ಯಾರೀ ದುನಿಯಾ ವಿಜಯ್ ದುಷ್ಮನ್ 'ಪಾನಿಪೂರಿ' ಕಿಟ್ಟಿ.?
Recommended Video

'ಕರಿ ಚಿರತೆ' ದುನಿಯಾ ವಿಜಯ್ ಹಾಗೂ 'ಪಾನಿಪೂರಿ' ಕಿಟ್ಟಿ 'ಪಕ್ಕಾ ದೋಸ್ತ್' ಅನ್ನೋ ಸಂಗತಿ ಗಾಂಧಿನಗರದ ಮಂದಿಗೆ ಗೊತ್ತಿತ್ತು. ಗಳಸ್ಯಕಂಠಸ್ಯ ದಂತಿದ್ದ ಈ ಇಬ್ಬರು ಗೆಳೆಯರ ನಡುವೆ ಈಗ ಭಿನ್ನಾಭಿಪ್ರಾಯ ಭುಗಿಲೆದ್ದಿದೆ, ದ್ವೇಷದ ಕಿಚ್ಚು ಹೊತ್ತಿ ಉರಿಯುತ್ತಿದೆ.
ತಮ್ಮ ಅಣ್ಣನ ಮಗ ಮಾರುತಿ ಗೌಡ ಮೇಲೆ ದುನಿಯಾ ವಿಜಯ್ ಹಲ್ಲೆ ಮಾಡಿರುವ ಕಾರಣ ಪಾನಿಪೂರಿ ಕಿಟ್ಟಿ ಕೆಂಡಕಾರುತ್ತಿದ್ದಾರೆ. ದುನಿಯಾ ವಿಜಯ್ ಪಾನಿಪೂರಿ ಕಿಟ್ಟಿ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೇ, ಕಾನೂನು ಹೋರಾಟ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಅಷ್ಟಕ್ಕೂ, ಈ ಪಾನಿಪೂರಿ ಕಿಟ್ಟಿ ಯಾರು.? 'ಪಾನಿಪೂರಿ' ಹಿಂದಿನ ಕಥೆ ಏನು.? ಕನ್ನಡ ಚಿತ್ರರಂಗದಲ್ಲಿ ಇವರ ಪ್ರಭಾವ ಎಷ್ಟು.? ಈ ಎಲ್ಲದರ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ, ನೋಡಿ...

ಮಿಸ್ಟರ್ ಕರ್ನಾಟಕ.!
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬಾಡಿ ಬಿಲ್ಡರ್ ಈ ಪಾನಿಪೂರಿ ಕಿಟ್ಟಿ. ಬರೋಬ್ಬರಿ 24 ಬಾರಿ ಮಿಸ್ಟರ್ ಕರ್ನಾಟಕ, 11 ಬಾರಿ ಮಿಸ್ಟರ್ ಇಂಡಿಯಾ ಗೋಲ್ಡ್, 3 ಬಾರಿ ಚಾಂಪಿಯನ್ ಆಫ್ ಚಾಂಪಿಯನ್ ಪುರಸ್ಕಾರ ಪಡೆದಿರುವ ಖ್ಯಾತಿ ಪಾನಿಪೂರಿ ಕಿಟ್ಟಿರವರದ್ದು.

ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ಟ್ರೈನರ್
ರಾಕಿಂಗ್ ಸ್ಟಾರ್ ಯಶ್, ದುನಿಯಾ ವಿಜಯ್, ಲವ್ಲಿ ಸ್ಟಾರ್ ಪ್ರೇಮ್, ಕೃಷ್ಣ ಅಜಯ್ ರಾವ್, ಚೇತನ್ ಚಂದ್ರ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ನಟರು ಸಿಕ್ಸ್ ಪ್ಯಾಕ್ ಬಾಡಿ ಬಿಲ್ಡ್ ಮಾಡಿರುವುದು ಇದೇ ಪಾನಿಪೂರಿ ಕಿಟ್ಟಿ ಗರಡಿಯಲ್ಲಿ. ಈ ಎಲ್ಲಾ ಸ್ಟಾರ್ ನಟರಿಗೆ ಪರ್ಸನಲ್ ಟ್ರೈನರ್ ಆಗಿರುವವರು ಪಾನಿಪೂರಿ ಕಿಟ್ಟಿ.

