ಕೊನೆ ಪಕ್ಷ ಹಾಸಿಗೆ ದಿಂಬಾದರೂ ಕೊಡಿ ಎಂದ ದರ್ಶನ್, ಜಾಮೀನಿಗೆ ಅರ್ಜಿ ಸಲ್ಲಿಸಿದ ಪವಿತ್ರಾ ಗೌಡ
ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು.. ಕರ್ಮದ ಫಲ ಇದೇ ಜನ್ಮದಲ್ಲಿ ಅನುಭವಿಸಬೇಕು.. ಈ ಮಾತುಗಳಿಗೆ ಸದ್ಯ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್ ಅನುದಿನ ಅನುಕ್ಷಣ ಪರಪ್ಪನ ಅಗ್ರಹಾರದಲ್ಲಿ ನರಳುತ್ತಿದ್ದಾರೆ. ಯಾಕೆಂದರೆ.. ಈ ಬಾರಿ ಹಿಂದಿನಂತೆ ವಿಐಪಿ ಸೌಲಭ್ಯ ಇಲ್ಲ. ಬಾಯ್ತಪ್ಪಿ ಕೇಳುವ ಅವಕಾಶ ಕೂಡ ಇಲ್ಲ. ಸುಪ್ರೀಂ ಕೋರ್ಟ್ ಖಂಡತುಂಡವಾಗಿ ಈ ವಿಚಾರದಲ್ಲಿ ಆದೇಶವನ್ನು ನೀಡಿದೆ. ಯಾವ ವಿಶೇಷ ಸೌಲಭ್ಯ ನೀಡದಂತೆ ಹೇಳಿದೆ.
ಈ ಹಿನ್ನೆಲೆ.. ಸದ್ಯ ದರ್ಶನ್ ಕೊನೆ ಪಕ್ಷ ಹಾಸಿಗೆ ಮತ್ತು ದಿಂಬಾದರೂ ಕೊಡಿ ಎಂದು ಅರ್ಜಿಯನ್ನು ಸಲ್ಲಿಸಿದ್ದಾರೆ. ಹೌದು, ''ನ್ಯೂಸ್ 18'' ಕನ್ನಡ ವರದಿಯ ಪ್ರಕಾರ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ದರ್ಶನ್‌ಗೆ ಕೇವಲ ಚಾಪೆ ಮತ್ತು ತೆಳುವಾದ ಬ್ಲಾಂಕೆಟ್ ಮಾತ್ರ ನೀಡಲಾಗಿದೆ.

ಈ ಕಾರಣಕ್ಕೆ ಜೈಲಿನಲ್ಲಿ ನರಕಯಾತನೆಯನ್ನು ಅನುಭವಿಸುತ್ತಿರುವ ದರ್ಶನ್ ಹೆಚ್ಚುವರಿ ಬೆಡ್ ಶೀಟ್ ಮತ್ತು ದಿಂಬು ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಇಂದು ಸೆಷನ್ ಕೋರ್ಟ್‌ನಲ್ಲಿ ನಡೆದಿದ್ದು ಚಳಿಗಾಲ ಇದೆ ಆದರೆ ದರ್ಶನ್‌ಗೆ ಬೆಡ್‌ಶಿಟ್ ಮತ್ತು ದಿಂಬು ನೀಡುತ್ತಿಲ್ಲ. ಕೇಳಿದರೆ ನ್ಯಾಯಾಲಯದಿಂದ ನಿರ್ದೇಶನ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಿದ್ದಾರೆ ಎಂದು ದರ್ಶನ್ ಪರ ವಕೀಲರಾದ ಸುನೀಲ್ ಕುಮಾರ್ ವಾದ ಮಾಡಿದ್ದಾರೆ.
