Bad Manners: ಸೂರಿಗೆ ಏನಾಯ್ತು? 'ಬ್ಯಾಡ್ ಮ್ಯಾನರ್ಸ್' ಕಥೆ ಎಲ್ಲಿಗೆ ಬಂತು? "ಎದ್ದೇಳು ಮಂಜುನಾಥ"
ದುನಿಯಾ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿರುವುದೇನೋ ಸತ್ಯ. ಆದರೆ ಸಿನಿಮಾ ಯಾಕೋ ಸದ್ಯಕ್ಕೆ ತೆರೆಗೆ ಬರುವಂತೆ ಕಾಣುತ್ತಿಲ್ಲ. ಅದ್ಯಾಕೋ ಸಿನಿಮಾ ಬಗ್ಗೆ ಸೂರಿಗೆ ಉತ್ಸಾಹ ಇಲ್ಲದಂತೆ ಕಾಣುತ್ತಿದೆ ಎಂದು ಗಾಂಧಿನಗರದಲ್ಲಿ ಚರ್ಚೆ ಶುರುವಾಗಿದೆ. ಕಳೆದ 3 ವರ್ಷಗಳಿಂದ ಇದೊಂದು ಚಿತ್ರದಲ್ಲಿ ಸೂರಿ ಮುಳುಗಿ ಹೋಗಿದ್ದಾರೆ.
ಸ್ಯಾಂಡಲ್‌ವುಡ್‌ನ ಡೈನಾಮಿಕ್ ಡೈರೆಕ್ಟರ್ ಸೂರಿ. ಸೂಪರ್ ಹಿಟ್ ಸಿನಿಮಾಗಳ ಸರದಾರ. ರಿಯಲಿಸ್ಟಿಕ್ ಸಿನಿಮಾಗಳ ಎಕ್ಸ್‌ಫರ್ಟ್. ಆದರೆ ಇತ್ತೀಚೆಗೆ ಯಾಕೋ ಅವರಲ್ಲಿ ಮೊದಲಿನ ವೇಗ ಕಾಣುತ್ತಿಲ್ಲ. ಕನ್ನಡದ ಸೂಪರ್ ಸ್ಟಾರ್ಸ್ ವರ್ಷಕ್ಕೆ ಒಂದು ಸಿನಿಮಾ ಕೂಡ ಮಾಡ್ತಿಲ್ಲ ಅನ್ನೋ ಆರೋಪ ಕೆಲವರದ್ದು. ಆದರೆ ಸೂರಿ 3 ವರ್ಷಕ್ಕೆ ಒಂದು ಸಿನಿಮಾ ಕೊಡ್ತಿಲ್ಲ ಅನ್ನುವಂತಾಗಿದೆ. 'ಪಾಪ್ ಕಾರ್ನ್ ಮಂಕಿ ಟೈಗರ್' ಬಳಿಕ ಸೂರಿಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ.

