ಆದರೆ ನಿನ್ನೆ ರಾತ್ರಿ ಈ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಯಜಮಾನ್ರು ಬದುಕಿದ್ದಾಗ ಅವರ ಕಟೌಟ್‌ಗಳನ್ನು ಸುಟ್ಟು ಹಾಕಿದಾಗ, ಸಗಣಿ ಎರಚಿದಾಗಲೂ ಕೂಡ ಅವರು ಸುಮ್ಮನಿರಿ ಅಂತ ಹೇಳಿದ್ದರು. ಶಾಂತಿ ಶಾಂತಿ ಅಂತ ಹೇಳ್ತಿದ್ದರು. ಹೀಗಾಗಿ ಅವರಿಲ್ಲದ ಸಮಯದಲ್ಲಿ ನಾವು ಸಾವು ನೋವು ಆಗೋದು ಬೇಡ ಅಂತ ಅಭಿಮಾನಿಗಳಾಗಿ ನಾವೆಲ್ಲಾ ಸುಮ್ಮನಿದ್ದೆವು. ಆದರೆ ಇವತ್ತು ನಮ್ಮ ಸಂಯಮ ನಮಗೆ ಶಾಪವಾಯ್ತು, ಒಳ್ಳೆತನಕ್ಕೆ ಬೆಲೆ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತು ಆಯ್ತು ಎಂದು ಹೇಳಿರುವ ವೀರಕಪುತ್ರ ಶ್ರೀನಿವಾಸ್ ಕುಟುಂಬದವರು ಕೂಡ ನಮಗೆ ಸಾಥ್ ಕೊಡಲಿಲ್ಲ ಎಂದು ಹೇಳಿದ್ದಾರೆ. ನಾಯಕನಾಗಿ ಇದು ನನ್ನ ಸೋಲು, ನಾನು ಸೋತಿದ್ದೇನೆ ಎಂದು ಭಾವುಕರಾಗಿದ್ದಾರೆ.
ಇಂತಹ ಸಂಸ್ಕಾರ ಹೀನ ಸರ್ಕಾರವನ್ನು ನಾನು ನೋಡಿಲ್ಲ, ನಾಚಿಕೆಗೇಡಿನ ಸರ್ಕಾರವನ್ನು ನೋಡಿಲ್ಲ ಎಂದಿರುವ ವೀರಕಪುತ್ರ ಶ್ರೀನಿವಾಸ ಅಭಿಮಾನಿಗಳನ್ನು ಕಂಡರೆ ಕುಟುಂಬಕ್ಕೆ ಯಾಕಷ್ಟು ಕೋಪ ಎನ್ನುವುದು ಇವತ್ತು ಕೂಡ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ. ಕರೆದುಬಿಟ್ಟು ಕಪಾಳಕ್ಕೆ ಹೊಡೆದು ನೀವು ಇಂತಹ ತಪ್ಪು ಮಾಡಿದ್ದೀರಾ ಎಂದಾದರೂ ಹೇಳಿ ಎಂದು ತಮ್ಮ ಬೇಸರವನ್ನು, ಮನದ ನೋವನ್ನು ಹೊರ ಹಾಕಿದ್ದಾರೆ.


Click it and Unblock the Notifications