ಇನ್ನೂ ದರ್ಶನ್ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ. ಈ ಹಿನ್ನೆಲೆ ಆರೋಪಿಗಳು ಜಾಮೀನು ಪಡೆಯುವಾಗ ಯಾವ ಯಾವ ಜೈಲಿನಲ್ಲಿ ಇದ್ದರೋ ಅದೇ ಜೈಲಿಗೆ ಶಿಫ್ಟ್ ಮಾಡಬೇಕು. ಜೈಲಿನ ಭದ್ರತೆ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಮಾಡುವಂತೆ ಅರ್ಜಿ ಸಲ್ಲಿಸಲಾಗಿದೆ.ದರ್ಶನ್ ಬಳ್ಳಾರಿ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ, ನಾಗರಾಜ್ ಕಲಬುರಗಿ ಜೈಲಿಗೆ, ಪ್ರದೂಷ್ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡುವಂತೆ ಹಾಗೂ ಪವಿತ್ರಾ ಗೌಡ ಮತ್ತು ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯುವಂತೆ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಹೀಗಾಗಿ ಯಾವುದೇ ಕ್ಷಣದಲ್ಲಿ ದರ್ಶನ್ ಬಳ್ಳಾರಿಗೆ ಮತ್ತೆ ಶಿಫ್ಟ್ ಆಗುವ ಸಾಧ್ಯತೆ ಕೂಡ ಇದ್ದು,ದರ್ಶನ್ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬಳ್ಳಾರಿಗೆ ಹೋಗಿ ಮಗನನ್ನು ನೋಡಲು ಕಷ್ಟ. ಹೀಗಾಗಿ ಬಳ್ಳಾರಿ ಶಿಫ್ಟ್ ಮಾಡದಂತೆ ನಟನ ಪರ ವಕೀಲ ಸುನೀಲ್ ಕುಮಾರ್ ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಕೂಡ ಇಂದು ನಡೆದಿದ್ದು ಎರಡು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಸೆಪ್ಟೆಂಬರ್ 2ಕ್ಕೆ ಮುಂದೂಡಲಾಗಿದೆ.
ಮತ್ತೊಂದು ಕಡೆ ರೇಣುಕಾ ಸ್ವಾಮಿ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಕೂಡ ವಿಲವಿಲ ಒದ್ದಾಡುತ್ತಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾದ ಹಿನ್ನೆಲೆ ಕೆಲ ಹಂತದ ನ್ಯಾಯಾಲಯದಲ್ಲಿ ಮತ್ತೆ ತಮ್ಮ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ.
ಈ ಕುರಿತು ಇಂದು ವಾದವನ್ನು ಮಾಡಿರುವ ಪವಿತ್ರಾ ಗೌಡ ಅವರ ರ ವಕೀಲರಾದ ಬಾಲನ್,ಸುಪ್ರೀಂಕೋರ್ಟ್ ಆದೇಶವನ್ನು ನಾವು ಪ್ರಶ್ನಿಸುತ್ತಿಲ್ಲ ಆದರೆ ಆದೇಶದಲ್ಲಿ ತಾಂತ್ರಿಕ ಲೋಪ ಇದೆ, ಆರೋಪಪಟ್ಟಿಯನ್ನು ಬಿಎನ್‌ಎಸ್ ಬದಲು ಸಿಆರ್‌ಪಿಸಿ ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿರುವುದರಿಂದ ಕಡ್ಡಾಯ ಜಾಮೀನಿಗೆ ನಮ್ಮ ಕಕ್ಷಿದಾರರು ಅರ್ಹರು, ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ವಾದ ಮಾಡಿದ್ದಾರೆ. ಬಾಲನ್ ಅವರ ಈ ವಾದಕ್ಕೆ ಪ್ರತಿವಾದಿಯಾದ ಸಚಿನ್ ಆಕ್ಷೇಪ ವ್ಯಕ್ತಪಡಿಸಿದ್ದು, ಜಾಮೀನು ರದ್ದು ಮಾಡದಂತೆ ಮನವಿಯನ್ನು ಮಾಡಿಕೊಂಡಿದ್ದಾರೆ. ಈ ಅರ್ಜಿಯ ವಿಚಾರಣೆ ಕೂಡ ಸೆಪ್ಟೆಂಬರ್ 2ಕ್ಕೆ ಮುಂದೂಡಲಾಗಿದೆ.


Click it and Unblock the Notifications