ಅಭಿಷೇಕ ಅಂಬರೀಶ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಟೈಟಲ್‌ನಿಂದಲೇ ಗಮನ ಸೆಳೆದಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಬೇಗ ಸಿನಿಮಾ ರಿಲೀಸ್ ಮಾಡಬೇಕು, ಮತ್ತೊಂದು ಸಿನಿಮಾ ಕೈಗೆತ್ತಿಕೊಳ್ಳಬೇಕು ಎನ್ನುವ ಉಮೇದು ಸೂರಿಗೆ ಇದ್ದಂತೆ ಕಾಣುತ್ತಿಲ್ಲ ಎಂದು ಗಾಂಧಿನಗರದಲ್ಲಿ ಕೆಲವರು ಮಾತನಾಡುತ್ತಿದ್ದಾರೆ. ಏಪ್ರಿಲ್‌ನಲ್ಲೇ 'ಬ್ಯಾಡ್ ಮ್ಯಾನರ್ಸ್' ರಿಲೀಸ್ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಆಗಸ್ಟ್ ಕಳೆಯುತ್ತಾ ಬಂದರೂ ಆ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ.
ಅಭಿ ಬರ್ತ್‌ಡೇ ಟೀಸರ್, 2 ಸಾಂಗ್ ರಿಲೀಸ್ ಮಾಡಿದ್ದು ಬಿಟ್ಟರೆ ಮತ್ತೇನೂ ಆಗಲಿಲ್ಲ. ಈ ನಡುವೆ ಅಭಿ ಮದುವೆ ಸಂಭ್ರಮ ಕಳೆಕಟ್ಟಿತ್ತು. ಹಾಗಾಗಿನೇ 'ಬ್ಯಾಡ್ ಮ್ಯಾನರ್ಸ್' ರಿಲೀಸ್ ಕೊಂಚ ತಡವಾಗ್ತಿದೆ ಎಂದು ಕೆಲವರು ಅಂದುಕೊಂಡರು. ಆದರೆ ಅಭಿ ಮದುವೆ ಮುಗಿದು 2 ತಿಂಗಳು ಆದ್ರು ಸೂರಿ ಯಾಕೋ ಸೈಲೆಂಟ್ ಆಗಿದ್ದಾರಲ್ಲ ಎನ್ನುವ ಅನುಮಾನ ಕಾಡುತ್ತಿದೆ. ಮೊದಲಿನಿಂದಲೂ ಸೂರಿ ಮಾತು ಕಡಿಮೆ, ಕೆಲಸ ಜಾಸ್ತಿ ಅನ್ನೋ ಮಾತಿದೆ. ಆದರೆ ಅದೇನೋ ಗೊತ್ತಿಲ್ಲ 'ಟಗರು' ರಿಲೀಸ್ ಬಳಿಕ ಸೂರಿ ಕೊಂಚ ಬದಲಾದಂತೆ ಕಾಣುತ್ತದೆ ಎನ್ನುವುದು ಕೆಲವರ ವಾದ.
ಸೂರಿ ನಿರ್ದೇಶನದಲ್ಲಿ ನಟಿಸಲು ಕನ್ನಡ ಚಿತ್ರರಂಗ ಸ್ಟಾರ್ ನಟರು ಕಾಯುತ್ತಿದ್ದಾರೆ. ಅಪ್ಪು ಸೂರಿ ನಿರ್ದೇಶನ ಬಹಳ ಇಷ್ಟಪಡುತ್ತಿದ್ದರು. ನಾಳೆಯೇ ಕಥೆ ಹೇಳಿದ್ರು ಶಿವಣ್ಣ ನಟಿಸೋಕೆ ಸಿದ್ಧ ಎನ್ನುತ್ತಾರೆ. ಅಷ್ಟರಮಟ್ಟಿಗೆ ಸೂರಿ ತಮ್ಮ ಸಿನಿಮಾಗಳಿಂದ ಹೆಸರು ಮಾಡಿದ್ದರು. ಆದರೆ ಅವರು ಮಾತ್ರ ಯಾಕೋ 'ಬ್ಯಾಡ್ ಮ್ಯಾನರ್ಸ್'ನಲ್ಲೇ ಕಳೆದು ಹೋದಂತೆ ಕಾಣುತ್ತಿದೆ. ಅದರಿಂದ ಹೊರ ಬರಲು ಪ್ರಯತ್ನ ಪಡುತ್ತಿರುವಂತೆಯೂ ಮೇಲ್ನೋಟಕ್ಕೆ ಗೋಚರಿಸುತ್ತಿಲ್ಲ. ಇದೇ ಕಾರಣಕ್ಕೆ ಅಭಿಮಾನಿಗಳು ಕೂಡ "ಎದ್ದೇಳು ಮಂಜುನಾಥ" ಎಂದು ಹಾಡು ಹಾಡುತ್ತಿದ್ದಾರೆ.
'ಬ್ಯಾಡ್ ಮ್ಯಾನರ್ಸ್' ಸಿನಿಮಾ ಬಗ್ಗೆ ಹೇಳುವುದಾದರೆ ಈಗಾಗಲೇ ಸಿನಿಮಾ ಶೂಟಿಂಗ್ ಮುಗಿದಿದೆ. 'ಅಮರ್' ಬಳಿಕ ಅಭಿಷೇಕ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಅಭಿ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದಾರೆ. ಇನ್ನು ರಚಿತಾ ರಾಮ್ ಹಾಗೂ ಪ್ರಿಯಾಂಕಾ ಕುಮಾರ್ ತಾರಾಗಣದಲ್ಲಿದ್ದಾರೆ. ಇದು ಪಕ್ಕಾ ಸುಕ್ಕಾ ಸೂರಿ ಸ್ಟೈಲ್ ಪೊಲೀಸ್ ಆಕ್ಷನ್ ಎಂಟರ್‌ಟೈನರ್. ಸೂರಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದರೆ, ಮಾಸ್ತಿ ಸಂಭಾಷಣೆ ಗೀಚಿದ್ದಾರೆ.

ಡ್ರಗ್ಸ್ ಮಾಫಿಯಾ ಕುರಿತಾದ ಕಥೆ ಚಿತ್ರದಲ್ಲಿದೆ ಎನ್ನಲಾಗ್ತಿದೆ. ರುದ್ರ ಎನ್ನುವ ಖಡಕ್ ಪೊಲೀಸ್ ಆಫೀಸರ್ ಆಗಿ ಅಭಿಷೇಕ್ ಅಬ್ಬರಿಸಿದ್ದಾರೆ. ಸುಧೀರ್ ಕೆ. ಎಂ ನಿರ್ಮಾಣ ಈ ಚಿತ್ರದಲ್ಲಿ ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್ ಸೇರಿದಂತೆ ದೊಡ್ಡ ತಾರಾಗಣವಿದೆ.


Click it and Unblock the Notifications










