ಮೊದಲ ಬಾರಿ ಸಾನ್ವಿ ಮತದಾನ.. ಗೆದ್ದವರು ಸಮಸ್ಯೆ ಬಗೆಹರಿಸಬೇಕು ಎಂದ ಕಿಚ್ಚ; RR ನಗರದಲ್ಲಿ ದರ್ಶನ್ ವೋಟ್
ಬೆಂಗಳೂರಿನಲ್ಲಿ ಮತದಾನ ಬಿರುಸುಗೊಂಡಿದೆ. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಸೆಲೆಬ್ರಿಟೀಗಳು ಮತ ಚಲಾಯಿಸಿ ಎಲ್ಲರೂ ಮತ ಚಲಾಯಿಸಬೇಕು ಎಂದು ಕರೆ ನೀಡುತ್ತಿದ್ದಾರೆ. ಸುದೀಪ್ ಫ್ಯಾಮಿಲಿ ಸಮೇತ ಬಂದು ಮತ ಚಲಾಯಿಸಿದರು. ಶಿವಣ್ಣ ದಂಪತಿ ಕೂಡ ಹಕ್ಕು ಚಲಾಯಿಸಿ ಎಲ್ಲರೂ ಮತ ಹಾಕಿ ಎಂದರು. ಆರ್‌ಆರ್ ನಗರದಲ್ಲಿ ದರ್ಶನ್ ವೋಟ್ ಮಾಡಿದ್ದರು.
ದರ್ಶನ್, ಶಿವಣ್ಣ ಹಾಗೂ ಸುದೀಪ್ ಈ ಬಾರಿ ಚುನಾವಣೆ ಪ್ರಚಾರಕ್ಕೆ ಬಂದಿದ್ದರು. ಹಾಗಾಗಿ ಪ್ರಚಾರ ಕಣ ರಂಗೇರಿತ್ತು. ನಟ ಸುದೀಪ್ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ಸಮೀಪದ ಆಕ್ಸ್‌ಫರ್ಡ್ ಶಾಲೆಯಲ್ಲಿ ಮಡದಿ, ಮಗಳ ಜೊತೆ ಮತ ಚಲಾಯಿಸಿದರು. ಮಗಳು ಸಾನ್ವಿ ಇದೇ ಮೊದಲ ಬಾರಿಗೆ ವೋಟ್ ಮಾಡಿದರು. ಹಾಗಾಗಿ ಸುದೀಪ್ ಇದನ್ನು ವಿಡಿಯೋ ಮಾಡಿಟ್ಟುಕೊಂಡಿದ್ದಾರೆ. ಮತ ಚಲಾಯಿಸಿದ ಮಾತನಾಡಿದ ಸುದೀಪ್ "ನಾನು ಪ್ರಚಾರ ಮಾಡಿದ ಮಾತ್ರಕ್ಕೆ ಸುಮ್ಮನಾಗಲ್ಲ, ಗೆದ್ದವರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಬೇಕು. ಆ ಬಗ್ಗೆ ಗಮನ ಹರಿಸುತ್ತೇನೆ" ಎಂದರು.

"ಉರಿಬಿಸಿಲಿನಲ್ಲಿ ಜನ ಪ್ರಚಾರಕ್ಕೆ ಬಂದಿದ್ದರು. ಮತದಾನಕ್ಕೂ ಅದೇ ರೀತಿ ಬರಲಿ. ಉತ್ತರ ಕರ್ನಾಟಕ ಪ್ರಚಾರ ವೇಳೆ ಸಾಕಷ್ಟು ಸಮಸ್ಯೆಗಳನ್ನ ನೋಡಿದ್ದೆ. ಅವೆಲ್ಲವನ್ನು ಗೆದ್ದವರು ಈಡೇರಲಿಸಬೇಕಿದೆ. ಪ್ರಚಾರಕ್ಕೆ ಹೋಗುವ ಮೊದಲು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೆ. ನಾನು ಪ್ರಚಾರ ಮಾಡಿದ ಮಾತ್ರಕ್ಕೆ ಸುಮ್ಮನಾಗಿಬಿಡುವುದಿಲ್ಲ. ಗೆದ್ದವರು ಕೆಲಸ ಮಾಡದಿದ್ದಾಗ ಆ ಸ್ಥಳಕ್ಕೆ ಹೋಗಿ ಮೈಕ್‌ನಲ್ಲಿ ಕೂಗಿ ಹೇಳುತ್ತೇನೆ. ನಾನು ಯಾವುದಕ್ಕೂ ಹಿಂದೇಟು ಹಾಕುವುದಿಲ್ಲ"
"ಹಣ ಹೆಂಡ ತಗೊಳೋರು ಇರೋವರೆಗೂ ಕೊಡುವವರು ಇರ್ತಾರೆ. ಮೊದಲು ತಗೊಳೋರು ಸರಿಯಾಗಬೇಕು. ನಮ್ಮಲ್ಲೇ ತಪ್ಪು ಇಟ್ಟುಕೊಂಡು ಅವರನ್ನು ದೂರುವುದು ಸರಿಯಲ್ಲ. ನನ್ನ ಮಗಳಿಗೆ ಇದು ಮೊದಲ ಮತದಾನ. ಹಾಗಾಗಿ ಮನೆಯಿಂದ ಬೂತ್‌ವರೆಗೂ ಆಕೆ ವೋಟ್ ಹಾಕೋಕೆ ಬರುವುದನ್ನು ವಿಡಿಯೋ ಮಾಡಿಕೊಂಡೆ. ಎಲ್ಲವನ್ನೂ ನಾನು ನೆನಪಿಗಾಗಿ ಇಟ್ಟುಕೊಳ್ಳುತ್ತೇನೆ. ಸಾನ್ವಿ ತನ್ನ ತಾತನ ಜೊತೆ ಚರ್ಚಿಸಿ ಯಾರಿಗೆ ಮತ ಹಾಕಬೇಕು, ಪಕ್ಷದ ಗುರುತಿನ ಬಗ್ಗೆ ಸಾಕಷ್ಟು ಮಾಹಿತಿ ಪಡೆದಳು" ಎಂದು ಸುದೀಪ್ ವಿವರಿಸಿದರು.
