ದುನಿಯಾ ವಿಜಯ್ ರಂಪಾಟದ ಬಗ್ಗೆ ನಿರ್ಮಾಪಕ ಮುನಿರತ್ನ ಮಾಡಿದ ಕಾಮೆಂಟ್ ಏನು.?
ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಕನ್ನಡ ಚಿತ್ರರಂಗದ ನಾಯಕ ದುನಿಯಾ ವಿಜಯ್ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಮುದ್ದೆ ಮುರಿಯುವ ಹಾಗಾಗಿದೆ.
ಸದ್ಯ ಮೂವರ ಜೊತೆಗೆ ಜೈಲು ಪಾಲಾಗಿರುವ ದುನಿಯಾ ವಿಜಯ್ ಗೆ ಜಾಮೀನು ಸಿಗುತ್ತೋ, ಇಲ್ವೋ ಗೊತ್ತಿಲ್ಲ. ಆದ್ರೆ, ನಟರು ಈ ರೀತಿ ಬೀದಿಯಲ್ಲಿ ಜಗಳ ಮಾಡಿಕೊಳ್ಳಬಾರದು ಎಂದು ನಿರ್ಮಾಪಕ ಮುನಿರತ್ನ ಹೇಳಿದ್ದಾರೆ.
''ಅಭಿಮಾನಿಗಳಿಗೆ, ನಟರು ಆದರ್ಶಪ್ರಾಯವಾಗಿರಬೇಕು. ಕನ್ನಡ ಚಿತ್ರರಂಗ ಅಂದರೇ ಡಾ.ರಾಜ್ ಹಾಗೂ ಡಾ.ವಿಷ್ಣುವರ್ಧನ್ ನೆನಪಾಗುತ್ತಾರೆ. ಚಿತ್ರರಂಗದ ನಟರು ಸೂಕ್ಷ್ಮ ಮಾತುಗಳನ್ನಾಡಬೇಕು. ಈ ರೀತಿ ಬೀದಿಯಲ್ಲಿ ಜಗಳವಾಡಿಕೊಂಡು ನಿಲ್ಲಬಾರದು. ರಾಜ್, ವಿಷ್ಣು ರವರ ಅದೆಷ್ಟೋ ಚಿತ್ರಗಳು ಇಂದಿಗೂ ಮಾದರಿಯಾಗಿದೆ. ಅವರನ್ನು ನೋಡಿ ಕಲಿಯಬೇಕೇ ವಿನಃ ಈ ರೀತಿ ಬೀದಿ ಜಗಳವನ್ನಲ್ಲ'' ಎಂದು ನಿರ್ಮಾಪಕ ಮುನಿರತ್ನ ಬೇಸರ ವ್ಯಕ್ತಪಡಿಸಿದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ''ನಾನು ಸಹ ನಿರ್ಮಾಪಕರ ಸಂಘದಿಂದ ಸಭೆ ಕರೆಯುತ್ತೇನೆ. ನಾನು ಮತ್ತು ಅಂಬರೀಶ್ ಜೊತೆಯಲ್ಲಿ ಕುಳಿತು ವಿಜಯ್ ಮತ್ತು ಕಿಟ್ಟಿಯನ್ನು ಕರೆಸಿ ಮಾತಾಡುತ್ತೇವೆ. ಅವರಿಬ್ಬರ ಬಳಿ ಮಾತನಾಡಿದ ಮೇಲೆ ಮತ್ತೆ ಸ್ನೇಹ ಚಿಗುರುವಂತೆ ಮಾಡುತ್ತೇನೆ. ದುನಿಯಾ ವಿಜಯ್ ಇದರಿಂದ ಹೊರಗೆ ಬಂದು ಒಳ್ಳೆಯ ಚಿತ್ರ ಮಾಡಲಿ. ಅವರ ಅಭಿಮಾನಿಗಳಿಗೆ ನಿರಾಸೆಯಾಗುವಂತೆ ನಡೆದುಕೊಳ್ಳದೇ ಇರಲಿ'' ಅಂತ ಹೇಳಿದರು ನಿರ್ಮಾಪಕ ಮುನಿರತ್ನ.


Click it and Unblock the Notifications











