ಕೋಪಿಷ್ಠ.. ಪಾಪಿಷ್ಠ ; ಸೂರಿ ಮೆಚ್ಚಿದ 'ಸೋಮು'ವಿನ ಕಾಡುವ ಕಥೆ...!
ಇಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದು ಹೇಳಲು ಸಾಧ್ಯವಿಲ್ಲ. ಪರಿಸ್ಥಿತಿ ಹಾಗೂ ಮನಸ್ಥಿತಿ ಯಾರಿಂದ ಏನೂ ಬೇಕಾದರೂ ಮಾಡಿಸಬಹುದು. ಇದಕ್ಕೆ ಮತ್ತೊಂದು ಉದಾಹರಣೆ ಸೋಮು ಸೌಂಡ್ ಇಂಜಿನಿಯರ್ .
ಹೌದು, ಆರಂಭದಿಂದಲೂ ಕುತೂಹಲವನ್ನ ಕೆರಳಿಸುತ್ತಾನೇ ಬಂದಿರುವ ಸೋಮು ಸೌಂಡ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನವನ್ನೂ ಸೆಳೆಯುತ್ತಿದೆ. ಗೆಲ್ಲಲು ಬೇಕಾದ ಎಲ್ಲ ಅರ್ಹತೆಯನ್ನೂ ಹೊಂದಿರುವ ಸಿನಿಮಾ ಇದು ಎಂಬ ಸುಳಿವನ್ನೂ ಕೂಡ ಟ್ರೇಲರ್ ನೀಡಿದೆ.

ಉತ್ತರ ಕರ್ನಾಟಕದ ಸೊಗಡಿರುವ ಈ ಚಿತ್ರದಲ್ಲಿ ಶ್ರೇಷ್ಠ ನಾಯಕನ ಪಾತ್ರವನ್ನ ನಿರ್ವಹಿಸಿದ್ದಾರೆ. ಸಲಗ ಸಿನಿಮಾದ ಮೂಲಕ ಎಲ್ಲೆಡೆ ಕೆಂಡ ಎಂದೇ ಹೆಸರುವಾಸಿಯಾಗಿದ್ದ ಶ್ರೇಷ್ಠ ಬದುಕಿಗೆ ಸೋಮು ಸೌಂಡ್ ಇಂಜಿನಿಯರ್ ಸಿನಿಮಾ ಮಹತ್ತರ ತಿರುವು ನೀಡುತ್ತೆ ಅನ್ನುವ ಮಾತು ಈಗಾಗಲೇ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಅದಕ್ಕೆ ಪೂರಕವಾಗಿ ಟ್ರೇಲರ್ ಮೂಡಿ ಬಂದಿದೆ.
ನಿವಿಷ್ಕಾ ಪಾಟೀಲ್ ಚಿತ್ರದ ನಾಯಕಿ. ಜಹಾಂಗೀರ್ .. ಯಶ್ ಶೆಟ್ಟಿ..ಅವರಂತಹ ಅನುಭವಿ ಕಲಾವಿದರು ಚಿತ್ರದಲ್ಲಿದ್ದಾರೆ. ಗಿರೀಶ್ ಜತ್ತಿ.. ಚಂದನ್ ಗೌಡ ಹಾಗೂ ಅಪೂರ್ವ ಕೂಡ ಚಿತ್ರದಲ್ಲಿದ್ದಾರೆ. ಮಿಕ್ಕಂತೆ ಅಭಿನಯದ ಗಂಧ ಗಾಳಿ ಗೊತ್ತಿಲ್ಲದವರನ್ನ ಕರೆದು ನಿಲ್ಲಿಸಿ ಚಿತ್ರದ ನಿರ್ದೇಶಕ ಅಭಿ ಇಲ್ಲಿ ಕೆಲಸ ಮಾಡಿಸಿಕೊಂಡಿದ್ದಾರೆ. ಪಾತ್ರಗಳನ್ನ ಹೆಣೆದು.. ಪಾತ್ರಕ್ಕೆ ಹೊಂದುವಂತಹವರನ್ನ ಹುಡುಕಿ ಅವರಿಂದ ಅಭಿನಯವನ್ನ ತೆಗೆಸಿದ್ದಾರೆ. ಇದಕ್ಕೆ ಚಿತ್ರದ ಟ್ರೇಲರೇ ಸಾಕ್ಷಿ.

