ನಿಮ್ಮನ್ನ ನಕ್ಕು ನಗಿಸಲು ನಿಮ್ಮ ಮನೆಗೆ ಮತ್ತೊಮ್ಮೆ ಬರ್ತಿದ್ದಾರೆ ಡ್ರೋನ್ ಪ್ರತಾಪ್ ; ನಗೋಕೆ ನೀವು ರೆಡಿನಾ..?
ಬಿಗ್ ಬಾಸ್ ಮನೆ ಖಾಲಿಯಾಗಿದೆ. ಆದರೆ ಇವತ್ತು ಕೂಡ ವಾದ ನಿಂತಿಲ್ಲ. ಡ್ರೋನ್ ಪ್ರತಾಪ್ ಪರ ವಕಾಲತ್ತು ವಹಿಸಿ ಇವತ್ತು ಕೂಡ ಅನೇಕರು ತಮ್ಮ ಅಭಿಪ್ರಾಯಗಳನ್ನ ಹಂಚಿಕೊಳ್ತಿದ್ದಾರೆ. ಡ್ರೋನ್ ಪ್ರತಾಪ್ ಮುಡಿಗೆ ಬಿಗ್ ಬಾಸ್ ಕಿರೀಟ ತೊಡಿಸಬೇಕಿತ್ತು ಎಂಬ ಬೇಸರವನ್ನ ಹೊರ ಹಾಕ್ತಿದ್ದಾರೆ. ಇನ್ನೂ ಬೇಸರ ಹಾಗೂ ಅಸಹನೆಯನ್ನ ಮರೆತು ಡ್ರೋನ್ ಪ್ರತಾಪ್ ತಮ್ಮ ಬಿಗ್ ಬಾಸ್ ಮನೆಯ ಅನುಭವ ಹಂಚಿಕೊಳ್ತಿದ್ದಾರೆ. ಇದರ ನಡುವೆ ಡ್ರೋನ್ ಪ್ರತಾಪ್ ಅವರ ಅಖಿಲ ಕರ್ನಾಟಕ ಅಭಿಮಾನಿಗಳು ಕುಣಿದು ಕುಪ್ಪಳಿಸುವ ಸುದ್ದಿಯೊಂದು ಹೊರ ಬಂದಿದೆ. ಮತ್ತೊಂದು ರಿಯಾಲಿಟಿ ಶೋನಲ್ಲಿ ಡ್ರೋನ್ ಹಾರಲಿದೆ.
ಹೌದು, ಗಿಚ್ಚಿ ಗಿಲಿಗಿಲಿಯ ಬಗ್ಗೆ ನಿಮಗೆ ಗೊತ್ತಿರಬೇಕು. ಬಿಗ್ ಬಾಸ್ ನ ಪ್ರಸಾರ ಮಾಡ್ತಿದ್ದ ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ಜನಪ್ರಿಯ ಕಾರ್ಯಕ್ರಮ ಇದು. ಇನ್ನೇನು ಈ ರಿಯಾಲಿಟಿ ಶೋನ ಹೊಚ್ಚ ಹೊಸ ಸೀಸನ್ ಆರಂಭವಾಗಲಿದೆ. ಫೆ.3ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ ಎಂಟು ಗಂಟೆಗೆ ಅಂದರೆ ಬಿಗ್ ಬಾಸ್ ಪ್ರಸಾರವಾಗ್ತಿದ್ದ ಸಮಯದಲ್ಲಿಯೇ 'ಗಿಚ್ಚಿ ಗಿಲಿಗಿಲಿ' ಸೀಸನ್ 3 ಪ್ರಸಾರವಾಗಲಿದೆ. ವಿಶೇಷ ಅಂದರೆ ಇದೇ ಗಿಚ್ಚಿ ಗಿಲಿಗಿಲಿಯ ಮೂರನೇ ಸೀಸನ್ ನಲ್ಲಿ ಡ್ರೋನ್ ಪ್ರತಾಪ್ ಸ್ಫರ್ಧಿಯಾಗಿ ಮತ್ತೊಮ್ಮೆ ತಮ್ಮ ಅದೃಷ್ಟವನ್ನ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ.

ಡ್ರೋನ್ ಪ್ರತಾಪ್ ಜೊತೆ ಇಶಾನಿ ಹಾಗೂ ತುಕಾಲಿ ಸಂತೋಷ್ !
ಕೇವಲ ಡ್ರೋನ್ ಪ್ರತಾಪ್ ಅಷ್ಟೇ ಅಲ್ಲ ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ೦6ನೇ ಸ್ಥಾನಕ್ಕೆ ತೃಪ್ತಿ ಪಟ್ಟ ತುಕಾಲಿ ಸಂತೋಷ್ ಕೂಡ, ಗಿಚ್ಚಿ ಗಿಲಿ ಗಿಲಿಯ ಸೀಸನ್ 3ರ ಅಖಾಡದಲ್ಲಿ ಇರಲಿದ್ದಾರೆ. ಇನ್ನೂಗೊಂದಲದ ಮಾತುಗಳಿಂದಲೇ ಪೇಚಿಗೆ ಸಿಲುಕಿ, ಬಿಗ್ ಬಾಸ್ ಮನೆಯಲ್ಲಿ ನಿರ್ದಿಷ್ಟ ಗುಂಪಿನ ಜೊತೆ ಗುರುತಿಸಿಕೊಂಡಿದ್ದ ರ್ಯಾಪರ್ ಇಶಾನಿ ಕೂಡ ಈ ಕಾರ್ಯಕ್ರಮದ ಮೂಲಕ ನಿಮ್ಮೆಲ್ಲರನ್ನ ಮನರಂಜಿಸುವ ಪ್ರಯತ್ನ ಮಾಡಲಿದ್ದಾರೆ

