ಗಲ್ಲಿ ಗಲ್ಲಿಯಲ್ಲಿ 'ಭೀಮ'ನ ಝೇಂಕಾರ ; ದುನಿಯಾ ವಿಜಯ್ ಪಟ್ಟ ಕಷ್ಟ ಎಂತದ್ದು..?
ಸೆಟ್ಟೇರಿದ ದಿನದಿಂದಲೂ ದೊಡ್ಡ ಮಟ್ಟದ ಹೈಪ್, ಕ್ರೇಜ್ ಹುಟ್ಟಿಸಿರೋ ಸಿನಿಮಾ ಭೀಮ. ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಯ್ ನಿರ್ದೇಶನದಲ್ಲಿ ಸಿದ್ಧವಾಗಿರುವ ಭೀಮ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು.
ಸಲಗದಂತಹ ಬ್ಲಾಕ್ ಬಸ್ಟರ್ ಕೊಟ್ಮೇಲೆ, ಪ್ರಚಂಡ ಪ್ರತಿಭಾವಂತರ ಸಹಾಯ-ಸಹಯೋಗದೊಂದಿಗೆ ಭೀಮನಿಗೆ ಒಂದು ರೂಪ ಕೊಟ್ಟಿರುವ ದುನಿಯಾ ವಿಜಯ್ , ಸದ್ಯಕ್ಕೆ ಭೀಮನಿಗಾಗಿ ತಾವು ಪಟ್ಟಿರುವ ಕಷ್ಟದ ಕಥೆಯನ್ನ ಅನಾವರಣ ಮಾಡಿದ್ದಾರೆ. ಚಿತ್ರದ ಮೇಕಿಂಗ್ ನ ಹರಿ ಬಿಟ್ಟಿದ್ದಾರೆ.

ಭೀಮನ ಈ ಅಂಗಳದಲ್ಲಿ ನಿಮಗೆ ನೂರಾರು ಮುಖಗಳೂ ಕಾಣುತ್ತವೆ. ತಮ್ಮ ಪ್ರಾಣಕ್ಕಷ್ಟೇ ಅಲ್ಲ ಸಾರ್ವಜನಿಕರ ಜೀವಕ್ಕೂ ವೀಲಿಂಗ್ ಮಾಡುವ ಮೂಲಕ ಕುತ್ತು ತರುವ ಪುಂಡರ ಹಾವಳಿ ಜೊತೆ ಜೈಲಿನ ಸೆರೆವಾಸ ಹಾಗೂ ವನವಾಸದ ಸ್ಯಾಂಪಲ್ಲುಗಳನ್ನೂ ಈ ವಿಡಿಯೋದಲ್ಲಿ ನೀವು ನೋಡಬಹುದು.
ಇನ್ನೂ ವಾಸ್ತವದ ಬದುಕಿಗೆ ಕೈಗನ್ನಡಿ ಹಿಡಿಯುವ ಪ್ರಯತ್ನವನ್ನ ದುನಿಯಾ ವಿಜಯ್ ಸಲಗ ಸಿನಿಮಾದಲ್ಲಿ ಕೂಡ ಮಾಡಿದ್ದರು. ನಮ್ಮ ಅಕ್ಕ ಪಕ್ಕದಲ್ಲಿಯೇ ಘಟನೆಗಳು ಘಟಿಸುತ್ತಿವೆ ಎಂಬಂತೆ ಚಿತ್ರವನ್ನ ಕಟ್ಟಿ ಕೊಟ್ಟಿದ್ದರು. ಭೀಮ ಚಿತ್ರದಲ್ಲಿಯೂ ವಿಜಿ ಇಂಥಹದ್ದೇ ಪ್ರಯತ್ನವನ್ನ ಮಾಡಿದ್ದಾರೆ. ಇದಕ್ಕೆ ಸಾಕ್ಷಿಯೇ ಇಂದು ಬಿಡುಗಡೆಯಾಗಿರುವ ಭೀಮ ಚಿತ್ರದ ಮೇಕಿಂಗ್ ವಿಡಿಯೋ

