Duniya Suri: "ದರ್ಶನ್ ಸರ್‌ಗೆ ಆಕ್ಷನ್ ಕಟ್ ಹೇಳಿದ್ದೆ.. ಯಶ್ ಸರ್ ನಿರ್ದೇಶನ ಮಾಡೋಕ್ಕೆ ನನ್ನ ಕೈಲಿ ಆಗಲ್ಲ": ಸೂರಿ
ದುನಿಯಾ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ನಿಧಾನವಾಗಿ ಸಿನಿಮಾ ಪ್ರಚಾರ ಆರಂಭವಾಗಿದೆ. ಕಳೆದೆರಡು ವರ್ಷಗಳಿಂದ ಸೈಲೆಂಟ್ ಆಗಿದ್ದ ಸೂರಿ ಸಿನಿಮಾ ಬಗ್ಗೆ ಮಾತನಾಡಲು ಆರಂಭಿಸಿದ್ದರು. ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಈ ವೇಳೆ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ದುನಿಯಾ ವಿಜಯ್ ನಟನೆಯ 'ದುನಿಯಾ' ಸಿನಿಮಾ ಮೂಲಕ ಸೂರಿ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ಬಳಿಕ 'ಜಾಕಿ', 'ಅಣ್ಣಾ ಬಾಂಡ್', 'ಕಡ್ಡಿಪುಡಿ', 'ಕೆಂಡ ಸಂಪಿಗೆ', 'ದೊಡ್ಮನೆ ಹುಡ್ಗ', 'ಟಗರು' ರೀತಿಯ ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟರು. 'ದುನಿಯಾ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮುನ್ನ 'ಮಣಿ' ಹಾಗೂ 'ರಂಗ ಎಸ್‌ಎಸ್‌ಎಲ್‌ಸಿ' ಸಿನಿಮಾಗಳಿಗೆ ಯೋಗರಾಜ್ ಭಟ್ಟರ ಜೊತೆ ಬರಹಗಾರರಾಗಿ ಸೂರಿ ಕೆಲಸ ಮಾಡಿದ್ದರು.

ಬರಹಗಾರ ತುಷಾರ್ ರಂಗನಾಥ್ ಜೊತೆಗೆ ಒಂದಷ್ಟು ಸಿನಿಮಾಗಳಲ್ಲಿ ಸೂರಿ ಕೆಲಸ ಮಾಡಿದ್ದರು. ಹಾಗಾಗಿ 'ಸುಂಟರಗಾಳಿ' ಚಿತ್ರದಲ್ಲಿ ನಟ ದರ್ಶನ್ ಸರ್‌ಗೆ ಆಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿತ್ತು. ದರ್ಶನ್ ಸರ್ ಜೊತೆ ಒಳ್ಳೆ ಒಡನಾಟ ಇದೆ ಎಂದು ಸೂರಿ ಹೇಳಿದ್ದಾರೆ. ಗೌರೀಶ್ ಅಕ್ಕಿ ಯೂಟ್ಯೂಬ್ ಸಂದರ್ಶನದಲ್ಲಿ ನಿರ್ದೇಶಕ ದುನಿಯಾ ಸೂರಿ ಮಾತನಾಡಿದ್ದಾರೆ. ಸ್ಟಾರ್ ನಟರು ವರ್ಷಕ್ಕೆ 3 ಸಿನಿಮಾ ಯಾಕೆ ಮಾಡುತ್ತಿಲ್ಲ, ಯಾಕೆ ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾ ನಡುವೆ ಗ್ಯಾಪ್ ಆಗುತ್ತಿದೆ? ಎನ್ನುವ ಬಗ್ಗೆ ಸೂರಿ ಮಾತನಾಡುತ್ತಾ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