ಡ್ರೋನ್ ಪ್ರತಾಪ್ VS ಇಶಾನಿ !
ಬಿಗ್ ಬಾಸ್ ಮನೆಗೆ ಉಳಿದ ಸ್ಫರ್ಧಿಗಳ ಜೊತೆ ರೀ ಎಂಟ್ರಿ ಕೊಟ್ಟಿದ್ದ ಇಶಾನಿ, ಕಾಗೆ ಕಕ್ಕ ಉದಾಹರಣೆಯನ್ನು ತೆಗೆದುಕೊಂಡು ಡ್ರೋನ್ ಪ್ರತಾಪ್ ಅವರನ್ನ ನಿಂದಿಸಿದ್ದರು. ಪ್ರತಾಪ್ ಅವರನ್ನು ಕಾಗೆಗೆ ಹೋಲಿಸಿ, ಡ್ರೋನ್ ಪ್ರತಾಪ್ ಅವರ ಅಸಂಖ್ಯಾತ ಅಭಿಮಾನಿಗಳನ್ನ ಕೆರಳಿಸಿದ್ದರು. ಆ ನಂತರ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದರು ಇಶಾನಿ. ಆದರೆ ಈಗ ಇಶಾನಿ ಹಾಗೂ ಡ್ರೋನ್ ಪ್ರತಾಪ್ ಮತ್ತೊಮ್ಮೆ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿದ್ದಾರೆ. ಈ ಕಾರಣಕ್ಕೆ ಗಿಚ್ಚಿ ಗಿಲಿ ಗಿಲಿ ಸೀಸನ್ 3ರಲ್ಲಿ ಇಬ್ಬರು ಗೌರವ ಮನೋಭಾವನೆಯೊಂದಿಗೆ ಅಖಾಡಕ್ಕಿಳಿಯುತ್ತಾರಾ ಅಥವಾ ಇಲ್ಲಿಯೂ ಕಾಲೆಳೆಯುವ ಕಾರ್ಯಕ್ರಮವನ್ನ ಮುಂದುವರೆಸುತ್ತಾರಾ ಅನ್ನುವ ಕುತೂಹಲ ಈಗ ಗರಿಗೇದರಿದೆ.
ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಸೆನ್ಸೇಷನಲ್ ಸ್ಟಾರ್ !
ಸಾಧು ಕೋಕಿಲಾ ಹಾಗೂ ಶ್ರುತಿ ಜೊತೆ ಈ ಬಾರಿ ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್, ಸ್ಫರ್ಧಿಗಳ ಸಾಮರ್ಥ್ಯವನ್ನ ಅಳೆದು ತೂಗಿ ಲೆಕ್ಕ ಹಾಕಲಿದ್ದಾರೆ. ಇನ್ನೂ ಕಾರ್ಯಕ್ರಮದ ನಿರೂಪಣೆಯನ್ನ ನಟ ಹಾಗೂ ನಿರೂಪಕ ನಿರಂಜನ್ ದೇಶಪಾಂಡೆ ಮಾಡಲಿದ್ದಾರೆ.

ಕರುನಾಡಿನೆಲ್ಲೆಡೆ ಇನ್ನೂ ಎತ್ತರಕ್ಕೆ ಹಾರುತ್ತಾ ಡ್ರೋನ್..?
ಹಿಂದೆ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಮೂಲಕ ಜಗಪ್ಪ, ಚಂದ್ರಪ್ರಭ, ವಂಶಿಕಾ ಅಂಜನಿ ಕಶ್ಯಪ, ನಿವೇದಿತಾ ಗೌಡ, ರಾಘವೇಂದ್ರ, ಸುಶ್ಮಿತಾ, ಶಿವು, ವಿನೋದ್ ಗೊಬ್ರಗಾಲ ಮುಂತಾದವರು ಮನೆ ಹಾಗೂ ಮನಗಳನ್ನ ತಲುಪಿದ್ದರು. ಖ್ಯಾತಿಯನ್ನೂ ಗಳಿಸಿದ್ದರು. ಈಗ ಡ್ರೋನ್ ಪ್ರತಾಪ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಬಿಗ್ ಬಾಸ್ ಮೂಲಕ ತನ್ನ ವರ್ಚಸ್ಸು ಹೆಚ್ಚಿಸಿಕೊಂಡ ಡ್ರೋನ್ ಪ್ರತಾಪ್, ಗಿಚ್ಚಿ ಗಿಲಿ ಗಿಲಿಯ ಮೂಲಕ ಖ್ಯಾತಿಯ ತುತ್ತ ತುದಿಗೆ ತಲುಪುತ್ತಾರಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ.


Click it and Unblock the Notifications











