16 ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ: ಎಫ್ ಎಸ್ ಎಲ್ ವರದಿ ಬಳಿಕ ಮೌನ ಮುರಿದ ಸಂಜನಾ
ಡ್ರಗ್ಸ್ ಪ್ರಕರಣ ಸಂಬಂಧ ಸ್ಯಾಂಡಲ್ ವುಡ್ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಡ್ರಗ್ಸ್ ಪ್ರಕರಣ ಸಂಬಂಧ ಜೈಲು ಸೇರಿದ್ದ ಈ ಇಬ್ಬರೂ ನಟಿಯರು ಈಗ ಜಾಮೀನಿನ ಮೇಲೆ ಹೊರಬಂದಿದ್ದರು. ಇಬ್ಬರ ಹೇರ್ ಸ್ಯಾಂಪಲ್ ವರದಿಗಾಗಿ ಕಾಯಲಾಗುತ್ತಿತ್ತು. ಇದೀಗ ರಾಗಿಣಿ ಮತ್ತು ಸಂಜನಾ ಇಬ್ಬರ ಹೇರ್ ಸ್ಯಾಂಪಲ್ ವರದಿ ಬಂದಿದ್ದು, ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ.
ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಸೇರಿದಂತೆ 20 ಕ್ಕೂ ಹೆಚ್ಚು ಮಂದಿಯನ್ನು ಸಿಸಿಬಿ ಪೊಲೀಸರು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬಂಧಿಸಿದ್ದರು. ಎಲ್ಲರ ತಲೆ ಕೂದಲು ಮಾದರಿ, ಮೂತ್ರದ ಮಾದರಿಗಳನ್ನು ಸಂಗ್ರಹಿಸಿ ಹೈದರಾಬಾದ್‌ನ ಎಫ್‌ಎಸ್‌ಎಲ್ (ಫೊರ್ಯಾನ್ಸಿಕ್ ಸೈನ್ಸ್ ಲ್ಯಾಬೊರೇಟರಿ)ಗೆ ಕಳಿಸಲಾಗಿತ್ತು. ಇದೀಗ ವರದಿಯಲ್ಲಿ ಡ್ರಗ್ಸ್ ಸೇವಿರುವುದು ದೃಢಪಟ್ಟಿದೆ. ಇಬ್ಬರೂ ಮತ್ತೆ ಜೈಲು ಸೇರುತ್ತಾರಾ ಎನ್ನುವ ಚರ್ಚೆ ಪ್ರಾರಂಭವಾಗಿದೆ.
ಈ ನಡುವೆ ನಟಿ ಸಂಜನಾ ಗಲ್ರಾನಿ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಹಾಕಿದ್ದಾರೆ. ಹೇರ್ ಸ್ಯಾಂಪಲ್ ವರದಿ ಬಂದ ಬಳಿಕ ಇದೇ ಮೊದಲ ಬಾರಿಗೆ ಸಂಜನಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣ ಬಳಿಕ ಮಾನಸಿಕ ಅನಾರೋಗ್ಯ, ನಿದ್ರಾಹೀನತೆಯಿಂದ ಬಳಲುತ್ತಿದ್ದು, ಪ್ರತಿದಿನ 16 ಮಾತ್ರೆಗಳನ್ನು ಸೇವಿಸುತ್ತಿರುವುದಾಗಿ ಹೇಳಿದ್ದಾರೆ. ಮುಂದೆ ಓದಿ...

16 ಮಾತ್ರೆಗಳನ್ನು ಸೇವಿಸುತ್ತಿದ್ದೆ- ಸಂಜನಾ
"ನೋವು ನಿವಾರಕ ಮಾತ್ರೆ, ನಿದ್ರೆ ಮಾತ್ರೆ ಸೇರಿದಂತೆ ನಾನು ಪ್ರತಿದಿನ 16 ಮಾತ್ರೆಗಳನ್ನು ಸೇವಿಸುತ್ತಿದ್ದೆ. ಈ ಪ್ರಕರಣ ಶುರುವಾದಾಗಿನಿಂದ ನಿದ್ರಾಹೀನತೆ ಮತ್ತು ಮಾನಸಿಕ ಅನಾರೋಗ್ಯದ ಕಾರಣ ವೈದ್ಯರನ್ನು ಭೇಟಿ ಮಾಡುತ್ತಿದ್ದೆ. ಮನೆಗೆ ಬಂದ ತಕ್ಷಣ ನನಗೆ ಶಸ್ತ್ರ ಚಿಕಿತ್ಸೆ ಆಯಿತು" ಎಂದು ಸಂಜನಾ ಬರೆದುಕೊಂಡಿದ್ದಾರೆ.