ಅಂದ್ಹಾಗೇ ಈ ಚಿತ್ರದ ನಿರ್ದೇಶಕ ಅಭಿ, ಸೂರಿ ಅವರ ಶಿಷ್ಯ. 09 ವರ್ಷ ಸೂರಿಯ ಗರಡಿಯಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಅಕ್ಷರಾಭ್ಯಾಸ ಮಾಡಿದವರು ಇವರು. ಈ ಕಾರಣಕ್ಕೆ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಮೊದಲ ಮೆಟ್ಟಿಲನ್ನೇರುತ್ತಿರುವ ಶಿಷ್ಯನಿಗೆ ಶುಭಾಶಯ ಕೋರಲು ಸೂರಿ ಟ್ರೇಲರ್ ಬಿಡುಗಡೆಯ ನೆಪದಲ್ಲಿ ಬಂದಿದ್ದರು. ಶಿಷ್ಯನ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು. ಇನ್ನೂ ಕನ್ನಡ ಚಿತ್ರರಂಗದ ನಟರಾಕ್ಷಸ ಡಾಲಿ ಧನಂಜಯ್ ಕೂಡ ಕಾರ್ಯಕ್ರಮದ ಕಳೆಯನ್ನ ಹೆಚ್ಚಿಸಿದರು. ಅಭಿ ಹಾಗೂ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು
ನಮ್ಮೂರಿನಲ್ಲಿ ನಡೆದ ಘಟನೆಯೊಂದರ ಸುತ್ತ ನಡೆದ ವಿಚಾರವನ್ನೇ ಕಾಡುವಂತೆ ಕಟ್ಟಿದ್ದಾರೆ ಅನ್ನೋದರ ಸೂಚನೆಯನ್ನ ಟ್ರೇಲರ್ ಮೂಲಕ ಕೊಟ್ಟಿರುವ ಅಭಿಗೆ, ಚರಣ್ ರಾಜ್ ಸಂಗೀತ ನಿರ್ದೇಶಕರಾಗಿ ಸಾಥ್ ನೀಡಿದ್ದಾರೆ. ಕನ್ನಡ ಚಿತ್ರರಂಗದ ಬೇಡಿಕೆಯ ಸಂಭಾಷಣೆಗಾರ ಮಾಸ್ತಿ, ಸೋಮು ಸೌಂಡ್ ಇಂಜಿನಿಯರ್ ಗೆ ನಿರ್ದೇಶಕ ಅಭಿ ಜೊತೆ ಕುಳಿತು ಮಾತನ್ನ ಪೋಣಿಸಿದ್ದಾರೆ. ಇನ್ನೂ ಮುಂಗಾರು ಮಳೆ.. ದುನಿಯಾ.. ಒಂದಕ್ಕಿಂತ ಒಂದು ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡಿದ್ದ ಸಂಕಲನಕಾರ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಸಲಗ ಹಾಗೂ ಭೀಮ ಖ್ಯಾತಿಯ ಶಿವಸೇನಾ ತಮ್ಮ ಕ್ಯಾಮರಾದಲ್ಲಿ ಚಿತ್ರವನ್ನ ಸೆರೆ ಹಿಡಿದಿದ್ದಾರೆ. ಇವೆಲ್ಲ ಕಾರಣಕ್ಕೆ ಈ ಚಿತ್ರದ ಮೇಲೆ ಮೊದಲಿಂದ ನಿರೀಕ್ಷೆ ಇದ್ದೇ ಇದೆ. ಆ ನಿರೀಕ್ಷೆಯನ್ನ ಬಿಡುಗಡೆಯಾಗಿರುವ ಟ್ರೇಲರ್ ಈಗ ಇನ್ನಷ್ಟು ಹೆಚ್ಚಿಸಿದೆ.

