twitter
    For Quick Alerts
    ALLOW NOTIFICATIONS  
    For Daily Alerts

    'ಬುಸುಗುಡುತ್ತಿದೆ' ಡಬ್ಬಿಂಗ್ ಧಾರಾವಾಹಿ: ಬದಲಾಗಲಿದೆಯೇ ಕಿರುತೆರೆ?

    By ಫಿಲ್ಮ್ ಡೆಸ್ಕ್
    |

    ಲಾಕ್ ಡೌನ್ ಅವಧಿ ಆರಂಭವಾಗಿ ಮುಗಿಯುವುದರೊಳಗೆ ಏನೆಲ್ಲಾ ಬದಲಾವಣೆಗಳಾಗಿವೆ... ಈ ಬದಲಾವಣೆಗಳಿಗೆ ಒಗ್ಗಿಕೊಳ್ಳುವುದು ಅನಿವಾರ್ಯ ಎನ್ನಲಾಗುತ್ತಿದೆ. ಬದಲಾಗುತ್ತಿರುವುದು ಜನಜೀವನ ಮಾತ್ರವಲ್ಲ, ಮನರಂಜನಾ ಲೋಕ ಕೂಡ. ಸಿನಿಮಾಗಳಿಗೆ ಹಾಕುವ ಬಜೆಟ್ ಬದಲಾಗಲಿದೆ, ನಟರು-ನಿರ್ದೇಶಕರ ಆಯ್ಕೆಗಳು ಬದಲಾಗಲಿವೆ, ಸಿನಿಮಾಗಳ ಕಂಟೆಂಟ್ ಬದಲಾಗಲಿದೆ ಎನ್ನಲಾಗುತ್ತಿದೆ.

    ಧಾರಾವಾಹಿ ಜಗತ್ತೂ ಈ ಬದಲಾವಣೆಗಳಿಂದ ಹೊರತಲ್ಲ. ಮುಖ್ಯವಾಗಿ ಕನ್ನಡ ಕಿರುತೆರೆ ಈಗಾಗಲೇ ಈ ಬದಲಾವಣೆಯನ್ನು ಎದುರುಗೊಳ್ಳುತ್ತಿದೆ. ಕಿರುತೆರೆಯಲ್ಲಿ ಡಬ್ಬಿಂಗ್ ಸಿನಿಮಾಗಳ ಪ್ರಸಾರದ ಬೆನ್ನಲ್ಲೇ ಡಬ್ಬಿಂಗ್ ಧಾರಾವಾಹಿಗಳ ಪರ್ವವೂ ಆರಂಭವಾಗಿದೆ. ತೆಲುಗು ಮತ್ತು ತಮಿಳು ಡಬ್ಬಿಂಗ್ ಚಿತ್ರಗಳಿಗೆ ವೇದಿಕೆ ಮುಕ್ತಗೊಂಡಿದೆ. ಅದರ ಜತೆಯಲ್ಲಿಯೇ ಕಿರುತೆರೆಯ ಕೆಲವು ವಾಹಿನಿಗಳು ಪರಭಾಷೆಯ ಧಾರಾವಾಹಿಗಳನ್ನೂ ಕನ್ನಡದಲ್ಲಿ ಪ್ರಸಾರ ಆರಂಭಿಸಿವೆ. ಮುಂದೆ ಓದಿ...