ಎಫ್ ಎಸ್ ಎಲ್ ವರದಿ ದೊಡ್ಡ ವಿಚಾರವಲ್ಲ
"ಅಳು ನಿಲ್ಲಿಸುವುದಕ್ಕಾಗಿ ಮತ್ತು ನಿದ್ರೆ ಬರಲಿ ಎಂದು ನನಗೆ ಹೆಚ್ಚು ಡೋಸೇಜ್ ಇರುವ ಮೂಡ್ ಎಲಿವೇಟರ್ಗಳನ್ನು ನೀಡಿದ್ದರು. ಮೂರು ತಿಂಗಳಿಂದ ಪ್ರತಿ ದಿನ ನಾನು ಗಂಟೆಗಟ್ಟಲೆ ಅಳುತ್ತಿದ್ದೆ. ಕೆಮಿಕಲ್ ಇರುವ ಔಷಧಿಗಳನ್ನು ನಾನು ಸೇವಿಸಿರುವುದಕ್ಕೆ ದಾಖಲೆ ಇದೆ. ಹಾಗಾಗಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ವಾಸಿಟಿವ್ ಅಥವಾ ನೆಗೆಟಿವ್ ಎಂಬುದು ದೊಡ್ಡ ವಿಚಾರ ಅಲ್ಲ. ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇದೆ. ನ್ಯಾಯ ಸಿಗಲಿದೆ" ಎಂದು ಸಂಜನಾ ಗಲ್ರಾನಿ ಬರೆದುಕೊಂಡಿದ್ದಾರೆ.

ಮಾನಸಿಕ ಶಾಂತಿ ಹಾಳಾಗುತ್ತಿದೆ
"ಸಂಪೂರ್ಣ ವಿವರ ಗೊತ್ತಿಲ್ಲದೇ ನನ್ನ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಿ. ನನ್ನ ಬದುಕು ಸಹಜ ಸ್ಥಿತಿಗೆ ಬರಲಿ ಎಂದು ನಾನು ಬಯಸುತ್ತಿದ್ದೇನೆ. ಈ ವಿಚಾರವನ್ನು ಆಧಾರವಿಲ್ಲದೇ ವೈಭವೀಕರಿಸುವುದರಿಂದ ನನ್ನ ಮಾನಸಿಕ ಶಾಂತಿ ಹಾಳಾಗುತ್ತಿದೆ. ಈ ಕಾಲ ಕೂಡ ಕಳೆದುಹೋಗುತ್ತದೆ. ಆರೋಪಗಳಿಂದ ನನಗೆ ಕಿರುಕುಳ ನೀಡುತ್ತಿರುವವರಿಗೆ ಶಿಕ್ಷೆ ನೀಡುವುದು ಬೇಡ. ಅವರಿಗೆ ಒಳ್ಳೆಯದಾಗಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಸಂಜನಾ ಗಲ್ರಾನಿ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ದೀರ್ಘವಾಗಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಸಂಜನಾ ತಾಯಿಯ ಪ್ರತಿಕ್ರಿಯೆ
ಇತ್ತೀಚಿಗಷ್ಟೆ ಎಫ್‌ಎಸ್‌ಎಲ್ ವರದಿ ಕುರಿತಂತೆ ಸಂಜನಾ ಗಲ್ರಾನಿ ತಾಯಿ ರೇಷ್ಮಾ ಗಲ್ರಾನಿ ಮಾಧ್ಯಮಗಳು ಪ್ರಶ್ನೆ ಮಾಡಿದ್ದು, ಮಾಧ್ಯಮಗಳ ಪ್ರಶ್ನೆಗೆ ಕಣ್ಣೀರು ಹಾಕಿದ ರೇಷ್ಮಾ, ''ನಾವು ಬಹಳ ನೊಂದಿದ್ದೇವೆ. ನಮಗೆ ಆಗಿರುವ ಬೇಜಾರನ್ನು ಹೇಳಿಕೊಳ್ಳಲು ಪದಗಳಿಲ್ಲ. ಸಾವಿನ ದವಡೆಯಿಂದ ನಮ್ಮ ಮಗಳು ಬಚಾವ್ ಆಗಿ ಬಂದಿದ್ದಾಳೆ. ದಯವಿಟ್ಟು ಅವಳಿಗೆ ಒಳ್ಳೆಯದಾಗಲಿ ಎಂದು ಹಾರೈಸಿ. ಎಫ್‌ಎಸ್‌ಎಲ್ ವರದಿ ಬಗ್ಗೆ ನಮಗೆ ಏನೂ ಗೊತ್ತಿಲ್ಲ'' ಎಂದು ಕಣ್ಣೀರಿಡುತ್ತಲೇ ಹೇಳಿದ್ದರು.


Click it and Unblock the Notifications