ಸ್ವಂತ ಜಿಮ್ ಹೊಂದಿರುವ ಪಾನಿಪೂರಿ ಕಿಟ್ಟಿ
'ಮಸಲ್ ಪ್ಲಾನೆಟ್' ಎಂಬ ಹೆಸರಿನಲ್ಲಿ ಪಾನಿಪೂರಿ ಕಿಟ್ಟಿ ಸ್ವಂತ ಜಿಮ್ ನಡೆಸುತ್ತಿದ್ದಾರೆ. ಇದೇ 'ಮಸಲ್ ಪ್ಲಾನೆಟ್'ನಲ್ಲಿ ಸ್ಯಾಂಡಲ್ ವುಡ್ ನ ಹಲವು ನಟರು ಕಸರತ್ತು ನಡೆಸುತ್ತಾರೆ.

ಪಾನಿಪೂರಿ ಗುಟ್ಟೇನು.?
ಕಿಟ್ಟಿ ಕುಟುಂಬದ ಮೂಲ ಕಸುಬು ಪಾನಿ ಪೂರಿ. ಕಿಟ್ಟಿ ತಂದೆ ಹಾಗೂ ತಾತ ಪಾನಿ ಪೂರಿ ವ್ಯಾಪಾರದಲ್ಲೇ ಜೀವನ ಸಾಗಿಸಿದವರು. ಚಿಕ್ಕವಯಸ್ಸಿನಿಂದಲೂ ಕಿಟ್ಟಿ, ಪಾನಿ ಪೂರಿ ಮಾಡುವುದರಲ್ಲಿ ಎಕ್ಸ್ ಪರ್ಟ್. ಇಂದಿಗೂ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ಕಿಟ್ಟಿ ಅವರ ಪಾನಿ ಪೂರಿ ಅಂಗಡಿ ಇದೆ.

ಪಾನಿಪೂರಿಯಿಂದ ಬಾಡಿ ಬಿಲ್ಡಿಂಗ್ ಕಡೆಗೆ
ಬಡತನದಲ್ಲೇ ಹುಟ್ಟಿ ಬೆಳೆದ ಪಾನಿ ಪೂರಿ ಕಿಟ್ಟಿಗೆ ಇದ್ದ ಏಕೈಕ ಆಸೆ ಅಂದ್ರೆ ಬಾಡಿ ಬಿಲ್ಡಿಂಗ್. ತಮ್ಮ ಪಾನಿ ಪೂರಿ ಅಂಗಡಿಗೆ ಬರುತ್ತಿದ್ದ ಪೊಲೀಸ್ ಆಫೀಸರ್ ಒಬ್ಬರ ಕಟ್ಟುಮಸ್ತಾದ ದೇಹ ಇವರಿಗೆ ಸ್ಫೂರ್ತಿ. ಮಲ್ಲೇಶ್ ಮಾಸ್ಟರ್ ಎಂಬುವರ ಮಾರ್ಗದರ್ಶನದಿಂದ ಬಾಡಿ ಬಿಲ್ಡ್ ಮಾಡಲು ಕಿಟ್ಟಿ ಶುರು ಮಾಡಿದರು.

ಇಂದು ಸುದ್ದಿ ಆಗುತ್ತಿರುವ ಪಾನಿಪೂರಿ ಕಿಟ್ಟಿ
ಇಷ್ಟು ದಿನ ಒಳ್ಳೆಯ ವಿಚಾರಕ್ಕೆ ಸೌಂಡ್ ಮಾಡಿದ್ದ ಪಾನಿಪೂರಿ ಕಿಟ್ಟಿ ಇಂದು ದುನಿಯಾ ವಿಜಯ್ ಜೊತೆಗಿನ ರಂಪಾಟದಿಂದ ಬ್ರೇಕಿಂಗ್ ನ್ಯೂಸ್ ಮಾಡಿದ್ದಾರೆ. ಇವರಿಬ್ಬರ ಜಗಳ ಎಲ್ಲಿಯವರೆಗೂ ಹೋಗಿ ಮುಟ್ಟುತ್ತೋ.?


Click it and Unblock the Notifications











