ಅಪ್ಪು ಮಗಳು ಧೃತಿ ಕಾಲೇಜಿನಲ್ಲಿ ಕೊಟ್ಟ ಫೈನಲ್ ಪ್ರಾಜೆಕ್ಟ್ ಏನು.. ಅದು ಹೇಗಿದೆ?
ಪುನೀತ್ ರಾಜ್‌ಕುಮಾರ್ ಮಗಳು ಅಮೆರಿಕಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸ್ಕಾಲರ್‌ಶಿಪ್ ಪಡೆದು ಅಲ್ಲಿ ಓದುತ್ತಿದ್ದ ಆಕೆ ಇದೀಗ ಅಂತಿಮ ವರ್ಷ ಪೂರೈಸಿ ಡಿಗ್ರಿ ಪಡೆದುಕೊಂಡಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ವಿಶ್ವವಿದ್ಯಾಲಯದಲ್ಲಿ ಲ್ಲಿ ಪದವಿ ಪಡೆದಿದ್ದಾರೆ.
ಇತ್ತೀಚೆಗೆ ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆದಿತ್ತು. ಈ ಸಮಾರಂಭಕ್ಕೆ ಧೃತಿ ತಾಯಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಸಹೋದರ ವಿನಯ್ ರಾಜ್‌ಕುಮಾರ್, ಸಹೋದರಿ ವಂದಿತಾ ಕೂಡ ಸಾಕ್ಷಿ ಆಗಿದ್ದರು. ಸೀರೆ ಉಟ್ಟು ಧೃತಿ ವೇದಿಕೆ ಏರಿ ಪದವಿ ಪ್ರಮಾಣ ಪತ್ರ(Convocation Certificate) ಸ್ವೀಕರಿಸಿದ್ದಾರೆ. ಇದು ದೊಡ್ಮನೆಯಲ್ಲಿ ಸಂಭ್ರಮ ಮನೆ ಮಾಡುವಂತೆ ಮಾಡಿದೆ. ಆಪ್ತರು, ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಶಿವರಾಜ್‌ಕುಮಾರ್ ಕೂಡ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿ ನನಗೆ ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಪದವಿ ಪತ್ರ ಪಡೆದು ಧೃತಿ ವೇದಿಕೆಯಿಂದ ಕೆಳಗೆ ಬರುತ್ತಿದ್ದಂತೆ ತಾಯಿ ಕಂಗ್ರಾಜ್ಯುಲೇಷನ್ಸ್ ಎಂದು ಸಂಭ್ರಮಿಸಿದ್ದಾರೆ. ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಅಮೆರಿಕಾದ ಪ್ರತಿಷ್ಠಿತ ವಿಶ್ವವಿದ್ಯಾಲಯ ಎನ್ನಲಾಗ್ತಿದೆ. ಕಲೆ ಮತ್ತು ವಿನ್ಯಾಸದ ವಿವಿಧ ಭಾಗಗಳಲ್ಲಿ ಪದವಿಪೂರ್ವ ಮತ್ತು ಪದವಿ ತರಗತಿಗಳಲ್ಲಿ ವಿದ್ಯಾರ್ಥಿಗಳು ಅಲ್ಲಿ ಕಲಿಯುತ್ತಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಸೋಫಿಯಾ ಹೈ ಸ್ಕೂಲ್‌ನಲ್ಲಿ ಧೃತಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಬಳಿಕ ವಿದ್ಯಾಶಿಲ್ಪ್ ಅಕಾಡೆಮಿಯಲ್ಲಿ ಕಲಿತ್ತಿದ್ದರು. ಬಳಿಕ ನ್ಯೂಯಾರ್ಕ್‌ನಲ್ಲಿರುವ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಕಾಲೇಜು ಸೇರಿದ್ದರು. ಪದವಿ ಪತ್ರಕ್ಕಾಗಿ ವಿದ್ಯಾರ್ಥಿಗಳು ತಮ್ಮ ಪ್ರಬಂಧ(Thesis) ಅನ್ನು ಸಲ್ಲಿಸಬೇಕಾಗಿರುತ್ತದೆ. 6 ದಿನಗಳ ಹಿಂದೆಯೇ ತಮ್ಮ ಥೀಸಿಸ್ ಬಗ್ಗೆ ಧೃತಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು.