    ಡಬ್ಬಿಂಗ್ ಆಶಯ ಈಡೇರಿಕೆ

    ಡಬ್ಬಿಂಗ್ ಆಶಯ ಈಡೇರಿಕೆ

    ಡಬ್ಬಿಂಗ್ ವಿರುದ್ಧದ ಚಿತ್ರರಂಗ ಮತ್ತು ಧಾರಾವಾಹಿ ರಂಗದ ಕೂಗು ಇಂದಿನದ್ದಲ್ಲ. ಡಬ್ಬಿಂಗ್ ಚಿತ್ರಗಳಿಗೆ ಅವಕಾಶ ನೀಡಬಾರದು ಎಂಬ ಹೋರಾಟ ತೀವ್ರವಾಗಿದ್ದ ಕಾಲದಲ್ಲಿ ಡಬ್ಬಿಂಗ್ ಪರ ಹೋರಾಟವೂ ಹುಟ್ಟಿದವು. ಕಾನೂನಿನ ಹೋರಾಟದಲ್ಲಿ ಡಬ್ಬಿಂಗ್ ಪರವಾದಿಗಳು ಜಯಿಸಿದರು. ಡಬ್ಬಿಂಗ್ ಮಾಡಬಹುದಾದ ಗುಣಮಟ್ಟದ ಚಿತ್ರಗಳು ಮತ್ತು ಕಾರ್ಯಕ್ರಮಗಳನ್ನು ಕನ್ನಡಕ್ಕೆ ತರುವುದು ಅವರ ಉದ್ದೇಶವಾಗಿತ್ತು. ಅದೀಗ ಈಡೇರುತ್ತಿದೆ.

    'ಮಾಲ್ಗುಡಿ ಡೇಸ್' ಕನ್ನಡದಲ್ಲಿ ಸಿದ್ಧವಾಗುವ ಹಿಂದಿನ ಶ್ರಮವೇನು?: ಹತ್ತು ವರ್ಷದ ಹೋರಾಟ ಹೇಗಿತ್ತು?'ಮಾಲ್ಗುಡಿ ಡೇಸ್' ಕನ್ನಡದಲ್ಲಿ ಸಿದ್ಧವಾಗುವ ಹಿಂದಿನ ಶ್ರಮವೇನು?: ಹತ್ತು ವರ್ಷದ ಹೋರಾಟ ಹೇಗಿತ್ತು?

    ಕನ್ನಡದಲ್ಲೇ ನೋಡುವ ಅವಕಾಶ

    ಕನ್ನಡದಲ್ಲೇ ನೋಡುವ ಅವಕಾಶ

    ಕನ್ನಡಿಗರು ಸೂಪರ್ ಹಿಟ್ ಆದ ಚಿತ್ರಗಳನ್ನು, ಧಾರಾವಾಹಿ ಹಾಗೂ ಕಾರ್ಯಕ್ರಮಗಳನ್ನು ಅದರ ಮೂಲ ಭಾಷೆಯ ಬದಲು ಕನ್ನಡದಲ್ಲಿಯೇ ನೋಡುವ ಅವಕಾಶ ಸಿಗುತ್ತಿದೆ. ಹಿಂದಿಯಲ್ಲಿ ತಯಾರಾಗಿದ್ದ ಅದ್ಧೂರಿ ವೆಚ್ಚದ 'ರಾಮಾಯಣ' ಮಾತೃಭಾಷೆಯಲ್ಲಿಯೇ ಕನ್ನಡಿಗರಿಗೆ ದಕ್ಕುತ್ತಿದೆ. ಕನ್ನಡಿಗರಿಗೆ ವಂಚಿತವಾಗಿದ್ದ ಕನ್ನಡಿಗರದ್ದೇ ಆದ 'ಮಾಲ್ಗುಡಿ ಡೇಸ್'ಅನ್ನೂ ಆನಂದಿಸುತ್ತಿದ್ದಾರೆ. ಇವುಗಳಲ್ಲದೆ ಇನ್ನೂ ಅನೇಕ ಧಾರಾವಾಹಿಗಳು ಲಗ್ಗೆ ಇರಿಸುತ್ತಿವೆ. ಇದು ಸಂತೋಷದ ಸಂಗತಿಯೂ ಹೌದು, ಆತಂಕದ ವಿಚಾರವೂ ಹೌದು.