"ನಾನೇ ಈ ಹಿಂದೆ ಪ್ರಜಾವಾಣಿ ಸಂದರ್ಶನದಲ್ಲಿ ಮಾತನಾಡುತ್ತಾ ಯಾಕೆ ಸ್ಟಾರ್‌ಗಳು ಹೆಚ್ಚು ಸಿನಿಮಾ ಮಾಡ್ತಿಲ್ಲ ಅಂತ ಕೇಳಿದ್ದೆ. ಈಗ ನನಗೆ ಅದು ತಿರುಗುಬಾಣವಾಗಿದೆ. ನನ್ನ ಸಿನಿಮಾ ಮಾಡುವ ವೇಗದ ಬಗ್ಗೆ ಮಾತನಾಡಿದ್ದೆ. ಈಗ ನಾನೇ 150 ದಿನ ಮಾಡ್ತಿದ್ದೀನಿ. ನಮ್ಮ ಹುಡುಗರೆಲ್ಲಾ ಸಿನಿಮಾ ಮಾಡ್ತಿದ್ದಾರೆ. ಮಾರ್ಟಿನ್ ದೊಡ್ಡದಾಗಿ ಆಗ್ತಿದೆ. ಅಭಿಯ 'ಸೌಂಡ್ ಇಂಜಿನಿಯರ್', ವಿಕ್ಕಿ ಕಾಲಾಪತ್ಥರ್ ಸಿನಿಮಾ ಮಾಡ್ತಿದ್ದಾನೆ. ಎಲ್ಲಾ 100 ದಿನ ಶೂಟಿಂಗ್ ಆಗುತ್ತಿದೆ"

"ನಾನು ಆಗ ಹೇಳಿದ್ದಕ್ಕೂ ಈಗ ಆಗುತ್ತಿರುವುದಕ್ಕೂ ಬಹಳ ವ್ಯತ್ಯಾಸ ಇದೆ. ನಾನು ಒಪ್ಪಿಕೊಳ್ಳುತ್ತೀನಿ. ದೊಡ್ಡದಾಗಿ ಸಿನಿಮಾ ಮಾಡಬೇಕು ಎಂದಾಗ ಸಮಯ ಹಿಡಿಯುತ್ತದೆ. ಅಷ್ಟು ಸಮಯ ಕೇಳುತ್ತದೆ" ಎಂದು ಸೂರಿ ಹೇಳಿದ್ದಾರೆ. "ದರ್ಶನ್ ಸರ್ ಜೊತೆ ನಾನು ವರ್ಕ್ ಮಾಡಿದ್ದೀನಿ. ಸುದೀಪ್ ಸರ್ ಜೊತೆಗೂ ಕೆಲಸ ಮಾಡಿದ್ದೇನೆ. ರಂಗ ಎಸ್‌ಎಸ್‌ಎಲ್‌ಸಿ ಚಿತ್ರದಲ್ಲಿ ಡೈಲಾಗ್ಸ್, ಸ್ಕ್ರೀನ್‌ಪ್ಲೇಗೆ ಮಾಡಿದ್ದೆ. ನಾನು ಸ್ಟಾರ್ ಅಂತ ಕೆಲಸ ಮಾಡಿದ್ದೆ ಸುದೀಪ್ ಸರ್ ಜೊತೆ"
"ತುಷಾರ್ ರಂಗನಾಥ್ ಅಂತ ಇದ್ದರು. ಅವರು 'ಸುಂಟರಗಾಳಿ' ಚಿತ್ರಕ್ಕೆ ಬರಹಗಾರರಾಗಿದ್ದರು. ಅವರ ಜೊತೆ ಆ ಚಿತ್ರಕ್ಕೆ ಕೆಲಸ ಮಾಡದ್ದೆ. ಸಾಧು ಕೋಕಿಲ ನಿರ್ದೇಶನ. ಆ ಟೈಮಲ್ಲಿ ದರ್ಶನ್, ಸುದೀಪ್ ಇಬ್ಬರು ಸ್ಟಾರ್‌ಗಳಾಗಿದ್ದರು. ನಾನು ಇಬ್ಬರೊಟ್ಟಿಗೂ ಕೆಲಸ ಮಾಡಿದ್ದೆ. 'ಸುಂಟರಗಾಳಿ' ಚಿತ್ರದಲ್ಲಿ ಒಳ್ಳೆ ಅನುಭವ ಏನು ಅಂದ್ರೆ ನಾನು ಬರವಣಿಗೆಯಲ್ಲಿ ಇರಲಿಲ್ಲ. ರಂಗ ಪೂರ್ತಿ ವಹಿಸಿಕೊಂಡಿದ್ದರು. ಹಾಗಾಗಿ ನಾನು ದರ್ಶನ್ ಅವರಿಗೆ ಬಹಳ ಹತ್ತಿರವಾಗಿದ್ದೆ. ಸಾಧು ಸರ್ ಕುಡ ಆಕ್ಟ್ ಮಾಡ್ತಿದ್ದರಿಂದ ನಾನು ಕೆಲ ಸನ್ನಿವೇಶ ಡೈರೆಕ್ಟ್ ಮಾಡಬೇಕಾಗಿತ್ತು. ಹಾಗಾಗಿ ದರ್ಶನ್ ಸರ್ ಜೊತೆ ಒಳ್ಳೆ ಸ್ನೇಹ ಇದೆ.