ಅಂತಿಮ ವರ್ಷದ ಥೀಸಿಸ್‌ಗಾಗಿ ಧೃತಿ ಒಂದು ಕಲಾಕೃತಿಯನ್ನು ಸಿದ್ಧಪಡಿಸಿದ್ದಾರೆ. ಅದರ ಅರ್ಥ ಏನು? ಕಲ್ಪನೆ ಮೂಡಿದ್ದು ಹೇಗೆ? ಸಿದ್ಧಪಡಿಸಿದ್ದು ಹೇಗೆ? ಎಂದು ವೀಡಿಯೋ ಮಾಹಿತಿ ಹಂಚಿಕೊಂಡಿದ್ದರು. ಅಂದಹಾಗೆ ಆ ಥೀಸಿಸ್ ಹೆಸರು 'ಲಾಕ್ಸ್ ಆಫ್ ಲೈಫ್ ಅಂಡ್ ಗ್ರೋತ್'(Locks Of Life And Growth).
"ಒಮ್ಮೆ ನಾನು ಬೇಸಿಗೆ ಕಾಲದಲ್ಲಿ ಬೆಳಗ್ಗೆ ನನ್ನು ಕುಟುಂಬ ಸದಸ್ಯರ ಜೊತೆ ಸಮಯ ಕಳೆಯುತ್ತಿದ್ದಾಗ ಹುಲ್ಲಿನ ಮೇಲೆ ಮಲಗಿದ್ದೆ. ಒಂದು ಜಗತ್ತನ್ನು ಸೃಷ್ಟಿಸಿ ಅದನ್ನು ನಿಯಂತ್ರಿಸುವ ಸ್ತ್ರೀ ದೇವತೆಯ ಕಲ್ಪನೆಯನ್ನು ನಾನು ಕಲ್ಪಿಸಿಕೊಂಡೆ. ಈ ಪರಿಕಲ್ಪನೆಯೊಂದಿಗೆ ದೃಶ್ಯೀಕರಿಸಲು ಮತ್ತು ಅದರ ಸುತ್ತಾ ಥೀಸಿಸ್ ಮಾಡಲು ನಾನು ಬಯಸಿದ್ದೆ" ಎಂದು ಧೃತಿ ರಾಜ್‌ಕುಮಾರ್ ಮೆಲುಕು ಹಾಕಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ನಲ್ಲಿ ಈ ಬಗ್ಗೆ ವಿವರಿಸಿರುವ ಅಪ್ಪು ಮಗಳು "ಭೂಮಿಯಲ್ಲಿ ಮಾತ್ರವಲ್ಲದೆ ನಮ್ಮ ದೇಹವು ಬದುಕಲು ಅಗತ್ಯವಿರುವ ಅಂಶಗಳಾದ ಆಮ್ಲಜನಕ ಮತ್ತು ನೀರನ್ನು ಪ್ರತಿನಿಧಿಸುವ ನೀರಿನಲ್ಲಿಯೂ ಒಂದು ಜಗತ್ತು ಇದ್ದರೆ ಎಷ್ಟು ಅದ್ಭುತವಾಗಿರುತ್ತದೆ ಎಂದು ನಾನು ಯೋಚಿಸಲು ಪ್ರಾರಂಭಿಸಿದೆ. ಈ ಜಗತ್ತು ದೇವತೆಯ ಕೂದಲಿನೊಳಗೆ ಏಕೆ ಕ್ಯುರೇಟ್ ಆಗಿದೆ ಎಂಬುದರ ಹಿಂದಿನ ಕಲ್ಪನೆಯೆಂದರೆ ಭದ್ರತೆ ಮತ್ತು ಸುರಕ್ಷತೆಯ ಪ್ರಜ್ಞೆಯನ್ನು ತೋರಿಸುತ್ತದೆ" ಎನ್ನುವ ಆಲೋಚನೆಯೊಂದಿಗೆ ಇದು ಶುರುವಾಯಿತು ಎಂದಿದ್ದಾರೆ.
ಧೃತಿ ತಾನೇ ಕಲಾಕೃತಿಯನ್ನು ಸಿದ್ಧಪಡಿಸಿ, ಅದಕ್ಕೆ ಬಣ್ಣ ಬಳಿದು ಒಂದು ಸುಂದರ ರೂಪ ಕೊಟ್ಟಿದ್ದಾರೆ. ಅದನ್ನು ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಅಪ್ಪು ಮಗಳು ಆಗಾಗ್ಗೆ ಫೋಟೊ, ವೀಡಿಯೋ ಪೋಸ್ಟ್ ಮಾಡುತ್ತಿರುತ್ತಾರೆ. ಆಕೆಯ ಪೋಸ್ಟ್‌ಗಳಿಗೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಾರೆ. ಸದ್ಯ ಆಕೆಯ ಗ್ರ್ಯಾಜುಯೇಷನ್ ಡೇ ಸಂಭ್ರಮದ ಪೋಟೊ, ವೀಡಿಯೋ ವೈರಲ್ ಆಗ್ತಿದೆ.


Click it and Unblock the Notifications