    ಹಕ್ಕು-ಕೆಲಸದ ಸಂಘರ್ಷ

    ಹಕ್ಕು-ಕೆಲಸದ ಸಂಘರ್ಷ

    ಡಬ್ಬಿಂಗ್ ಬಂದರೆ ನಮ್ಮ ಕಲಾವಿದರು, ತಂತ್ರಜ್ಞರಿಗೆ ಕೆಲಸವಿಲ್ಲದಂತೆ ಆಗುತ್ತದೆ ಎನ್ನುವುದು ಡಬ್ಬಿಂಗ್ ವಿರೋಧಿಗಳ ಹೇಳಿಕೆ. ಡಬ್ಬಿಂಗ್‌ನಿಂದ ಕನ್ನಡದ ಕಂಠದಾನ ಕಲಾವಿದರು ಮತ್ತು ಕೆಲವು ತಂತ್ರಜ್ಞರಿಗೆ ಕೆಲಸ ಸಿಗುತ್ತದೆ. ಡಬ್ಬಿಂಗ್ ಬಂದರೆ ನಿಮಗೆ ಪರಭಾಷೆಯ ಧಾರಾವಾಹಿಗಳನ್ನು ರೀಮೇಕ್ ಮಾಡುವ ಅವಕಾಶ ಕೈತಪ್ಪುತ್ತದೆ. ಕನ್ನಡಿಗರು ತಮ್ಮ ಭಾಷೆಯಲ್ಲಿ ಇಷ್ಟವಾದ ಕಾರ್ಯಕ್ರಮ ನೋಡುವುದು ಅವರ ಹಕ್ಕು. ಅದನ್ನು ಕಸಿದುಕೊಳ್ಳುವಂತಿಲ್ಲ ಎಂದು ಡಬ್ಬಿಂಗ್ ಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದರು. ಡಬ್ಬಿಂಗ್ ವಿರೋಧಿ ಚಟುವಟಿಕೆ ನಡೆಸಿದ್ದಕ್ಕಾಗಿ ಅನೇಕರು ದಂಡ ಕಟ್ಟುವ ಪರಿಸ್ಥಿತಿಯನ್ನೂ ತಂದುಕೊಂಡಿದ್ದರು.

    ಡಬ್ಬಿಂಗ್ ವಿರುದ್ಧ ಮತ್ತೆ ಗುಡುಗಿದ ವಾಟಾಳ್ ನಾಗರಾಜ್: ಡಬ್ಬಿಂಗ್ ಪರ ಹೋರಾಟಗಾರರ ಆಕ್ರೋಶಡಬ್ಬಿಂಗ್ ವಿರುದ್ಧ ಮತ್ತೆ ಗುಡುಗಿದ ವಾಟಾಳ್ ನಾಗರಾಜ್: ಡಬ್ಬಿಂಗ್ ಪರ ಹೋರಾಟಗಾರರ ಆಕ್ರೋಶ

    ಡಬ್ಬಿಂಗ್ ಸರಳ ಸುಲಭ

    ಡಬ್ಬಿಂಗ್ ಸರಳ ಸುಲಭ

    ಕನ್ನಡಕ್ಕೆ ಡಬ್ಬಿಂಗ್ ತರುವುದು ಒಂದು ಪ್ರಯತ್ನವಾದರೆ, ಅವುಗಳ ಮೇಲೆ ನಿಯಂತ್ರಣವಿರಿಸುವುದೂ ಇನ್ನೊಂದು ತುರ್ತು ಅಗತ್ಯ. ಟೆಲಿವಿಷನ್ ವಾಹಿನಿಗಳು ಏಕಾಏಕಿ ಡಬ್ಬಿಂಗ್‌ಗೆ ತೆರೆದುಕೊಳ್ಳುತ್ತಿರುವ ರಭಸ ಗಮನಿಸಿದಾಗ ಈ ಅಗತ್ಯದ ಚರ್ಚೆ ಮುಖ್ಯವಾಗುತ್ತದೆ. ಲಾಕ್ ಡೌನ್ ಕಾರಣದಿಂದ ಧಾರಾವಾಹಿಗಳ ಚಿತ್ರೀಕರಣದ ಮೇಲೆ ಹಲವಾರು ಮಿತಿಗಳಿವೆ. ಇದರಿಂದ ವೆಚ್ಚವೂ ಹೆಚ್ಚಾಗುತ್ತಿದೆ. ಕಥೆಗಳ ಸ್ವರೂಪವನ್ನು ಬದಲಿಸಬೇಕಾಗಿದೆ. ಇಷ್ಟೆಲ್ಲ ಸಾಹಸಪಟ್ಟು ಧಾರಾವಾಹಿಗಳನ್ನು ಮಾಡುವುದಕ್ಕಿಂತ ಡಬ್ಬಿಂಗ್ ಸರಳ ಸುಲಭ ಸೂತ್ರ ಎಂಬ ನೀತಿಯನ್ನು ವಾಹಿನಿಗಳು ಅಳವಡಿಸಿಕೊಳ್ಳುವ ಅಪಾಯವಿದೆ.