ಶೇ.80ರಷ್ಟು ಕಲಾವಿದರು ಚಿತ್ರರಂಗ, ರಂಗಭೂಮಿ ಸೇರಿದಂತೆ ಬಣ್ಣದ ಜಗತ್ತಿಗೆ ಸಂಬಂಧವಿಲ್ಲದವರು. ಅಂತಹವರನ್ನು ಕರೆದುಕೊಂಡು ಬಂದು ತರಬೇತಿ ನೀಡಿ ಅವರಿಂದ ಅಭಿನಯವನ್ನ ತೆಗೆಸಿರುವ ದುನಿಯಾ ವಿಜಯ್ ಇವರನ್ನೆಲ್ಲ ಕಟ್ಟಿಕೊಂಡು, ಬೆಂಗಳೂರಿನ ಸಂದಿಗೊಂದಿಗಳಲ್ಲಿ, ಹಾದಿ ಬೀದಿಗಳಲ್ಲಿ ತಿರುಗಾಡಿದ್ದಾರೆ. ಹಗಲಿರುಳು ಎನ್ನದೇ ಬೆವರನ್ನ ಸುರಿಸಿದ್ದಾರೆ.
ಕೇವಲ ರಸ್ತೆಯ ಇಕ್ಕೆಲಗಳಲ್ಲಿ ಅಷ್ಟೇ ಅಲ್ಲ ಭೀಮ ಚಿತ್ರಕ್ಕಾಗಿ ಬೆಂಗಳೂರಿನ ಹೊರ ವಲಯದಲ್ಲಿ ಎರಡು ಅದ್ಧೂರಿ ವೆಚ್ಚದ ಸೆಟ್ ಹಾಕಿಯೂ ಕೂಡ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಬೇಕಿದ್ದ ಸಕಲ ವ್ಯವಸ್ಥೆಯನ್ನ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಒದಗಿಸಿದ ಹಿನ್ನೆಲೆ ನಿರಾಂತಕವಾಗಿ ದುನಿಯಾ ವಿಜಯ್ ಚಿತ್ರೀಕರಣವನ್ನ ಮಾಡಿದ್ದಾರೆ.

ರಾಘು ಶಿವಮೊಗ್ಗ, ಪ್ರಿಯಾ ಶಠಮರ್ಷಣ, ಕಲ್ಯಾಣಿ, ರಮೇಶ್ ಇಂದಿರಾ, ಅಚ್ಯುತ್ ಕುಮಾರ್, ಗೋಪಾಲ್ ದೇಶಪಾಂಡೆ, ರಂಗಾಯಣ ರಘು, ಬ್ಲ್ಯಾಕ್ ಡ್ರ್ಯಾಗನ್ ಮಣಿ, ಕಾಕ್ರೋಚ್ ಸುಧಿ, ಹೀಗೆ ಅನೇಕರು ಸಲಗ ವಿಜಯ್ ಕುಮಾರ್ ಕನಸಿಗೆ ಇಲ್ಲಿ ಜೊತೆಯಾಗಿದ್ದಾರೆ. ಅಶ್ವಿನಿ ನಾಯಕಿಯಾಗಿ ವಿಜಿ ಜೊತೆ ತೆರೆ ಹಂಚಿಕೊಂಡಿದ್ದಾರೆ
ಕನ್ನಡ ಚಿತ್ರರಂಗದ ಘಟಾನುಘಟಿ ತಂತ್ರಜ್ಞರಾದ ಸಂಗೀತ ನಿರ್ದೇಶಕ ಚರಣ್ ರಾಜ್, ಸಂಭಾಷಣೆಗಾರ ಮಾಸ್ತಿ ಛಾಯಾಗ್ರಾಹಕ ಶಿವ ಸೇನ, ಸಂಕಲನಕಾರ ದೀಪು ಎಸ್ ಕುಮಾರ್, ಈ ಭೀಮನ ಬಲವನ್ನ ಇನ್ನಷ್ಟು ಹೆಚ್ಚಿಸಿದ್ದಾರೆ.ಒಟ್ಟಾರೆಯಾಗಿ, ಎಲ್ಲ ಪ್ರತಿಭಾವಂತರನ್ನು ಒಂದೆಡೆ ಸೇರಿಸಿ ದುನಿಯಾ ವಿಜಯ್ 'ಭೀಮನನ್ನ ರೂಪಿಸಿದ್ದಾರೆ. ಹೀಗಾಗಿ ಭೀಮ ಇನ್ನಷ್ಟು ಶಕ್ತಿಶಾಲಿಯಾಗಿ ಜನ್ಮವೆತ್ತುವುದು ಗ್ಯಾರೆಂಟಿ.


Click it and Unblock the Notifications