ತ್ಯಾಗರಾಜನಗರದ ಶ್ರೀ ಶಾರದಾ ದೇವಿ ಹೊಲಿಗೆ ತರಬೇತಿ ಕೇಂದ್ರದಲ್ಲಿ ನಟ ಧ್ರುವ ಸರ್ಜಾ ಮತ ಚಲಾಯಿಸಿದರು. ಪತ್ನಿ ಪ್ರೇರಣಾ, ತಂದೆ- ತಾಯಿಯೊಂದಿಗೆ ಬಂದು ಆಕ್ಷನ್ ಪ್ರಿನ್ಸ್ ವೋಟ್ ಮಾಡಿದರು. ರಾಚೆನಹಳ್ಳಿಯಲ್ಲಿರುವ ವಿದ್ಯಾಸಂಚಯಿನಿ ಶಾಲೆಯಲ್ಲಿ ಪತ್ನಿ ಗೀತಾ ಜೊತೆ ಬಂದು ನಟ ಶಿವರಾಜ್‌ಕುಮಾರ್ ಹಕ್ಕು ಚಲಾಯಿಸಿದರು. ಎಲ್ಲರೂ ಮತ ಚಲಾಯಿಸಿ ಎಂದು ಕರೆ ನೀಡಿದರು.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರ್ ಆರ್ ನಗರದಲ್ಲಿ ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದರು. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 'ಕಾಂತಾರ' ಚಿತ್ರದ ನಟಿ ಸಪ್ತಮಿ ಗೌಡ ಜೆಪಿ ನಗರದ ಸೆಂಟ್ ಪಾಲ್ಸ್ ಶಾಲೆಯಲ್ಲಿ ಮತ ಚಲಾಯಿಸಿದರು. ತಂದೆ ನಿವೃತ್ತ ಐಪಿಎಸ್ ಉಮೇಶ್ ಸಾಥ್ ನೀಡಿದರು.
ನಟ ದುನಿಯಾ ವಿಜಯ್ ಮತ ಚಲಾಯಿಸಿ "ಮತದಾನ ಮಾಡೋದು ನಮ್ಮ ಹಕ್ಕು. ಯಾರು ಮನೆಯಲ್ಲಿ ಸುಮ್ನೆ ಕೂರಬೇಡಿ. ಮಿಸ್ ಮಾಡದೇ ಎಲ್ಲರೂ ವೋಟ್ ಮಾಡಿ. ಚುನಾವಣೆ 5 ವರ್ಷಕ್ಕೊಮ್ಮೆ ಬರುತ್ತದೆ. ಇದರಿಂದ ಪ್ರಯೋಜನ ನಮಗೆ ಇರೋದು. ಬೇರೆಯವರಿಗೆ ಅಲ್ಲ. ಹಾಗಾಗಿ ತಪ್ಪದೇ ಮತ ಚಲಾಯಿಸಿ ಎಂದರು.
ವಿಜಯ ನಗರದ ಕೆವಿವಿ ಪಬ್ಲಿಕ್ ಶಾಲೆಯಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್ ಜೊತೆಯಾಗಿ ಬಂದದು ಮತ ತಮ್ಮ ಹಕ್ಕು ಚಲಾಯಿಸಿದರು. ರಕ್ಷಿತಾ ಪ್ರೇಮ್ ಮಾತನಾಡಿ "ಮತದಾನ ಎಲ್ಲರ ಹಕ್ಕು, ಅಧಿಕಾರ ಇದು. ಪ್ರತೀ ನಾಗರೀಕನಿಗೆ ಇದು ಒಂದು ಅವಕಾಶ. ಯಾರು ಕೆಲಸ ಮಾಡ್ತಾರೆ ಅವರಿಗೆ ಮತ ಹಾಕಿ. ಒಳ್ಳೆಯ ಅಭಿವೃದ್ಧಿ ಮಾಡುವವರಿಗೆ ಮತ ನೀಡಿ ಎಂದರು. ಪ್ರೇಮ್ "ಹಣ ತಗಂಡು ವೋಟ್ ಹಾಕಬೇಡಿ. ಪ್ರತಿಯೊಬ್ಬರು ಬಂದು ವೋಟ್ ಹಾಕಿ. ನಿಮ್ಮನ್ನ ನೀವು ಮಾರಿಕೊಳ್ಳಬೇಡಿ. ಯಾವುದೇ ಬೆಣ್ಣೆ ಮಾತಿಗೆ ಮರುಳಾಗಬೇಡಿ. ಒಳ್ಳೆಯ ವ್ಯಕ್ತಿ, ಕೆಲಸ ಮಾಡೋ ವ್ಯಕ್ತಿಗೆ ಮತ ನೀಡಿ. ಮತ ಮಾರಿಕೊಳ್ಳಬೇಡಿ ಎಂದರು.


Click it and Unblock the Notifications