    ಬಲವಂತದ ಹೇರಿಕೆ

    ಬಲವಂತದ ಹೇರಿಕೆ

    ಇದು ಕನ್ನಡಿಗರ ಮೇಲೆ ಪರಭಾಷೆಯ ಧಾರಾವಾಹಿಗಳ ಬಲವಂತದ ಹೇರಿಕೆಯೂ ಆಗಬಹುದು. ಕನ್ನಡದಲ್ಲಿರುವ ಸೀಮಿತ ಮನರಂಜನಾ ವಾಹಿನಿಗಳಲ್ಲಿ ಡಬ್ಬಿಂಗ್ ಧಾರಾವಾಹಿಗಳೇ ರಾರಾಜಿಸಿದರೆ ವೀಕ್ಷಕರಿಗೆ ಕನ್ನಡಿಗರೇ ತಯಾರಿಸಿದ, ಕನ್ನಡದ ಕಲಾವಿದರೇ ನಟಿಸಿದ ಧಾರಾವಾಹಿಗಳೇ ಸಿಗದಂತಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಒಳ್ಳೆಯ ಕಂಟೆಂಟ್ ನೀಡುವ ಮೂಲಕ ಅಸ್ತಿತ್ವ ಉಳಿಸಿಕೊಳ್ಳುವುದು ಧಾರಾವಾಹಿ ತಂಡಗಳಿಗಿರುವ ಸವಾಲು. ಆದರೆ ವಾಹಿನಿಗಳು ಅದಕ್ಕೆ ಅವಕಾಶ ನೀಡಿದರೆ ಮಾತ್ರ ಸಾಧ್ಯ ಎನ್ನುವುದನ್ನು ಮರೆಯುವಂತಿಲ್ಲ.

    'ಮಗಳು ಜಾನಕಿ' ಧಾರಾವಾಹಿ ಅಂತ್ಯಕ್ಕೆ ಕಾರಣವೇನು?: ಟಿಎನ್ ಸೀತಾರಾಮ್ ನೀಡಿದ ಸ್ಪಷ್ಟನೆ'ಮಗಳು ಜಾನಕಿ' ಧಾರಾವಾಹಿ ಅಂತ್ಯಕ್ಕೆ ಕಾರಣವೇನು?: ಟಿಎನ್ ಸೀತಾರಾಮ್ ನೀಡಿದ ಸ್ಪಷ್ಟನೆ

