ಸಾನ್ಯಾ ಐಯ್ಯರ್ ಕೂದಲು ಎಳೆದು, ಹೊಡೆದು ಅಸಭ್ಯ ವರ್ತನೆ ತೋರಿದ ಯುವಕ, ಸಿಟ್ಟಿಗೆದ್ದ ನಟಿ
ಮುದ್ದು ಮುಖದ ನಟಿ ಸಾನ್ಯಾ ಐಯ್ಯರ್ ಅಷ್ಟೆ ಧೈರ್ಯಶಾಲಿಯೂ ಹೌದು. ಬಿಗ್‌ಬಾಸ್ ಒಟಿಟಿ ಹಾಗೂ ಟಿವಿ ಎರಡರಲ್ಲೂ ಹಲವು ಭಾರಿ ತಮ್ಮ ಧೈರ್ಯ ಹಾಗೂ ಬಿಂದಾಸ್‌ತನ ಪ್ರದರ್ಶಿಸಿದ್ದಾರೆ ಸಾನ್ಯಾ. ಇದೀಗ ವೇದಿಕೆಯೊಂದರಲ್ಲಿಯೂ ಸಾನ್ಯಾ ತಾವು ಗಟ್ಟಿಗಿತ್ತಿಯೆಂದು ಸಾಬೀತುಪಡಿಸಿದ್ದಾರೆ.
ಆಗಿದ್ದಿಷ್ಟು, ನಟಿ ಸಾನ್ಯಾ ಐಯ್ಯರ್, ಇತ್ತೀಚೆಗೆ ಪುತ್ತೂರಿನ ಕಂಬಳ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಸಾನ್ಯಾ ಐಯ್ಯರ್ ಭಾಷಣ ಮಾಡುವಾಗ ಯುವಕನೋರ್ವ ಕುಡಿದು ಕೆಟ್ಟದಾಗಿ ವರ್ತಿಸಿದ್ದ, 'ಸಾನ್ಯಾ ಐ ಲವ್ ಯೂ' ಎನ್ನುತ್ತಾ, ಕಿರುಚಾಡುತ್ತಾ ಸಭೆಯಲ್ಲಿ ಮುಜುಗರ ಉಂಟು ಮಾಡಿದ್ದ. ಹಾಗಿದ್ದರೂ ಸಹ ನಟಿ ಸಾನ್ಯಾ ಅದನ್ನು ಗಮನಕ್ಕೆ ತೆಗೆದುಕೊಳ್ಳದೆ, ಕಂಬಳ, ತುಳುನಾಡಿನ ಬಗ್ಗೆ, ತುಳು ಭಾಷೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ವೇದಿಕೆ ಕಾರ್ಯಕ್ರಮದ ಬಳಿಕ ಸಾನ್ಯಾ ವೇದಿಕೆ ಇಳಿದಾಗ ಸೆಲ್ಫಿಗಾಗಿ ಸಾನ್ಯಾ ಕೈ ಹಿಡಿದು ಎಳೆದಿದ್ದಾನೆ ಆದರೆ ಆಗ ನಟಿಯು ಸೆಲ್ಫಿ ನಿರಾಕರಿಸಿ ಅಲ್ಲಿಂದ ತೆರಳಿದ್ದಾರೆ.
ಆದರೆ ಬಳಿಕ ಮತ್ತೆ ಕಂಬಳ ನೋಡಲು ಗೆಳತಿಯೊಟ್ಟಿಗೆ ಸಾನ್ಯಾ ಮರಳಿದಾಗ ಸಾನ್ಯಾರನ್ನು ಮತ್ತೆ ಪೀಡಿಸಿದ ಯುವಕ ನಟಿಯ ಕೂದಲು ಹಿಡಿದು ಎಳೆದಿದ್ದಾನೆ, ಸಾನ್ಯಾ ವಿರೋಧ ವ್ಯಕ್ತಪಡಿಸಿದಾಗ, ಆಕೆಯ ಕಪಾಳಕ್ಕೆ ಹೊಡೆದಿದ್ದಾನೆ. ಆಗ ಅಲ್ಲಿಯೇ ಇದ್ದ ಕೆಲವರು ಯುವಕನನ್ನು ಎಳೆದು ಅವನಿಗೆ ಧರ್ಮದೇಟು ನೀಡಿದ್ದಾರೆ.

ಘಟನೆ ಬಳಿಕ ಸಾನ್ಯಾ ಹಾಗೂ ಆಕೆಯ ಗೆಳೆತಿಯೊಬ್ಬರು ಘಟನೆ ಬಗ್ಗೆ ವೇದಿಕೆ ಮೇಲೆಯೇ ಆಯೋಜಕರೊಟ್ಟಿಗೆ ಏರಿದ ಧ್ವನಿಯಲ್ಲಿ ಪ್ರಶ್ನೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಯೋಕರೊಬ್ಬರಿಗೆ ಬೆರಳು ತೋರಿಸಿ, ''ಸರ್, ಹೆಣ್ಣು ಮಕ್ಕಳ ಮೈ ಮುಟ್ಟಿದರೆ ಚೆನ್ನಾಗಿರಲ್ಲ'' ಎಂದು ಖಡಕ್ ಆಗಿ ಸಾನ್ಯಾ ಎಚ್ಚರಿಕೆ ನೀಡುತ್ತಿರುವ ವೀಡಿಯೋ ಇದೀಗ ವೈರಲ್ ಆಗಿದೆ. ಸಾನ್ಯಾ ಬಳಿ ಅಸಭ್ಯವಾಗಿ ವರ್ತಿಸಿರುವ ಯುವಕನ ಬಗ್ಗೆ ದೂರು ದಾಖಲಾಗಿರುವ ಬಗ್ಗೆಯಾಗಲಿ, ವಶಕ್ಕೆ ಪಡೆದ ಬಗ್ಗೆಯಾಗಲಿ ವರದಿಯಾಗಿಲ್ಲ.
ಘಟನೆಗೂ ಮುನ್ನ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ್ದ ನಟಿ ಸಾನ್ಯಾ ಐಯ್ಯರ್, ''ನನಗೆ ತುಳು ಬರೋದಿಲ್ಲ. ಆದರೆ ನನಗೆ ತುಳು ಭಾಷೆ ತುಂಬಾ ಇಷ್ಟ. ಕಂಬಳ ಕೇವಲ ಸಾಂಸ್ಕೃತಿಕ ಕಲೆ ಅಥವಾ ಕ್ರೀಡೆ ಅಲ್ಲ. ಕಂಬಳ ಎನ್ನುವುದು ಜೀವನದ ಮೌಲ್ಯ. ತುಳುನಾಡಿನ ಸಂಸ್ಕೃತಿ ನಮಗೆ ಜೀವನ ಪಾಠ ಕಲಿಸಿಕೊಡುತ್ತದೆ. ಎಲ್ಲಾ ಕಲೆಗಳ ಹಿಂದೆ ಪಾಠಗಳಿವೆ'' ಎಂದು ಹೇಳಿದ್ದರು.


Click it and Unblock the Notifications











