'ಚಂಡ' ವೇಳೆ ಕಿತ್ತಾಟ, 8 ವರ್ಷಗಳ ಬಳಿಕ ಒಂದಾದ ಜೋಡಿ: ಮತ್ತೆ 9 ವರ್ಷ ಗ್ಯಾಪ್ ಕೊಟ್ಟು 3ನೇ ಸಿನಿಮಾಗೆ ಜೈ!
2007ರಲ್ಲಿ ದುನಿಯಾ ವಿಜಯ್‌ಗೂ ಸಕ್ಸಸ್ ಸಿಕ್ಕಿತ್ತು. ಇತ್ತ ಎಸ್ ನಾರಾಯಣ್ ಕೂಡ ಸಿನಿಮಾಗಳು ಹಿಟ್ ಆಗಿದ್ದವು. ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದ ಇಬ್ಬರೂ ಒಟ್ಟಿಗೆ ಸೇರಿ ಒಂದು ಸಿನಿಮಾ ಮಾಡಿದ್ದರು. ಅದುವೇ 'ಚಂಡ'. ಆದರೆ, ಈ ಸಿನಿಮಾ ರಿಲೀಸ್‌ಗೂ ಮುನ್ನವೇ ಇಬ್ಬರು ಕಿತ್ತಾಡಿಕೊಂಡಿದ್ದರು. ನ್ಯೂಸ್ ಚಾನೆಲ್‌ಗಳಲ್ಲಿ ಕೂತು ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡಿದ್ದರು.
ಇನ್ಮುಂದೆ ಈ ಜೋಡಿ ಒಂದಾಗುವುದು ಅನುಮಾನ ಅನ್ನುವಷ್ಟು ಕಿತ್ತಾಡಿದ್ದರು. ಇವರಿಬ್ಬರ ಕಿತ್ತಾಟದಲ್ಲಿ 'ಚಂಡ' ಸಿನಿಮಾಗೆ ಪರೋಕ್ಷವಾಗಿ ಪ್ರಚಾರ ಸಿಕ್ಕಿರಬಹುದು ಎಂದು ಊಹಿಸಿದ್ದರು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಚಮತ್ಕಾರ ಮಾಡಲಿಲ್ಲ. ಅಲ್ಲಿಂದ ಮತ್ತೆ ಈ ಜೋಡಿ ಒಂದಾಗುವುದಿಲ್ಲ ಅಂತ ಭವಿಷ್ಯ ನುಡಿದಿದ್ದರು.

ಎಸ್ ನಾರಾಯಣ್ ನಿರ್ದೇಶಿಸಿದ 'ಚಂಡ' ಸಿನಿಮಾಗೆ ದುನಿಯಾ ವಿಜಯ್ ಡಬ್ಬಿಂಗ್ ಮಾಡುವುದಿಲ್ಲ ಅಂತ ನಿರ್ಧರಿಸಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು. ನ್ಯೂಸ್ ಚಾನೆಲ್‌ಗಳಲ್ಲಿ ಕೂಡ ಒಬ್ಬರ ಮೇಲೊಬ್ಬರು ಕೆಸರು ಎರಚಿಕೊಂಡಿದ್ದರು. ಇಬ್ಬರೂ ಈ ಜನ್ಮದಲ್ಲಿ ಸಿನಿಮಾ ಮಾಡೋದಿಲ್ಲ ಅಂದುಕೊಳ್ಳುವಾಗಲೇ ಮತ್ತೊಂದು ಸಿನಿಮಾಗೆ ಒಂದಾಗಿದ್ದರು. ಅದೂ 8 ವರ್ಷಗಳ ಬಳಿಕ.
'ಚಂಡ' ಸಿನಿಮಾದ ವಿವಾದ ಬಳಿಕ ಈ ಜೋಡಿ 'ದಕ್ಷ' ಸಿನಿಮಾದ ಮೂಲಕ ಒಂದಾಗಿದ್ದರು. ಈ ಸಿನಿಮಾ ಮೂಲಕ ಗಿನ್ನಿಸ್ ದಾಖಲೆ ಬರೆಯುವುದಕ್ಕೆ ಮುಂದಾಗಿದ್ದರು. ರಿಯಲ್ ಟೈಮ್‌ನಲ್ಲಿ ಸಿನಿಮಾ ಶೂಟಿಂಗ್ ಮಾಡುವ ಪ್ರಯತ್ನ ಆಗಿತ್ತು. 2 ಗಂಟೆ 20 ನಿಮಿಷದಲ್ಲಿ ಸಿಂಗಲ್ ಶಾಟ್‌ನಲ್ಲಿ ಸಿನಿಮಾ ನಿರ್ದೇಶನ ಮಾಡುವುದಕ್ಕೆ ಮುಂದಾಗಿದ್ದರು. ಆದರೆ, ಅದಾಗಲೇ ಈ ಮಾದರಿಯಲ್ಲಿ ಬೇರೆ ಸಿನಿಮಾಗಳು ಗಿನ್ನಿಸ್ ದಾಖಲೆ ಮಾಡಿದ್ದರು.
'ದಕ್ಷ' ಸಿನಿಮಾ ಬಳಿಕ ಮತ್ತೆ 9 ವರ್ಷಗಳ ಬಳಿಕ ದುನಿಯಾ ವಿಜಯ್ ಹಾಗೂ ಎಸ್.ನಾರಾಯಣ್ ಒಂದೇ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಈ ಸಿನಿಮಾಗೆ ಇನ್ನೂ ಟೈಟಲ್ ಇಟ್ಟಿಲ್ಲ. ವಿಶೇಷ ಅಂದರೆ, ಈ ಸಿನಿಮಾ ದುನಿಯಾ ವಿಜಯ್ ಜೊತೆ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈಗಾಗಲೇ ಎಸ್.ನಾರಾಯಣ್ ಮೊದಲ ಹಂತದ ಚಿತ್ರೀಕರಣವನ್ನು ಚಿಕ್ಕಮಗಳೂರಿನಲ್ಲಿ ಮುಗಿಸಿದ್ದಾರೆ. ಕೆ. ಮಂಜು ಪುತ್ರ ಶ್ರೇಯಸ್ ಮಂಜು ಅವರ ಭಾಗ ಕೆಲವು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ಮೂಲಗಳ ಪ್ರಕಾರ ದುನಿಯಾ ವಿಜಯ್ ಜೂನ್ 5ರಿಂದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಕೆ.ಮಂಜು ಹಾಗೂ ರಮೇಶ್ ಯಾದವ್ ಒಟ್ಟಿಗೆ ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈ ಸಿನಿಮಾದಲ್ಲಿ ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಜೊತೆ ನಾಯಕಿಯಾಗಿ ಬೃಂದಾ ನಟಿಸುತ್ತಿದ್ದಾರೆ. ಸಾಧು ಕೋಕಿಲ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಕಲ್ಯಾಣಿ, ಗಿರಿ, ಜಯರಾಂ, ಸುಜಯ್ ಶಾಸ್ತ್ರಿ, ಮಂಜು ಪಾವಗಡ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.
ಎಸ್ ನಾರಾಯಣ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನೀಡುತ್ತಿದ್ದಾರೆ. ಪಿ.ಕೆ.ಹೆಚ್ ದಾಸ್ ಕ್ಯಾಮರಾ, ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಎಸ್.ನಾರಾಯಣ್ ಹಾಗೂ ದುನಿಯಾ ವಿಜಯ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಕುತೂಹಲ ಕೆರಳಿಸುತ್ತಿದೆ.


Click it and Unblock the Notifications