    ಪೂರಕ ಎನ್ನುವಂತಿಲ್ಲ

    ಪೂರಕ ಎನ್ನುವಂತಿಲ್ಲ

    ಕನ್ನಡದಲ್ಲಿನ ಮನರಂಜನಾ ವಾಹಿನಿಗಳ ಮಾಲೀಕರು ಇಲ್ಲಿನವರಲ್ಲ. ಹಾಗಾಗಿ ಅವುಗಳಿಗೆ ಕನ್ನಡ ಭಾಷೆ, ಸಾಹಿತ್ಯ, ಮನರಂಜನೆಯ ಬಗ್ಗೆ ಪ್ರೀತಿ ಮತ್ತು ಕಾಳಜಿ ಇರಬೇಕು ಎಂದು ಅಪೇಕ್ಷಿಸುವಂತಿಲ್ಲ. ಡಬ್ಬಿಂಗ್ ಮಾಡಲು ಅವರಿಗೆ ಕಂಟೆಂಟ್‌ಗಳ ಕೊರತೆಯೂ ಇಲ್ಲ. ಡಬ್ಬಿಂಗ್ ಬಂದರೆ ಸಂಸ್ಕೃತಿ ಹಾಳಾಗುತ್ತದೆ ಎಂದು ಡಬ್ಬಿಂಗ್ ವಿರೋಧಿಗಳು ಅಲವತ್ತುಕೊಂಡಿದ್ದರು. ರೀಮೇಕ್ ಧಾರಾವಾಹಿಗಳು ಅಥವಾ ಅತ್ತೆ ಸೊಸೆ ಕಿತ್ತಾಟ, ಕೌಟುಂಬಿಕ ವೈಷಮ್ಯದ ಕಥೆಯುಳ್ಳ ಧಾರಾವಾಹಿಗಳು ಸಂಸ್ಕೃತಿಯನ್ನು ಕಾಪಾಡುವ ಭರವಸೆಯನ್ನೇನೂ ಮೂಡಿಸಿರಲಿಲ್ಲ. ಹಾಗೆಯೇ ಮುಂದೆ ಬರುವ ಎಲ್ಲ ಡಬ್ಬಿಂಗ್ ಕಾರ್ಯಕ್ರಮಗಳೂ ಭಾಷೆಯ ಬೆಳವಣಿಗೆಗೆ ಪೂರಕವಾಗಿವೆ ಎನ್ನಲೂ ಸಾಧ್ಯವಿಲ್ಲ.

    ಬುಸುಗುಡುವ ಧಾರಾವಾಹಿಗಳು

    ಬುಸುಗುಡುವ ಧಾರಾವಾಹಿಗಳು

    'ಮಾಲ್ಗುಡಿ ಡೇಸ್'ನಂತಹ ಕನ್ನಡಿಗರು ಬಯಸುವ ಧಾರಾವಾಹಿಗಳ ಜತೆಗೇ ಪೌರಾಣಿಕ ಮತ್ತು ದೇವರು ದಿಂಡಿರ ಕಥೆಗಳು ಎಂದು ನಂಬಿಸುವಂತಹ ದ್ವೇಷ, ಕ್ರೌರ್ಯದ ಅಂಶಗಳುಳ್ಳ ಹಾಗೂ ಗ್ರಾಫಿಕ್ಸ್ ಆಧಾರಿತ ಧಾರಾವಾಹಿಗಳೂ ಹಾವಿನಂತೆ ನುಗ್ಗಿ ಬುಸುಗುಡುತ್ತಿರುವ ಸದ್ದು ಕೇಳತೊಡಗಿವೆ. ಈ ಧಾರಾವಾಹಿಗಳು ಜನಪ್ರಿಯತೆ ಪಡೆಯುತ್ತಾ ಕಥೆ ಮುಗಿದರೂ ಹೊಸ ಭಾಗಗಳನ್ನು ಸೃಷ್ಟಿಸಿ ನೀಡುತ್ತಿವೆ. ಕನ್ನಡದಲ್ಲಿಯೂ ಇಂತಹ ಕಥೆಯುಳ್ಳ ಧಾರಾವಾಹಿಗಳು ಸೃಷ್ಟಿಯಾಗಿದ್ದವು. ಕಥೆಯ ಮೂಲ ಯಾರದ್ದೇ ಆಗಿದ್ದರೂ ಕನ್ನಡೀಕರಣಗೊಂಡ ಬಗೆ ಮೆಚ್ಚುಗೆಗೆ ವ್ಯಕ್ತವಾಗಿತ್ತು. ಮಿಗಿಲಾಗಿ ಈ ಧಾರಾವಾಹಿಗಳಲ್ಲಿ ಇದ್ದವರು ಕನ್ನಡದ ಪಾತ್ರಧಾರಿಗಳೇ. ಆದರೆ ಈಗ ಹಿಂದಿಯ ತಾರೆಯರ ನೀಲಿ ಕಣ್ಣು ತೆರೆಯ ಮೇಲೆ ರಾರಾಜಿಸಲಿದೆ.