ಇನ್ನೂ ಹೊಸತನದ ಕನಸು ಹೊತ್ತವರನ್ನ ನಂಬಿ.. ಅವರ ಕನಸನ್ನ ನೀರೇರೆದು ಪೋಷಿಸುವುದು ಸುಲಭದ ಮಾತಲ್ಲ. ದುಡ್ಡು ಹೂಡುವುದು ಈ ಕಾಲದಲ್ಲಿ ತಮಾಷೆಯೂ ಅಲ್ಲ. ಆದರೂ ಈ ಸವಾಲನ್ನ ಸ್ವೀಕರಿಸಿ ಚೊಚ್ಚಲ ಪ್ರಯತ್ನದಲ್ಲಿ ನಿರ್ಮಾಪಕ ಕ್ರಿಸ್ಟೋಫರ್ ಕಿಣಿ ಸೋಮು ಸೌಂಡ್ ಇಂಜಿನಿಯರ್ ಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಚಿತ್ರವನ್ನ ನಿರ್ಮಾಣವನ್ನ ಮಾಡಿದ್ದಾರೆ.
ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಮಟ್ಟಿಗೆ ಉತ್ತರ ಕರ್ನಾಟಕದಿಂದ ಬಂದ ಹುಡುಗರು ನಿರ್ದೇಶಕರಾಗಿ ಗೆದ್ದಿರೋದು ಕಡಿಮೆ. ಈ ಹಿಂದೆ ಬಂದ ಸೋಮು ಸೌಂಡ್ ಇಂಜಿನಿಯರ್ ಚಿತ್ರದ ಟೀಸರ್ ಹಾಗೂ ಹಿಂದೆ ಬಿಡುಗಡೆಯಾದ ಹಾಡನ್ನ ನೋಡಿದರೆ ಅಭಿ ಸ್ಯಾಂಡಲ್ ವುಡ್ ನಲ್ಲಿ ಪರ್ಮನೆಂಟಾಗಿ ನೆಲೆಲಿಲ್ಲುವ ನಿರ್ದೇಶಕರಾಗುತ್ತಾರೆ ಅಂತನ್ನಿಸುತ್ತಿದೆ. ಕಥಾನಾಯಕ ಶ್ರೇಷ್ಠ ಹಾಗೂ ನಾಯಕಿ ನಿವಿಶ್ಕಾ ಬದುಕಿನ ಪಥವನ್ನ ಸೋಮು ಸೌಂಡ್ ಇಂಜಿನಿಯರ್ ಚಿತ್ರ ಬದಲಿಸುತ್ತೆ ಅನ್ನುವ ಮಾತು ಕೇಳಿ ಬರುತ್ತಿದೆ. ನಿರ್ಮಾಪಕ ಕ್ರಿಸ್ಟೋಫರ್ ಕಿಣಿ ಕೂಡ ಕನ್ನಡ ಚಿತ್ರರಂಗಕ್ಕೆ ಭವಿಷ್ಯದಲ್ಲಿ ಅಸೆಟ್ ಆಗುವ ಲಕ್ಷಣ ಕಂಡು ಬರುತ್ತಿದೆ. ಈ ಅನಿಸಿಕೆ, ಅಭಿಪ್ರಾಯಗಳೆಲ್ಲಾ ನಿಜವಾಗಲಿ ಅನ್ನುವುದು ಸದ್ಯಕ್ಕೆ ಬಿಡುಗಡೆಯಾದ ಈ ಚಿತ್ರದ ಟ್ರೇಲರ್ ನ ನೋಡಿ ಮೆಚ್ಚಿರುವ ಕಲಾ ಪ್ರೇಮಿಗಳ ಆಶಯ. ಅಂದ್ಹಾಗೇ ಸೋಮು ಸೌಂಡ್ ಇಂಜಿನಿಯರ್ ಈ ಮಾರ್ಚ್ 15ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