"ಸುದೀಪ್ ಸರ್ ಜೊತೆಗೂ ಒಳ್ಳೆ ಸ್ನೇಹ ಇದೆ. ಕೆಲವರಿಗೆ ನನ್ನ ಬಗ್ಗೆ ಗೊತ್ತಿಲ್ಲ. ಯಾರೋ ನನ್ನ ಹೆಸರಿನಲ್ಲಿ ಫೇಕ್ ಸೋಶಿಯಲ್ ಮೀಡಿಯಾ ಐಡಿ ಕ್ರಿಯೇಟ್ ಮಾಡಿ ಸುದೀಪ್ ಅವರನ್ನು ಬೈದಂತೆ ಮಾಡುತ್ತಿದ್ದಾರೆ. ನನ್ನ ಹಾಗೂ ಸುದೀಪ್ ಸರ್ ಬಾಂಧವ್ಯ ಅವರಿಗೆ ಗೊತ್ತಿಲ್ಲ. ಡೈಲಾಗ್ ಬರೀ ಎಂದು ಸುದೀಪ್ ಸರ್ ನನಗೆ 2 ಸಾವಿರ ಕೊಟ್ಟಿದ್ದು ನನಗೆ ನೆನಪಿದೆ. ಬಳಿಕ ನನಗೆ ಅವರೊಟ್ಟಿಗೆ ಕೆಲಸ ಮಾಡಲು ಆಗಲಿಲ್ಲ"
"ದರ್ಶನ್ ದರ್ ಜೊತೆ ಒಳ್ಳೆ ಸ್ನೇಹ ಇತ್ತು. ದುನಿಯಾ ಸಿನಿಮಾ ಮಾಡುವಾಗ ಎಲ್ಲರ ಬೆಂಬಲ ನಮಗಿತ್ತು. ಈಗ ಅವರೊಟ್ಟಿಗೆ ಸಿನಿಮಾ ಮಾಡೋಕೆ ಹೇಳಿದರೆ ಯೋಚನೆ ಮಾಡುತ್ತೇನೆ. ಅವರೊಟ್ಟಿಗೆ ಸಿನಿಮಾ ಮಾಡಿದರೆ ದೊಡ್ಡಮಟ್ಟದಲ್ಲಿ ಮಾಡಬೇಕು. ಶಿವಣ್ಣನ ಸಿನಿಮಾಗಳಿಗೆ ಕೆಲಸ ಮಾಡುವಾಗ ನನಗೆ ಕಷ್ಟವಾಗುತ್ತಿತ್ತು. ಶೈಲಜಾ ನಾಗ್, ಸುರೇಶ್ ಸರ್ ನನ್ನ ಗುರುಗಳು. 'ಯಜಮಾನ', 'ಕ್ರಾಂತಿ' ಸಿನಿಮಾ ಸಮಯದಲ್ಲಿ ಕೆಲಸ ಮಾಡುವಂತೆ ಕೇಳಿದರು. ಆದರೆ ನನಗೆ ಆಗಲಿಲ್ಲ. ಯಾಕಂದರೆ ದರ್ಶನ್ ಸರ್‌ಗೆ ಮಾಡಿದರೆ ದೊಡ್ಡಮಟ್ಟದಲ್ಲಿ ಮಾಡಬೇಕು. ಅದು ಸರ್‌ಗೂ ಗೊತ್ತು"
ಯಶ್ ಜೊತೆ ಸಿನಿಮಾ ಮಾಡುವ ಬಗ್ಗೆ ಮಾತನಾಡಿರುವ ಸೂರಿ "ಯಶ್ ಸರ್ ಜೊತೆ ಕೆಲಸ ಮಾಡುವುದು ದೊಡ್ಡದು. 'ಮಾಸ್ಟರ್‌ಪೀಸ್' ಸಿನಿಮಾವರೆಗೂ ಅವರು ನಮ್ಮ ಹಿಡಿತದಲ್ಲಿದ್ದರು. ಆ ಸಿನಿಮಾ ಮಾಡುವಾಗ ನಾನು ಯಶ್ ಅವರೊಟ್ಟಿಗೆ ಸಿನಿಮಾ ಮಾಡಬಹುದು ಎಂದುಕೊಳ್ಳುತ್ತಿದ್ದೆ. ಆದರೆ ಕೆಜಿಎಫ್ ಸೆಕೆಂಡ್ ಪಾರ್ಟ್ ನೋಡಿದ ಮೇಲೆ ಪ್ರಶಾಂತ್ ನೀಲ್ ಸ್ಟೈಲ್, ನೋಡಿದ ಮೇಲೆ ಅದು ಬೇರೆ ಲೆವೆಲ್ ಅನ್ನಿಸಿಬಿಡ್ತು. ಯಶ್ ಅಂದ್ರೆ ನನಗೆ ಶಾರುಖ್ ಖಾನ್ ಎನ್ನುವಂತಾಗಿದೆ. ಶಾರೂಖ್ ಖಾನ್ ಜೊತೆ ಸಿನಿಮಾ ಅಂದ್ರೆ ಏನು ಮಾಡೋಕೆ ಸಾಧ್ಯ. ಅದೇ ರೀತಿ ಯಶ್ ಜೊತೆ ಕೆಲಸ ಮಾಡೋಕೆ ಸಾಧ್ಯವಿಲ್ಲ, ನಾನು ಏನೋ ಮಾಡ್ತಿದ್ದೀನಿ. ಅಷ್ಟೆ ಸಾಕು ಎನಿಸುತ್ತೆ" ಎಂದು ಸೂರಿ ಹೇಳಿದ್ದಾರೆ.


Click it and Unblock the Notifications