    ವೀಕ್ಷಕರ ಹಕ್ಕನ್ನು ನಿರ್ಧರಿಸುವವರು

    ವೀಕ್ಷಕರ ಹಕ್ಕನ್ನು ನಿರ್ಧರಿಸುವವರು

    ಮುಂದಿನ ದಿನಗಳಲ್ಲಿ ಅತ್ತೆ ಸೊಸೆ ಕಾದಾಟ, ಮನೆ ಒಡೆಯುವ ಕಥೆಗಳ ಧಾರಾವಾಹಿಗಳು ಹಿಂದಿ ಅಥವಾ ಬೇರೆ ಭಾಷೆಯಿಂದ ನೇರವಾಗಿ ಕನ್ನಡಿಗರ ಮನೆಯೊಳಗೆ ಕನ್ನಡದಲ್ಲಿಯೇ ತೂರಿಕೊಳ್ಳಬಹುದು. ಈ ಆತಂಕವನ್ನು ಕಿರುತೆರೆ ಕೂಟಗಳು ಹಿಂದಿನಿಂದಲೂ ವ್ಯಕ್ತಪಡಿಸುತ್ತಾ ಬಂದಿದ್ದವು. ಆದರೆ ಕಾನೂನಿನ ಪ್ರಕಾರ ವೀಕ್ಷಕರ ಹಕ್ಕನ್ನು ಕಸಿದುಕೊಳ್ಳುವಂತಿಲ್ಲ. ಆದರಿಲ್ಲಿ ವೀಕ್ಷಕರ ಹಕ್ಕನ್ನು ನಿರ್ಧರಿಸುವವರು ಯಾರು?

    ವೀಕ್ಷಕರು ಡಬ್ಬಿಂಗ್ ಸಿನಿಮಾಗಳನ್ನು ಬೇಡ ಎಂದು ತಿರಸ್ಕರಿಸಲು ಇರುವ ಅವಕಾಶ ಧಾರಾವಾಹಿಗಳಲ್ಲಿ ಇಲ್ಲ. ಏಕೆಂದರೆ ಯಾವ ಧಾರಾವಾಹಿ ಪ್ರಸಾರವಾಗಬೇಕು ಎಂದು ನಿರ್ಧರಿಸುವುದು ಚಾನೆಲ್‌ಗಳ ಮುಖ್ಯಸ್ಥರು. ಇರುವ ಬೆರಳಣಿಕೆಯ ವಾಹಿನಿಗಳು ತಮ್ಮ ಆರ್ಥಿಕ ಹೊರೆ ತಪ್ಪಿಸಲು ಕಾರ್ಯಕ್ರಮಗಳನ್ನು ಡಬ್ಬಿಂಗ್‌ಮಯಗೊಳಿಸಿದರೂ ಅಚ್ಚರಿಯಿಲ್ಲ. ಇದರಿಂದ ಧಾರಾವಾಹಿ ನಿರ್ಮಾಣ ಸಂಸ್ಥೆಗಳು ಮತ್ತು ಕಲಾವಿದರು ದೊಡ್ಡ ಮಟ್ಟದಲ್ಲಿ ಉದ್ಯೋಗ ನಷ್ಟ ಅನುಭವಿಸುವ ಅಪಾಯವಿದೆ. ಹಾಗಾದರೆ ಈ ನಷ್ಟ ಕಲಾವಿದರಿಗೆ ಮಾತ್ರವೇ? ವೀಕ್ಷಕರಿಗೂ ಅಲ್ಲವೇ?

    English summary
    Dubbing serials have started entering Kannada television industry made threats to the existence of Kannada serials.
    Monday, June 8, 2020, 23:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X